HomePage_Banner
HomePage_Banner
HomePage_Banner
HomePage_Banner
Breaking News

ಸುಳ್ಯ ತಾಲೂಕು ೨೨ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ವಸಂತ ಶೆಟ್ಟಿ ಬೆಳ್ಳಾರೆ ಪರಿಚಯ

ಸುಳ್ಯ ತಾಲೂಕು ೨೨ನೇ ಕನ್ನಡ ಸಾಹಿತ್ಯ ಸಮ್ಮೇಳನ ಜ.೧೩ರಂದು ದುಗಲಡ್ಕದಲ್ಲಿ ನಡೆಯಲಿದ್ದು ಸಮ್ಮೇಳನದ ಸರ್ವಾಧ್ಯಕ್ಷರಾಗಿ ಸಾಹಿತಿ, ಸಂಘಟಕ, ತುಳು ಸಾಹಿತ್ಯ ಆಕಾಡಮಿಯ ಮಾಜಿ ಸದಸ್ಯ, ವಸಂತ ಶೆಟ್ಟಿ ಬೆಳ್ಳಾರೆ ಆಯ್ಕೆಯಾಗಿದ್ದಾರೆ. ದೇಶದ ರಾಜದಾನಿ ದೆಹಲಿಯಲ್ಲಿ ಕನ್ನಡದ ಕಂಪನ್ನು ಪಸರಿಸುತ್ತಿರುವ, ಕನ್ನಡಕ್ಕಾಗಿ ಪ್ರಾಮಾಣಿಕ ಹೋರಾಟ ನಡೆಸುತ್ತಿರುವ ವಸಂತ ಶೆಟ್ಟಿಯವರು ದೆಹಲಿಯಲ್ಲಿ ಕರ್ನಾಟಕ ಸಂಘದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ. ಸುಳ್ಯ ತಾಲೂಕಿನ ಕಳಂಜ ಗ್ರಾಮದ ತಂಟೆಪ್ಪಾಡಿ ದಿ.ಜತ್ತಪ್ಪ ಶೆಟ್ಟರ ಪುತ್ರರಾಗಿರುವ ವಸಂತ ಶೆಟ್ಟಿಯವರು ಆರಂಭಿಕ ಶಿಕ್ಷಣವನ್ನು ಕಳಂಜ ಬೆಳ್ಳಾರೆಯಲ್ಲಿ ಮಾಡಿ, ಬಿ.ಕಾಂ ಪದವಿಯನ್ನು ಪಡೆದ ಬಳಿಕ ಫರಿದಾಬಾದ್‌ನ ರೇವಾ ಇಂಡಸ್ಟ್ರೀಸ್‌ನಲ್ಲಿ ೧೭ವರ್ಷ ಸೇವೆ ಸಲ್ಲಿಸಿದ್ದರು. ಬಳಿಕ ಫರಿದಾಬಾದ್‌ನಲ್ಲಿರುವ ಸೆಂಚುರಿ ಕ್ರೇನ್ ಇಂಜಿನಿಯರ‍್ಸ್ ಪ್ರೈವೆಟ್ ಲಿಮಿಟೆಡ್‌ನಲ್ಲಿ ಮಾರ್ಕೆಟಿಂಗ್ ವಿಭಾಗದ ಜನರಲ್ ಮೇನೆಜರ್ ಆಗಿ ೧೨ವರ್ಷ ಸೇವೆ ಸಲ್ಲಿಸಿದ್ದಾರೆ. ಕಂಪೆನಿಯಲ್ಲಿ ಉನ್ನತ ಉದ್ಯೋಗಿಯಾಗಿದ್ದರು ಇವರ ಆಸಕ್ತಿಯ ಕ್ಷೇತ್ರ ಕನ್ನಡ, ತುಳು, ಸಾಹಿತ್ಯ ಸಂಘಟನೆ, ಪತ್ರಿಕೋದ್ಯಮ ಹಾಗೂ ಸಾಂಸ್ಕ್ರತಿಕ ಕಾರ್ಯಕ್ರಮ ಈ ಕ್ಷೇತ್ರದಲ್ಲೇ ಅವರು ಪ್ರಸಿದ್ಧಿಯನ್ನು, ಜನಪ್ರಿಯತೆಯನ್ನು ಪಡೆದರು.
೧೯೮೫ರಲ್ಲಿ ಪ್ರಕಟವಾದ ಅಂತರ್ಗತ ಎಂಬ ಕಿರು ಕಾದಂಬರಿ, ೨೦೦೭ರಲ್ಲಿ ಅಕಾಲ ಕಥಾ ಸಂಕಲನ, ೨೦೦೮ರಲ್ಲಿ ದೆಹಲಿಯ ೪೦ಕ್ಕೂ ಮಿಕ್ಕಿ ಕವಿಗಳ ಕವನ ಸಂಕಲನ ಅನೇಕ, ೨೦೦೮ರಲ್ಲಿ ಹೊರಬಂದ ಅಧ್ಯಾಯ ಕವನ ಸಂಕಲನ,೨೦೦೯ರಲ್ಲಿ ಆಶಾಸೌಧ ಕಥಾಸಂಕಲನ, ಭಾರತ ಸರ್ಕಾರದ ಪ್ರಧಾನ ವಾರ್ತಾ ಆಧಿಕಾರಿಯಾಗಿದ್ದ ಐ.ರಾಮಮೋಹನರಾವ್ ಅವರ ಕುರಿತ ಅದಮ್ಯ ಕೃತಿ, ೨೦೧೩ರಲ್ಲಿ ಯಕ್ಷಗಾನದ ಮೇರು ಕಲಾವಿದ ಅಳಿಕೆ ರಾಮಯ್ಯ ರೈರವರ ಕುರಿತ ಕೃತಿ- ಸ್ಮೃತಿ ಅಳಿಕೆ, ೮೦ರ ದಶಕದಲ್ಲಿ ದೆಹಲಿಯಲ್ಲಿ ೨ವರ್ಷ ಆಂತರ ಸಾಹಿತ್ಯ ಪತ್ರಿಕೆಯ ಪ್ರಕಟಣೆ ಇವು ಸಾಹಿತ್ಯ ಕ್ಷೇತ್ರದಲ್ಲಿ ವಸಂತ ಶೆಟ್ಟಿಯವರ ಹೆಜ್ಜೆ ಗುರುತುಗಳು.
ದೆಹಲಿಯ ಕನ್ನಡ ಸಂಘ ಸಂಸ್ಥೆಗಳಲ್ಲಿ ವಸಂತ ಶೆಟ್ಟರು ಸಕ್ರೀಯವಾಗಿ ತೊಡಗಿಸಿಕೊಂಡಿದ್ದಾರೆ. ೧೯೮೭ರಲ್ಲಿ ರಾಜಧಾನಿ ಕನ್ನಡ ಸಂಘದ ಸ್ಥಾಪಕಾಧ್ಯಕ್ಷ, ದೆಹಲಿ ಕನ್ನಡ ವೇದಿಕೆ ಸಂಚಾಲಕ, ೧೯೮೯ರಲ್ಲಿ ವಿಶ್ವ ಕನ್ನಡ ಕೇಂದ್ರ ಕಾರ್ಯದರ್ಶಿ,೨೦೦೬ರಿಂದ-೨೦೧೧ರ ವರೆಗೆ ಫರಿದಾಬಾದ್ ಕನ್ನಡ ಸಂಘದ ಅಧ್ಯಕ್ಷ, ೨೦೦೭ರಲ್ಲಿ ದೆಹಲಿ ಕನ್ನಡ ವಿದ್ಯಾ ಸಂಸ್ಥೆಯ ಉಪಾಧ್ಯಕ್ಷ, ೨೦೧೧ರಲ್ಲಿ ದೆಹಲಿ ಕನ್ನಡ ವಿದ್ಯಾಸಂಸ್ಥೆಯ ಸುವರ್ಣ ಮಹೋತ್ಸವದ ಸಾಂಸ್ಕ್ರತಿಕ ಸಮಿತಿ ಅಧ್ಯಕ್ಷ, ೧೯೯೭ರಲ್ಲಿ ಚೆನ್ನೈ ಕರ್ನಾಟಕ ರಾಜ್ಯೋತ್ಸವ ಸಮಿತಿಯ ಕಾರ್ಯದರ್ಶಿ, ೨೦೧೩-೨೦೧೫ಸಾಲೀನಲ್ಲಿ ದೆಹಲಿ ಕರ್ನಾಟಕ ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಪ್ರಸುತ್ತ ಯಕ್ಷದ್ರುವ ಪಟ್ಲ ಪೌಂಡೇಶನ್ ದೆಹಲಿ ಘಟಕದ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವು ವಸಂತ ಶೆಟ್ಟರ ಸಂಘಟನಾ ಚಾತುರ್ಯವನ್ನು ಎತ್ತಿ ತೋರಿಸುತ್ತದೆ.
ದೆಹಲಿಯಲ್ಲಿ ರಾಷ್ಟ್ರೀಯ ಮಟ್ಟದ ತುಳು ಸಮಾವೇಶ ಆಯೋಜಿಸಿ ಸಂವಿಧಾನದ ಎಂಟನೇ ಪರಿಚ್ಚೇದಲ್ಲಿ ತುಳು ಭಾಷೆಯನ್ನು ಸೇರಿಸಲು ವಸಂತ ಶೆಟ್ಟರು ಮಾಡಿದ ಶ್ರಮ ಅಪಾರ. ೨೦೦೩ರಲ್ಲಿ ಕರ್ನಾಟಕ ತುಳು ಆಕಾಡಮಿ ಜೊತೆ ಸೇರಿ ತುಳು ಸಮಾವೇಶವನ್ನು ಆಯೋಜಿಸಿದ್ದಾರೆ. ಅಭಿಮತ ಪತ್ರಿಕೆಯ ಸಂಪಾದಕರಾಗಿ ಪ್ರಸ್ತುತ ಆದರ ಅಧ್ಯಕ್ಷರಾಗಿ ಸಂಘದ ನೇತಾರಾಗಿ ಸಂಘದ ಚಟುವಟಿಕೆಗಳಿಗೆ ಹೊಸತನ ನೀಡುತ್ತಿದ್ದಾರೆ. ಸೃಜನಶೀಲ ಕಾರ್ಯಚಟುವಟಿಕೆಗಳು ದೆಹಲಿ ಕರ್ನಾಟಕ ಸಂಘದ ಆಶ್ರಯದಲ್ಲಿ ನಡೆಯುತ್ತಿದೆ. ಕರ್ನಾಟಕ ಯಕ್ಷಭಾರತೀ ತಂಡದ ಮೂಲಕ ಕೇಂದ್ರದ ಮಾಜಿ ಸಚಿವರಾದ ಆಸ್ಕರ್ ಪೆರ್ನಾಂಡೀಸ್, ವೀರಪ್ಪ ಮೊಲಿಯವರು ಕಲಾವಿದರಾಗಿ ಭಾಗವಹಿಸಿದ ಯಕ್ಷಗಾನವನ್ನು ಆಯೋಜಿಸಿದ ಹಿರಿಮೆ ಇವರದ್ದು.
ದೆಹಲಿ ಮಿತ್ರ ಎಂಬ ಸಂಘಟನೆಯ ಸಂಚಾಲಕರಾಗಿ, ಕರ್ನಾಟಕದ ತುಳುನಾಡಿನ ಆನೇಕ ಕಾರ್ಯಕ್ರಮಗಳನ್ನು ದೆಹಲಿಯಲ್ಲಿ ಆಯೋಜಿಸಿದ್ದಾರೆ. ಇವರ ಕಾರ್ಯಚಟುವಟಿಕೆಗಳನ್ನು ಗಮನಿಸಿ ಆನೇಕ ಪ್ರಶಸ್ತಿಗಳು ಇವರಿಗೆ ಸಂದಿದೆ. ದ.ಕ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ದ.ಕ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನಿಂದ ಹೊರನಾಡ ಕನ್ನಡ ಸೇವೆಗಾಗಿ ಸನ್ಮಾನ, ತಾಲೂಕು ಸಾಹಿತ್ಯ ಪರಿಷತ್‌ನಿಂದ ಸನ್ಮಾನ, ಬೆಂಗಳೂರಿನ ಜ್ಞಾನ ಮಂದಾರ ಆಕಾಡೆಮಿಯಿಂದ ಸಮಾಜ ರತ್ನ ರಾಜ್ಯ ಪ್ರಶಸ್ತಿ, ಕಾಸರಗೋಡು ಕರಾವಳಿ ಸಾಂಸ್ಕ್ರತಿಕ ಪ್ರತಿಷ್ಟಾನದಿಂದ ಹೊರನಾಡ ಕನ್ನಡಿಗ ಪ್ರಶಸ್ತಿ, ಗುರುಗಾಂವ್ ಕನ್ನಡ ಸಂಘದಿಂದ ಕನ್ನಡಶ್ರೀ ರಾಜ್ಯೋತ್ಸವ ಪ್ರಶಸ್ತಿ, ಇವರಿಗೆ ಸಂದಿದೆ.
ಇವರ ಸಾಹಿತ್ಯ, ಸಂಘಟನಾ ಕ್ಷೇತ್ರದಲ್ಲಿ ಮಾಡಿದ ಸಾಧನೆಗಾಗಿ ಈ ಬಾರಿಯ ಸುಳ್ಯ ತಾಲೂಕು ೨೨ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯ ಪಟ್ಟ ಒಲಿದುಬಂದಿದೆ.

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.