HomePage_Banner
HomePage_Banner
HomePage_Banner
HomePage_Banner

ಸ್ನೇಹ ಸುಪ್ಪಾಣಿಕೆ

ಮೀನಾಕ್ಷಿ
ಗಕ್ಕನೆ ನಿಂತವು ನಡೆಯುತ್ತಿದ್ದ ಮೀನಾಕ್ಷಿಯ ಕಾಲ್ಗಳು… ಕ್ಷಣ, ಸುತ್ತಲಿನ ಚಲನಶೀಲವಾದ ಪ್ರತಿಯೊಂದು ನಿಶ್ಚಲವಾದಂತಾಗಿ ಕಾಲ ಸ್ಥಗಿತಗೊಂಡಂತಾಯ್ತು… ಕಿವಿಗೆ ಆ ನಂತರವೇನೂ ಕೇಳಿಸಲಿಲ್ಲವೇ ಇಲ್ಲ ಎಂಬ ಭಾವನೆ…. ಒಟ್ಟಿನಲ್ಲಿ ನೀರೊಳಗೆ ಮುಳುಗಿಹೋದವನಿಗೆ ತಟ್ಟನೆ ಎಲ್ಲವೂ ಮೌನವಾದಂತಹ ಭಾವನೆಯೊಂದಿಗೆ ಮೀನಾಕ್ಷಿ ಹಿಂದೆ ತಿರುಗಿದರೆ… ಅದೇ ಜೀವ ಚೈತನ್ಯ ತುಂಬುವ ನಸುನಗೆ (ಹೋ! ಈ ನಗುವಿಗೆ ವೃದ್ಧಾಪ್ಯವೇ ಬರುವುದಿಲ್ಲ!!) … ತಂಪಾಯ್ತು ಮೀನಾಕ್ಷಿಯ ಮನಸ್ಸು.. ಕ್ಷಣದ ಅಲ್ಲೋಲ ಕಲ್ಲೋಲ ಮನಸ್ಸು ಶಾಂತವಾಗಿ ತನಗೆದುರಾಗಿ ಬರುತ್ತಿರುವ ವ್ಯಕ್ತಿಯನ್ನು ಗಮನಿಸಿದಳು ಆಕೆ. ನೀಳ ಮೂಗಿನ ಮೇಲಿನ ಕನ್ನಡಕದ ಕಣ್ಣುಗಳು… ಮೂಗಿನ ಕೆಳಗಿನ ಬಿಳಿಮೀಸೆ… ಬೋಳುತಲೆ … ಅಗಲವಾದ ಮುಖದ ಮೇಲೆ ನಗೆಯ ಆಭರಣ. ಒಮ್ಮಗೇ ಮುಖದ ಎಲ್ಲಾ ಭಾಗಗಳೂ ಶುಭ್ರ ನಗೆ ಕೊಳದಲ್ಲಿ ಮಿಂದೆದ್ದು ಪಾವನವಾದಂತೆ.
ಮೋಹನ ಬಂದು ಮೀನಾಕ್ಷಿಗಿಂತ ತುಸುದೂರದಲ್ಲಿ ನಿಂತಾಗ ಮಾತುಗಳು ಜೀವಪಡೆಯುವ ಮುನ್ನ ಈ ಭಾವನೆಗಳಲ್ಲಾ ತೆರೆಯಂತೆ ಅಪ್ಪಳಿಸಿ ಹಿಂದೆ ಸರಿದಿದ್ದವು…
ಮೋಹನಾ ಆಶ್ಚರ್ಯದ ಉದ್ಗಾರವೊಂದೇ ಮೀನಾಕ್ಷಿಯ ಮಾತಾಗಿ ಹೊರ ಬಂದದ್ದು.
ಹೌದು ಮೀನಾ ನೀನೇನ ಇಲ್ಲಿ? ಮೋಹನ ಕೇಳಿದ ರೀತಿಗೆ ಪಕ್ಕನೆ ನಕ್ಕಳು ಮೀನಾ. ನಗುವಿನಲ್ಲಿ ಮೂವತ್ತು ವರ್ಷಗಳ ಹಿಂದಿನ ನೆನಕೆಯಿತ್ತು. ನಗುವಿಗೋ ಏನೋ ಮೀನಾಳ ಕಣ್ಣಲ್ಲಿ ತೆಳು ನೀರಪೊರೆ ಕಾಣಿಸಿತ್ತು ಮೀನಾಕ್ಷಿ ಅರಿಯದ ಹಾಗೆ ಮೋಹನನಿಗೆ ….
ಈಗ ಮೀನಾಕ್ಷಿಗೆ ವಯಸ್ಸು ನಲುವತ್ತೊಂಬತ್ತು . ಲೆಕ್ಕ ಹಾಕಿದರೆ ಮೋಹನ ಮೀನಾಕ್ಷಿಗಿಂತ ಒಂಬತ್ತು ದಿನಗಳಷ್ಟು ದೊಡ್ಡವನು. ಲೆಕ್ಕ ಬಿಟ್ಟರೆ ಅವರಿಬ್ಬರೂ ಸಮ ವಯಸ್ಕರು.
ಇಂದಿಗೆ ಮೂವತ್ತಮೂರು ವರುಷಗಳ ಹಿಂದೆ ಜೂನಿಯರ್ ಕಾಲೇಜಿನ ಆವರಣದಲ್ಲಿ ಸಹಪಾಠಿಗಳಾಗಿ ಜೊತೆಯಾಗುತ್ತಿದ್ದ ಮೀನಾಕ್ಷಿ ಮೋಹನರ ಗುರಿ ನಿಚ್ಚಳವಾಗಿತ್ತು. ಬರುವ ಪದವಿಪೂರ್ವ ಪರೀಕ್ಷೆ ಮುಗಿಸಿ ಡಿಗ್ರಿ ಓದಿಕೊಂಡು ಬಿ.ಎಡ್ ಸೇರಿ ಶಿಕ್ಷಕರಾಗಿ ಜೀವನದಲ್ಲಿ ಜೊತೆಯಾಗುವುದು… ಅಷ್ಟೇ. ಬಡತನದ ಲಾಂಛನವಾದ ಸರಳತೆಯನ್ನು ಮೈಗೂಡಿಸಿಕೊಂಡ ಆ ಪುಟ್ಟ ಹೃದಯಗಳಲ್ಲಿ ಜೀವನದ ಗುರಿಯೆಡೆಗೆ ಸಾಗುವ ಉತ್ಸಾಹವೂ, ಛಲವೂ ಆಗಲೇ ಮನೆಮಾಡಿಕೊಂಡಿತ್ತು. ಅದಕ್ಕಾಗಿ ಪ್ರಯತ್ನಗಳೂ ನಡೆದಿತ್ತು. ಆ ಸ್ನೇಹಕ್ಕೆ ನಿಷ್ಕಲ್ಮಶವಾದ ವ್ಯಕ್ತಿತ್ವವಿತ್ತು. ಹಾಗೆಂದು ಅದು ಆ ಕಾಲೇಜಿನ ಸಹಪಾಠಿಗಳಿಂದ ಮುದ್ರೆಯೊತ್ತಿಸಿಕೊಂಡಿತ್ತು.
ಸುಶ್ರಾವ್ಯ ಕಂಠ, ವಯಸ್ಸಿನೊಂದಿಗೇ ಪಕ್ವಗೊಂಡು ವಾಕ್ಚಾತುರ್ಯ ಇವರಿಬ್ಬರ ಸಮಾನ ಅಭಿಲಾಷೆಗಳು. ಗುರುತನದ ಒಲ್ಮೆಯಿಂದ ಅವರ ಎಲ್ಲಾ ಪ್ರತಿಭೆಗಳಿಗೆ ನೀರೆರೆದು ಪೋಷಿಸುವ ಉಪನ್ಯಾಸಕರು ಅಂತರ ಕಾಲೇಜು ಸ್ಪರ್ಧೆಗಳಿಗೆ ಅವರನ್ನು ಕರೆದುಕೊಂಡು ಹೋಗುವುದು ಆಗಾಗ ನಡೆಯುತ್ತಿತ್ತು ಹೀಗೆ ಸಾಗಿತ್ತು ಬದುಕಿನ ಬಂಡಿ…
ಹೂವುಗಳ ಅರಳಿಸುವ ಎದೆಯಲ್ಲಿ ನಾವಿಂದು …ಮುಳ್ಳುಗಳ ಬೆಳೆಸುತಿಹೆವೋ …. (ಜಯಮ್ಮ ಬ ಚೆಟ್ಟಿಮಾಡುವವರ ಕವಿತೆ) ಎಂದು ಸುಶ್ರಾವ್ಯವಾಗಿ ಹಾಡುವ ಮೀನಾಕ್ಷಿಯ ಹಾಡುಕೇಳುವ ಮೋಹನನ ಹೃದಯ ಹೂವಾಗುವುದೂ… ಹೂವಿನಂತೆ ಹಗುರಾಗುವುದು ಸಹಜವಾಗಿತ್ತಾದರೂ ಭವಿಷ್ಯದ ರೂಪುರೇಖೆಗಳನ್ನು ಸ್ಪಷ್ಟಗೊಳಿಸಬೇಕಾದ ಜವಾಬ್ಧಾರಿಯೂ ಅವನ ಹೆಗಲೇರಿತ್ತು . ಅಕ್ಕಂದಿರ ಮದುವೆ ಕಿರಿಯ ತಮ್ಮನ ಓದು, ಪ್ರೀತಿಯ ಅಮ್ಮನ ದುಡಿತ.. ಎಲ್ಲದಕ್ಕೂ ಶಾಶ್ವತ ಪರಿಹಾರ ಹುಡುಕುವ ತುಡಿತ ಮನದಲ್ಲಿ ಅದೆಷ್ಟೋ ಅದಮ್ಯವಾಗಿ ನೆಲೆಗೊಂಡಿತ್ತು. ಮೀನಾಕ್ಷಿ, ಭಾಷಣ ಸ್ಪರ್ಧೆಯಂತೆ ಡಿಗ್ರಿ ಕಾಲೇಜಿನಲ್ಲಿ, ನೀನು ಬರುವುದಿಲ್ವಾ? ಸರ್ ಹೇಳಿದ್ರು ಎಂದು ಒಂದು ಮಧ್ಯಾಹ್ನ ಕೇಳಿದ್ದ ಮೋಹನ. ಇಲ್ಲ ಮೋಹನ. ತಯಾರಿ ಮಾಡ್ಲಿಕ್ಕೆ ಪುರುಸೊತ್ತಿಲ್ಲ. ಮನೆಯಲ್ಲಿ ಅಮ್ಮನಿಗೆ ಹುಷಾರಿಲ್ಲ.. ಅಕ್ಕ ಒಬ್ಬಳೇ ಎಷ್ಟುಂತ ಮಾಡ್ತಾಳೆ? ಅಪ್ಪನಿಗೆ ಕೆಲ್ಸಕ್ಕೆ ಹೋಗ್ಬೇಕಲ್ವಾ ಎಂದ ಮೀನಾ ಮ್ಲಾನವದನೆಯಾದಾಗ ಮೋಹನನ ಕರುಳು ಚುರುಕ್ ಎಂದಿತ್ತು. ತನ್ನೊಂದಿಗೆ ವಯಸ್ಸಿನ ಕಿರಿತನ ಹೆಚ್ಚಾಗಿಲ್ಲದಿದ್ದರೂ ಯಾಕೋ ಅವಳು ಸಣ್ಣವಳು ಎನ್ನುವ ಸಹಜ ಪ್ರೀತಿ… ಪ್ರತಿಭೆ ಸುಮ್ಮನೆ ಅವಕಾಶವಿಲ್ಲದೆ ಹಿಂದುಳಿಯುತ್ತದಲ್ಲಾ ಎನ್ನುವ ಆತಂಕ. ಸಂಜೆವರೆಗೆ ಬಿಡುವು ಇದ್ದ ಸಮಯದಲ್ಲೆಲ್ಲಾ ಬರೆದು ಸಂಜೆ ಹೊತ್ತಿಗೆ ನೋಟ್ ಬುಕ್ ಮಧ್ಯದಲ್ಲಿಟ್ಟು ಮೀನಾ ಎರಡು ಪುಟ ಬರೆದಿದ್ದೇನೆ .,. ಸ್ವಲ್ಪ ಸೇರಿಸಿ ನಾಳೆಗೆ ರೆಡಿಯಾಗು ಎಂದು ಕೊಟ್ಟಾಗ ಮೀನಾಕ್ಷಿ ಮೌನವಾಗಿ ತಲೆಯಲ್ಲಾಡಿಸಿ ಕೃತಜ್ಞತೆಯನ್ನು ಕಣ್ಣಲ್ಲಿ ತುಂಬಿ ನಡೆಯುತ್ತಿದ್ದಳು… ಹೆಜ್ಜೆಯಲ್ಲಿ ಜಿಂಕೆಯ ಚುರುಕುತನ. ಕಾಲ ಸರಿದು ಮೀನಾಕ್ಷಿ ಡಿಗ್ರಿ ಸೇರಿದಳು.. ಮೋಹನನ ವಿದ್ಯೆಗೆ ಕಾಂಚಾಣ ಭರವಸೆ ನೀಡದೆ ಮಂಗಳೂರು ಸೇರಿದ … ಸೋದರ ಮಾವನ ಜೊತೆ ಖಾಸಗಿಯಾಗಿ ದುಡಿದು ಸಂಜೆ ಕಾಲೇಜು ಸೇರಿ ಗುರಿತಲುಪುವ ದೂರದೃಷ್ಟಿ! ಹೋಗುವ ಮೊದಲು ಮೀನಾಕ್ಷಿಗೊಂದು ಪತ್ರ ಬರೆದ ಭವಿಷ್ಯದ ಬದುಕು ನಮ್ಮ ಕೈಯಲ್ಲಿಲ್ಲ .. ಇನ್ನಾರೇಳು ವರ್ಷಗಳ ನಂತರವೇನಾದರೂ ನಮ್ಮ ಭೇಟಿಯಾದರೆ ನಮ್ಮದೆಂಬ ಬದುಕಿಗೆ ಜೊತೆಗೊಡಿಯಿಸುವ… ಇಲ್ಲವಾದರೆ ನಮಗೊದಗಿ ಬರುವ ಬದುಕಿಗೆ ಶರಣಾಗುವ… ಪತ್ರವೋದಿದ ಮೀನಾಕ್ಷಿ ಕ್ಷಣ ಮಂಕಾದಳಾದರೂ ಬರೆದ ನಾಲ್ಕು ವಾಕ್ಯಗಳಲ್ಲಿನ ನೈಜತೆಗೆ, ಆತನ ಸ್ನೇಹದಿಂದ ಅರಿತುಕೊಂಡ ಬದುಕಿನ ಸತ್ಯಾಸತ್ಯತೆಯಿಂದಾಗಿ ಸಮಾಧಾನ ಗೊಂಡಳು… ಭವಿಷ್ಯ ಅವಳಿಗೂ ಗೊತ್ತಿರಲಿಲ್ಲ… ಅವಳ ಆಗಿನ ಮನಸ್ಥಿತಿಯಲ್ಲಿ ಭವಿಷ್ಯವೊಂದು ಏನೂ ಬರೆಯದ ಬಿಳಿಹಾಳೆ….
ಅಂದಿನ ಮೋಹನ ಇಂದು ಎದುರು ಬಂದು ನಿಂತಿದ್ದಾನೆ. ಜೀವನದ ಬಗ್ಗೆ ಪರಸ್ಪರ ಏನೂ ಕೇಳಬೇಕಾಗಿರಲಿಲ್ಲ. ಏಕೆಂದರೆ ಇಬ್ಬರೂ ಒಬ್ಬರನ್ನೊಬ್ಬರು ನೋಡಿಕೊಂಡಾಗಲೇ ಎಲ್ಲವೂ ಅರಿವಾಗಿತ್ತು.
ಜೂನಿಯರ್ ಕಾಲೇಜಿನ ಪಕ್ಕಕ್ಕಿದ್ದ ಸರಕಾರಿ ಜಾಗವನ್ನು ಅಲಂಕರಿಸಿದ್ದ ಪಾರ್ಕ್‌ನಲ್ಲಿ ಮೂಲೆಯ ಟೀ ಸ್ಟಾಲ್‌ನಿಂದ ಹಿಡಿದುಕೊಂಡು ಬಂದ ಟೀ ಹೀರುತ್ತಾ ಕುಳಿತು ಮಾತನಾಡೋಣ ಎಂದಿದ್ದ ಮೋಹನನ್ನು ಇಂದೂ ಇಲ್ಲವೆನ್ನದೆ ಅನುಸರಿಸಿ ಬಂದಳು ಮೀನಾಕ್ಷಿ.
ಮೀನಾ ಹೇಳು ಎಂದು ಕೇಳಿದ ಮೋಹನನಿಗೆ ಖುಷಿಯಿಂದ ಹೇಳಿಕೊಂಡಳು ಮೀನಾಕ್ಷಿ – ಗತಿಸಿದರೂ ಸವಿನೆನಪನ್ನೇ ಉಳಿಸಿಹೋದ ಅಪ್ಪ ಅಮ್ಮ ಗತಿಸುವ ಮೊದಲೇ ಮುಗಿಸಿದ ಮದುವೆ, ಪ್ರೀತಿಸುವ ಪತಿ – ಸಂಸಾರ ಎಂಜಿನಿಯರಿಂಗ್ ಓದುತ್ತಿರುವ ಮಗಳು – ಎಲ್ಲವೂ ಸಂತೃಪ್ತಿಯಿಂದ ಹೊರಬಂದ ಮೀನಾಕ್ಷಿಯಾಡಿದ ಮಾತುಗಳು… ಮೋಹನನೆಂದ ಮೀನಾ ನನ್ನ ಗೀತ ಕಾಯುತ್ತಿರಬಹುದು.. ಮಗ ಇವತ್ತು ಬೆಂಗಳೂರಿನಿಂದ ಬರ್‍ತಾನೆ ಸಂಸಾರದೊಂದಿಗೆ. ಮಗಳು ಮಂಗಳೂರಿನಿಂದ ಫೋನ್ ಮಾಡಿದಳು. ಈ ತಿಂಗಳ ಹಾಸ್ಟೆಲ್ ಬಿಲ್ ಕಟ್ಟಲಾ ಅಂತ… ಚಿನ್ನದಂತಹ ಮಕ್ಕಳು ನನ್ನದು ಎಂದವನ ಕಣ್ಣಲ್ಲೂ ಚಿನ್ನದ ಹೊಳಪು … ಸಮಾಧಾನವಾಯ್ತು ಮೀನಾಕ್ಷಿಗೆ.
ಅಂದಿನದೇ ಸ್ನೇಹ! ಅಂದಿನದೇ ಮಾತು! ಅದೆಂತಹ ಸ್ಪಟಿಕದಂತಹ ಪ್ರೀತಿಯೆನ್ನಿಸಿತು ಮೀನಾಕ್ಷಿಗೆ. ಜಗತ್ತಿನಲ್ಲಿ ಶಾಶ್ವತವಾಗಿರುವುದು ಪವಿತ್ರ ಸ್ನೇಹ ಮಾತ್ರ… ಭೋಗ ಸುಖದ ಕಲ್ಪನೆಯೂ ಬಾರದ ಆ ಕಾಲದಲ್ಲಿ ಹುಟ್ಟಿಕೊಂಡ ಸ್ನೇಹ, ಪ್ರೀತಿ. ಒಬ್ಬರಿಗೊಬ್ಬರು ಸಹಾಯವಾಗುತ್ತ ನಡೆದು ಬಂದಿದ್ದ ಆ ಎರಡು ವರ್ಷಗಳ ಗೆಳೆತನ ಜೀವನದ ಎಲ್ಲಾ ವಿಷಯಸುಖಭೋಗಗಳನ್ನು ಮೀರಿದ ಅಂತರಂಗದ ಬಂಧನ!! ಅದಕ್ಕೇ ಕಣ್ಗಳನ್ನೆದುರಿಸಿ ಮಾತನಾಡುವುದು ಸಾಧ್ಯವಾಯಿತು.
ಮನೆಗೊಮ್ಮೆ ಬಂದು ಹೋಗು ಮೀನಾ, ಗಂಡ ಮಗಳೊಂದಿಗೆ ಎಂದ ಮೋಹನ ನಗುತ್ತಾ.. ನಕ್ಕು ಒಪ್ಪಿಗೆ ಸೂಚಿಸಿದ ಮೀನಾಕ್ಷಿಯ ನಡಿಗೆಯಲ್ಲಿ ಇಂದಿಗೂ ಅದೇ ಚುರುಕುತನ….
ಇವರೊಂದಿಗೆ ಹೇಳಬೇಕು ಅಂದುಕೊಂಡಳು ಮೀನಾಕ್ಷಿ… ಬಸ್ಸಿನ ಬಳಿ ಇಂದು ಮೋಹನನತ್ತ ಕೈ ಬೀಸಿ ಬಸ್ಸನ್ನೇರಿದಳು.
‘life is what we make it’  ಎಂದು ಓದಿದ ಅನುಭವ ಮಾತ್ರವಲ್ಲ ಬದುಕಿನ ಅನುಭವವೂ. ಸ್ನೇಹ ಪವಿತ್ರವಾಗಿದ್ದರೆ ಎಂದೂ ಸಾಯುವುದಿಲ್ಲ. ಆ ಎರಡು ಅಕ್ಷರದಲ್ಲಿರುವ ಪವಿತ್ರತೆಯಷ್ಟೇ ಹೃದಯದಲ್ಲಿ ಸ್ವಚ್ಛತೆನ್ನಿಟ್ಟುಕೊಂಡು ಸ್ನೇಹವನ್ನು ಪ್ರೇಮಿಸಿದರೆ ಅದು ಬದುಕಿನಲ್ಲಿ ಜೇನು ಮಳೆ ಸುರಿಸುತ್ತದೆ.
ಅಂತರಂಗದ ಆ ಅಮೃತವಾಹಿನಿಯನ್ನು ಗುರುತಿಸಲು ನಮ್ಮ ಅಂತರ್‌ಗಣ್ಣು ತೆರೆದಿರಬೇಕು. ಸ್ನೇಹವೊಂದು ವೃಕ್ಷ.. ಆಲದಂತೆ ನೆರಳೂ, ಚೀಲದಂತ ಹಣ್ಣೂ ನೀಡುವ ಗುಣ ಇದರದು. ದೈಹಿಕ ಕಾಮನೆಯೆಂಬ ಬಂದಣಿಕೆ ಬೆಳೆಯಗೊಡದಿದ್ದರೆ ಸ್ನೇಹ ಚಿರಾಯಿ. ವಯಸ್ಸಿನೊಂದಿಗೆ ಮನಸ್ಸು ಪಕ್ವಗೊಳ್ಳವಲ್ಲಿ ಬುದ್ಧಿಯ ಪಾತ್ರ ಹಿರಿದು.. ವಿವೇಕ ಬುದ್ಧಿಯ ಮಾರ್ಗದರ್ಶಕ .. ಯೋಚಿಸುತ್ತಾ ಹೋದ ಮೀನಾಕ್ಷಿಗೆ ಮನದಲ್ಲಿ ಅದ್ಭುತ ಸಮಾಧನ ಮನೆ ಮಾಡಿತ್ತು.
ಮೀನಾ ಹುಷಾರಾಗಿ ಹೋಗಿ ಬಾಮ್ಮಾ ಎಂದು ಪತಿ ಹೇಳಿಕಳುಹಿಸಿದ ಅಕ್ಕರೆಯ ಮಾತುಗಳು ನೆನೆಪಾಗಿ ಮುಗುಳ್ನಕ್ಕಳು.. ಬಸ್ಸಿನ ಪ್ರಯಾಣ ಮುಂದೆ ಸಾಗಿತ್ತು.
– ವಾರಿಜಾಕ್ಷಿ ಆನೆಕ್ಕಾರ್ , ಶಿಕ್ಷಕಿ, ಜ್ಞಾನಗಂಗಾ, ಬೆಳ್ಳಾರೆ

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.