ಮಕ್ಕಳು ಮೊಬೈಲ್‌, ಟ್ಯಾಬ್‌ಗಳಲ್ಲೇ ಕಳೆದುಹೋಗದಿರಲಿ

Advt_Headding_Middle
Advt_Headding_Middle

ಜಗದ್ವಿಖ್ಯಾತ ವಿಜ್ಞಾನಿಯನ್ನು ಆತಂಕಕ್ಕೀಡು ಮಾಡಿದ ತಾಂತ್ರಿಕತೆಯ ಪಾರಮ್ಯ ಪ್ರಸ್ತುತದಲ್ಲಿ ನಮ್ಮನ್ನು ಅತೀ ಹೆಚ್ಚು ಕಾಡುತ್ತಿದೆ. ಎಲ್ಲವೂ ತಾಂತ್ರಿಕವಾಗಿದೆ. ಮಕ್ಕಳು ಮೊಬೈಲ್‌, ಟ್ಯಾಬ್‌, ಐ-ಪಾಡ್‌, ಲ್ಯಾಪ್‌ಟಾಪ್‌ಗ್ಳನ್ನು ಮಿತಿ ಮೀರಿ ಬಳಸುತ್ತಿರುವುದು ತಾಂತ್ರಿಕ ಮುಂದುವರಿಕೆಯಿಂದಾಗಿ ಬಾಧಿಸುತ್ತಿರುವ ಪ್ರಮುಖ ವಿಷಯ. ಮೊದಲಿಗರಾಗಬೇಕೆಂಬ ಧಾವಂತ, ಎಲ್ಲರಿಗಿಂತ ಒಂದು ಪಟ್ಟು ಹೆಚ್ಚು ಎಂದೆನಿಸಬೇಕೆಂಬ ಅಭಿಲಾಷೆ ಜನರನ್ನು ಬದುಕಿನ ಸಹಜ ಖುಷಿಯನ್ನು ಅನುಭವಿಸುವುದರಿಂದ ವಿಮುಖವಾಗಿಸುತ್ತಿದೆ.

ದೂರದರ್ಶನವನ್ನು ವೀಕ್ಷಿಸುವ ಸಮಯವನ್ನು ಸ್ಕ್ರೀನ್‌ ಟೈಂ ಎಂದು ಕರೆಯಲಾಗುತ್ತಿತ್ತು. ವರ್ತಮಾನದಲ್ಲಿ ಎಲೆಕ್ಟ್ರಾನಿಕ್‌ ಡಿವೈಸ್‌ಗಳ ಸಂಖ್ಯೆಯಲ್ಲಿ ಹೆಚ್ಚಳ ಉಂಟಾಗುತ್ತಿರುವುದರಿಂದ ಮೊಬೈಲ್‌, ಐ-ಪಾಡ್‌, ಲ್ಯಾಪ್‌ಟಾಪ್‌ಗ್ಳಲ್ಲಿ ವ್ಯಯಿಸುವ ಸಮಯವನ್ನೂ ಸ್ಕ್ರೀನ್‌ ಟೈಂ ಎಂದು ಕರೆಯಬಹುದಾಗಿದೆ. ಮೊದಲಿಗೆ ನಾವು ಎಷ್ಟು ಸಮಯ ಈ ಸಾಧನಗಳ ಮುಂದೆ ವ್ಯಯಿಸುತ್ತಿದ್ದೇವೆ ಎಂಬುದನ್ನು ಲೆಕ್ಕಹಾಕಬೇಕು. ಮಕ್ಕಳು ಹಿರಿಯರನ್ನು ನೋಡಿ ಕಲಿಯುವುದರಿಂದ ಅವರೂ ಈ ಸಾಧನಗಳಲ್ಲಿ ಹೆಚ್ಚಿನ ಆಸಕ್ತಿ ತಳೆದು ಅವುಗಳಲ್ಲೇ ವ್ಯಸ್ತರಾಗುತ್ತಾರೆ.

2-3 ವರ್ಷದ ಮಕ್ಕಳು ತಂದೆ-ತಾಯಿಯ ಮೊಬೈಲ್‌ಗ‌ಳನ್ನು ಆಪರೇಟ್‌ ಮಾಡಿ ವೀಡಿಯೋ ನೋಡುತ್ತ ಖುಷಿ ಪಡುವುದನ್ನು ಕಾಣುತ್ತೇವೆ. ಇದನ್ನು ತಂದೆ-ತಾಯಿ  ಹೆಮ್ಮೆಯಿಂದ ಹೇಳಿಕೊಳ್ಳುವುದಿದೆ. ಸ್ವಲ್ಪ ಸಮಯ ಮೊಬೈಲ್‌ನ್ನು ವಾಪಸ್‌ ತೆಗೆದುಕೊಂಡರೂ ಮಕ್ಕಳು ಮುನಿಸಿಕೊಳ್ಳುತ್ತಾರೆ. ಮೊಬೈಲ್‌ ಪೋನ್‌ ಮತ್ತಿತರ ಎಲೆಕ್ಟ್ರಾನಿಕ್‌ ಸಾಧನಗಳ ಮೇಲಿನ ಮಕ್ಕಳ ಅತೀ ತನ್ಮಯತೆ ಅವರನ್ನು ಗೆಳೆಯರೊಂದಿಗೆ ಬೆರೆಯುವುದನ್ನು ಮತ್ತು ಸಹಜ ಸಂವಹನದಿಂದ ದೂರವಾಗುವಂತೆ ಮಾಡುತ್ತದೆ. ಮಕ್ಕಳು ಎಲೆಕ್ಟ್ರಾನಿಕ್‌ ಸಾಧನಗಳಿಗಾಗಿ ಹೆಚ್ಚಿನ ಸಮಯ ವ್ಯಯಿಸುವುದನ್ನು ಹೆತ್ತವರು ಗಂಭೀರವಾಗಿ ಪರಿಗಣಿಸಬೇಕಾಗುತ್ತದೆ. ಮಕ್ಕಳಿಗೆ ಮೊಬೈಲ್‌ ಬಳಸಲು ಅನುವು ಮಾಡುವ ಅವಧಿಯ ಬಗ್ಗೆಯೂ ಅವರು ಸ್ಪಷ್ಟ ಸೂಚನೆ ನೀಡುವ ಅಗತ್ಯವಿದೆ.

ಅಮೆರಿಕನ್‌ ಅಕಾಡೆಮಿ ಆಫ್ ಪೀಡಿಯಾಟ್ರಿಕ್ಸ್‌ ಮಕ್ಕಳ ಸ್ಕ್ರೀನ್‌ ಟೈಂ ಬಗ್ಗೆ ಈ ರೀತಿ ಅಭಿಪ್ರಾಯ ವ್ಯಕ್ತಪಡಿಸುತ್ತದೆ. ಅದೆೆಂದರೆ, 18 ತಿಂಗಳ ವರೆಗೆ ಮಕ್ಕಳು ಯಾವುದೇ ರೀತಿಯ ಎಲೆಕ್ಟ್ರಿಕ್‌ ಸಾಧನಗಳ ಸ್ಕ್ರೀನ್‌ ಟೈಂ ಹೊಂದಿರಬಾರದು. 18 ತಿಂಗಳಿಂದ 5 ವರ್ಷಗಳ ವಯಸ್ಸಿನ ವರೆಗೆ ಸ್ಕ್ರೀನ್‌ ಟೈಂ ಅವಧಿ 1 ಗಂಟೆ ಮೀರಬಾರದು ಮತ್ತು ಮಕ್ಕಳ ಇತರ ಚಟುವಟಿಕೆಗಳಾದ ಶಾಲಾ ಅವಧಿ, ಮನೆ ಕೆಲಸದ ಅವಧಿ, ಹೊರಾಂಗಣ ಕ್ರೀಡೆ, ದೈನಂದಿನ ಚಟುವಟಿಕೆಗಳು, ನಿದ್ರೆ ಇತ್ಯಾದಿಗಳನ್ನು ಬಾಧಿಸದಂತೆ ನಿರ್ಧರಿತವಾಗಬೇಕು.

ಈಗ ಮಕ್ಕಳ ಸ್ಕ್ರೀನ್‌ ಟೈಂ ಬಗ್ಗೆ ನಮಗೆ ಏನೂ ಅನ್ನಿಸದಿರಬಹುದು. ಆದರೆ ಮುಂದೆ ಇದೇ ನಮಗೆ ಬೃಹತ್‌ ಸಮಸ್ಯೆಯಾಗಿ ಕಾಡಲಿದೆ. ಹಾಗಾಗಿ ಈ ಬಗ್ಗೆ ಈಗಲೇ ಎಚ್ಚರಿಕೆಯ ಹೆಜ್ಜೆ ಇರಿಸಬೇಕಾದುದು ಅಗತ್ಯ. ಸ್ಕ್ರೀನ್‌ ಟೈಂ ಹೆಚ್ಚಾಗಿರುವುದರಿಂದ ಮಕ್ಕಳ ಖನ್ನತೆ, ಇತ್ಯಾದಿ ಸಮಸ್ಯೆಗಳಿಗೆ ತುತ್ತಾಗುತ್ತಿರುವುದು ಕಂಡು ಬರುತ್ತಿದೆ. ಮಕ್ಕಳು ಆತ್ಮೀಯ ಸ್ನೇಹಿತರನ್ನು  ಗಳಿಸುವುದರಲ್ಲಿ ವಿಫ‌ಲರಾಗುವುದು ಮತ್ತು ಸ್ಕ್ರೀನ್‌ ಟೈಂನಲ್ಲಿ ಸ್ನೇಹದ ಚೌಕಟ್ಟನ್ನು ಮಿತಿಗೊಳಿಸುವುದು ಮಕ್ಕಳ ಸಹಜ ಬೆಳವಣಿಗೆಗೆ ಪೂರಕವಲ್ಲ.

ಇಂಟರ್‌ನೆಟ್‌ಗೆ ನೆಚ್ಚಿಕೊಂಡಿರುವ ಬದುಕಿನಿಂದ ಶಾಲಾ ಬದುಕಿಗೆ ಹೊಂದಿಕೊಳ್ಳುವಲ್ಲಿ ಮಕ್ಕಳು ವಿಫ‌ಲವಾಗುವುದರಿಂದ ಮಕ್ಕಳು ಆತ್ಮಹತ್ಯೆಗೆ ಶರಣಾಗುವಂಥ ಗಂಭೀರ ಪ್ರಕರಣಗಳು ಹೆಚ್ಚಾಗುತ್ತಿವೆ. ಇದೀಗಂತೂ ಇಂಟರ್‌ನೆಟ್‌ ಸುಸೈಡ್‌ ಹೆಚ್ಚುತ್ತಿರುವುದು ಆಘಾತಕಾರಿ. ಹೆತ್ತವರು, ಮನೆಯಲ್ಲಿರುವ ಹಿರಿಯರು ಮಕ್ಕಳ ಸ್ಕ್ರೀನ್‌ ಟೈಂ ಸಂಬಂಧಿತ ನಡವಳಿಕೆಗಳ ಮೇಲೆ ಕಣ್ಣಿಡದಿದ್ದರೆ ಮುಂದಿನ ಜನಾಂಗದ ಭವಿಷ್ಯಕ್ಕೇ ಕುತ್ತು ಉಂಟಾಗುವ ಸಾಧ್ಯತೆ ಇದೆ.

ಫೋಟೊಗೆ ಸಿಗುವ ಲೈಕ್‌ಗಳಿಗೆ ಸಂತೋಷ ಸೀಮಿತವಾಗದಿರಲಿ
ಮಕ್ಕಳು ಮುಖತಃ ಸಂವಹನದಿಂದ ವಿಮುಖರಾಗುವುದು, ಸ್ಕ್ರೀನ್‌ ಟೈಂನಲ್ಲಿ ಸಾವಿರ ಗೆಳೆಯರಿದ್ದರೂ ನೈಜ ಜಗತ್ತಿನಲ್ಲಿ ಒಬ್ಬಂಟಿಯಾಗಿ ಗುಂಪಿನಲ್ಲಿ ಗುರುತಿಸಿಕೊಳ್ಳದೆ ಕಳೆದುಹೋಗುವುದು, ಫೋಟೊಗೆ  ಬರುವ ಲೈಕ್‌, ಡಿಸ್‌ ಲೈಕ್‌ಗಳು ಜೀವನದ ಸಂತೋಷವನ್ನು ನಿರ್ಧರಿಸುವುದು, ಬದುಕು ಒಟ್ಟಿನಲ್ಲಿ ಜೀವಿಸುವವರಿಗಿಂತ ಅರ್ಧ ಗಂಟೆ  ವೀಡಿಯೋದ ಮೇಲೆ ವ್ಯಾಖ್ಯಾನಿಸಲ್ಪಡುವುದು ಹೆತ್ತವರಿಗೆ ಖಂಡಿತ ಅನಪೇಕ್ಷಿತ. ಇದರಿಂದ ಮಕ್ಕಳನ್ನು ಹೊರ ತರಲು ಪ್ರಯತ್ನಿಸುವುದು ಅತ್ಯಂತ ಅಗತ್ಯ.

ಮಕ್ಕಳನ್ನು ಮೊಬೈಲ್‌ ಗೀಳಿಂದ ತಪ್ಪಿಸಲು ಹೀಗೆ ಮಾಡಿ
ಮಕ್ಕಳು ಮೊಬೈಲ್‌ ಬಳಕೆ ಸಹಿತ ಸ್ಕ್ರೀನ್‌ ಟೈಂನಿಂದ ಹೊರಬರುವಂತಾಗಲು ಹೆತ್ತವರು, ಹಿರಿಯರು ಪ್ರಯತ್ನ ಮಾಡುವುದು ಅತ್ಯಂತ ಅಗತ್ಯ. ಮಕ್ಕಳು ತಮ್ಮ ಆಯ್ಕೆಯ ಇತರ ಚಟುವಟಿಕೆಗಳಲ್ಲಿ ತೊಡಗುವಂತೆ ಮಾಡುವುದು. ಹೆತ್ತವರು ಮಕ್ಕಳೊಂದಿಗೆ ಹೆಚ್ಚಿನ ಸಮಯವನ್ನು ಕಳೆಯುವುದು. ಅವರೊಂದಿಗೆ ಆಟವಾಡುವುದನ್ನು ಆರಂಭಿಸುವುದು. ಅವರೊಂದಿಗೆ ಆತ್ಮೀಯವಾಗಿ ಮಾತನಾಡಲು ಸಮಯವನ್ನು ಮೀಸಲಿಡುವುದು. ತಮ್ಮ ಪ್ರದೇಶದಲ್ಲಿರುವ ಮಕ್ಕಳನ್ನು ಒಟ್ಟಾಗಿ ಆಟ ಆಡುವುದಕ್ಕೆ, ಸಮಯ ಕಳೆಯುವುದಕ್ಕೆ ಅವಕಾಶ ಮಾಡಿಕೊಡುವುದು. ಜತೆಗೆ ತಾವೂ ಸೇರುವುದು, ಇತ್ಯಾದಿಗಳಿಂದ ಸ್ಕ್ರೀನ್‌ ಟೈಂನಲ್ಲೇ ಕಳೆದುಹೋಗುವ ಮಕ್ಕಳನ್ನು ಸಹಜ ಬದುಕಿಗೆ ತರಬಹುದು.

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.