ಎಡಮಂಗಲ ಗ್ರಾಮದ ಕೇರ್ಪಡ ಪೂಜಾರಿಮನೆ ಸ್ವರ್ಣಧಾಮ ದಿ| ಲಕ್ಷ್ಮಣ ಗೌಡರ ಪುತ್ರ, ನಿಂತಿಕಲ್ಲು ವಾಣಿ ಕಾಂಪ್ಲೆಕ್ಸ್ ಮಾಲಕ ಕರುಣಾಕರ ಗೌಡರು ಅಲ್ಪಕಾಲದ ಅಸೌಖ್ಯದಿಂದ ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ ಜ.೧೯ರಂದು ಬೆಳಗ್ಗಿನ ಜಾವ ಅಸೌಖ್ಯದ ಕಾರಣ ಸ್ಥಳೀಯ ಆಸ್ಪತ್ರೆಗಳಿಂದ ಔಷಧಿ ತೆಗೆದುಕೊಂಡಿದ್ದರು. ಖಾಯಿಲೆ ಉಲ್ಬಣಗೊಂಡಾಗ ಡಾಕ್ಟರ್ ಸಲಹೆಯಂತೆ ಪುತ್ತೂರು ಆಸ್ಪತ್ರೆಗೆ ದಾಖಲಾಗಿದ್ದರು. ಅಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ನಿಧನರಾದರು.
ಮೃತರು ಕೊಡುಗೈದಾನಿಯಾಗಿದ್ದು, ಅತ್ಯುತ್ತಮ ಕೃಷಿಕರಾಗಿದ್ದರು. ಸರಕಾರಿ ಶಾಲೆಗಳಾದ ಕರಿಂಬಿಲ ಶಾಲೆ, ಎಣ್ಮೂರು ಶಾಲೆ, ಅಲೆಕ್ಕಾಡಿ ಶಾಲೆ, ಶಾಂತಿನಗರ ಶಾಲೆಗಳಿಗೆ ದತ್ತಿ ನಿಧಿಯನ್ನು ಸ್ಥಾಪಿಸಿ ಅದನ್ನು ಅತೀ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನದ ರೂಪದಲ್ಲಿ ನೀಡಲಾಗುತ್ತಿತ್ತು. ಅಲೆಕ್ಕಾಡಿ ಅಂಗನವಾಡಿ ಕೇಂದ್ರಕ್ಕೆ ವಿಸ್ತಾರ ಛಾವಣಿ ನಿರ್ಮಾಣಕ್ಕೆ ಪೂರ್ತಿ ಧನ ಸಹಾಯವನ್ನು ನೀಡಿದ್ದರು. ಇವರು ಕೋಟಿ ಚೆನ್ನಯರ ಭಕ್ತರಾಗಿದ್ದು, ನಿಂತಿಕಲ್ಲಿನಲ್ಲಿ ಹರಿಕೆ ಡಬ್ಬಿ ಕಟ್ಟೆಯನ್ನು ಕಟ್ಟಿ ಅದರಲ್ಲಿ ಸಂಗ್ರಹವಾದ ಹಣವನ್ನು ವರ್ಷಂಪ್ರತಿ ಗರಡಿಗೆ ಒಪ್ಪಿಸುತ್ತಿದ್ದರು.
ಇದಲ್ಲದೆ ನಿಡ್ವಾಳ ಶ್ರೀ ಮಹಾವಿಷ್ಣು ದೇವಸ್ಥಾನ, ಶ್ರೀಲಕ್ಷ್ಮಿ ನರಸಿಂಹ ದೇವಸ್ಥಾನ ಕಾವಾಜೆ ಮುರುಳ್ಯ, ಆರೆಂಬಿ ಶಿರಾಡಿ ರಾಜನ್ ದೈವಸ್ಥಾನ, ಎಣ್ಮೂರು ಭಾರತಿ ಸೀತಾರಾಮಾಂಜನೇಯ ಮಂದಿರಕ್ಕೆ ಜೀರ್ಣೋದ್ಧಾರ ಸಮಯದಲ್ಲಿ ಮತ್ತು ವರ್ಷಂಪ್ರತಿ ವಾರ್ಷಿಕೋತ್ಸವಕ್ಕೆ ಧನಸಹಾಯವನ್ನು ನೀಡುತ್ತಿದ್ದರು. ಸಮಾಜಸೇವಕರಾಗಿದ್ದ ಇವರು ಕೈಲಾಗದವರು ಬಂದು ಸಹಾಯವನ್ನು ಕೇಳಿದರೆ ಇಲ್ಲ ಎನ್ನದೆ ಸಹಾಯವನ್ನು ಮಾಡುತ್ತಿದ್ದರು. ಅದಲ್ಲದೆ “ಸ್ವರ್ಣಧಾಮ” ಮನೆಯ ಗ್ರಹಪ್ರವೇಶದಂದು ಅಲೆಕ್ಕಾಡಿ ಶಾಲೆಯ ಮಕ್ಕಳಿಗೆ ಸ್ಕೂಲ್ ಬ್ಯಾಗನ್ನು ಸಹ ನೀಡಿದರು. ನಿಂತಿಕಲ್ ಜಂಕ್ಷನ್ನಲ್ಲಿ ಬಸ್ ನಿಲ್ದಾಣವನ್ನು ನಿರ್ಮಿಸಿ ನಿಂತಿಕಲ್ಗೆ ಒಂದು ರೂಪ ಬರುವಂತೆ ಶ್ರಮಿಸಿದ್ದರು.
ಇತ್ತೀಚೆಗೆ ತಮ್ಮ ಕಾಂಪ್ಲೆಕ್ಸ್ ಎದುರುಗಡೆಯ ಜಾಗವನ್ನು ರಸ್ತೆಯ ಮಟ್ಟಕ್ಕೆ ತಗ್ಗಿಸಿ ಇಂಟರ್ಲಾಕ್ ಹಾಕಿ ಜಂಕ್ಷನ್ ಮತ್ತಷ್ಟು ಸುಂದರವಾಗಿ ಕಾಣುವಂತೆ ಮಾಡಿದ್ದರು. ಮೃತರು ತಾಯಿ ಬೊಮ್ಮಮ್ಮ, ಪತ್ನಿ ವೀಣಾ ಕರುಣಾಕರ, ಪುತ್ರರಾದ ಯಜ್ಞೇಶ್, ಚಂದ್ರೇಶ್, ಸಹೋದರರು, ಸಹೋದರಿಯರನ್ನು, ಕುಟುಂಬಸ್ಥರನ್ನು ಹಾಗೂ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.