Breaking News

ಆರು ಬಾರಿ ಗೆದ್ದರೂ ಪಟ್ಟಕ್ಕೇರದ ಅಂಗಾರ – ಕಮರಿದ ಮಂತ್ರಿಗಿರಿಯ ಕನಸು

Advt_Headding_Middle
Advt_Headding_Middle


ಈ ಬಾರಿ ಸುಳ್ಯಕ್ಕೆ ಮಂತ್ರಿಗಿರಿಯ ಗೂಟದ ಕಾರು ಖಂಡಿತವಾಗಿ ಬರುತ್ತದೆ ಎಂಬ ಜನರ ನಿರೀಕ್ಷೆ ಹುಸಿಯಾಗಿದೆ. ಬಹುಮತ ಕ್ರೋಢೀಕರಿಸಲಾಗದೆ ಮುಖ್ಯಮಂತ್ರಿ ಸ್ಥಾನಕ್ಕೆ ಬಿ.ಎಸ್. ಯಡಿಯೂರಪ್ಪರು ರಾಜೀನಾಮೆ ನೀಡಿ ವಿಧಾನಸಭೆಯಿಂದ ಹೊರ ನಡೆದಾಗ ಅಂಗಾರರ ಮಂತ್ರಿಗಿರಿಯ ಕನಸೂ ದೂರ ಹೋಯಿತು.
1983ರಲ್ಲಿ ಬಾಕಿಲ ಹುಕ್ರಪ್ಪರು ಬಿಜೆಪಿ ವತಿಯಿಂದ ಶಾಸಕರಾಗಿ ಆಯ್ಕೆಯಾಗಿ ಸಮರ್ಥ ನಾಯಕ ರಾಗುವ ಭರವಸೆ ಮೂಡಿಸಿದ್ದರು. ಜನತಾ ಪಕ್ಷದ ನಾಯಕರಿಗೆ ಹತ್ತಿರವಾಗಿದ್ದ ಅವರು 1985ರ ಚುನಾವಣೆಯಲ್ಲಿ ಬಿಜೆಪಿ ಬಿಟ್ಟು ಜನತಾ ಪಕ್ಷದ ಅಭ್ಯರ್ಥಿಯಾದಾಗ ಬಿಜೆಪಿ ಅವರನ್ನು ಪ್ರಬಲವಾಗಿ ವಿರೋಧಿಸಿತ್ತು. ಆ ಸಂದರ್ಭದಲ್ಲಿ ಜನತಾ ಪಕ್ಷದ ನಾಯಕರು, ಬಾಕಿಲ ಹುಕ್ರಪ್ಪರಿಗೆ ಬಿ.ರಾಚಯ್ಯರೊಂದಿಗೆ, ರಾಮಕೃಷ್ಣ ಹೆಗಡೆಯವರೊಂದಿಗೆ ನಿಕಟ ಸಂಪರ್ಕವಿದೆ. ಅವರಿಗೆ ಮಂತ್ರಿಗಿರಿ ಲಭಿಸುವ ಸಾಧ್ಯತೆ ಇದೆ ಎಂದು ಪ್ರಚಾರವನ್ನು ನಡೆಸಿದ್ದರು. ಆದರೆ ಬಾಕಿಲ ಹುಕ್ರಪ್ಪರ ವಿಜಯದ ಸಾಧ್ಯತೆಯನ್ನು ಮನಗಂಡ ಬಿಜೆಪಿ ಯವರು ಮಾಡಿದ ಕಾರ್ಯ ತಂತ್ರದಿಂದಾಗಿ ಅವರು ಕೆಲವೇ ಸಾವಿರ ಮತಗಳಿಂದ ಸೋತರು. ಮತ್ತೆಂದೂ ಅವರು ಗೆಲುವಿನ ಕನಸು ಕಾಣಲಾಗಲಿಲ್ಲ. 1985ರಲ್ಲಿ ಮತ್ತು 1989ರಲ್ಲಿ ಗೆದ್ದ ಕಾಂಗ್ರೆಸ್‌ನ ಕೆ.ಕುಶಲರು ಮೂರನೇ ಬಾರಿ ಗೆದ್ದಿದ್ದರೆ ಮಂತ್ರಿ ಸ್ಥಾನಕ್ಕೆ ನಡೆಸುತ್ತಿದ್ದರು. ಆದರೆ ಅವರಿಗೆ ಅಂತಹ ಸಂದರ್ಭವೇ ಬರಲಿಲ್ಲ. 1994 ರಿಂದ ಸತತವಾಗಿ ಗೆಲ್ಲುತ್ತಲೇ ಬರುತ್ತಿರುವ ಬಿಜೆಪಿಯ ಎಸ್.ಅಂಗಾರರು ಇದೀಗ ಆರನೇ ಬಾರಿ ಗೆದ್ದಿದ್ದರೂ ಆರಕ್ಕೇರಿದವರಲ್ಲ – ಮೂರಕ್ಕಿಳಿದವರಲ್ಲ. ತಾನು ಮೂರನೇ ಬಾರಿ ಗೆದ್ದಾಗ ಮತ್ತು ೪ನೇ ಬಾರಿ ಗೆದ್ದಾಗ ರಾಜ್ಯದಲ್ಲಿ ಬಿಜೆಪಿ ಅಧಿಕಾರ ಹಿಡಿದರೂ ಮಂತ್ರಿಗಿರಿಗಾಗಿ ಬೇಡಿಕೆ ಮುಂದಿಟ್ಟವರಲ್ಲ. ತನಗಿಂತ ಕಡಿಮೆ ಅವಧಿಯ ಶಾಸಕರನ್ನು ಮಂತ್ರಿ ಮಾಡಿ -ಸೀನಿಯರ್ ಆದ ತನ್ನನ್ನು ಪರಿಗಣಿಸದಿರುವಾಗ ಆಕ್ಷೇಪಿಸಿದವರಲ್ಲ. ಅಂಗಾರರ ನಾಲ್ಕನೇ ಅವಧಿಯಲ್ಲಿ ಬಿಜೆಪಿ ಪೂರ್ಣ ಪ್ರಮಾಣದ ಸರಕಾರ ರಚಿಸಿದಾಗಲೂ ಎರಡನೇ ಬಾರಿ ಶಾಸಕರಾಗಿದ್ದ ಸುರತ್ಕಲ್‌ನ ಕೃಷ್ಣ ಪಾಲೆಮಾರ್‌ರಿಗೆ ಮಂತ್ರಿಯಾಗುವ ಅವಕಾಶ ದೊರೆಯಿತೇ ವಿನಃ ಅಂಗಾರರಿಗೆ ದೊರೆಯಲಿಲ್ಲ. ಆಗ ಯಡಿಯೂರಪ್ಪರಿಗೆ, ಪಕ್ಷೇತರರಿಗೆ ಮತ್ತು ಆಪರೇಶನ್ ಕಮಲಕ್ಕೊಳಗಾದವರಿಗೆ ಹೆಚ್ಚು ಅವಕಾಶ ಕೊಡಬೇಕಾದ ಅನಿವಾರ್ಯತೆ ಇತ್ತು. ಡಿ.ವಿ.ಸದಾನಂದರು ಮುಖ್ಯಮಂತ್ರಿಯಾದಾಗ ‘ಸುಳ್ಯದ ಮನೆ ಮಗನೇ ಮುಖ್ಯಮಂತ್ರಿಯಾಗಿರುವುದರಿಂದ… ಅಂಗಾರರಿಗೆ ಮಂತ್ರಿ ಸ್ಥಾನ ಕೇಳಬೇಕಾಗಿಲ್ಲ’ ಎಂಬ ಭಾವನೆ ವ್ಯಕ್ತವಾಗಿತ್ತು. ಬಳಿಕ ಜಗದೀಶ್ ಶೆಟ್ಟರ್ ಮುಖ್ಯಮಂತ್ರಿಯಾದಾಗ ಸುಳ್ಯದ ಬಿಜೆಪಿ ನಿಯೋಗ ಆಗಿನ ಮಂಡಲಾಧ್ಯಕ್ಷ ವೆಂಕಟ್ ದಂಬೆಕೋಡಿಯವರ ನೇತೃತ್ವದಲ್ಲಿ ಬೆಂಗಳೂರಿಗೆ ಹೋಗಿ ಸುಳ್ಯ ಶಾಸಕ ಅಂಗಾರರಿಗೆ ಮಂತ್ರಿ ಸ್ಥಾನ ಕೊಡಲೇ ಬೇಕೆಂದು ಒತ್ತಾಯಿಸಿದ್ದರು. ಆದರೆ ಫಲ ದೊರೆತಿರಲಿಲ್ಲ.
2013ರಲ್ಲಿ ದ.ಕ.ಜಿಲ್ಲೆಯ ಇತರ ಎಲ್ಲಾ 7 ಸ್ಥಾನಗಳಲ್ಲಿ ಬಿಜೆಪಿ ಸೋತು, ಸುಳ್ಯದಲ್ಲಿ ಮಾತ್ರ ಶಾಸಕ ಅಂಗಾರರು ಗೆಲುವಿನ ಓಟವನ್ನು ಮುಂದುವರಿಸಿ, ಜಿಲ್ಲೆಗೊಬ್ಬರೇ ಬಿಜೆಪಿ ಶಾಸಕರಾದುದರಿಂದ ‘ಅಂಗಾರರು ಹಿರಿಯರು, ಅವರು ಸಚಿವರಾಗಬೇಕು’ ಎಂಬ ಮಾತು ಜಿಲ್ಲಾ ಮಟ್ಟದ ನಾಯಕರ ಬಾಯಿಂದ ಬರತೊಡಗಿತು. ಅದು ಈ ಬಾರಿಯ ಚುನಾವಣಾ ಪ್ರಚಾರದ ಕಾಲದಲ್ಲಿ ಹೆಚ್ಚು ಒತ್ತು ಪಡೆದು ಬಿಜೆಪಿ ಅಧಿಕಾರಕ್ಕೆ ಬಂದರೆ ದ.ಕ.ಜಿಲ್ಲೆಯಿಂದ ಅಂಗಾರರೇ ಮಂತ್ರಿಯಾಗುತ್ತಾರೆ ಎಂಬ ನಿರ್ಧಾರ ಗಟ್ಟಿಯಾಗಿ ಕೇಳಿ ಬರತೊಡಗಿತು. ಮಂಗಳೂರು, ಪುತ್ತೂರುಗಳಿಗೂ ಅಂಗಾರರನ್ನು ಪ್ರಚಾರಕ್ಕೆ ಕರೆಸಿಕೊಳ್ಳುವ ವ್ಯವಸ್ಥೆಯನ್ನು ಪಕ್ಷ ಮಾಡಿತು.
ಅಂಗಾರರು ತನ್ನ ಸರಳತೆಯಿಂದ ಹೇಗೆ ಪ್ರಸಿದ್ದರೋ, ಎಲೆಮರೆಯ ಕಾಯಿಯಂತೆ ಇರುವ ಗುಣದಿಂದಲೂ ಪ್ರಸಿದ್ದರು. ಮಂತ್ರಿಸ್ಥಾನದ ವಿಚಾರ ಪ್ರಸ್ತಾಪವಾದಾಗ ‘ಅಂತಹ ಸ್ಥಾನ ದೊರೆಯುವುದಿದ್ದರೆ ಯಾರು ತಡೆದರೂ ದೊರೆಯುತ್ತದೆ. ಯೋಗ ಇಲ್ಲದಿದ್ದರೆ ಸಿಗುವುದೇ ಇಲ್ಲ’ ಎಂಬ ಮಾತನ್ನು ಆಡಿದವರು.
ಈ ಬಾರಿಯ ಚುನಾವಣೆಯಲ್ಲಿ 26 ಸಾವಿರ ಮತಗಳ ಅಂತರದಿಂದ ಗೆದ್ದು ಸತತ ೬ನೇ ಬಾರಿ ವಿಧಾನಸಭೆ ಪ್ರವೇಶಿಸಿದ ಕೆಲವೇ ಕೆಲವು ಜನರ ಸಾಲಲ್ಲಿ ನಿಂತಂತಹ ಅಂಗಾರರು ಮಂತ್ರಿಯಾಗುವುದರಲ್ಲಿ ಅನುಮಾನವೇ ಇರಲಿಲ್ಲ.
ಅತಿ ದೊಡ್ಡ ಪಕ್ಷವೆಂಬ ನೆಲೆಯಲ್ಲಿ ಸರಕಾರ ರಚಿಸಲು ಬಿಜೆಪಿಯ ಶಾಸಕಾಂಗ ಪಕ್ಷ ನಾಯಕ ಬಿ.ಎಸ್.ಯಡಿಯೂರಪ್ಪರನ್ನು ರಾಜ್ಯಪಾಲರು ಕರೆದಾಗ ಈ ಬಾರಿ ಅಂಗಾರರು ಮಂತ್ರಿಯಾಗುವುದು ಖಚಿತ ಎಂಬ ಆಶಾಭಾವನೆ ಮೂಡಿತ್ತು. ಮಂಡಲ ಸಮಿತಿ ಅಧ್ಯಕ್ಷ ವೆಂಕಟ್ ವಳಲಂಬೆ ಮತ್ತು ಜಿ.ಪಂ. ಸದಸ್ಯ ಹರೀಶ್ ಕಂಜಿಪಿಲಿಯವರು ಮೇ.೧೬ರಂದು ಶಾಸಕರ ಜತೆ ಬೆಂಗಳೂರಿಗೆ ಹೋಗಿ ಪಕ್ಷದ ಮುಖಂಡರಲ್ಲೆಲ್ಲ ಮಾತನಾಡಿದ್ದರು. ಈ ಬಾರಿ ಅಂಗಾರರಿಗೂ ಮಂತ್ರಿಯಾಗುವ ಉಮೇದು ಬಂದಿತ್ತು. ಯಡಿಯೂರಪ್ಪರ ಸರಕಾರಕ್ಕೆ ವಿಶ್ವಾಸಮತ ದೊರೆತ ಮರುದಿನ ಸಂಪುಟ ವಿಸ್ತರಣೆ ನಡೆದು ಅಂಗಾರರು ಮಂತ್ರಿಯಾಗುತ್ತಾರೆ ಎಂಬ ಭರವಸೆಯೂ ನಾಯಕರಿಂದ ದೊರಕಿತ್ತು.
ಆದರೆ ಮೇ.೧೯ರಂದು ಬಹುಮತ ಸಾಬೀತು ಪಡಿಸಲಾಗದೆ ಯಡಿಯೂ ರಪ್ಪರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿ ವಿಧಾನಸಭೆಯಿಂದ ಹೊರ ನಡೆದಾಗ ಅಂಗಾರರು ಮಂತ್ರಿಯಾಗುವ ಕನಸು ಕಮರಿ ಹೋಯಿತು. ಅದಕ್ಕಿಂತ ಹೆಚ್ಚಾಗಿ, ‘ಅಂಗಾರರು ಮಂತ್ರಿಯಾಗಿ ಸುಳ್ಯಕ್ಕೆ ಅತಿಹೆಚ್ಚು ಅನುದಾನ ದೊರಕಿ ಅಭಿವೃದ್ಧಿಗೆ ವೇಗ ಬಂದೀತು – ನೆನೆಗುದಿಗೆ ಬಿದ್ದಿರುವ ಹಲವು ಪ್ರಮುಖ ಯೋಜನೆಗಳು ಪೂರ್ಣಗೊಂಡಾವು’ ಎಂಬ ಕ್ಷೇತ್ರದ ಜನರ ನಿರೀಕ್ಷೆಗೂ ತಣ್ಣೀರೆರಚಿದಂತಾಯಿತು. ಇನ್ನೇನಿದ್ದರೂ ಅಂಗಾರರು ತಮ್ಮ ಸಾಮರ್ಥ್ಯ ಬಳಸಿ ಸರಕಾರದೊಂದಿಗೆ ಹೋರಾಡಿ ಅನುದಾನ ತರಬೇಕು-ಕಾಮಗಾರಿಗಳನ್ನು ಅನುಷ್ಠಾನಗೊಳಿಸಬೇಕು.
ಕಾಂಗ್ರೆಸ್‌ನಲ್ಲಿ ಕಿಡಿ ಹಾರಲು
ಆರಂಭವಾಗಿದೆ…
ನಿರೀಕ್ಷೆಯಂತೆ ಸುಳ್ಯ ಬ್ಲಾಕ್ ಕಾಂಗ್ರೆಸ್‌ನೊಳಗೆ ಸಣ್ಣ ಮಟ್ಟಿಗೆ ಕಿಡಿ ಹಾರಲು ಆರಂಭವಾಗಿದೆ. ಎದುರು ಪಕ್ಷದವರೊಂದಿಗೆ ಹೋರಾಟದ ಜತೆಗೆ ಪಕ್ಷದೊಳಗೇ ಅಭಿಪ್ರಾಯ ಭೇದದ ಕಿಡಿ ಹಾರಿಸುವುದರಲ್ಲಿ ಎತ್ತಿದ ಕೈಯಾಗಿರುವ ಕೆಲವು ಕಾಂಗ್ರೆಸ್ಸಿಗರು ಈ ಮೂಲಕ ತಮ್ಮ ಪಕ್ಷವನ್ನು ಗಟ್ಟಿಗೊಳಿಸುತ್ತಾರೋ – ದುರ್ಬಲ ಗೊಳಿಸುತ್ತಾರೋ ಕಾದು ನೋಡಬೇಕು. ವಿಷಯವೇನೆಂದರೆ…
ಚುನಾವಣಾ ಫಲಿತಾಂಶ ಹೊರಬಂದು ಬಿಜೆಪಿಯ ಅಂಗಾರರು ಹಿಂದೆಂದಿಗಿಂತ ಹೆಚ್ಚು ಲೀಡ್ ಪಡೆದು (26 ಸಾವಿರ ಮತಗಳು) ಜಯಶಾಲಿಯಾದ ಒಂದೆರಡು ದಿನದಲ್ಲೆ ಮಾಜಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ವೆಂಕಪ್ಪ ಗೌಡರು, ವಾಟ್ಸಾಪ್ ಗ್ರೂಪ್‌ಗಳಲ್ಲಿ ’ನಾನು ಬ್ಲಾಕ್ ಅಧ್ಯಕ್ಷನಾಗಿರುವಾಗ ಡಾ| ರಘುರವರ ಸೋಲಿನ ಅಂತರ ೧೩೭೦ ಇತ್ತು. ಈ ಬಾರಿ ೨೬ ಸಾವಿರಕ್ಕೆ ಏರಿದೆ. ಬ್ಲಾಕ್ ಅಧ್ಯಕ್ಷರ ಬದಲಾವಣೆಗೆ ತರಾತುರಿಯಿಂದ ಪ್ರಯತ್ನಿಸಿದವರು ಇದಕ್ಕೇನನ್ನುತ್ತಾರೆ’ ಎಂಬ ಪ್ರಶ್ನೆಯನ್ನು ಹಾಕಿ ಪ್ರಚಾರ ಮಾಡಿದ್ದರು. ಯುವ ಕಾಂಗ್ರೆಸ್‌ನ
ಮೂಲಕ ಕರೆಯಲಾದ ಪತ್ರಿಕಾಗೋಷ್ಠಿಯಲ್ಲೂ ವೆಂಕಪ್ಪ ಗೌಡರು ಈ ಅಂಶವನ್ನು ಉಲ್ಲೇಖಿಸಿದ್ದರು. ಅಲ್ಲದೆ ಯಡಿಯೂರಪ್ಪ ಸರಕಾರ ಪತನವಾದ ಖುಶಿಯನ್ನು ಸಾರ್ವಜನಿಕವಾಗಿ ಪ್ರದರ್ಶಿಸಲು ಬಸ್ ನಿಲ್ದಾಣದಲ್ಲಿ ಸಂಭ್ರಮಾಚರಣೆ ಕೂಡಾ ನಡೆಸಿದರು.
ಆದರೆ ಈ ರೀತಿಯ ಸಂಭ್ರಮಾಚರಣೆ ವಿಘ್ನಸಂತೋಷಿ ಆಚರಣೆಯಾಗುತ್ತದೆ ಎಂಬ ಅಭಿಪ್ರಾಯವನ್ನು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಯಪ್ರಕಾಶ್ ರೈ ತಳೆದಿದ್ದಾರೆ. ಜೆ.ಡಿ.ಎಸ್.-ಕಾಂಗ್ರೆಸ್ ಮೈತ್ರಿ ಸರಕಾರ ಅಸ್ತಿತ್ವಕ್ಕೆ ಬಂದು ವಿಶ್ವಾಸಮತದಲ್ಲಿ ಗೆದ್ದ ಬಳಿಕ ಬ್ಲಾಕ್ ಕಾಂಗ್ರೆಸ್ ಮತ್ತು ಜೆಡಿಎಸ್ ಜತೆಯಾಗಿ ಬೃಹತ್ ವಿಜಯೋತ್ಸವ ಆಚರಿಸಬೇಕೆಂಬುದು ಅವರ ನಿಲುವು. ಈ ನಡುವೆ ಚುನಾವಣಾ ಫಲಿತಾಂಶದ ಚರ್ಚೆಗಾಗಿ ಮೇ.22ರಂದು ಕಾಂಗ್ರೆಸ್ ಕಾರ್ಯಕರ್ತರ ಸಭೆಯನ್ನು ಬ್ಲಾಕ್ ಕಾಂಗ್ರೆಸ್ ವತಿಯಿಂದ ಕರೆಯಲಾಗಿದೆ. ಅಲ್ಲಿ ಏನೇನೆಲ್ಲ ಹೇಗೇಗೆಲ್ಲ ಚರ್ಚೆಯಾಗುತ್ತದೆಂದು ಕಾದು ನೊಡಬೇಕಾಗಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.