ನಿಪಾ ವೈರಾಣು ಜ್ವರ : ಕೈಗೊಳ್ಳಬೇಕಾದ ಕ್ರಮಗಳೇನು ? – ಆರೋಗ್ಯ ಇಲಾಖೆ ಕೊಟ್ಟಿರುವ ಸಂಪೂರ್ಣ ವಿವರ ಇಲ್ಲಿದೆ

Advt_Headding_Middle
Advt_Headding_Middle

ಮುಂಗಾರು ಮಳೆ ಪ್ರವೇಶವಾಗುವ ಮೊದಲೇ ಕೇರಳದಿಂದ ಭಯಂಕರ ರೋಗಾಣು ‘ನಿಪಾಹ್’ ವೈರಸ್ ಕರ್ನಾಟಕಕ್ಕೆ ಲಗ್ಗೆಯಿಡುವ ಆತಂಕ ಎಲ್ಲೆಡೆ ನಿರ್ಮಾಣವಾಗಿದೆ. ಎಲ್ಲಿ ಹೋದರೂ ಸಾರ್ವಜನಿಕರು ಬಾವಲಿಯ ಬಗ್ಗೆ ಮಾತನಾಡದವರಿಲ್ಲ. ಬಾವಲಿ ಕಂಡರೆ ಹೆದರದವರಿಲ್ಲ. ನೆರೆಯ ಕೇರಳ ರಾಜ್ಯದಿಂದ ದಕ್ಷಿಣ ಕನ್ನಡ ಜಿಲ್ಲೆಗೂ ಈ ರೋಗ ವ್ಯಾಪಿಸಬಹುದೆಂಬ ದೃಷ್ಟಿಯಲ್ಲಿ ಆರೋಗ್ಯ ಇಲಾಖೆ ರೋಗಾಣು ಲಕ್ಷಣಗಳು ಮತ್ತು ಸಾರ್ವಜನಿಕರು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸಂಪೂರ್ಣ ವಿವರ ಪ್ರಕಟಿಸಿದೆ. ಭಯಂಕರ ವೈರಸ್ ಹರಡುವ ಮುನ್ನವೇ ಈ ರೋಗ ಲಕ್ಷಣ ತರುವ ಸಸ್ತನಿ ಬಾವಲಿಯ ಬಗ್ಗೆ ಸಾಮಾಜಿಕ ಜಾಲತಾಣಗಳಾದ ಫೇಸ್‌ಬುಕ್, ವಾಟ್ಸಾಪ್‌ಗಳಲ್ಲಿ ತಮಾಷೆಯ ವಿಷಯಗಳು ವೈರಲ್ ಆಗುತ್ತಿವೆ. ಇದರ ಜೊತೆ ಅನೇಕ ಮಂದಿ ಸಾಮಾನ್ಯ ಜ್ವರ ಬಂದೊಡನೆ ಆತಂಕಕ್ಕೊಳಗಾಗುತ್ತಿರುವ ಪರಿಸ್ಥಿತಿಯೂ ಎದುರಾಗಿದೆ. ಈ ಎಲ್ಲಾ ಹಿನ್ನೆಲೆಯಲ್ಲಿ ಸಾರ್ವಜನಿಕರು ತಪ್ಪು ಮಾಹಿತಿ ಮತ್ತು ಭಯದ ವಾತಾವರಣದಿಂದ ಮುಕ್ತರಾಗಲು ಆರೋಗ್ಯ ಇಲಾಖೆ ಈ ವಿವರ ನೀಡಿದೆ.
ನಿಪಾಹ್ ವೈರಾಣು ಜ್ವರ ಎಂದರೇನು ?
* ಇದೊಂದು ಹೊಸದಾಗಿ ಕಂಡುಬಂದ ವೈರಾಣು ಸೋಂಕು. ಇದನ್ನು ನೀಫಾ ಎನ್ಸಫಲೈಟೀಸ್ ಎಂದು ಹೆಸರಿಸಲಾಗಿದೆ. 1998 ರಲ್ಲಿ ಮಲೇಶಿಯಾ ಮತ್ತು ಸಿಂಗಾಪುರ ದೇಶಗಳಲ್ಲಿ ಮೊದಲ ಬಾರಿಗೆ ಕಂಡು ಬಂದಿದೆ. ಮಲೇಶಿಯಾದ ನೀಫಾ ಎಂಬ ಗ್ರಾಮದಲ್ಲಿ ಈ ವೈರಾಣುವನ್ನು ಪ್ರತ್ಯೇಕಿಸಿರುವುದರಿಂದ ಇದಕ್ಕೆ ನಿಪಾಹ್ ವೈರಾಣು ಜ್ವರ ಎಂದು ಹೆಸರಿಡಲಾಗಿದೆ. ಈ ಜ್ವರ ಬಾವಲಿ, ಹಂದಿ, ನಾಯಿ, ಕುರಿ, ಬೆಕ್ಕು ಹಾಗೂ ಮನುಷ್ಯರಿಗೆ ಬಾಧಿಸುತ್ತದೆ. ಇದು ಮಲೇಶಿಯಾ, ಸಿಂಗಾಪುರ, ಭಾರತ ಮತ್ತು ಬಾಂಗ್ಲಾದೇಶಗಳಲ್ಲಿ ಕಾಣಿಸಿಕೊಂಡಿದೆ.
ಇದು ಹೇಗೆ ಹರಡುತ್ತದೆ ?
* ಸೋಂಕಿತ ಬಾವಲಿಗಳ ನೇರ ಸಂಪರ್ಕದಿಂದ ಹಾಗೂ ಬಾವಲಿಗಳು ಕಚ್ಚಿ ಬಿಸಾಡಿದ ಹಣ್ಣು ಹಂಪಲುಗಳನ್ನು ಸೇವಿಸುವುದರ ಮೂಲಕ ಇತರ ಪ್ರಾಣಿಗಳಿಗೆ ಹರಡುತ್ತದೆ.
* ಸೋಂಕಿತ ಪ್ರಾಣಿಗಳಿಂದ ಇತರೆ ಪ್ರಾಣಿಗಳಿಗೆ ಮಲ, ಮೂತ್ರ ಜೊಲ್ಲು ಮತ್ತು ರಕ್ತ ಇವುಗಳ ನೇರ ಸಂಪರ್ಕದಿಂದ ಹರಡುತ್ತದೆ.
* ಸೋಂಕಿತ ಬಾವಲಿಗಳು ಕಚ್ಚಿದ ಹಣ್ಣುಗಳನ್ನು ಸೇವಿಸುವುದರಿಂದ ಮನುಷ್ಯರಿಗೆ ಹರಡುತ್ತದೆ.
* ಸೋಂಕಿತ ಪ್ರಾಣಿಯ ಮಲ, ಮೂತ್ರ, ಜೊಲ್ಲು ಮತ್ತು ರಕ್ತ ಇವುಗಳ ನೇರ ಸಂಪರ್ಕದಿಂದ ಮನುಷ್ಯರಿಗೆ ಹರಡುತ್ತದೆ.
* ಸೋಂಕಿತ ಮನುಷ್ಯನ ಮಲ, ಮೂತ್ರ, ಜೊಲ್ಲು ಮತ್ತು ರಕ್ತ ಇವುಗಳ ನೇರ ಸಂಪರ್ಕದಿಂದ ಆರೋಗ್ಯವಂತ ಮನುಷ್ಯರಿಗೆ ಹರಡುತ್ತದೆ.
ರೋಗದ ಪತ್ತೆ ಹಚ್ಚುವುದು ಹೇಗೆ ?
ಎಲೀಸಾ ಆಧಾರಿತ ರಕ್ತ ಪರೀಕ್ಷೆಯಿಂದ ನೀಫಾ ವೈರಾಣುಗಳನ್ನು ಗುರುತಿಸಬಹುದು.
ಆರ್.ಟಿ.ಪಿ.ಸಿ.ಆರ್ ಪರೀಕ್ಷೆಯಿಂದ ಈ ರೋಗವನ್ನು ದೃಢಪಡಿಸಲಾಗುತ್ತದೆ.
ನಿಪಾಹ್ ವೈರಾಣು ಜ್ವರವನ್ನು ತಡೆಗಟ್ಟುವುದು ಹೇಗೆ ?
* ಪಕ್ಷಿಗಳು ಮತ್ತು ಪ್ರಾಣಿಗಳು ಕಚ್ಚಿದ ಹಣ್ಣುಗಳನ್ನು ಸೇವಿಸಬಾರದು
* ಬಾವಲಿಗಳು ಹೆಚ್ಚಾಗಿರುವ ಪ್ರದೇಶಗಳಿಂದ ಸಂಗ್ರಹಿಸಿದ ಸೇಂದಿ/ನೀರಾ ಗಳನ್ನು ಕುಡಿಯಬಾರದು.
* ತಾಜಾ ತಾಳೆ ಹಣ್ಣಿನ ರಸವನ್ನು ಸೇವಿಸಬಾರದು
* ಹಣ್ಣು ಮತ್ತು ಒಣ ಖರ್ಜೂರ ಇವುಗಳನ್ನು ಸೇವಿಸುವ ಮೊದಲು ಸಂಪೂರ್ಣವಾಗಿ ಶುದ್ಧೀಕರಿಸಬೇಕು.
* ಅನಾರ‍್ಯೋಗದ ಹಂದಿಗಳನ್ನು ಮತ್ತು ಪ್ರಾಣಿಗಳೊಂದಿಗೆ ನೇರ ಸಂಪರ್ಕವನ್ನು ತಪ್ಪಿಸುವುದು
* ಬಾವಲಿಗಳ ಪ್ರವೇಶವನ್ನು ತಪ್ಪಿಸಲು, ತೆರೆದ ಬಾವಿಗಳಿಗೆ ಜಾಲರಿಯನ್ನು ಅಳವಡಿಸುವುದು.
* ಕೈಗಳನ್ನು ಸಂಪೂರ್ಣವಾಗಿ ಶುದ್ಧೀಕರಿಸುವುದು ತಡೆಗಟ್ಟುವಿಕೆಯ ಬಹುಮುಖ್ಯ ಕ್ರಮವಾಗಿರುತ್ತದೆ
* ನೀಫಾ ವೈರಸ್ ಸೋಂಕಿತ ರೋಗಿಯು ಉಪಯೋಗಿಸಿದ ಬಟ್ಟೆ ಮತ್ತು ಇತರ ಪದಾರ್ಥಗಳನ್ನು ಸೋಂಕು ನಿವಾರಣೆ ಮಾಡುವುದು.
* ಸೋಂಕಿತ ರೋಗಿಯು ಕನಿಷ್ಟ ೧೫ ದಿನಗಳು ಮನೆಯಲ್ಲಿ ಮತ್ತು ಚಿಕ್ಸಿತೆಯ ಅವಧಿಯಲ್ಲಿ ಆಸ್ಪತ್ರೆಯಲ್ಲಿಯೇ ಪ್ರತ್ಯೇಕವಾಗಿರುವುದು.
* ಬಾವಲಿಗಳಿರುವ ಬಾವಿಯ ನೀರನ್ನು ಕುದಿಸದೆ ಉಪಯೋಗಿಸಬಾರದು
* ಸೋಂಕಿತ ರೋಗಿಗಳನ್ನು ನಿರ್ವಹಿಸುವಾಗ ಆಸ್ಪತ್ರೆಯ ಸಿಬ್ಬಂದಿ ವಿಶೇಷ ಆರೈಕೆ ಬಳಕೆ ಮುಖವಾಡ ಮತ್ತು ಕೈಗವಸುಗಳನ್ನು ಉಪಯೋಗಿಸಬೇಕು.
ದ.ಕ. ಜಿಲ್ಲಾ ಸರ್ವೇಕ್ಷಣಾ ಘಟಕ ಪ್ರಕಟಪಡಿಸಿರುವ ನಿಪಾಹ್ ವೈರಸ್ ಸಂಬಂಧಿತ ಅಂಶಗಳು
ನಿಪಾಹ್ ವೈರಸ್ ಸೋಂಕು ಎಲ್ಲಿ ಕಂಡು ಬರುತ್ತದೆ?
ಸಾಕು ಪ್ರಾಣಿಗಳ ವಿವಿಧ ವರ್ಗಗಳಾದ ನಾಯಿ, ಬೆಕ್ಕು, ಆಡು, ಕುದುರೆ ಮತ್ತು ಹಂದಿಗಳಲ್ಲಿ ’ನೀಫಾಹ್ ಸೋಂಕು’ ಕಂಡು ಬಂದ ಸಾಕ್ಷ್ಯಗಳಿವೆ. ಕುರಿಗಳಲ್ಲೂ ಈ ರೋಗವು ಕಂಡು ಬರಬಹುದೆಂದು ಅಂದಾಜಿಸಲಾಗಿದೆ. ಆದರೂ, ಈ ಸೋಂಕು ಒಂದು ಮಹಾಮಾರಿಯಾಗಿ ಸ್ಫೋಟಗೊಂಡ ಮೊದಲ ನಿದರ್ಶನದಿಂದಲೂ ಇದು ಮನುಷ್ಯರಲ್ಲಿ ಪ್ರಾಥಮಿಕವಾಗಿ ಕಂಡು ಬರುವ ’ವೈರಸ್ ಸೋಂಕು’ ಎಂದು ವಿಶ್ವದ ವಿವಿಧ ಭಾಗಗಳಿಂದ ಸಾಬೀತಾಗಿದೆ.
ಸಾಮಾನ್ಯವಾಗಿ ’ನೀಫಾಹ್ ವೈರಸ್ ಸೋಂಕು’ ಮಲೇಷ್ಯಾ ಮತ್ತು ಸಿಂಗಾಪುರ ದೇಶಗಳಲ್ಲಿ ಸಾಕು ಹಂದಿಗಳಲ್ಲಿ ಕಂಡು ಬರುವ ಮಹಾಮಾರಿಯಾಗಿ ಗುರುತಿಸಿಕೊಂಡಿದೆ. ಆದರೂ ಮಲೇಷ್ಯಾ, ಸಿಂಗಾಪುರ, ಬಾಂಗ್ಲಾದೇಶ ಮತ್ತು ಭಾರತದಲ್ಲಿ ಈ ಸೋಂಕು ಮನುಷ್ಯರಲ್ಲೂ ಕಂಡು ಬಂದಿದೆ.
ಯಾವುದೇ ರೊಗಲಕ್ಷಣಗಳಿಲ್ಲದೆ ಈ ವೈರಸ್‌ನ್ನು ಕಾಂಬೋಡಿಯಾ, ಥಾಯ್‌ಲ್ಯಾಂಡ್ ಮತ್ತು ಮಡಗಾಸ್ಕರ್ ದೇಶಗಳ ಹಣ್ಣು ತಿನ್ನುವ ಬಾವಲಿಗಳಲ್ಲಿ ಕಂಡು ಬಂದಿದೆ.
ಸೋಂಕಿನ ರೋಗಲಕ್ಷಣಗಳು:
ನೀಫಾಹ್ ವೈರಸ್ ಸೋಂಕು ಸಾಮಾನ್ಯವಾಗಿ ಮೆದುಳಿನ ನರವ್ಯೂಹಕ್ಕೆ ಸಂಬಂಧಿಸಿದ ಉರಿಯೂತದ ಸಮಸ್ಯೆ ಹಾಗೂ ಶ್ವಾಸಕೋಶಕ್ಕೆ ಸಂಬಂಧಿಸಿದ ತೊಂದರೆಗಳನ್ನು ಉಂಟುಮಾಡುತ್ತದೆ ಆದ್ದರಿಂದ ಈ ರೋಗವನ್ನು ’ನೀಫಾಹ್ ವೈರಸ್ ಮೆದುಳಿನ ಉರಿಯೂತ’ ಎಂದೂ ಕರೆಯಲಾಗುತ್ತದೆ.
ಹಂದಿಗಳಲ್ಲಿ ಈ ಸೋಂಕಿನಿಂದ ತೀವ್ರತರವಾದ ಜ್ವರ, ಹೊರಳಾಟ, ಬೊಬ್ಬೆ, ಉಸಿರಾಟದ ಸಮಸ್ಯೆ ಹಾಗೂ ಅರೆನಿದ್ರಾವಸ್ಥೆ ಅಥವಾ ಮೂರ್ಛೆಯಂತಹ ಲಕ್ಷಣಗಳು ಕಂಡುಬರುತ್ತದೆ. ಇತರ ಸಾಕುಪ್ರಾಣಿಗಳಲ್ಲೂ ಇಂತಹ ರೋಗಲಕ್ಷಣಗಳು ಕಂಡುಬರಬಹುದೆಂದು ಅಂದಾಜಿಸಲಾಗಿದೆ.
ಸೋಂಕಿತ ವ್ಯಕ್ತಿಯ ನೇರಸಂಪರ್ಕಕ್ಕೆ ಬಂದ 5 ರಿಂದ 14 ದಿನಗಳಲ್ಲಿ ಮನುಷ್ಯನಲ್ಲಿ ಜ್ವರ, ಕೆಮ್ಮು, ಉಸಿರಾಟದ ಸಮಸ್ಯೆ, ತಲೆನೋವು, ನರದೌರ್ಬಲ್ಯ, ಮಾನಸಿಕ ದಿಗ್ಭ್ರಮೆ ಅಥವಾ ಗೊಂದಲ, ಅರೆನಿದ್ರಾವಸ್ಥೆ ಕಂಡುಬರುತ್ತದೆ. ಈ ಲಕ್ಷಣಗಳು ಕಂಡುಬಂದ 24 ರಿಂದ 48 ಗಂಟೆಗಳಲ್ಲಿ, ರೋಗಸ್ಥಿತಿ ಹದಗೆಟ್ಟು ವ್ಯಕ್ತಿಯು ಕೋಮಾಸ್ಥಿತಿಗೆ ಹೋಗುವ ಸಾಧ್ಯತೆಗಳಿವೆ.
ನೀಫಾಹ್ ಸೋಂಕಿಗೆ ತುತ್ತಾದ ವ್ಯಕ್ತಿ ಬದುಕುಳಿದರೂ, ರೋಗದ ದೀರ್ಘಕಾಲೀನ ಪರಿಣಾಮವಾಗಿ ವ್ಯಕ್ತಿಯ ವ್ಯಕ್ತಿತ್ವದಲ್ಲಿ ಬದಲಾವಣೆ ಅಥವಾ ನಿರಂತರ ಅಪಸ್ಮಾರರೋಗದ ಸಮಸ್ಯೆಯು ಕಂಡುಬರುವ ಸಾಧ್ಯತೆಗಳಿವೆ.
ನಿಪಾಹ್ ವೈರಸ್‌ನ ಮೂಲ ಮತ್ತು ಇತಿಹಾಸ
’ನಿಪಾಹ್ ವೈರಸ್ ಸೋಂಕು’ ಒಂದು ಪ್ರಾಣಿಜನ್ಯ ಸಾಂಕ್ರಾಮಿಕ ರೋಗವಾಗಿದ್ದು, ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರವೃತ್ತಗೊಳ್ಳುತ್ತಿರುವ ವೈರಸ್ ಸೋಂಕುಗಳಲ್ಲಿ ಒಂದಾಗಿದೆ. ಈ ಸೋಂಕು ಮೊತ್ತಮೊದಲ ಬಾರಿಗೆ ಮಲೇಷ್ಯಾ (೧೯೯೮) ಮತ್ತು ಸಿಂಗಾಪುರ (೧೯೯೯) ನಲ್ಲಿ ಸಾಕು ಹಂದಿಗಳಲ್ಲಿ ಕಂಡು ಬಂದಿರುತ್ತದೆ. ‘ನೀಫಾಹ್ ವೈರಸ್ ಸೋಂಕು’ ಘೆಅ ಪ್ರಭೇದದ ವೈರಸ್‌ನಿಂದ ಉದ್ಭವಿಸಿದೆ. ಈ ವೈರಸ್ ’ಪ್ಯಾರಾಮಿಕ್ಸೊವಿರಿಡೆ’ ಎಂಬ ವೈರಸ್ ಕುಟುಂಬಕ್ಕೆ ಸೇರಿದ್ದು, ‘ಹೆನಿಪಾವೈರಸ್’ ಎಂಬ ಪಂಗಡದ ಭಾಗವಾಗಿದೆ. ’ನೀಫಾಹ್’ ಎಂಬುವುದು ಮಲೇಷ್ಯಾ ದೇಶದ ಒಂದು ಊರಿನ ಹೆಸರಾಗಿದ್ದು, ೧೯೯೯ರಲ್ಲಿ ಈ ಊರಿನಲ್ಲಿ ಮೊತ್ತಮೊದಲಾಗಿ ಈ ವೈರಸ್ ಸೋಂಕನ್ನು ಓರ್ವ ಮನುಷ್ಯ ದೇಹದಿಂದ ಪ್ರತ್ಯೇಕಗೊಳಿಸಿ ಗುರುತಿಸಲಾಯಿತು. ಆದುದರಿಂದ ಈ ವೈರಸ್‌ಗೆ ’ನೀಫಾಹ್’ ಎಂಬ ಹೆಸರು ಬಂದಿದೆ. ಕಾಡುಗಳ ನಾಶ ಮತ್ತು ಹಣ್ಣು, ಬಾವಲಿಗಳ ಜನವಸತಿ ಪ್ರದೇಶಗಳಿಗೆ ವಲಸೆಯು ಈ ಸೋಂಕಿನ ಆರಂಭಿಕ ಅಂಶವಾಗಿದೆ. ಭಾರತದಲ್ಲಿ ನೀಫಾಹ್ ಸೋಂಕಿನ ಮಹಾಮಾರಿಯು ಜನವರಿ ೨೦೦೧ ರಲ್ಲಿ ಸಿಲಿಗುರಿ (ಪಶ್ಚಿಮ ಬಂಗಾಳ) ಯಲ್ಲಿ ಕಂಡು ಬಂದಿತ್ತು. ಈ ಸಂದರ್ಭದಲ್ಲಿ ೬೬ ಜನರು ಈ ಸೋಂಕಿಗೆ ತುತ್ತಾಗಿ 74% ಜನರು ಮರಣ ಹೊಂದಿದ್ದರು. 75% ಸೋಂಕಿತ ಜನರು ಆಸ್ಪತ್ರೆ ಕರ್ಮಚಾರಿಗಳು ಮತ್ತು ರೋಗಿಸಂದರ್ಶಕರಾಗಿದ್ದರು. 2007 ಫೆಬ್ರವರಿಯಲ್ಲಿ ನಾಡಿನ ಜಿಲ್ಲೆ (ಪಶ್ಚಿಮ ಬಂಗಾಳ) 50 ಶಂಕಿತ ನೀಫಾಹ್ ಸೋಂಕಿನ ರೋಗಿಗಳು ಪತ್ತೆಯಾಗಿ 3-5 ಮಂದಿ ಮರಣ ಹೊಂದಿದರು. ನೆರೆಯ ದೇಶ ಬಾಂಗ್ಲಾದೇಶದಲ್ಲಿ 2001, 2003, 2004 ರಲ್ಲಿ (2ಸಲ), 2005, 2008, 2010, 2011 ರಲ್ಲಿ ಈ ಮಹಾಮಾರಿ ಸೋಂಕು ಕಂಡುಬಂದಿತ್ತು.
ಸೋಂಕಿಗೆ ಔಷಧಿ
ಮತ್ತು ಚಿಕಿತ್ಸೆ :
ಜ ನೀಫಾಹ್ ಸೋಂಕಿಗೆ ನಿಖರವಾದ ಚಿಕಿತ್ಸೆಯಾಗಲಿ, ರೋಗ ತಡೆಗಟ್ಟಲು ಲಸಿಕೆಯಾಗಲಿ ಇನ್ನೂ ಕಂಡು ಹಿಡಿಯಲಾಗದೆ ಇರುವುದರಿಂದ, ಈ ರೋಗಕ್ಕೆ ಲಾಕ್ಷಣಿಕ ಚಿಕಿತ್ಸೆ ಮತ್ತು ಜೀವಾಧಾರ ಚಿಕಿತ್ಸೆಗಳನ್ನು ಮಾತ್ರ ನೀಡಬಹುದಾಗಿದೆ.
ಕೈಗೊಳ್ಳಬೇಕಾದ ಕ್ರಮಗಳು:
* ಹೈ ಅಲರ್ಟ್ ಇರುವ ಪ್ರದೇಶದ ಸಾರ್ವಜನಿಕರು ಮತ್ತು ನೀಫಾಹ್ ಮಹಾಮಾರಿ ಸ್ಫೋಟಗೊಂಡ ಪ್ರದೇಶಕ್ಕೆ ಪ್ರಯಾಣ ಬೆಳೆಸಿ ಬಂದವರು ಜ್ವರ, ತಲೆನೋವು ಶ್ವಾಸಕೋಶದ ಸಮಸ್ಯೆ, ಮಾನಸಿಕ ಗೊಂದಲ ಈ ಲಕ್ಷಣಗಳು ಕಂಡು ಬಂದಾಗ ಕೂಡಲೇ ಜಿಲ್ಲಾ ಸರ್ಕಾರಿ ಆಸ್ಪತ್ರೆ ಅಥವಾ ಉನ್ನತ ಆರೋಗ್ಯ ಸೇವೆ ಇರುವ ಆಸ್ಪತ್ರೆಗಳ ವೈದ್ಯರನ್ನು ಸಂಪರ್ಕಿಸುವುದು.
* ಶಂಕಿತ ಅಥವಾ ದೃಢೀಕೃತ ರೋಗಿಯೊಂದಿಗೆ ನೇರಸಂಪರ್ಕದಲ್ಲಿರುವವರು ತಮ್ಮ ಆರೋಗ್ಯ ಬದಲಾವಣೆ ಬಗ್ಗೆ ಕನಿಷ್ಟ ೧೪ ದಿವಸಗಳವರೆಗೆ ಗಮನ ನೀಡುವುದು.
* ತೆರೆದ ಬಾವಿಗಳ ಸುತ್ತಮುತ್ತ ಬಾವಲಿಗಳ ಚಲನವಲನವಿದ್ದರೆ ಬಾವಿನೀರನ್ನು ಕುದಿಸಿ ಕುಡಿಯುವುದು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.