ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ವಿರುದ್ಧ ಸುಬ್ರಹ್ಮಣ್ಯ ಕೆಲ ಕಾಂಗ್ರೆಸ್ ಮುಖಂಡರು ಗರಂ : ಜಯಪ್ರಕಾಶ್ ರೈ ಪಕ್ಷಕ್ಕೆ ರಾಜೀನಾಮೆ ನೀಡಿ ನಿರ್ಗಮಿಸಲಿ

Advt_Headding_Middle
Advt_Headding_Middle


ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎನ್.ಜಯಪ್ರಕಾಶ್ ರೈ ವಿರುದ್ಧ ಕಾಂಗ್ರೆಸ್‌ನ ಕೆಲ ಮುಖಂಡರು ಗರಂ ಆಗಿದ್ದು, ಪಕ್ಷ ಸಂಘಟನೆಯಲ್ಲಿ ಸಂಪೂರ್ಣ ವಿಫಲರಾಗಿರುವ ಜಯಪ್ರಕಾಶ್ ರೈಯವರಯ ಪಕ್ಷಕ್ಕೆ ರಾಜೀನಾಮೆ ನೀಡಿ ನಿರ್ಗಮಿಸಿದಲ್ಲಿ ಮುಂದೆ ಎದುರಾಗುವ ಚುನಾವಣೆಗಳಲ್ಲಿ ನಾವು ಸಂಘಟಿತರಾಗಿ ಪಕ್ಷಕ್ಕೆ ಪುನಶ್ಚೇತನ ನೀಡುವಲ್ಲಿ ಶ್ರಮಿಸಲಿದ್ದೇವೆ ಎಂದು ಹೇಳಿದ್ದಾರೆ.
ಸುಬ್ರಹ್ಮಣ್ಯ ಗ್ರಾಮಪಂಚಾಯತ್ ಸದಸ್ಯರಾದ ಹರೀಶ್ ಎಸ್.ಇಂಜಾಡಿ, ನವೀನ್ ಮಣಿ, ಮಾಜಿ ಸದಸ್ಯ ಕಿಶೋರ್ ಅರಂಪಾಡಿ, ಸುಬ್ರಹ್ಮಣ್ಯ ದೇವಸ್ಥಾನದ ಮಾಸ್ಟರ್ ಪ್ಲ್ಯಾನ್ ಮೇಲುಸ್ತುವಾರಿ ಸಮಿತಿ ಸದಸ್ಯ ಲೋಲಾಕ್ಷ ಕೈಕಂಬ, ದಿನೇಶ್ ಅಕ್ಷಯ ಬಜಾರ್, ರಂಜನ್ ಸುಬ್ರಹ್ಮಣ್ಯ ಈ ಕುರಿತು ಪತ್ರಿಕಾ ಹೇಳಿಕೆ ನೀಡಿದ್ದು, ಮೇ. 19ರಂದು ವಿಧಾನಸಭೆಯಲ್ಲಿ ವಿಶ್ವಾಸಮತ ಯಾಚಿಸದೆ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಯಡಿಯೂರಪ್ಪನವರ ಸರಕಾರ ಪತನಗೊಂಡ ಹಿನ್ನಲೆಯಲ್ಲಿ ನಾವು ಸುಬ್ರಹ್ಮಣ್ಯದ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಾಚರಣೆ ಮಾಡಿದ್ದೇವೆ. ಈ ಕುರಿತು ಪತ್ರಿಕೆಯಲ್ಲಿ ಸಚಿತ್ರ ವರದಿ ಬಂದಿದೆ. ಅದೇ ಪತ್ರಿಕೆಯಲ್ಲಿ ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಸಂಭ್ರಮಾಚರಣೆ ಮಾಡಿದ ಕಾರ್ಯಕರ್ತರನ್ನು ವಿಘ್ನಸಂತೋಷಿಗಳಿಗೆ ಹೋಲಿಕೆ ಮಾಡಿರುವುದು ನಮಗೆ ಅತೀವ ನೋವನ್ನುಂಟುಮಾಡಿದೆ. ಅಲ್ಲದೆ ಸ್ವಪಕ್ಷೀಯರೇ ಇಂತಹ ಹೇಳಿಕೆ ನೀಡಿರುವುದರಿಂದ ಅವಮಾನವಾಗಿದೆ. ಸುಮಾರು ೨೫-೩೦ ವರ್ಷಗಳಿಂದ ಸುಬ್ರಹ್ಮಣ್ಯದಲ್ಲಿ ಪಕ್ಷದ ಪ್ರಾಮಾಣಿಕ ಹಾಗೂ ಸಕ್ರಿಯ ಕಾರ್ಯಕರ್ತರಾದ ನಾವು ಮೂಲ ಕಾಂಗ್ರೆಸಿಗರಾಗಿದ್ದು, ಜಯಪ್ರಕಾಶ್ ರೈಯವರಂತೆ ಬೇರೆ ಪಕ್ಷದಿಂದ ವಲಸೆ ಬಂದವರಲ್ಲ. ನಮ್ಮ ನೇತೃತ್ವದಲ್ಲಿ ನಡೆದ ಈ ಸಭೆಯಲ್ಲಿ ಕಾಂಗ್ರೆಸ್ ಬೆಂಬಲಿತರಾಗಿ ಗೆದ್ದು ಬಂದ ಗ್ರಾಮ ಪಂಚಾಯತ್ ಸದಸ್ಯರು, ಮಾಜಿ ಸದಸ್ಯರು, ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಅಭಿವೃದ್ಧಿ ಕಾಮಗಾರಿಗಳ ಮೇಲುಸ್ತುವಾರಿ ಸಮಿತಿಯ ಸದಸ್ಯರು ಮೊದಲಾದ ಮುಂದಾಳುಗಳಲ್ಲದೆ ಪಕ್ಷದ ನಿಷ್ಠಾವಂತ ಕಾರ್ಯಕರ್ತರುಗಳು ಭಾಗವಹಿಸಿದ್ದರು. ಬಿಜೆಪಿಯಿಂದ ವಲಸೆ ಬಂದಿರುವ ಜಯಪ್ರಕಾಶ್ ರೈಯವರಿಗೆ ತಮ್ಮ ಮಾತೃ ಪಕ್ಷದ ಬಗ್ಗೆ ಈಗಲೂ ಒಲವಿರುವುದನ್ನು ಈ ಹೇಳಿಕೆ ಸ್ಪಷ್ಟಪಡಿಸುತ್ತದೆ. ನಾವು ಯಾವುದೇ ವೈಯಕ್ತಿಕ ವಿಘ್ನಗಳಿಗೆ ಸಂತೋಷಪಡುವುದಿಲ್ಲ. ಆದರೆ ರಾಜ್ಯ ರಾಷ್ಟ್ರಮಟ್ಟದಲ್ಲಿ ಬಿಜೆಪಿ ಪಕ್ಷಕ್ಕೆ ರಾಜಕೀಯ ವಿಘ್ನ ಬಂದಾಗ ಖಂಡಿತವಾಗಿಯೂ ಸಂತೋಷ ಪಡುತ್ತೇವೆ. ಸ್ಥಳೀಯವಾಗಿ ನಮ್ಮ ಪಕ್ಷದ ಕಾರ್ಯಕರ್ತರ ಬಗ್ಗೆ ಕೀಳಂದಾಜು ಬೇಡ. ಪಕ್ಷದೊಳಗೆ ಗುಂಪುಗಾರಿಕೆ ಮಾಡಿ, ತಾಲೂಕಿನಾದ್ಯಂತ ಪ್ರಾಬಲ್ಯ ಹೊಂದಿರುವ ಗೌಡ ಸಮುದಾಯಕ್ಕೆ ಅವಮಾನವಾಗುವ ರೀತಿಯಲ್ಲಿ ಸಚಿವರ ಮುಖಾಂತರ ಲಾಬಿ ನಡೆಸಿ, ಗೌಡ ಸಮುದಾಯವನ್ನು ನಿರ್ಲಕ್ಷಿಸಿ ಅಧ್ಯಕ್ಷರಾದ ತಮ್ಮಿಂದ ಸುಳ್ಯ ತಾಲೂಕಿನಲ್ಲಿ ಕಾಂಗ್ರೆಸ್ ಪಕ್ಷವು 25 ವರ್ಷಗಳಷ್ಟು ಹಿಂದೆ ಹೋಗಿದೆ. ಬಿಜೆಪಿಗೆ ಸರಿ ಸಮಾನವಾಗಿ ಹೋರಾಟ ಮಾಡಿ ಪಕ್ಷದ ಅಸ್ತಿತ್ವವನ್ನು ಉಳಿಸಿಕೊಟ್ಟಿದ್ದ ಕಾರ್ಯಕರ್ತರನ್ನು ಈ ರೀತಿ ಹೇಳಿಕೆಗಳನ್ನು ನೀಡಿ ಎದೆಗುಂದಿಸುವುದಾದರೆ ತಾವು ಪಕ್ಷಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರಬಹುದೆಂದು ನಮ್ಮ ಅಭಿಪ್ರಾಯ. ಸಚಿವರು, ನಾಯಕರುಗಳು ಬಂದಾಗ ವೇದಿಕೆಯಲ್ಲಿ ಕಾಣಿಸಿಕೊಂಡು ಪತ್ರಿಕೆಗಳಲ್ಲಿ ಮಾಧ್ಯಮಗಳಲ್ಲಿ ಕಾಣಿಸಿಕೊಳ್ಳಲು ಹಾತೊರೆಯುವವರು ನಾವಲ್ಲ. ನಾವು ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿರುತ್ತೇವೆ. ಸುಬ್ರಹ್ಮಣ್ಯ ಗ್ರಾಮದ ಸ್ಥಳೀಯ ವಿಚಾರಗಳ ಬಗ್ಗೆ ಹೇಳುವುದಾದರೆ ಇಲ್ಲಿ ಅನೇಕ ಮಂದಿ ವರ್ಚಸ್ಸಿಲ್ಲದ ವ್ಯಕ್ತಿಗಳಿಗೆ, ಸಾರ್ವಜನಿಕವಾಗಿ ಹಲವಾರು ವಿಷಯಗಳಲ್ಲಿ ಸಾಮಾನ್ಯ ಜನರ ವಿರೋಧ ಕಟ್ಟಿಕೊಂಡು ಮತದಾರರಿಂದ ತಿರಸ್ಕೃತರಾದವರಿಗೆ ಪಕ್ಷದ ನಾಯಕರುಗಳೊಂದಿಗೆ ಲಾಬಿ ನಡೆಸಿ ಹುದ್ದೆಗಳನ್ನು ಕೊಡಿಸಿ ಅವರ ಚಾಡಿ ಮಾತುಗಳನ್ನು ಕೇಳಿ ನಮ್ಮನ್ನೆಲ್ಲ ನಿರ್ಲಕ್ಷಿಸಿರುತ್ತೀರಿ. ಈ ಕಾರಣದಿಂದಲೇ ನಮ್ಮ ಪಕ್ಷಕ್ಕೆ ಈ ಬಾರಿ ಸುಬ್ರಹ್ಮಣ್ಯದ ಇತಿಹಾಸದಲ್ಲೆ ದಾಖಲೆಯ ಹಿನ್ನಡೆಯಾಗಿದೆ ಎಂದು ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.