HomePage_Banner
HomePage_Banner
HomePage_Banner
HomePage_Banner

ಅಕ್ಟೋಬರ್-1  ವಿಶ್ವ ಹಿರಿಯರ ದಿನ ಹಿರಿಯರನ್ನು ಗೌರವಿಸೋಣ: ಹಿರಿಯರಿಗೆ ನಮಿಸೋಣ

 

ಪ್ರತಿವರ್ಷ ಅಕ್ಟೋಬರ್ ೧ ರಂದು ವಿಶ್ವ ಹಿರಿಯರ ದಿನವನ್ನು ಆಚರಿಸಲಾಗುತ್ತಿದೆ. ನಮ್ಮ ಮನೆಯಲ್ಲಿರುವ ಹಿರಿಯರಿಂದ ಹಿಡಿದು ಪ್ರಪಂಚದ ಎಲ್ಲಾ ಕಡೆ ಇರುವ ಹಿರಿಯರನ್ನು ಗೌರವಯುತವಾಗಿ ನಡೆಸಿಕೊಳ್ಳುವುದು. ಅವರ ಬೇಕು, ಬೇಡಗಳನ್ನು ಗಮನಿಸುವುದು. ಜೀವನದ ಸಂಜೆಯಲ್ಲಿರುವ ಅವರನ್ನು ಸಂತೋಷವಾಗಿಡುವುದು. ಅವರ ಅನುಭವಗಳಿಂದ ನಾವೂ ಕೂಡ ಪಾಠ ಕಲಿತು ನಮ್ಮ ಸಂತೋಷದಲ್ಲಿ ಅವರನ್ನು ಸೇರಿಸಿಕೊಳ್ಳುವುದು ಇದರ ಮುಖ್ಯ ಉದ್ದೇಶ.

ಹಿರಿಯ ಜೀವಗಳು ಕಿರಿಯರ ಬಾಳಿಗೆ ಬೆಳಕಾಗುವಂತಹ ತಮ್ಮ ಅನುಭವದ ಸಾಗರವನ್ನು ಹೊಂದಿರುವವರು. ಇವರನ್ನು ನಾವು ಮುದುಕರು, ಕೈಲಾಗದವರು, ವೃದ್ಧರು ಎಂದು ಕೀಳಾಗಿ ಮಾತನಾಡುವುದು ತಪ್ಪು. ‘ವೃದ್ಧ’ ಎಂಬ ಪದಕ್ಕೆ ಕನ್ನಡ ಸಾಹಿತ್ಯ ಪರಿಷತ್ತಿನ ನಿಘಂಟಿನಲ್ಲಿ ಹಲವಾರು ಅರ್ಥಗಳು ಇವೆ. ವೃದ್ಧಿಯಾದ, ಹೆಚ್ಚಾದ, ವರ್ಧಿಸಿದ, ಪೂರ್ಣವಾಗಿ ಬೆಳೆದ, ವಯಸ್ಸಾದ, ಹಿರಿಯ, ಏಳಿಗೆ ಹೊಂದಿದ, ಪಾಂಡಿತ್ಯ ಪಡೆದ, ಪೂಜ್ಯವಾದ, ಗೌರವಾರ್ಹನಾದ, ವಿದ್ವಾಂಸ, ಪಂಡಿತ ಮೊದಲಾದ ಅರ್ಥಗಳಿವೆ. ಈ ಪದಗಳನ್ನು ಓದಿ, ಅರ್ಥಮಾಡಿಕೊಂಡು ನಮ್ಮ ನಿಮ್ಮ ನಡುವೆ ಬದುಕಿನ ಸಂಧ್ಯಾಕಾಲ ಕಳೆಯುತ್ತಿರುವ ಹಿರಿಯ ಜೀವಗಳ ಜೊತೆ ಸಂತೋಷದಿಂದ ಕಾಲ ಕಳೆಯಬೇಕಾಗಿದೆ. ಅವರ ಜೀವನ ಸಾರ್ಥಕವಾಗುವುದು. ಹಿರಿಯರ ಅನುಭವಗಳು ನಮಗೆ ದಾರಿ ದೀಪವಾಗಿವೆ. ಹಿರಿಯರನ್ನು ಪ್ರೀತಿಯಿಂದ, ಅಕ್ಕರೆಯಿಂದ ನೋಡಿಕೊಂಡು ಗೌರವಿಸಬೇಕಾಗಿದೆ. ವಿಶ್ವ ಸಂಸ್ಥೆಯು ೧೯೯೯ನೇ ವರ್ಷವನ್ನು ಅಂತರಾಷ್ಟ್ರೀಯ ವೃದ್ಧರ ವರ್ಷ ಎಂದು ಘೋಷಿಸಿತು. ವೃದ್ಧರನ್ನು ಗೌರವಿಸಿ ಅವರನ್ನು ಚೆನ್ನಾಗಿ ಕಾಣಲು ಜನರಲ್ಲಿ ಜಾಗೃತಿ ಮೂಡಿಸಲು ಪ್ರಯತ್ನಿಸಿತು. ನಮ್ಮ ಇಂದಿನ ಯುವ ಜನಾಂಗ ಈ ಕೆಲಸ ಮಾಡುವ ಜವಾಬ್ದಾರಿ ಹೊರಲು ಸಿದ್ಧರಾಗಬೇಕು. ಯಾಕೆಂದರೆ ನಾಳೆ ನಾವೂ ಕೂಡ ವೃದ್ಧರಾಗುತ್ತೇವೆ. ನೆಮ್ಮದಿಯ ನಾಳೆಗಾಗಿ ಹಂಬಲಿಸುತ್ತೇವೆ. ಇಂದು ನೀವು, ನಾಳೆ ನಾವು ಎಂಬುವುದು ಸಾರ್ವಕಾಲಿಕ ಸತ್ಯ. ಕಿರಿಯರು ಹಿರಿಯ ಸೇವೆಯನ್ನು ಮಾಡಬೇಕು.

ನಮ್ಮ ಮನೆಯಲ್ಲಿರುವ ಹಿರಿಯರ ಬೇಕು ಬೇಡಗಳನ್ನು ಕನಿಷ್ಠ ದಿನಕ್ಕೊಮ್ಮೆಯಾದರೂ ಕೇಳಬೇಕು. ನಮ್ಮ ವಠಾರದಲ್ಲಿರುವ ಇತರ ಹಿರಿಯರನ್ನು ನಗುನಗುತ್ತಾ ಮಾತನಾಡುವುದು, ಹಿರಿಯರಿಗೆ ಓದುವ ಹವ್ಯಾಸಗಳಿದ್ದರೆ ಅವರಿಗೆ ಓದಲು ಉತ್ತಮ ಪುಸ್ತಕಗಳನ್ನು ತಂದುಕೊಡುವುದು. ಅವರ ಆಸಕ್ತಿಗೆ ಸರಿಯಾದ ಪುಸ್ತಕಗಳನ್ನು ಹುಡುಕಿ ತಂದುಕೊಟ್ಟು ದಿನಕ್ಕೆ ೧೫-೨೦ ನಿಮಿಷ ಓದಿದರೂ ಅವರಿಗೆ ನಿಮ್ಮ ಬಗ್ಗೆ ಹೆಮ್ಮೆಯಾಗುತ್ತದೆ. ಅವರು ನಿಮ್ಮನ್ನು ಗಮನಿಸಿ ಬೆಲೆಕೊಡುತ್ತೀರಿ ಎಂಬ ಭಾವನೆ, ಪ್ರೀತಿ ಬರುತ್ತದೆ. ಓದಿನ ನಡುವೆ ಅನುಭವ ಹಂಚಿಕೊಳ್ಳಬಹುದು. ಕೆಲವೊಮ್ಮೆ ಹಿರಿಯರು ವಿನಾಕಾರಣ ಮಾತನಾಡುತ್ತಿರುತ್ತಾರೆ. ಅದು ವಯಸ್ಸಿನ ಪ್ರಭಾವ ಇದು ಸಹಜ ಗುಣ. ಆಗ ನಾವು ಅವರ ಮಾತಿಗೆ ಎದುರು ಮಾತನಾಡದೇ ಹೊಂದಿಕೊಂಡು ಹೋಗಬೇಕು. ಹಿರಿಯರೊಂದಿಗೆ ವ್ಯವಹರಿಸುವಾಗ ತಾಳ್ಮೆ ಕಳೆದುಕೊಳ್ಳದೆ ನಯವಾಗಿ ವರ್ತಿಸುವುದು ಒಳ್ಳೆಯದು. ಹೇಳಿದ್ದನ್ನೇ ಹೇಳುವ ಅಭ್ಯಾಸ ಕೆಲವರಿಗೆ ಇದೆ. ಅದು ಅವರ ಮರೆವಿನ ಗುಣ. ತಾಳ್ಮೆಯಿಂದ ಕೇಳಿ, ಇಲ್ಲವೇ ತುರ್ತು ಕೆಲಸ ಇರುವುದರಿಂದ ಮತ್ತೊಮ್ಮೆ ಹೇಳಲು ತಿಳಿಸಿ ಅಲ್ಲಿಂದ ಜಾರಿಕೊಳ್ಳಬಹುದು.

ಹಿರಿಯರಿಗೆ ಒಂದಲ್ಲಾ ಒಂದು ರೀತಿಯ ದೈಹಿಕ ತೊಂದರೆ ಇರುತ್ತದೆ. ಅವರಿಗೆ ಬೇಕಾದ ಮಾತ್ರೆ, ಔಷಧಿಗಳನ್ನು ತಂದುಕೊಡಲು ನಾವು ಸಹಾಯ ಮಾಡಬೇಕು. ವೈದ್ಯರ ಬಳಿ ಕರೆದುಕೊಂಡು ಹೋಗಲು ಸಹಾಯ ಮಾಡುವುದು ನಮ್ಮ ಧರ್ಮ. ನಮಗೆ ವಯಸ್ಸಾದಾಗ ಇನ್ನೊಬ್ಬರು ಸಹಾಯಕ್ಕೆ ಬರುತ್ತಾರೆ ಎಂಬುದನ್ನು ಮರೆಯಬಾರದು. ಬಹಳ ಮಂದಿ ಹಿರಿಯರಿಗೆ ವಯಸ್ಸಾದಂತೆ ಕಣ್ಣು ಮಂಜಾಗುವುದು ಸಹಜ. ಓದಲು ತೊಂದರೆಯಾಗುತ್ತದೆ. ಆಗ ಅವರಿಗೆ ಇಷ್ಠ ಪಡುವ ಸಂಗೀತ, ಹಾಡುಗಳನ್ನು ಕೇಳಿಸಿ ಮನರಂಜಿಸಬಹುದು. ಟಿ.ವಿ. ನೋಡಲು ಬಯಸಿದರೆ ಅವರು ಇಷ್ಟ ಪಡುವ ಚಾನೆಲ್ ಹಾಕಿ ತೋರಿಸಬಹುದು.

ಹಿರಿಯರ ಅನುಭವ ಅಗಾಧವಾದದ್ದು. ಆಗಾಗ ಅವರಲ್ಲಿ ಮಾತನಾಡಿಸಿ ಅವರ ಹಿಂದಿನ ನೆನಪುಗಳನ್ನು ಕೆದಕಿ ಅವರ ಅನುಭವಗಳನ್ನು ಹಂಚಿಕೊಳ್ಳಬಹುದು. ಪಾಠ ಕಲಿಯಬಹುದು. ಆದರೆ ಹೇಗೋ ಹಿರಿಯರು ಮನೆಯಲ್ಲಿ ಇದ್ದಾರೆಂದು ಅವರನ್ನು ರೇಷನ್ ಅಂಗಡಿಗೆ ಕಳುಹಿಸಿ ಕ್ಯೂ, ಸೀಮೆ ಎಣ್ಣೆ ಕ್ಯೂ, ಕರೆಂಟ್ ಬಿಲ್ಲು ಕಟ್ಟುವ ಕ್ಯೂ, ಬ್ಯಾಂಕಿನ ಕ್ಯೂ ಗಳಲ್ಲಿ ನಿಲ್ಲಲ್ಲು ಹೇಳುವ ಮಂದಿ ಬಹಳ ಇರುತ್ತಾರೆ. ಇದಕ್ಕೆ ಬದಲಾಗಿ ನಾವೇ ಹೋಗಿ ಅವರಿಗೆ ವಿಶ್ರಾಂತಿ ನೀಡಿ ಅವರ ಬದುಕಿಗೆ ನಾವು ಬೆಳಕಾಗೋಣ. ತೀರಾ ಕಾಯಿಲೆಯಿಂದ ಹಾಸಿಗೆ ಹಿಡಿದಾಗ, ಜೀವನದ ಕೊನೆಯ ಹಂತದಲ್ಲಿರುವಾಗ ಅವರನ್ನು ಹೊರ ಕೋಣೆಗೆ ಎಳೆದು ತಂದು ಹಾಕದೆ ಅವರಿಗೆ ನೆಮ್ಮದಿ ನೀಡುವ, ಅವರು ಇಷ್ಟ ಪಡುವಲ್ಲಿಯೇ ಇರಿಸಿ, ಅವರಿಗೆ ಇಂಪಾಗುವ ಸಂಗೀತ, ಇತರ ಎಲ್ಲಾ ಸೌಕರ್ಯಗಳನ್ನು ಒದಗಿಸಿ ಅವರ ಅಂತಿಮ ಕ್ಷಣಗಳನ್ನು ಕೂಡಾ ನಾವು ಅವರೊಂದಿಗೆ ಇದ್ದೇವೆ, ಅವರನ್ನು ಇಷ್ಟ ಪಡುತ್ತಿದ್ದೇವೆ ಎಂಬುದನ್ನು ತೋರಿಸಿದರೆ ಅವರು ನೆಮ್ಮದಿಯಿಂದ ಜೀವನ ಕಳೆಯುತ್ತಾರೆ. ಜೀವನವೆಂಬ ಮರದಲ್ಲಿ ನಾವು ಇಂದು ಹಸಿರು ಎಲೆ, ಆದರೆ ಮುಂದೆ ನಾವು ಕೂಡಾ ಉದುರುವ ಹಣ್ಣು ಎಲೆ ಆಗುತ್ತೇವೆ ಎಂಬುದನ್ನು ನಾವು ಮರೆಯಬಾರದು. ನಾವು ಹಿರಿಯರನ್ನು ಚೆನ್ನಾಗಿ ನೋಡಿಕೊಂಡರೆ ಮುಂದೆ ನಮ್ಮನ್ನು ನೋಡಿಕೊಳ್ಳುವವರು ಇನ್ನೊಬ್ಬರು ಇದ್ದಾರೆ ಎಂಬುದನ್ನು ಮರೆಯಬಾರದು. ಜೀವನ ನಿಂತ ನೀರಲ್ಲಿ ಕಾಲ ನಮಗೂ ಬರುತ್ತೆ ಅನ್ನುವುದನ್ನು ಮರೆಯಬಾರದು. ಹಿರಿಯರೆ ಸೇವೆ, ದೇವರ ಸೇವೆ. ನಮಗೆ ಕಣ್ಣಿಗೆ ಕಾಣುವ ದೇವರೇ ಹಿರಿಯರು. ಅವರ ಕಷ್ಟ ಸುಖಗಳಲ್ಲಿ ನಾವೆಲ್ಲರೂ ಪಾಲ್ಗೊಳ್ಳೋಣ. ಅವರ ಆಶೀರ್ವಾದ ನಮ್ಮನ್ನು ಯಾವಾಗಲೂ ಕಾಪಾಡುತ್ತದೆ.

ಈ ಸಂದರ್ಭದಲ್ಲಿಹಿರಿಯರಲ್ಲಿಯೂ ನಾವು ಕೇಳಿಕೊಳ್ಳುವುದೇನೆಂದರೆ ನೀವು ನಮ್ಮನ್ನು ಈ ದಿನ ಹರಸಿ ಆಶೀರ್ವದಿಸಿ ಎಂದು ಕೇಳಿಕೊಳ್ಳುತ್ತಾ. ನಿಮಗೆ ನಮ್ಮೆಲ್ಲರ ಪ್ರೀತಿಪೂರ್ವಕ ನಮನಗಳು.

ಲೇಖನ: ಕೋಟಿಯಪ್ಪ ಪೂಜಾರಿ, ಸೇರ.ಎಂ.ಎ.ಬಿ.ಎಡ್

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.