ವಿದ್ಯಾರ್ಥಿನಿ ಶಾಲಾ ಬಸ್ಸಿನ ಚಕ್ರದಡಿ ಸಿಲುಕಿ ಮೃತಪಟ್ಟ ಘಟನೆ ಅರಂತೋಡು ಬಳಿಯ ಬಿಳಿಯಾರಿನಲ್ಲಿ ನಡೆದಿದೆ. ಅರಂತೋಡು ಗ್ರಾಮದ ಬಿಳಿಯಾರು ಕುಲ್ಚಾರ್ ನಿವಾಸಿ ಅಪ್ಪಕುಂಞಿ ಅವರ ೬ರ ಹರೆಯದ ಪುತ್ರಿ ಅಗನ್ಯ ಕೆ.ವಿ.ಜಿ ಐ.ಪಿ.ಎಸ್ನಲ್ಲಿ ಒಂದನೇ ತರಗತಿಯಲ್ಲಿ ಕಲಿಯುತ್ತಿದ್ದು, ಸಂಜೆ ಶಾಲೆ ಮುಗಿಸಿ ಶಾಲಾ ಬಸ್ಸಿನಲ್ಲಿ ಮನೆಗೆ ವಾಪಾಸ್ಸಾಗುತ್ತಿದ್ದ ವೇಳೆ ಬಿಳಿಯಾರು ಎಂಬಲ್ಲಿ ಈ ಘಟನೆ ನಡೆದಿದೆ.
ಘಟನೆಯ ವಿವರ: ಅಗನ್ಯ ಬಸ್ಸಿನಿಂದ ಇಳಿಯುವ ವೇಳೆ ಆಕೆಯ ಟಿಪಿನ್ ಬಾಕ್ಸ್ ಬಸ್ಸಿನೊಳಗೆ ಬಾಕಿಯಾಗಿತ್ತು. ಅದನ್ನು ತೆಗೆದುಕೊಳ್ಳಲು ಬಂದಾಗ ಚಾಲಕ ಬಸ್ಸು ಮುಂದಕ್ಕೆ ಚಲಾಯಿಸಿದ ಕಾರಣ ಬಾಲಕಿ ಬಸ್ಸಿನ ಚಕ್ರದಡಿ ಸಿಲುಕಿಕೊಂಡಿದ್ದಳು. ಬಸ್ಸಿನಲ್ಲಿ ನಿರ್ವಾಹಕ ಇರದ ಕಾರಣ ಗಂಭೀರವಾಗಿ ಹೊಟ್ಟೆಭಾಗಕ್ಕೆ ಗಾಯಗೊಂಡ ಬಾಲಕಿಯನ್ನು ತಕ್ಷಣವನ್ನು ಸುಳ್ಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಿ ಬಳಿಕ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾದರೂ ಮಂಗಳವಾರ ಆಕೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾಳೆ. ಘಟನೆಯ ಬಗ್ಗೆ ಸುಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈಕೆ ಅರಂತೋಡು ಸೊಸೈಟಿ ಉದ್ಯೋಗಿ ಅಪ್ಪ ಕುಂಞಿ ಹಾಗೂ ಉಷಾ ಹಾಗೂ ಸಹೋದರ ಅಘ್ನಪಾಲ್ರವರನ್ನು ಅಗಲಿದ್ದಾರೆ.