ದ್ವಿಚಕ್ರ ವಾಹನ ಮಗುಚಿ ಟಿಪ್ಪರ್‌ನ ಟಯರ್ ತಲೆ ಮೇಲೆ ಹರಿದು ಸವಾರ ಮೃತ್ಯು

ಸುಳ್ಯ ನಗರ ಪಂಚಾಯತ್‌ನ ಫಿಶ್ ಮಾರ್ಕೆಟ್ ಎದುರುಗಡೆ ದ್ವಿಚಕ್ರ ವಾಹನ ಪಲ್ಟಿಯಾಗಿ ಸವಾರ ರಸ್ತೆಗೆ ಬಿದ್ದಾಗ ಟಿಪ್ಪರ್‌ನ ಚಕ್ರ ಆತನ ತಲೆ ಮೇಲೆ ಹರಿದು ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ವರದಿಯಾಗಿದೆ.ಘಟನೆ ಇಂದು ಬೆಳಿಗ್ಗೆ ೯-೩೦ಕ್ಕೆ ನಡೆದಿದೆ.

ಆಲಂಕಲ್ಯ ವೆಂಕಪ್ಪ ಗೌಡರ ಪುತ್ರ ಅವಿನ್ ತನ್ನ ದ್ವಿಚಕ್ರ ವಾಹನ ಮೆಸ್ಟ್ರೋದಲ್ಲಿ ಯುವಜನ ಸಂಯುಕ್ತ ಮಂಡಳಿ ಬಳಿ ಇರುವ ತನ್ನ ಅಂಗಡಿಗೆ ಶ್ರೀರಾಂಪೇಟೆ ಕಡೆಯಿಂದ ಹೋಗುತ್ತಿದ್ದರು. ಮೀನು ಮಾರುಕಟ್ಟೆ ಎದುರುಗಡೆ ಮೀನು ಇಳಿಸುವ ಲಾರಿಗಳು ರಸ್ತೆಯ ಮಧ್ಯಭಾಗದವರೆಗೆ ನಿಂತಿದ್ದವು.

ಟಿಪ್ಪರ್ ಲಾರಿಯೊಂದು ಅವುಗಳನ್ನು ದಾಟಿ ಮುಂದಕ್ಕೆ ಹೋಗುತ್ತಿರುವಾಗ ಅವಿನ್ ಆ ಟಿಪ್ಪರ್ ಲಾರಿಯನ್ನು ಓವರ್‌ಟೇಕ್ ಮಾಡಲು ಪ್ರಯತ್ನಿಸಿದರು. ಆ ವೇಳೆ ರಸ್ತೆಯ ಕಾಂಕ್ರೀಟ್‌ನ ಅಂಚಿಗೆ ದ್ವಿಚಕ್ರ ವಾಹನದ ಚಕ್ರ ಸಿಲುಕಿ ವಾಹನ ಪಲ್ಟಿಯಾಯಿತು. ಸವಾರ ಅವಿನ್ ರಸ್ತೆಗೆ ಬಿದ್ದರು. ಆ ವೇಳೆಗೆ ಟಿಪ್ಪರ್‌ನ ಹಿಂದಿ ಚಕ್ರ ಅವಿನ್‌ರ ತಲೆಯ ಮೇಲೆ ಹರಿಯಿತು. ಅವರು ಸ್ಥಳದಲ್ಲೇ ಕೊನೆಯುಸಿರೆಳೆದರು.

 

ಕರ್ನಾಟಕ ರಕ್ಷಣಾ ವೇದಿಕೆ ಮನವಿ
ಮೀನು ಮಾರುಕಟ್ಟೆಯ ಬಳಿ ಮೀನು ಹೇರಿಕೊಂಡು ಬರುವ ಲಾರಿಗಳು ರಸ್ತೆಗೆ ಅಡ್ಡಲಾಗಿ ನಿಲ್ಲುತ್ತಿರುವುದರಿಂದ ವಾಹನ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಮತ್ತು ಅಲ್ಲಿ ಪಾರ್ಕಿಂಗ್ ವ್ಯವಸ್ಥೆಯೂ ಇಲ್ಲ. ಹಾಗೂ ನೋ ಪಾರ್ಕಿಂಗ್ ಬೋರ್ಡ್ ನ.ಪಂ. ವತಿಯಿಂದ ಅಳವಡಿಸದಿರುವುದರಿಂದ ಅಪಘಾತಗಳು ನಡೆಯುತ್ತಿದೆ. ಆದ್ದರಿಂದ ನೋ ಪಾರ್ಕಿಂಗ್ ಬೋರ್ಡ್ ಅಳವಡಿಸುವುದು ಮತ್ತು ಮೀನು ಅನ್ ಲೋಡ್ ಮಾಡಲು ಆ ಸ್ಥಳದಲ್ಲಿ ಅವಕಾಶ ಕಲ್ಪಿಸದಂತೆ ಕರ್ನಾಟಕ ರಕ್ಷಣಾ ವೇದಿಕೆಯವರು ನಗರ ಪಂಚಾಯತ್‌ಗೆ ಹೋಗಿ ಮುಖ್ಯಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.

ಶ್ರದ್ಧಾಂಜಲಿ
ಮೃತ ಅವಿನ್ ತಾಲೂಕು ಪಂಚಾಯತ್ ವಾಣಿಜ್ಯ ಸಂಕೀರ್ಣದಲ್ಲಿ ಫ್ಲೆಕ್ಸ್ ಸೆಂಟರ್ ನಡೆಸುತ್ತಿರುವವರಾದ್ದರಿಂದ ನ.೨೭ರಂದು ನಡೆದ ತಾಲೂಕು ಪಂಚಾಯತ್ ಕೆ.ಡಿ.ಪಿ.ಸಭೆಯಲ್ಲಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಸುಳ್ಯಸಹಾಯ ಹಸ್ತ ಪುರುಷ ನವೋದಯ ಸ್ವಸಹಾಯ ಗುಂಪಿನ ಸದಸ್ಯರಾಗಿರುವ ಅವಿನ್‌ಗೆ ಸಂಘದ ವತಿಯಿಂದ ಶ್ರದ್ದಾಂಜಲಿ ಸಲ್ಲಿಸಲಾಯಿತು. ಈ ಸಂದರ್ಭ ಸಂಘದ ಅಧ್ಯಕ್ಷ ಪುರುಷೋತ್ತಮ ಎಂ, ಸ್ಥಾಪಕಾಧ್ಯಕ್ಷ ಲಿಗೋಧರ ಆಚಾರ್ಯ, ಗೌರವಾಧ್ಯಕ್ಷ ಪದ್ಮನಾಭ ಕೊಯನಾಡು, ಕಾರ್ಯದರ್ಶಿ ಹರ್ಷಿತ್ ಕೆ.ಎಸ್., ಉಪಾಧ್ಯಕ್ಷ ಶಂಕರ ಪೆರಾಜೆ, ಖಜಾಂಚಿ ರಾಘವ ಪಿ., ಜತೆ ಕಾರ್ಯದರ್ಶಿ ಅಚ್ಯುತ ಕೆ, ಸದಸ್ಯರುಗಳಾದ ಪುಷ್ಪರಾಜ್ ಪಿ., ದೇವಿಪ್ರಸಾದ್ ಡಿ., ಕಾರ್ತಿಕ್ ಎ, ಸಂಜಯ್ ಎಂ., ಹರೀಶ್ ಕೆ.ಜಿ., ಕೇಶವ ಎಸ್.ಕೆ. ಇದ್ದರು.

ಒಬ್ಬನೆ ಮಗ – ಮನೆಯನ್ನೂ ನೋಡಿಕೊಳ್ಳುತ್ತಿದ್ದ
ಮೃತ ಅವಿನ್ ಅವರ ತಂದೆ- ತಾಯಿಗೆ ಒಬ್ಬನೇ ಮಗ, ೪ ಮಂದಿ ಹೆಣ್ಣು ಮಕ್ಕಳು, ಅವರೆಲ್ಲರಿಗೂ ಮದುವೆಯಾಗಿದೆ. ಮನೆಯಲ್ಲಿ ಈತ ತಂದೆ ತಾಯಿಯರ ಜತೆ ಕೃಷಿಯನ್ನೂ ನೋಡಿಕೊಳ್ಳುತ್ತಿದ್ದ. ಎಸ್.ಎಸ್.ಎಲ್.ಸಿ. ವಿದ್ಯಾಭ್ಯಾಸದ ಬಳಿಕ ಸುಳ್ಯದ ಡಿಜಿ ಪ್ಲಸ್‌ನಲ್ಲಿ ಕೆಲಸಕ್ಕೆ ಸೇರಿ ಆ ಬಳಿಕ ಸುಳ್ಯದ ಸೀಮಾ, ಹಾಗೂ ಅವಿ ಆರ್ಟ್ಸ್‌ಗಳಲ್ಲೂ ಕೆಲಸ ಮಾಡಿ, ಕಳೆದ ಒಂದೂ ವರೆ ವರ್ಷದಿಂದ ತಾಲೂಕು ಪಂಚಾಯತ್ ವಾಣಿಜ್ಯ ಸಂಕೀರ್ಣದಲ್ಲಿ ಸ್ವತಂ ಉದ್ಯೋಗ ಮಾಡಿಕೊಂಡಿದ್ದ. ಸುಮಾರು ೪ ವರ್ಷದ ಹಿಂದೆ ಒಮ್ಮೆ ಅಪಘಾತವಾಗಿ ತೀವ್ರ ಜಖಂಗೊಂಡಿದ್ದ ಅವಿನ್ ಆ ಬಳಿಕ ಚೇತರಿಸಿಕೊಂಡಿದ್ದರು.

ಎಚ್ಚೆತ್ತ ನ.ಪಂ.
ಮಾರುಕಟ್ಟೆಗೆ ಮೀನು ತರುವ ಲಾರಿ, ಅನ್‌ಲೋಡ್ ಮಾಡುವಾಗ ಮಾರುಕಟ್ಟೆ ಎದುರಿನ ರಸ್ತೆಯ ಮಧ್ಯಭಾಗದ ವರೆಗೆ ನಿಲ್ಲುವುದರಿಂದ ಸಂಚಾರಕ್ಕೆ ತೊಂದರೆಯಾಗುತ್ತದೆ ಮತ್ತು ಮೀನಿನ ನೀರು ರಸ್ತೆಯಲ್ಲೆ ಕೆಳಗಿನವರೆಗೆ ಹರಿದು ವಾಸನೆ ಬರುತ್ತದೆ ಎಂದು ಜನರು, ಜನಪ್ರತಿನಿಧೀಗಳು ಹೇಳುತ್ತಿದ್ದರೂ ನಗರ ಪಂಚಾಯತ್ ಎಚ್ಚೆತ್ತಿರಲಿಲ್ಲ. ಆದರೆ ಈಗ ಅಪಘಾತದಲ್ಲಿ ಯುವಕನೊಬ್ಬ ಪ್ರಾಣ ಕಳೆದುಕೊಂಡ ಬಳಿಕ ಎಚ್ಚೆತ್ತ ಪಂಚಾಯತು, ಹಳೆಯ ಮಾರುಕಟ್ಟೆಯೊಳಗಡೆ ಮೀನಿನ ವಾಹನ ನಿಲ್ಲಿಸಿ-ಹೊಸ ಮಾರುಕಟ್ಟೆಯ ಗೋಡೆ ಒಡೆದು ದಾರಿ ಮಾಡುವ ನಿರ್ಧಾರಕ್ಕೆ ಬಂದಿರುವುದಾಗಿ ತಿಳಿದು ಬಂದಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.