ಸುಳ್ಯ ನ.ಪಂ. ಸಮುದಾಯ ಸಂಘಟಕಿ ವರ್ಗಾವಣೆ ವಿರುದ್ಧ ಗರಂ: ಸ್ವಸಹಾಯ ಸಂಘಗಳ ಸದಸ್ಯರಿಂದ ಪ್ರತಿಭಟನೆ

Advt_Headding_Middle
Advt_Headding_Middle

 

ಸುಳ್ಯ ನ.ಪಂ.ನಲ್ಲಿ ಸಮುದಾಯ ಸಂಘಟಕಿಯಾಗಿರುವ ಶ್ರೀಮತಿ ಜಯಲಕ್ಷ್ಮೀಯವರ ವರ್ಗಾವಣೆ ವಿರುದ್ಧ ಆಕ್ರೋಶಗೊಂಡ ಯಶಸ್ವಿನಿ ಪ್ರದೇಶ ಮಟ್ಟದ ನಗರ ಮಹಿಳಾ ಸ್ವಸಹಾಯ ಸಂಘಗಳ ಒಕ್ಕೂಟದ ಸದಸ್ಯರು ನ.ಪಂ. ಎದುರು ಮಂಗಳವಾರ ಪ್ರತಿಭಟನೆ ನಡೆಸಿದರು.

ಜಯಲಕ್ಷ್ಮೀಯವರು ಸುಳ್ಯ ನ.ಪಂ.ನಲ್ಲಿ ಸಮುದಾಯ ಸಂಘಟಕಿ ಆಗಿದ್ದು, ಅವರನ್ನು ಜ. ೨೯ರಿಂದ ಬಿಡುಗಡೆಗೊಳಿಸಿ ಮಡಿಕೇರಿ ನಗರ ಸಭೆಯ ಸಮುದಾಯ ಸಂಘಟಕರಾಗಿ ವರ್ಗಾಯಿಸಿ ಆದೇಶ ಬಂದಿತ್ತು. ಅವರ ಸ್ಥಾನಕ್ಕೆ ಯಾರೂ ಬಾರದಿರುವುದರಿಂದ ಆಕ್ರೋಶಗೊಂಡ ಸ್ವಸಹಾಯ ಸಂಘಗಳ ಸದಸ್ಯರು ನೂರಾರು ಸಂಖ್ಯೆಯಲ್ಲಿ ನ.ಪಂ. ಎದುರು ಜಮಾಯಿಸಿ ಘೋಷಣೆಗಳನ್ನು ಕೂಗಿದರು. ಮಂಗಳವಾರ ನ.ಪಂ. ಮಾಸಿಕ ಸಭೆ ಕೂಡಾ ನಡೆಯಲಿರುವುದರಿಂದ ಅಧ್ಯಕ್ಷರು ಹಾಗೂ ಸದಸ್ಯರು ಪಂಚಾಯತ್‌ಗೆ ಆಗಮಿಸಿದ್ದು, ಪ್ರತಿಭಟನಾಕಾರರ ಅಹವಾಲು ಆಲಿಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರಾದರೂ ಪ್ರತಿಭಟನಾಕಾರರು ಲಿಖಿತ ಉತ್ತರಕ್ಕೆ ಆಗ್ರಹಿಸಿದರು.

ನಗರ ಪಂಚಾಯತ್ ಸಭೆಯಲ್ಲಿ ಈ ವಿಚಾರ ಆರಂಭದಲ್ಲೇ ಪ್ರತಿಧ್ವನಿಸಿತು. ಅವರ ಪ್ರತಿಭಟನೆಗೆ ಏನು ಕ್ರಮ ಕೈಗೊಂಡಿದ್ದೀರಿ? ಎಂದು ಎನ್.ಎ.ರಾಮಚಂದ್ರರು ಮುಖ್ಯಾಧಿಕಾರಿಯನ್ನು ಪ್ರಶ್ನಿಸಿದಾಗ ಅವರು ಮನವಿ ನೀಡಿದ್ದಾರೆ. ಅದನ್ನು ಸಂಬಂಧಪಟ್ಟವರಿಗೆ ಕಳುಹಿಸುತ್ತೇವೆ ಎಂದು ಮುಖ್ಯಾಧಿಕಾರಿ ಗೋಪಾಲ ನಾಯ್ಕ್ ಹೇಳಿದರು. ಇದರಿಂದ ತೃಪ್ತರಾಗದ ಸದಸ್ಯರು ನಮಗೆ ಜಯಲಕ್ಷ್ಮೀಯವರೇ ಬೇಕೆಂದೇನಿಲ್ಲ. ಆದರೆ ಅವರ ಸ್ಥಾನಕ್ಕೆ ಯಾರೂ ಕೂಡ ಬಾರದಿರುವುದರಿಂದ ಕೆಲಸ ಕಾರ್ಯಗಳು ಪೆಂಡಿಂಗ್ ಆಗಿ ಸಮಸ್ಯೆಯಾಗುತ್ತದೆ. ಆದ್ದರಿಂದ ಇಲ್ಲಿಗೆ ಸಂಬಂಧಪಟ್ಟ ಹುದ್ದೆಗೆ ಆಗಮಿಸಿದ ಬಳಿಕ ಅವರನ್ನು ವರ್ಗಾಯಿಸಬೇಕು ಎಂಬ ನಿರ್ಣಯ ಕೈಗೊಂಡು ಅದನ್ನು ಪ್ರತಿಭಟನಾಕಾರರಿಗೆ ತಿಳಿಸಬೇಕು ಎಂದು ಬಹುತೇಕ ಸದಸ್ಯರು ಹೇಳಿದರು. ಬಳಿಕ ಸಭೆಯಿಂದ ಹೋದ ಅಧ್ಯಕ್ಷರು ಮತ್ತು ಮುಖ್ಯಾಧಿಕಾರಿ ಪ್ರತಿಭಟನಾಕಾರರಿಗೆ ಈ ವಿಷಯ ತಿಳಿಸಿದ ಬಳಿಕ ಪ್ರತಿಭಟನೆ ಕೊನೆಗೊಳಿಸಲಾಯಿತು.
ಶ್ರೀಮತಿ ಭಾರತಿ ಬಂಟ್ವಾಳ್, ಶ್ರೀಮತಿ ಸುಲೋಚನಾ ಮೊದಲಾದವರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.