Breaking News

ಇಂಗ್ಲೀಷ್ ಪ್ರೀಮಿಯರ್ ಲೀಗ್: ಮ್ಯಾನ್‌ಚೆಸ್ಟರ್ ಸಿಟಿ ಚಾಂಪಿಯನ್

Advt_Headding_Middle
Advt_Headding_Middle

ಲಂಡನ್: ಪ್ರತಿಷ್ಠಿತ ಇಂಗ್ಲಿಷ್ ಪ್ರೀಮಿಯರ್ ಲೀಗ್ ಫುಟ್ಬಾಲ್ ಕೂಟದಲ್ಲಿ ಮ್ಯಾನ್‌ಚೆಸ್ಟರ್ ಸಿಟಿ ತಂಡ ಚಾಂಪಿಯನ್ ಪಟ್ಟವನ್ನು ತನ್ನದಾಗಿಸಿಕೊಂಡಿದೆ. ಮ್ಯಾನ್‌ಚೆಸ್ಟರ್‌ನ ಎತ್ತಿಹಾದ್ ಮೈದಾನದಲ್ಲಿ ನಿನ್ನೆ ತಡರಾತ್ರಿ ನಡೆದ ಪಂದ್ಯದಲ್ಲಿ ಅತಿಥೇಯ ಸಿಟಿ ತಂಡ ಹಡ್ಡರ‍್ಸ್‌ಫೀಲ್ಡ್ ತಂಡದ ವಿರುದ್ಧ ಗೋಲು ರಹಿತ ಡ್ರಾ ಸಾಧಿಸಿತು. ಆ ಮೂಲಕ ಸೀಸನ್‌ನಲ್ಲಿ ಆಡಿದ ೩೬ ಪಂದ್ಯಗಳಲ್ಲಿ ೩೦ ಪಂದ್ಯದಲ್ಲಿ ಜಯಭೇರಿ ಬಾರಿಸಿ, ೪ ಪಂದ್ಯಗಳಲ್ಲಿ ಡ್ರಾಗೆ ತೃಪ್ತಿಪಟ್ಟುಕೊಂಡಿತು. ಕೇವಲ ಎರಡು ಪಂದ್ಯಗಳನ್ನು ಸೋತಿರುವ ಸಿಟಿ ಒಟ್ಟು ೯೪ ಅಂಕಗಳನ್ನು ಕಲೆಹಾಕಿದೆ. ತವರು ಮೈದಾನದಲ್ಲಿ ೧೦೨ ಗೋಲು ಗಳಿಸಿರುವ ಸಿಟಿ, ತವರಿನಾಚೆ ೨೬ ಗೋಲು ದಾಖಲಿಸಿದೆ. ಆ ಮೂಲಕ ಇತರ ತಂಡಗಳಿಗಿಂತ ಒಟ್ಟು ೭೬ ಗೋಲುಗಳ ಭಾರೀ ಅಂತರವನ್ನು ಕಾಯ್ದುಕೊಂಡಿದೆ. ಎರಡನೇ ಸ್ಥಾನದಲ್ಲಿರುವ ಮ್ಯಾನ್‌ಚೆಸ್ಟರ್ ಯುನೈಟೆಡ್ ತಂಡ ೩೬ ಪಂದ್ಯಗಳಲ್ಲಿ ೨೪ ಜಯಗಳಿಸಿದ್ದರೆ ೭ ಪಂದ್ಯಗಳಲ್ಲಿ ಸೋಲು ಹಾಗೂ ೫ ಪಂದ್ಯಗಳಲ್ಲಿ ಡ್ರಾ ಸಾಧಿಸಿದ್ದು, ೭೭ ಅಂಕಗಳಿಗಷ್ಟೇ ಸೀಮಿತಗೊಂಡಿದೆ. ಕಳೆದ ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿದ್ದ ಚೆಲ್ಸಿಯಾ ತಂಡ ಈ ಬಾರಿ ೫ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ. ಎತ್ತಿಹಾದ್ ಮೈದಾನದಲ್ಲಿ ಇದೇ ಮೊದಲ ಬಾರಿ ಡ್ರಾ ಫಲಿತಾಂಶಕ್ಕೆ ತೃಪ್ತಿಪಟ್ಟುಕೊಂಡ ವಿನ್ಸೆಂಟ್ ಕೊಂಪೆನಿ ನಾಯಕತ್ವದ ಮ್ಯಾನ್‌ಚೆಸ್ಟರ್ ಸಿಟಿ ತಂಡಕ್ಕೆ ಕೂಟದಲ್ಲಿ ಇನ್ನೂ ಎರಡು ಪಂದ್ಯಗಳು ಬಾಕಿ ಇದ್ದು, ೨೦೦೪-೦೫ರಲ್ಲಿ ಚೆಲ್ಸಿಯಾ ತಂಡ ನಿರ್ಮಸಿದ್ದ ಅತಿಹೆಚ್ಚು ಪಾಯಿಂಟ್ಸ್ (೯೬) ಗಳಿಕೆಯ ದಾಖಲೆಯನ್ನು ಮುರಿಯುವ ತವಕದಲ್ಲಿದೆ. ಟ್ರೋಫಿ ಸ್ವೀಕರಿಸಿದ ಬಳಿಕ ಮಾತನಾಡಿದ ಕೋಚ್ ಪೆಪ್ ಗಾರ್ಡಿಯೋಲಾ, ಚಾಂಪಿಯನ್‌ಶಿಪ್ ಗೆಲ್ಲುವುದರ ಜೊತೆಜೊತೆಗೆ ನನ್ನ ತಂಡ ಕೆಲ ದಾಖಲೆಗಳನ್ನು ಮುರಿಯುವುದನ್ನು ನಾನು ಎದುರುನೋಡುತ್ತಿದ್ದೇನೆ ಎಂದು ಪ್ರತಿಕ್ರಿಯಿಸಿದರು. ಬಾರ್ಸಿಲೋನಾ, ಬಯಾರ್ನ್ ಮ್ಯೂನಿಚ್‌ನಂತಹ ಘಟಾನುಘಟಿಗೆ ತಂಡಗಳನ್ನು ಯಶಸ್ಸಿನ ತುತ್ತತುದಿಗೆ ಕೊಂಡೊಯ್ದಿದ್ದ ಕೋಚ್ ಗಾರ್ಡಿಯೋಲ ಸಿಟಿ ತಂಡವನ್ನು ಚಾಂಪಿಯನ್‌ಶಿಪ್ ಪಟ್ಟಕ್ಕೆ ಕೊಂಡೊಯ್ಯುವುದರ ಮೂಲಕ ತನ್ನ ವೃತ್ತಿ ಜೀವನದ ಟ್ರೋಫಿ ಗಳಿಕೆಯನ್ನು ೨೨ಕ್ಕೇರಿಸಿದ್ದಾರೆ. ಇದರಲ್ಲಿ ಎರಡು ಚಾಂಪಿಯನ್ಸ್ ಲೀಗ್ ಕಿರೀಟವೂ ಸೇರಿದೆ.

ನೆಲಕ್ಕೆ ಬಿದ್ದ ಟ್ರೋಫಿ..!
ಪ್ರಶಸ್ತಿ ವಿತರಣಾ ಸಮಾರಂಭದ ವೇಳೆ ಚಾಂಪಿಯನ್‌ಶಿಪ್ ಟ್ರೋಫಿ ನೆಲಕ್ಕೆ ಬಿದ್ದ ಘಟನೆಯೂ ನಡೆಯಿತು. ತಂಡದ ಹಿರಿಯ ಆಟಗಾರ ಯಾಯಾ ಟೋರೆ ಸುತ್ತ ಸೇರಿದ್ದ ಸಿಟಿ ತಂಡದ ಇತರ ಆಟಗಾರರು ಸಂಭ್ರಮಾಚರಣೆಯಲ್ಲಿ ತೊಡಗಿದ್ದರು ಆದರೆ ಆಗಿನ್ನೂ ಟ್ರೋಫಿ ವಿತರಣೆಯಾಗಿರಲಿಲ್ಲ. ಸ್ಟ್ಯಾಂಡ್‌ನಲ್ಲಿಟ್ಟಿದ್ದ ಟ್ರೋಫಿ ಒಲೆಕ್ಸಾಂಡರ್ ಕ್ಸಿಂಚಾಂಕೋ ಬೆನ್ನು ತಾಹಿ ಕೆಳಕ್ಕೆ ಬಿತ್ತು. ಆ ಕ್ಷಣ ಕ್ಸಿಂಚಾಂಕೋ ಕಕ್ಕಾಬಿಕ್ಕಿಯಾದರು. ಬಳಿಕ ಸಂಘಟಕರು ಬಂದು ಟ್ರೋಫಿಯನ್ನು ಮೂಲ ಸ್ಥಾನದಲ್ಲಿರಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.