ಝಿಕಾ ಜ್ವರ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

ಆಧುನಿಕ ಸಂಶೋಧನೆಗಳು, ಆವಿಷ್ಕಾರಗಳು ಹೆಚ್ಚಿದಂತೆ, ವೈದ್ಯರಿಗೆ ಹೊಸ ರೋಗಗಳನ್ನು ಗುರುತಿಸುವಲ್ಲಿ ಮತ್ತು ಚಿಕಿತ್ಸೆಯನ್ನು ನೀಡುವಲ್ಲಿ ಹೆಚ್ಚಿನ ಅನುಕೂಲ ಉಂಟಾಗಿದೆ ಎನ್ನುವುದು ಸತ್ಯವಾದ ವಿಚಾರ. ಅದರ ಜೊತೆಗೆ ಕೆಲವೊಂದು ರೋಗಾಣುಗಳು ತಮ್ಮ ದೇಹದ ರಚನೆಯನ್ನು ಪರಿಸ್ಥಿತಿಗೆ ಪೂರಕವಾಗಿ ಮಾರ್ಪಾಡುಗೊಳಿಸಿಕೊಂಡು, ಹೊಸ ಹೊಸ ರೋಗಗಳಿಗೆ ಕಾರಣವಾಗಿ ವೈದ್ಯಲೋಕಕ್ಕೆ ಸವಾಲಾಗಿ ನಿಲ್ಲತೊಡಗಿರುವುದು ವಿಪರ್‍ಯಾಸವಾದರೂ ಸತ್ಯ. ಅಂತಹ ರೋಗಾಣು ಮತ್ತು ರೋಗಗಳ ಸಾಲಿಗೆ ಸೇರುವ ವೈರಾಣು ಝಿಕಾ ವೈರಸ್ ಮತ್ತು ಅದರಿಂದ ಉಂಟಾಗುವ ಖಾಯಿಲೆಯೇ ಝಿಕಾ ಜ್ವರ ಆಗಿರುತ್ತದೆ. ಸೊಳ್ಳೆಗಳಿಂದ ಹರಡುವ ಈ ವೈರಸ್ ಫ್ಲಾವಿ ವೈರಸ್ ಗುಂಪಿಗೆ ಸೇರಿದ ವೈರಾಣು ಆಗಿದ್ದು, ಮೊದಲ ಬಾರಿಗೆ ಉಗಾಂಡಾದ ‘ಝಿಕಾ’ ಅರಣ್ಯ ಪ್ರದೇಶಗಳಲ್ಲಿ ೧೯೪೭ರಲ್ಲಿ ರೀಸಸ್ ಮಂಗಗಳಲ್ಲಿ ಕಾಣಿಸಿಕೊಂಡಿತ್ತು. ಈ ಕಾರಣದಿಂದಲೇ ಝಿಕಾ ಜ್ಚರ ಎಂಬ ಹೆಸರು ಬಂತು. ನಂತರ ೧೯೬೮ರಲ್ಲಿ ನೈಜೀರಿಯಾದಲ್ಲಿ ಮನುಷ್ಯರ ರಕ್ತದಲ್ಲಿ ಈ ವೈರಾಣುಗಳು ಕಾಣಿಸಿಕೊಂಡವು. ಕ್ರಮೇಣ ಆಫ್ರಿಕಾ, ಅಮೇರಿಕಾ, ರಷ್ಯಾ ಖಂಡಗಳಲ್ಲಿ ಈ ವೈರಾಣು ಕಾಣಿಸಿಕೊಂಡವು. ಏಡಿಸ್ ಎಂಬ ಪ್ರಭೇದಕ್ಕೆ ಸೇರಿದ ಸೊಳ್ಳೆಗಳಿಂದ ಈ ಝಿಕಾ ವೈರಾಣು ಹರಡುತ್ತದೆ ಎಂದು ಸಂಶೋಧನೆಗಳಿಂದ ತಿಳಿದು ಬಂದಿದೆ. ಕೇವಲ ೪೦ ನ್ಯಾನೋಮೀಟರ್‌ನಷ್ಟು ಸೂಕ್ಷ ರಚನೆ ಹೊಂದಿರುವ ಫ್ಲಾವಿ ವೈರಸ್ ಪ್ರಭೇದಕ್ಕೆ ಸೇರಿದ ಖಓಂ ಗುಂಪಿನ ಈ ಝಿಕಾ ಜಾತಿಯ ವೈರಾಣು ಈಗೀಗ ತನ್ನ ಆರ್ಭಟವನ್ನು ಜಗತ್ತಿನಾದ್ಯಂತ ತೋರಿಸತೊಡಗಿದೆ.
ರೋಗದ ಲಕ್ಷಣಗಳು ಏನು?
ಪ್ರಾಥಮಿಕ ಹಂತದಲ್ಲಿ ಎಲ್ಲಾ ವೈರಸ್ ಜ್ವರಗಳಂತೆ, ತಲೆನೋವು, ಜ್ವರ, ಚರ್ಮದಲ್ಲಿ ತುರಿಕೆ ಮತ್ತು ಕೆಂಪು ಹಚ್ಚೆಗಳು, ಪಿಂಕ್ ಕಣ್ಣು ಅಥವಾ ಕಣ್ಣು ಉರಿ, ಸ್ನಾಯು ನೋವು, ಸಂದು ನೋವು ವಿಪರೀತ ಸುಸ್ತು, ನಿರಾಸಕ್ತಿ ಇತ್ಯಾದಿಗಳು ಕಾಣಿಸಿಕೊಳ್ಳಬಹುದು. ಚಿಕುನ್ ಗುನ್ಯಾ ಮತ್ತು ಡೆಂಗು ಜ್ವರದಲ್ಲಿ ಕೂಡ ಇದೇ ರೀತಿಯ ಲಕ್ಷಣಗಳು ಪ್ರಾಥಮಿಕ ಹಂತದಲ್ಲಿ ಕಾಣಿಸುತ್ತದೆ. ‘ಏಡಿಸ್’ ಪ್ರಬೇಧದ ಸೊಳ್ಳೆಗಳೇ ಡೆಂಗು ಮತ್ತು ಚಿಕುನ್ ಗುನ್ಯಾ ರೋಗಕ್ಕೆ ಕಾರಣವಾಗುತ್ತದೆ ಎಂಬುದು ಇಲ್ಲಿ ಗಮನಿಸಬೇಕಾದ ವಿಚಾರ. ಸಾಮಾನ್ಯವಾಗಿ ಈ ಲಕ್ಷಣಗಳು ಸೊಳ್ಳೆ ಕಚ್ಚಿದ ೨ರಿಂದ ೫ ದಿನಗಳಿಂದ ಆರಂಭವಾಗಿ ಒಂದು ವಾರದ ವರೆಗೆ ಇರಬಹುದು. ಉಷ್ಣವಲಯದ ದೇಶಗಳಲ್ಲಿ ಈ ರೋಗ ಸಾಮಾನ್ಯವಾಗಿ ಕಾಣಿಸಿಕೊಳ್ಳುತ್ತದೆ.
ಹೇಗೆ ಹರಡುತ್ತದೆ?
ಝಿಕಾ ವೈರಸ್ ಸೊಂಕಿನಿಂದ ನರಳುತ್ತಿರುವ ವ್ಯಕ್ತಿಗೆ ‘ಏಡಿಸ್ ಈಜಿಪ್ಟಿ’ ವೈರಾಣು ಕಚ್ಚಿದಾಗ ರೋಗಿಯ ರಕ್ತದಲ್ಲಿನ ವೈರಾಣು ಸೊಳ್ಳೆಯ ದೇಹಕ್ಕೆ ಸೇರಿಕೊಳ್ಳುತ್ತದೆ. ಈ ಸೊಳ್ಳೆ ಇನ್ನೊಬ್ಬ ಆರೋಗ್ಯವಂತ ವ್ಯಕ್ತಿಯನ್ನು ಕಚ್ಚಿದಾಗ, ವೈರಾಣು ಇನೊಬ್ಬ ಆರೋಗ್ಯವಂತ ವ್ಯಕ್ತಿಗೆ ಹರಡುತ್ತದೆ. ರಕ್ತಪೂರಣ ಮತ್ತು ಲೈಂಗಿಕ ದೇಹ ಸಂಪರ್ಕದಿಂದಲೂ ರೋಗ ಹರಡುತ್ತದೆ ಎಂದು ಅಂದಾಜಿಸಲಾಗಿದೆ. ೨೦೧೫ರಲ್ಲಿ ಝಿಕಾ ವೈರಸ್ ಭ್ರೂಣದ ಸುತ್ತಲಿರುವ ಅಮ್ನಿಯೋಟಿಕ್ ದ್ರವದಲ್ಲಿ ಕಂಡು ಬಂದಿದ್ದು, ಫ್ಲಾಸೆಂಟಾ (ಹೊಕ್ಕಳ ಬಳ್ಳಿ)ಯ ಮೂಲಕವೂ ತಾಯಿಯಿಂದ ಮಗುವಿಗೆ ಸೇರುವ ಸಾಧ್ಯತೆ ಇರುತ್ತದೆ. ಆದರೆ ಎದೆಹಾಲಿನ ಮುಖಾಂತರ ವೈರಾಣು ಹರಡುವುದು ಇನ್ನೂ ದೃಡಪಟ್ಟಿಲ್ಲ. ಏಷ್ಯಾ ಖಂಡದ ಹುಲಿ ಸೊಳ್ಳೆ ಎಂದು ಖ್ಯಾತವಾದ ಏಡಿಸ್ ಆಲ್ಬೊಪಿಕ್ಟಸ್ ಎಂದು ತಿಳಿದು ಬಂದಿದೆ. ಸೊಳ್ಳೆಯ ದೇಹ ಸೇರಿದ ಈ ವೈರಾಣುವಿಗೆ ಸಂತಾನೊತ್ಪತ್ತಿ ಮಾಡಲು ಕೇವಲ ೧೦ ದಿನಗಳು ಸಾಕಾಗುತ್ತದೆ. ಸೊಳ್ಳೆಗಳ ಕಡಿತದಿಂದ ಮನುಷ್ಯ ಅಥವಾ ಮಂಗಗಳ ದೇಹ ಸೇರಿದ ಬಳಿಕ ದೇಹದ ದುಗ್ದ ಗ್ರಂಥಿಗಳು ಅಥವಾ ರಕ್ತ ಸಂಚಾರದ ರಕ್ತನಾಳಗಳಿಗೆ ಈ ವೈರಾಣುಗಳು ಸೇರಿಕೊಳ್ಳುತ್ತದೆ. ಸಾಮಾನ್ಯ ಗರ್ಭಿಣಿ ಹೆಂಗಸರಲ್ಲಿ ಮೊದಲನೇ ತ್ರೈಮಾಸಿಕದ ಅವಧಿಯಲ್ಲಿ ಈ ವೈರಾಣುವಿಗೆ ತುತ್ತಾದಲ್ಲಿ ಬಹಳ ತೊಂದರೆ ಉಂಟಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಈ ವೈರಾಣುವಿನ ಸೊಂಕಿಗೆ ತುತ್ತಾದಾಗ ಸಾಮಾನ್ಯವಾಗಿ ಗರ್ಭದಲ್ಲಿರುವ ಮಗುವಿನ ಮೆದುಳಿನ ಬೆಳವಣಿಗೆ ಕುಂಠಿತವಾಗುತ್ತದೆ ಮತ್ತು ಮಗುವಿನ ತಲೆಯ ಭಾಗ ಬಹಳ ಚಿಕ್ಕದಾಗಿರುತ್ತದೆ. ಆದರೆ ಈ ವೈರಾಣು ತಾಯಿಯಿಂದ ಗರ್ಭದೊಳಗಿನ ಭ್ರೂಣಕ್ಕೆ ಪ್ಲಾಸೆಂಟದ ಮುಖಾಂತರ ಹೇಗೆ ಹೋಗುತ್ತದೆ ಮತ್ತು ಮೆದುಳಿಗೆ ಹಾನಿ ಮಾಡುತ್ತದೆ ಎಂಬುದರ ಬಗ್ಗೆ ಇನ್ನು ಹೆಚ್ಚಿನ ಸಂಶೋಧನೆಯ ಅಗತ್ಯವಿದೆ.
ಪತ್ತೆ ಹಚ್ಚುವುದು ಹೇಗೆ?
ರೋಗಿಯ ರಕ್ತದ ಸ್ಯಾಂಪಲ್, ಎಂಜಲು, ಮೂತ್ರದ ಪರೀಕ್ಷೆ ಮಾಡಿದಲ್ಲಿ ವೈರಾಣು ಪತ್ತೆ ಹಚ್ಚಬಹುದು. ಅದೇ ರೀತಿ Pಅಖ ಪರೀಕ್ಷೆಯ ಮುಖಾಂತರವೂ ವೈರಾಣು ಸೊಂಕಿನ ಲಕ್ಷಣ ಕಾಣಿಸಿದ ೩-೫ ದಿನಗಳ ನಂತರ ರೋಗವನ್ನು ಝಿಕಾ ವೈರಸ್ ಅಥವಾ ವೈರಸ್‌ನ ಆಂಟಿಜೆನ್ ಪತ್ತೆಹಚ್ಚಿ ರೋಗವನ್ನು ಗುರುತಿಸಬಹುದು. ಅದೇ ರೀತಿ ರೋಗ ಕಾಣಿಸಿದ ೫ ದಿನಗಳ ನಂತರ ಝಿಕಾ ಆಂಟಿಬಾಡಿಗಳನ್ನು ಪತ್ತೆ ಹಚ್ಚಿ ರೋಗವನ್ನು ಗುರುತಿಸಬಹುದು.
ಚಿಕಿತ್ಸೆ ಹೇಗೆ?
ಸಾಮಾನ್ಯ ಜ್ವರವನ್ನು ಚಿಕಿತ್ಸೆ ಮಾಡಿದ ರೀತಿಯಲ್ಲಿಯೇ ರೋಗವನ್ನು ಉಪಶಮನಗೊಳಿಸಲಾಗುತ್ತದೆ. ರೋಗಿಗೆ ಹೆಚ್ಚಿನ ವಿಶ್ರಾಂತಿ ಮತ್ತು ಹೆಚ್ಚು ದ್ರವ ಆಹಾರದ ಅಗತ್ಯವಿರುತ್ತದೆ. ಈ ರೋಗಕ್ಕೆ ಯಾವುದೇ ‘ಲಸಿಕೆ’ ಲಭ್ಯವಿಲ್ಲದ ಕಾರಣ ರೋಗವನ್ನು ತಡೆಗಟ್ಟುವ ಪ್ರಕ್ರಿಯೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುತ್ತದೆ.
ತಡೆಗಟ್ಟುವುದು ಹೇಗೆ?
ಈ ರೋಗದ ಸಾಂದ್ರತೆ ಹೆಚ್ಚಿರುವ ದೇಶ ಮತ್ತು ಪ್ರದೇಶಗಳಿಗೆ ಪ್ರವಾಸವನ್ನು ಮಾಡಬಾರದು. ಅತೀ ಅಗತ್ಯವಿದ್ದಲ್ಲಿ ಸೊಳ್ಳೆಗಳಿಂದ ರಕ್ಷಣೆ ಸಿಗುವಂತಹ ಎಲ್ಲಾ ರೀತಿಯ ಕಾಲು ಚೀಲ, ಕೈ ಚೀಲ, ದೇಹವನ್ನು ಮುಚ್ಚುವ ಅಂಗಿ, ಸೊಳ್ಳೆ ನಿರೋಧಕ ದ್ರಾವಣ, ಸೊಳ್ಳೆ ವಿಕರ್ಷಿಸುವ ಔಷಧಿ ಬಳಸತಕ್ಕದ್ದು. ಸೊಳ್ಳೆಗಳ ಕಡಿತದಿಂದ ಹೆಚ್ಚಿನ ತೊಂದರೆ ಉಂಟಾಗುವ ಗರ್ಭಿಣಿಯರು, ಹಿರಿಯ ನಾಗರೀಕರು, ದೇಹದ ರಕ್ಷಣಾ ಸಾಮರ್ಥ್ಯ ಕುಂಠಿತಗೊಂಡವರು ಹೆಚ್ಚಿನ ಮುತುವರ್ಜಿ ಮತ್ತು ಕಾಳಜಿವಹಿಸಬೇಕು. ಸೊಳ್ಳೆಗಳ ವಂಶಾಭಿವೃಧ್ಧಿ ಆಗಲು ಪೂರಕವಾದ ವಾತಾವರಣವನ್ನು ಇಲ್ಲದಂತೆ ಮಾಡಬೇಕು. ಸೊಳ್ಳೆಗಳ ಸಂಖ್ಯೆ ಕುಂಠಿತಗೊಳಿಸುವ ಮತ್ತು ಸಂತನೋತ್ಪತ್ತಿಯಾಗದಂತೆ ತಡೆಯುವ ಎಲ್ಲಾ ಪ್ರಕ್ರಿಯೆಗಳಿಗೆ ಚಾಲನೆ ನೀಡಬೇಕು. ಹಗಲು ಹೊತ್ತು ಹೆಚ್ಚಾಗಿ ಕಚ್ಚುವ ಈ ಏಡಿಸ್ ಸೊಳ್ಳೆಗಳಿಂದ ಕಡಿತಗೊಳಗಾಗದಂತೆ ಹೆಚ್ಚಿನ ನಿಗಾ ವಹಿಸಬೇಕು.
ಜನಸಂಖ್ಯೆ ಜಾಸ್ತಿಯಾದಂತೆ ರೋಗಾಣುಗಳ ಸಂಖೈ ಮತ್ತು ರೋಗಗಳ ಸಂಖ್ಯೆಯೂ ಜಾಸ್ತಿಯಾಗುವುದು ಹೊಸತಾದ ವಿಚಾರವಲ್ಲ. ತಂತ್ರ ಜ್ಞಾನ, ವೈಜ್ಞಾನಿಕತೆ ಆವಿಷ್ಕಾರಗಳ ಮುಖಾಂತರ ಜಗತ್ತು ದಿನೇ ದಿನೇ ಕಿರಿದಾಗುತ್ತಿದೆ. ದಿನ ಬೆಳಗಾದರೆ ಹೊಸ ಅವಿಷ್ಕಾರಗಳು, ಸಂಶೋಧನೆಗಳ ಜೊತೆಗೆ ಹೊಸ ಬ್ಯಾಕ್ಟೀರಿಯಾಗಳು, ರೋಗಾಣುಗಳು ಹುಟ್ಟಿಕೊಳ್ಳುತ್ತಿದೆ. ಅದೇ ರೀತಿ ದಿನ ಬೆಳಗಾಗುವುದರಲ್ಲಿ ಒಂದು ದೇಶದಿಂದ ಇನ್ನೊಂದು ದೇಶಕ್ಕೆ ಹರಡುವುವ ಸಾಧ್ಯತೆಯೂ ಇಲ್ಲದಿಲ್ಲ. ೧೯೬೮ರಲ್ಲಿ ನೈಜಿರಿಯಾದಲ್ಲಿ ಮೊದಲು ಕಾಣಿಸಿದ ಈ ಝಿಕಾ ವೈರಸ್ ೨೦೦೭ರಲ್ಲಿ ಯಾಪ್ ದ್ವೀಪದಲ್ಲಿ ಸುಮಾರು ೧೮೫ ಮಂದಿಯಲ್ಲಿ ಕಾಣಿಸಿಕೊಂಡಿತ್ತು. ಮೊದಲ ಬಾರಿಗೆ ೨೦೧೫ರಲ್ಲಿ ಬ್ರೆಜಿಲ್‌ನಲ್ಲಿ ಕಾಣಿಸಿಕೊಂಡ ಈ ಝಿಕಾ ವೈರಾಣುವಿನಿಂದ ಇದುವರೆಗೆ ಸುಮಾರು ೪ ಲಕ್ಷದಿಂದ ೧೩ ಲಕ್ಷ ಮಂದಿಗೆ ಸೋಂಕು ತಗುಲಿದೆ ಎಂದು ಅಂಕಿ ಅಂಶಗಳಿಂದ ತಿಳಿದು ಬಂದಿದೆ. ಸಮಾರು ೩೫೦೦ ಮಂದಿಯಲ್ಲಿ ಈ ರೋಗ ದೃಡಪಟ್ಟಿದ್ದು ೩೮ ಮಂದಿ ಸಾವನ್ನಪ್ಪಿದ್ದಾರೆ ಎಂದು ಬ್ರೆಜಿಲ್ ದೇಶದ ಆರೋಗ್ಯ ಅಧಿಕಾರಿಗಳು ದೃಡಪಡಿಸಿದ್ದಾರೆ. ವಿಶ್ವದಾದ್ಯಂತ ವಿಶ್ವ ಸಂಸ್ಥೆಯ ಅಂಕಿ ಅಂಶಗಳ ಪ್ರಕಾರ ೨೦೧೫ ಅಕ್ಟೋಬರ್ ತಿಂಗಳ ವರೆಗೆ ೧೫೨ ಮಂದಿ ಸಾವಿಗೀಡಾಗಿದ್ದಾರೆ ಎಂದು ತಿಳಿದು ಬಂದಿದೆ. ೪೦೦೦ ಮಕ್ಕಳು ಈ ಝಿಕಾ ವೈರಾಣು ಸೋಂಕಿನಿಂದಾಗಿ ಚಿಕ್ಕ ತಲೆ ಮತ್ತು ಮೆದುಳಿನ ಬೆಳವಣಿಗೆ ಕುಂಠಿತವಾಗಿದೆ ಎಂದು ನವೆಂಬರ್ ತಿಂಗಳ ಬ್ರೆಜಿಲ್ ದೇಶದ ಆರೋಗ್ಯ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಒಟ್ಟಿನಲ್ಲಿ ಏಬೋಲ ವೈರಾಣುವಿನಂತೆಯೇ ಝಿಕಾ ವೈರಣು ಕೂಡ ತನ್ನ ರುದ್ರ ನರ್ತನ ಆರಂಭಿಸಿದೆ ಎಂದರೂ ತಪ್ಪಲ್ಲ. ವಿಶ್ವದ ಯಾವುದೋ ದೇಶದ ಯಾವುದೋ ಮೂಲೆಯಲ್ಲಿ ಬಂದ ರೋಗಕ್ಕೆ ನಾವೇಕೆ ತಲೆ ಕೆಡಿಸಿಕೊಳ್ಳಬೇಕೆಂದು ಮೂಗು ಮುರಿಯುವ ಸಮಯ ಇದಲ್ಲ. ಯಾಕೆಂದರೆ ಸುಧಾರಿತ ಪ್ರಯಾಣ ಸೌಕರ್ಯ ಮತ್ತು ತಂತ್ರ ಜ್ಞಾನದಿಂದಾಗಿ ಯಾವುದೇ ಕ್ಷಣದಲ್ಲಿ ನಮ್ಮ ದೇಶಕ್ಕೆ ಈ ರೋಗ ಬರುವ ಸಾದ್ಯತೆ ಇದೆ. ಈ ನಿಟ್ಟಿನಲ್ಲಿ ಸೂಕ್ಷ್ಮ ನಿಗಾವಹಿಸಿ ಮುಂಜಾಗರೂಕತೆ ಕ್ರಮವನ್ನು ತಕ್ಷಣವೇ ಕೈಗೊಂಡಲ್ಲಿ ರೋಗ ಬರದಂತೆ ತಡೆಯಲು ಸಾಧ್ಯ. ಆದರಲ್ಲಿಯೇ ನಮ್ಮೆಲ್ಲರ ಹಿತ ಮತ್ತು ಜಾಣತನ ಅಡಗಿದೆ.
ಡಾ|| ಮುರಲೀ ಮೋಹನ್ ಚೂಂತಾರು
ಸುರಕ್ಷಾ ದಂತ ಚಿಕಿತ್ಸಾಲಯ
ಹೊಸಂಗಡಿ – ೬೭೧ ೩೨೩
ಮೊ : ೦೯೮೪೫೧೩೫೭೮೭

 

Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.