ಮಂಡೆಕೋಲಿನಲ್ಲಿ ನಡೆಯಿತು ಐತಿಹಾಸಿಕ ಅಡ್ಡಣಪೆಟ್ಟು – ಪರಂಪರೆಯ ಸ್ಪರ್ಶಕ್ಕೆ ಜನ ಸಾಗರ ಸಾಕ್ಷಿ

ಮಂಡೆಕೋಲು ಶ್ರೀ ಮಹಾವಿಷ್ಣು ಕ್ಷೇತ್ರದ ವರ್ಷಾವಧಿ ಜಾತ್ರೋತ್ಸವವು ಎ.೨೩ರಿಂದ ವಿಜೃಂಭಣೆಯಿಂದ ನಡೆದು ಇದರ ಅಂಗವಾಗಿ ಐತಿಹಾಸಿಕ ಅಡ್ಡಣಪೆಟ್ಟು ಗುರುವಾರ ನಡೆಯಿತು. ಈ ಪರಂಪರೆಯ ಸ್ಪರ್ಶಕ್ಕೆ ಜನ ಸಾಗರ ಸಾಕ್ಷಿಯಾಯಿತು.

ಏನಿದು ಅಡ್ಡಣ ಪೆಟ್ಟು ?
ಸುಳ್ಯ ತಾಲೂಕು ಭೂತಾರಾಧನೆಯಲ್ಲಿ ಮುಂಚೂಣಿಯಲ್ಲಿದ್ದು, ತಲೆತಲಾಂತರಗಳಿಂದ ನಡೆದುಕೊಂಡು, ಆಚರಿಸಿಕೊಂಡು ಬರುವ ಸಂಸ್ಕಾರಯುತವಾದ ಕಟ್ಟುಪಾಡುಗಳು ಇಂದೂ ಉಳಿದುಕೊಂಡಿದೆ. ಅದಕ್ಕೆ ಸಾಕ್ಷಿಯಾಗಿ ಸುಳ್ಯ ತಾಲೂಕಿನ ಮಂಡೆಕೋಲಿನಲ್ಲಿ ನಡೆಯುವ ಅಡ್ಡಣಪೆಟ್ಟು.

ಗ್ರಾಮದ ನಾಲ್ಕು ಊರುಗಳ ಅಥವಾ ಮನೆತನಗಳ ನಡುವೆ ಹೊಡೆದಾಟ ನಡೆಯಬೇಕು. ದೈವ ಬಂದು ಅದನ್ನು ಬಿಡಿಸಬೇಕು. ಆನಂತರ ಸಂಧಾನ ನಡೆಯಬೇಕು. ಹೀಗಾದರೆ ಊರಲ್ಲಿ ಮುಂದೆ ಗಲಾಟೆ ನಡೆಯದೆ ಸೌಹಾರ್ದತೆ ನೆಲೆಸುತ್ತದೆ ಎಂಬ ಹಿಂದಿನ ಪ್ರತೀತಿ ಪ್ರಕಾರ ನಡೆದುಕೊಂಡು ಬಂದಿದೆ. ಅಡ್ಡಣಪೆಟ್ಟು ಎನ್ನುವುದು ಗ್ರಾಮ್ಯ ಪದ. ಅಡ್ಡಣ ಎಂದರೆ ಗುರಾಣಿ ಎಂದರ್ಥ. ತಮ್ಮನ್ನು ಹೊಡೆತದಿಂದ ತಪ್ಪಿಸಿಕೊಳ್ಳಲು ಮುಂಚಾಚುವ ಸಾಧನ ಈ ಗುರಾಣಿ. ಒಂದು ಕೈಯಲ್ಲಿ ಗುರಾಣಿಯಿದ್ದರೆ ಮತ್ತೊಂದು ಕೈಯಲ್ಲಿ ಬೆತ್ತ ಹಿಡಿದು ಹೋರಾಟ ನಡೆಯುತ್ತದೆ ಇದು ಅಡ್ಡಣ್ಣ ಪೆಟ್ಟಿನ ಸಾರಾಂಶ.

ಎ.೨೩ರಂದು ಜಾತ್ರೆ ಆರಂಭಗೊಂಡಿದ್ದು, ಎ.೨೪ರಂದು ಕಳೇರಿ ಗುತ್ತಿನ ಬೈಲು ಎಂಬಲ್ಲಿ ಉಳ್ಳಾಕುಲು ಮತ್ತು ಪರಿವಾರ ದೈವಗಳ ದೈವಸ್ಥಾನದಿಂದ ಮಂಗಳವಾರ ಭಂಡಾರ ಬಂದಿದ್ದು, ಎ.೨೬ರಂದು ಅಡ್ಡಣ ಪೆಟ್ಟು ಮತ್ತು ಉಳ್ಳಾಕುಲು ದೈವದ ನಡಾವಳಿ ಮೂಲಕ ಮುಕ್ತಾಯ ಗೊಂಡಿತು.
ಪುರಾತನ ಕಾಲದಲ್ಲಿ ನಾಲ್ಕೂರು ಅಂದರೆ ಮುರೂರು, ಮಾವಜಿ, ಬೊಳುಗಲ್ಲು, ಕೇನಾಜೆ ಕುಂಟುಂಬದವರು ಹೊಡೆದಾಟ ನಡೆಯುತ್ತಿದ್ದು ಆ ವೇಳೆ ಉಳ್ಳಾಕುಲು ದೈವ ಬಂದು ಬಿಡಿಸುವುದು ಪ್ರತೀತಿ. ಸಂಪ್ರಾದಾಯದ ಪ್ರಕಾರ ನಾಲ್ಕು ಊರಿನ ನಾಲ್ವರು ಗೌಡರು ಸಮವಸ್ತ್ರ ಧರಿಸಿ ದಂಡ ಹಿಡಿದು ಎದುರು ಬದುರು ಹೋರಾಡಲು ಸಿದ್ಧರಾಗುತ್ತಾರೆ. ಆಯಾಯ ಊರಿನ ಪ್ರಮುಖರು ಹೋರಾಟಕ್ಕೆ ಪ್ರೇರಿಪಿಸುತ್ತಾರೆ. ಈ ಸಂದರ್ಭದಲ್ಲಿ ಬೆನ್ನು ಹಾಕಿ ನಿಂತ ಭೂತ ಹೊಡೆದಾಟದ ಮಧ್ಯೆ ಮುನ್ನುಗ್ಗಿ ಜಗಳ ಬಿಡಿಸಿ, ಸಂಧಾನ ನಡೆಸುತ್ತದೆ.

ಅಡ್ಡನಪೆಟ್ಟು ನಡೆದರೆ ಊರಿನಲ್ಲಿ ಯಾವುದೇ ಕಲಹ, ಹೊಡೆದಾಟ ನಡೆಯುದಿಲ್ಲ ಎಂಬ ನಂಬಿಕೆ ಈ ಆಚರಣೆಯಲ್ಲಿದ್ದು, ಈ ನಾಲ್ಕು ಮನೆತನದ ಜಗಳ ಬಿಡಿಸಿ ಸೌಹಾರ್ಧದೊಂದಿಗೆ ಗ್ರಾಮದ ಎಲ್ಲ ಜನರು ಬದುಕಿ ಎನ್ನುವ ಸಂದೇಶವೂ ಈ ಸಂಪ್ರದಾಯಿಕ ಅಚರಣೆಯಲ್ಲಿದೆ ಎಂದು ಗ್ರಾಮದ ಹಿರಿಯರು ಹೇಳುತ್ತಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.