ಸುಳ್ಯ: ಸುದ್ದಿ ಮಾಹಿತಿ ಟ್ರಸ್ಟ್ ವತಿಯಿಂದ ಗ್ರಾಮದರ್ಶನ ಕಾರ್ಯಕ್ರಮ ಸುಳ್ಯ ತಾಲೂಕಿನ ಉಬರಡ್ಕ ಗ್ರಾಮದಲ್ಲಿ ನ.15ರಂದು ಚಾಲನೆ ನೀಡಲಾಯಿತು. ಸುದ್ದಿ ಫೇಸ್ಬುಕ್ ಗ್ರೂಪ್ನ್ನು ಸುದ್ದಿ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕರಾದ ಡಾ.ಯು.ಪಿ. ಶಿವಾನಂದರವರು ಉದ್ಘಾಟಿಸಿದರು. ಉಬರಡ್ಕ ಗ್ರಾ.ಪಂ. ಅಧ್ಯಕ್ಷ ಹರೀಶ್ ರೈ ಉಬರಡ್ಕ, ಉಬರಡ್ಕ ಶಾಸ್ತಾವು ನರಸಿಂಹ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ರತ್ನಾಕರ ಗೌಡ ಬಳ್ಳಡ್ಕ, ಸುಳ್ಯ ಲ್ಯಾಂಪ್ಸ್ ಸೊಸೈಟಿ ಅಧ್ಯಕ್ಷ ಸೀತಾನಂದ, ಸುಳ್ಯ ಸುದ್ದಿ ಬಿಡುಗಡೆ ಸಿ.ಇ.ಓ. ಶ್ರೇಯಸ್ ಊರುಬೈಲು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಗ್ರಾಮಸ್ಥರಾದ ಕೃಷ್ಣೇಗೌಡ, ರೋಹನ್ ಪೀಟರ್, ರಾಮಚಂದ್ರ ಬಳ್ಳಡ್ಕ, ವಿಜಯಕುಮಾರ್, ವಾಣಿ ರಮೇಶ್ ಮತ್ತಿತರರು ಸಲಹೆ ನೀಡಿದರು. ಸುದ್ದಿ ಗ್ರಾಮದರ್ಶನದಲ್ಲಿ ಗ್ರಾಮದ ಸಾಧಕರು, ಪ್ರೇಕ್ಷಣೀಯ ಸ್ಥಳಗಳು, ಪ್ರವಾಸೋದ್ಯಮ, ಗ್ರಾಮದ ವೆಬ್ಸೈಟ್, ಫೇಸ್ಬುಕ್ ಮತ್ತಿತರ ವಿಷಯಗಳ ಕುರಿತು ಚರ್ಚಿಸಲಾಯಿತು. ಗ್ರಾಮದ ಸಮಸ್ಯೆಗಳ ಕುರಿತು ವಿವರಿಸಿ ಗ್ರಾ.ಪಂ. ಅಧ್ಯಕ್ಷರು ಉತ್ತರಿಸಿದರು.
ಸುದ್ದಿ ಮಾಹಿತಿ ಟ್ರಸ್ಟ್ ಮತ್ತು ಸುದ್ದಿ ಮಾಹಿತಿ ವಿಭಾಗದಿಂದ ಸಿಗುವ ಸೌಲಭ್ಯಗಳು ಮತ್ತು ಅದನ್ನು ಪಡೆದುಕೊಳ್ಳುವ ವಿಧಾನದ ಬಗ್ಗೆ ಚರ್ಚಿಸಲಾಗುವುದು, ಗ್ರಾಮದಲ್ಲಿ ಪ್ರೇಕ್ಷಣೀಯ ಸ್ಥಳಗಳು, ಸಮಸ್ಯೆಗಳು, ಸಾಧಕರ ಕುರಿತು ವೀಡಿಯೋ ಚಿತ್ರೀಕರಣ ಮಾಡಲಾಗುವುದು, ಇದನ್ನು ಗ್ರಾ.ಪಂ. ಮೂಲಕ ಗ್ರಾಮಸ್ಥರಿಗೆ ತಲುಪಿಸಲಾಗುವುದು ಹಾಗೂ ಗ್ರಾಮದ ವೆಬ್ಸೈಟ್, ಫೇಸ್ಬುಕ್ ಖಾತೆಗೆ ಗ್ರಾಮಸ್ಥರು ತಮ್ಮಲ್ಲಿರುವ ಮಾಹಿತಿ ನೀಡಬಹುದು. (ಫೇಸ್ಬುಕ್ ಖಾತೆಗೆ ಲಾಗ್ಆನ್ ಮಾಡಲು suddimahithiubaradkavillage)