ಕರ್ನಾಟಕ ಫಲಿತಾಂಶಕ್ಕೆ ಇಡೀ ದೇಶವೇ ಕಾತುರ, ಮಹಾ ತೀರ್ಪಿಗೆ ಕ್ಷಣಗಣನೆ

Advt_Headding_Middle
Advt_Headding_Middle

2019ರ ಲೋಕಸಭೆ ಚುನಾವಣೆಗೆ ದಿಕ್ಸೂಚಿಯೆಂದೇ ಹೇಳಲಾಗಿರುವ ರಾಜ್ಯ ವಿಧಾನಸಭೆ ಚುನಾವಣೆಯ ಫಲಿತಾಂಶ ನಾಳೆ ಹೊರಬೀಳಲಿದ್ದು, ದೇಶಾದ್ಯಂತ ಪಾರ ಕುತೂಹಲ ಕೆರಳಿಸಿದೆ. ನಾಳೆ ಬೆಳಗ್ಗೆ 8 ಗಂಟೆಗೆ ರಾಜ್ಯದ ಒಟ್ಟು 38 ಮತ ಎಣಿಕೆ ಕೇಂದ್ರಗಳಲ್ಲಿ 222 ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆ ಏಕಕಾಲದಲ್ಲಿ ಆರಂಭವಾಗಲಿದೆ. ಸಂಜೆ 5 ಗಂಟೆಯೊಳಗೆ ಫಲಿತಾಂಶದ ಸ್ಪಷ್ಟ ಚಿತ್ರಣ ಸಿಗುವ ಸಂಭವವಿದೆ ಎಂದು ಚುನಾವಣಾ ಆಯೋಗದ ಮೂಲಗಳು ತಿಳಿಸಿವೆ. ವಿದ್ಯುನ್ಮಾನ ಮತಯಂತ್ರಗಳಲ್ಲಿ(ಇವಿಎಂ) ಮತಗಳ ಎಣಿಕೆ ನಡೆಯಲಿದೆ. ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಎಲ್ಲ ಕೇಂದ್ರಗಳಲ್ಲಿ ಭಾರೀ ಬಿಗಿಭದ್ರತೆ ಕೈಗೊಳ್ಳಲಾಗಿದೆ.

ಪ್ರತಿ ಜಿಲ್ಲಾ ಕೇಂದ್ರದಲ್ಲಿ ತಲಾ ಒಂದು, ಚಿತ್ರದುರ್ಗ 2, ದಕ್ಷಿಣ ಕನ್ನಡ 2, ಮೈಸೂರು 2, ತುಮಕೂರು 3, ಬೆಂಗಳೂರಿನ 5 ಕಡೆ ಮತಗಳ ಎಣಿಕೆ ನಡೆಯಲಿದೆ.
ಪ್ರತಿ ಕೇಂದ್ರದಲ್ಲೂ 20ರಿಂದ 23 ಟೇಬಲ್‍ಗಳನ್ನು ಹಾಕಲಾಗಿದ್ದು, ಮತ ಎಣಿಕೆಗಾಗಿ ರಾಜ್ಯಾದ್ಯಂತ ಒಟ್ಟು 11,160 ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

ಬೆಳಗ್ಗೆ 8 ಗಂಟೆಗೆ ಚುನಾವಣಾಧಿಕಾರಿಗಳು ಏಜೆಂಟರ ಸಮ್ಮುಖದಲ್ಲಿ ಮತ ಎಣಿಕೆಯನ್ನು ಆರಂಭಿಸಲಿದ್ದಾರೆ. ಪ್ರಾರಂಭದಲ್ಲಿ ಅಂಚೆ ಮತಗಳ ಎಣಿಕೆಯಾಗಲಿದೆ. ಮತಗಳ ಎಣಿಕೆಗೆ ಕ್ಷಣಗಣನೆ ಆರಂಭವಾಗುತ್ತಿದ್ದಂತೆ ಅಭ್ಯರ್ಥಿಗಳಲ್ಲೂ ಫಲಿತಾಂಶದ ಕುರಿತು ಡವಡವ ಶುರುವಾಗಿದೆ. ಈ ಬಾರಿಯ ವಿಜಯಲಕ್ಷ್ಮಿ ನನಗೆ ಒಲಿಯುವಳೇ ಇಲ್ಲವೇ ಎದುರಾಳಿಗೆ ದಕ್ಕುವಳೇ ಎಂಬ ಲೆಕ್ಕಾಚಾರ ಹಾಕಲಾಗುತ್ತಿದೆ.

ಹಿಂದೆಂದಿಗಿಂತಲೂ ಈ ಬಾರಿ ದಾಖಲೆಯ ಪ್ರಮಾಣದಲ್ಲಿ ಶೇ.72.13ರಷ್ಟು ಮತದಾನ ಆಗಿರುವುದರಿಂದ ಕಣದಲ್ಲಿರುವ ಅಭ್ಯರ್ಥಿಗಳು ಮನಸಿನಲ್ಲೇ ಮಂಡಕ್ಕಿ ಮೇಯುತ್ತಿದ್ದಾರೆ. ಬಿಜೆಪಿ 222, ಕಾಂಗ್ರೆಸ್ 221, ಜೆಡಿಎಸ್ 201, ಬಿಎಸ್‍ಪಿ 18, ಸಿಪಿಐಎಂ 19, ಎನ್‍ಸಿಪಿ 14, ಪಕ್ಷೇತರರು 1155 ಸ್ಪರ್ಧಾ ಕಣದಲ್ಲಿದ್ದಾರೆ. ಇದರಲ್ಲಿ ಪುರುಷರು 2436 ಹಾಗೂ ಮಹಿಳೆ 219 ಸೇರಿದಂತೆ ಕಣದಲ್ಲಿ ಒಟ್ಟು 2655 ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ.

ಘಟಾನುಘಟಿಗಳ ಹಣೆಬರಹ:
ಮುಖ್ಯಮಂತ್ರಿ ಸಿದ್ದರಾಮಯ್ಯ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ , ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ, ಸಂಸದ ಶ್ರೀರಾಮುಲು ಸೇರಿದಂತೆ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಪಕ್ಷಗಳ ಅನೇಕ ನಾಯಕರ ರಾಜಕೀಯ ಭವಿಷ್ಯ ನಾಳೆ ಹೊರಬೀಳಲಿದೆ. ರಾಷ್ಟ್ರದ ಗಮನ ಸೆಳೆದಿರುವ ಚಾಮುಂಡೇಶ್ವರಿ, ರಾಮನಗರ, ಶಿಕಾರಿಪುರ, ಮೊಳಕಾಲ್ಮೂರು, ಬಾದಾಮಿ, ಬಬಲೇಶ್ವರ, ಬಳ್ಳಾರಿನಗರ ಸೇರಿದಂತೆ ಕೆಲವು ಹೈ ವೋಲ್ಟೇಜ್ ಕ್ಷೇತ್ರಗಳಲ್ಲಿ ಬಿರುಸಿನ ಸ್ಪರ್ಧೆ ಏರ್ಪಟ್ಟಿದೆ. ಕಳೆದ ಒಂದು ತಿಂಗಳಿನಿಂದ ರಾಜ್ಯದ ಎಲ್ಲ ಕಡೆ ಪ್ರಧಾನಿ ನರೇಂದ್ರ ಮೋದಿ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಕಾಂಗ್ರೆಸ್ ಅಧಿನಾಯಕಿ ಸೋನಿಯಾಗಾಂಧಿ, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಸೇರಿದಂತೆ ಮತ್ತಿತರರು ಅಬ್ಬರದ ಪ್ರಚಾರ ನಡೆಸಿದ್ದರು.

ಕಳೆದ ಐದು ವರ್ಷಗಳಲ್ಲಿ ಯಾವುದೇ ಹಗರಣ, ಭ್ರಷ್ಟಾಚಾರಕ್ಕೆ ಅವಕಾಶ ನೀಡದೆ ಹಲವು ಭಾಗ್ಯಗಳನ್ನು ನೀಡಿರುವ ನಮಗೆ ಮತದಾರ ಎರಡನೇ ಬಾರಿ ಸ್ಪಷ್ಟ ಜನಾದೇಶ ನೀಡಲಿದ್ದಾನೆ ಎಂಬ ಲೆಕ್ಕಾಚಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅಲೆ, ಅಮಿತ್ ಷಾ ಅವರ ರಾಜಕೀಯ ಚಾಣಾಕ್ಷತನ, ಮೇಲ್ವರ್ಗ ಜಾತಿಗಳ ಬೆಂಬಲ, ಕಾಂಗ್ರೆಸ್ ಸರ್ಕಾರದ ಹಗರಣಗಳು, ಭ್ರಷ್ಟಾಚಾರ, ಹಿಂದು ಮತಗಳ ಧೃವೀಕರಣ ನಮಗೆ ಬಹುಮತ ಎಂಬುದು ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪನವರ ಲೆಕ್ಕಾಚಾರ.

ಎರಡು ರಾಷ್ಟ್ರೀಯ ಪಕ್ಷಗಳನ್ನು ತಿರಸ್ಕರಿಸಿ ಪ್ರಾದೇಶಿಕ ಪಕ್ಷ ಜೆಡಿಎಸ್‍ನ್ನು ರಾಜ್ಯದ ಜನತೆ ಈ ಬಾರಿ ಕೈ ಹಿಡಿಯಲಿದ್ದಾರೆ. ನಾವು ಕಿಂಗ್ ಮೇಕರ್ ಆಗದೆ ನಾವೇ ಕಿಂಗ್ ಆಗುತ್ತೇವೆ ಎಂಬ ಆತ್ಮವಿಶ್ವಾಸದಲ್ಲಿದ್ದಾರೆ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ. ಆದರೆ ಬಹುತೇಕ ಮತಗಟ್ಟೆ ಸಮೀಕ್ಷೆಗಳು ರಾಜ್ಯದಲ್ಲಿ ಈ ಬಾರಿ ಯಾವುದೇ ಪಕ್ಷಕ್ಕೂ ಸ್ಪಷ್ಟ ಬಹುಮತ ಬಾರದೆ ಅತಂತ್ರ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂದು ಭವಿಷ್ಯ ನುಡಿದಿವೆ.

ವಿವಿಧ ಖಾಸಗಿ ಸಂಸ್ಥೆಗಳು ರಾಷ್ಟ್ರೀಯ ಸುದ್ದಿ ವಾಹಿನಿ ಜೊತೆ ನಡೆಸಿರುವ ಮತದಾನೋತ್ತರ ಸಮೀಕ್ಷೆಯಲ್ಲಿ ನಾಲ್ಕು ಸಮೀಕ್ಷೆಗಳು ಬಿಜೆಪಿ ಅಧಿಕಾರಕ್ಕೆ ಬರಲಿವೆ ಎಂದು ಹೇಳಿವೆ. ಇನ್ನು ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂದು ಮೂರು ಸಂಸ್ಥೆಗಳು ಹೇಳಿದ್ದರೆ ಬಹುತೇಕ ಸಮೀಕ್ಷೆಗಳು ಸರ್ಕಾರ ರಚನೆಯಲ್ಲಿ ಜೆಡಿಎಸ್ ನಿರ್ಣಾಯಕ ಪಾತ್ರ ವಹಿಸಲಿದೆ ಎಂದು ಹೇಳಿರುವುದು ದಳಪತಿಗಳಲ್ಲಿ ಆತ್ಮವಿಶ್ವಾಸವನ್ನು ಇಮ್ಮಡಿಗೊಳಿಸಿದೆ.

ಇನ್ನು ಈ ಚುನಾವಣೆ ರಾಷ್ಟ್ರ ಮಟ್ಟದಲ್ಲೂ ಭಾರೀ ಪರಿಣಾಮ ಬೀರುವ ಸಾಧ್ಯತೆ ಇದೆ. ಪ್ರಧಾನಿ ನರೇಂದ್ರ ಮೋದಿ ಅವರ ಜನಪ್ರಿಯತೆಗೆ ಈ ಫಲಿತಾಂಶ ಓರೆಗಲ್ಲಾಗುವ ಸಾಧ್ಯತೆ ಇದೆ. ಕೇಂದ್ರದಲ್ಲಿ ನೋಟು ಅಮಾನೀಕರಣ, ಜಿಎಸ್‍ಟಿ ಜಾರಿಯಾದ ನಂತರ ನಡೆಯುತ್ತಿರುವ ಈ ಚುನಾವಣೆ ಮೋದಿ ಜನಪ್ರಿಯತೆಗೆ ಅಗ್ನಿಪರೀಕ್ಷೆಯಾಗಲಿದೆ. 21 ರಾಜ್ಯಗಳನ್ನು ಗೆದ್ದು ಬೀಗುತ್ತಿರುವ ಕಮಲ ಪಡೆ ಕರ್ನಾಟಕದಲ್ಲೂ ತಮ್ಮ ಪ್ರಾಬಲ್ಯವನ್ನು ಸಾಧಿಸಲು ತುದಿಗಾಲಲ್ಲಿ ನಿಂತಿದೆ.

ಎಐಸಿಸಿ ಅಧ್ಯಕ್ಷರಾದ ನಂತರ ಪಕ್ಷದಲ್ಲಿ ಸಾಕಷ್ಟು ಸುಧಾರಣಾ ಕ್ರಮಗಳನ್ನು ಕೈಗೊಂಡಿರುವ ರಾಹುಲ್ ಗಾಂಧಿ ನಾಯಕತ್ವಕ್ಕೂ ಈ ಚುನಾವಣೆ ಒಂದು ಸವಾಲೇ ಸರಿ. ನರೇಂದ್ರ ಮೋದಿ ಗೆದ್ದರೆ ಅವರ ಅಶ್ವಮೇಧ ಯಾಗವನ್ನು ಕಟ್ಟಿ ಹಾಕಲು ಯಾರಿಂದಲೂ ಸಾಧ್ಯವಿಲ್ಲ ಎಂಬುದು ರುಜುವಾತಾಗುತ್ತದೆ. ಕಾಂಗ್ರೆಸ್ ಗೆದ್ದರೆ ರಾಹುಲ್ ಗಾಂಧಿ ನಾಯತಕ್ವ ರಾಷ್ಟ್ರಮಟ್ಟದಲ್ಲಿ ಇನ್ನಷ್ಟು ಪ್ರಬಲವಾಗುತ್ತದೆ. ಸಮ್ಮಿಶ್ರ ಸರ್ಕಾರ ರಚನೆಯಾದರೆ ಸೊರಗಿರುವ ಜೆಡಿಎಸ್ ಚೇತರಿಸಿಕೊಳ್ಳಲಿದೆ. ಅಂಕಿಸಂಖ್ಯೆಗಳು ಏನೇ ಹೇಳಿದರೂ ಕರ್ನಾಟಕ ಮತದಾರರು ಬರೆದಿರುವ ಅಭ್ಯರ್ಥಿಗಳ ಹಣೆಬರಹ ನಾಳೆ ಬಹಿರಂಗವಾಗಲಿದೆ.

advertisement

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.