ಜೀವ ಉಳಿಸುವ ಮಾನವೀಯ ಕಾರ್ಯದಲ್ಲಿ ತೊಡಗಿಕೊಳ್ಳಿ:ಬಸ್ರೂರು ರಾಜೀವ್ ಶೆಟ್ಟಿ

Advt_Headding_Middle
Advt_Headding_Middle

ವಿಪತ್ತುಗಳು ಯಾವಾಗ ಸಂಭವಿಸುತ್ತವೆ ಎಂದು ಹೇಳಲು ಸಾಧ್ಯವಿಲ್ಲ. ಮುನ್ನೆಚ್ಚರಿಕೆಗಾಗಿ ಒಂದು ತಂಡವನ್ನು ಕಟ್ಟಿಕೊಂಡು ಜೀವ ಉಳಿಸುವ ಮಾನವೀಯ ಕಾರ್ಯದಲ್ಲಿ ತೊಡಗಿಕೊಳ್ಳಿ ಎಂದು ರೆಡ್ ಕ್ರಾಸ್ ಸಂಸ್ಥೆಯ ಕರ್ನಾಟಕ ರಾಜ್ಯ ಶಾಖೆಯ ಚಯರ್‌ಮೆನ್ ಹಾಗೂ ರಾಷ್ಟ್ರ ಶಾಖೆ ನವದೆಹಲಿಯ ಆಡಳಿತ ಮಂಡಳಿಯ ಸದಸ್ಯ ಬಸ್ರೂರು ರಾಜೀವ್ ಶೆಟ್ಟಿ ಅಭಿಪ್ರಾಯಪಟ್ಟರು. ಅವರು ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜಿನ ಯುವ ರೆಡ್ ಕ್ರಾಸ್ ಘಟಕದ ವತಿಯಿಂದ ಹಮ್ಮಿಕೊಂಡ ಮೂರು ದಿನಗಳ ಅಂತರ್ ಕಾಲೇಜು ಮಟ್ಟದ ವಿಪತ್ತು ನಿರ್ವಹಣಾ ತರಬೇತಿ ಶಿಬಿರವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಎಲ್ಲಿಯೇ ವಿಪತ್ತುಗಳು ಸಂಭವಿಸಿದರೂ ತಾನು ಸೇವೆಗೆ ಸದಾ ಸಿದ್ಧ ಎನ್ನುವುದಕ್ಕೆ ಬದ್ಧರಾಗಿ ಇಂತಹ ಶಿಬಿರಗಳಲ್ಲಿ ತೊಡಗಿಕೊಳ್ಳಿ. ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜಿನ ಯುವ ರೆಡ್ ಕ್ರಾಸ್ ಘಟಕ ಇಂತಹ ಶಿಬಿರಗಳನ್ನು ಆಯೋಜಿಸುವ ಮೂಲಕ ದೇಶ ರಕ್ಷಣೆಗೆ ಬದ್ಧವಾಗಿದೆ ಎಂದು ಘಟಕದ ಕಾರ್ಯ ವೈಖರಿಯನ್ನು ಶ್ಲಾಘಿಸಿದರು.ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ನೆಹರೂ ಮೆಮೋರಿಯಲ್ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಪ್ರೊ. ಎಂ ಬಾಲಚಂದ್ರ ಗೌಡ ಮಾತನಾಡಿ, ಎನ್ನೆಂಸಿಯ ವಿದ್ಯಾರ್ಥಿಗಳಿಗೆ ಸಿಗುವಷ್ಟು ಅವಕಾಶ ಬೇರೆ ಎಲ್ಲೂ ಸಿಗುವುದಿಲ್ಲ. ಇಲ್ಲಿ ಸಿಕ್ಕ ತರಬೇತಿಯನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ, ವಿಪತ್ತು ಬಂದ ನಂತರ ಎಚ್ಚೆತ್ತುಕೊಳ್ಳುವುದಕ್ಕಿಂತ ಬರುವ ಮೊದಲು ಏನು ಮಾಡಬೇಕು ಎಂಬ ಆಲೋಚನೆಯೊಂದಿಗೆ ಶಿಬಿರವನ್ನು ಯಶಸ್ವಿಗೊಳಿಸಿ ಎಂದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಕೆವಿಜಿ ಕಾನೂನು ಕಾಲೇಜಿನ ಪ್ರಾಂಶುಪಾಲ ಉದಯಕೃಷ್ಣ ಮಾತನಾಡಿ, ಮಾನವೀಯತೆಯನ್ನು ಕಳೆದುಕೊಳ್ಳುತ್ತಿರುವ ಇಂದಿನ ದಿನಗಳಲ್ಲಿ ವಿಪತ್ತು ಸಂಭವಿಸಿದಾಗ ರಕ್ಷಣೆಯಲ್ಲಿ ತೊಡಗಿಕೊಳ್ಳಲು ತಯಾರಿ ನಡೆಸುವ ಶಿಬಿರವನ್ನು ಹಮ್ಮಿಕೊಂಡಿರುವುದು ಶ್ಲಾಘನೀಯ, ಇದು ಕ್ರಿಯಾಶೀಲ ವಿಚಾರವನ್ನು ತಿಳಿಸುವ ಪ್ರಯತ್ನ ಎಂದರು.
ದ.ಕ ಜಿಲ್ಲಾ ವಿಪತ್ತು ನಿರ್ವಹಣಾ ಉಪಸಮಿತಿಯ ಮಾಜಿ ಚಯರ್‌ಮನ್ ಹಾಗೂ ಸಂಪನ್ಮೂಲ ವ್ಯಕ್ತಿ ವೇಣುಶರ್ಮ ಮಂಗಳೂರು ಮಾತನಾಡಿ, ರೆಡ್‌ಕ್ರಾಸ್ ಸಂಸ್ಥೆಯಲ್ಲಿ ಅಪವಾದವೆಂಬುದಿಲ್ಲ, ಇಂತಹ ಶಿಬಿರಗಳಲ್ಲಿ ತೊಡಗಿಸಿಕೊಂಡ ನೀವು ಮುಂದಿನ ದಿನಗಳಲ್ಲಿ ನಿಮ್ಮ ಭವಿಷ್ಯವನ್ನು ನೀವು ಸರಿಯಾದ ರೀತಿಯಲ್ಲಿ ನಿರ್ಮಾಣ ಮಾಡಿಕೊಳ್ಳುತ್ತೀರಿ, ಗೂಗಲ್ ಮತ್ತು ವಾಟ್ಸಾಪ್‌ನಿಂದ ಎಷ್ಟು ದೂರ ಇರುತ್ತೀರೋ ಅಷ್ಟು ಬದುಕು ಚೆನ್ನಾಗಿರುತ್ತದೆ ಎಂದರು. ಕಾರ್ಯಕ್ರಮಾಧಿಕಾರಿ, ಶಿಬಿರ ಸಂಯೋಜಕರಾದ ಡಾ. ಅನುರಾಧಾ ಕುರುಂಜಿ ಪ್ರಾಸ್ತಾವಿಕವಾಗಿ ಮಾತನಾಡಿ, ಪ್ರಕೃತಿ ವಿಕೋಪಗಳು ಸಂಭವಿಸಿದಾಗ ತನ್ನ ರಕ್ಷಣೆಯೊಂದಿಗೆ ಇತರರ ಸೇವೆಗೆ ತಾನು ಹೇಗೆ ಸಿದ್ಧತೆ ಮಾಡಿಕೊಳ್ಳಬೇಕು ಎನ್ನುವುದನ್ನು ತಿಳಿದುಕೊಂಡಾಗಲೇ ಸೇವೆ ಮಾಡಲು ಸಾಧ್ಯ. ಹಾಗಾಗಿ ಮಾನಸಿಕವಾಗಿ ತಯಾರಿ ಮಾಡಿಕೊಳ್ಳಲು ಇಂತಹ ಶಿಬಿರಗಳು ಸಹಾಯಕ ಎನ್ನುವ ನಿಟ್ಟಿನಲ್ಲಿ ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಷನ್‌ನ ಅಧ್ಯಕ್ಷರಾದ ಡಾ. ಕೆ ವಿ ಚಿದಾನಂದ ಹಾಗೂ ಕಾರ್ಯನಿರ್ವಾಹಕ ನಿರ್ದೇಶಕರಾದ ಆರ್ಕಿಟೆಕ್ಟ್ ಅಕ್ಷಯ್ ಕೆ ಸಿ ಹಾಗೂ ಆಡಳಿತ ಮಂಡಳಿಯವರ ಸಂಪೂರ್ಣ ಸಹಕಾರದೊಂದಿಗೆ ಸತತ ನಾಲ್ಕನೇ ಬಾರಿಗೆ ಈ ಶಿಬಿರವನ್ನು ಆಯೋಜಿಸಲು ಸಾಧ್ಯವಾಗಿದೆ. ತಾಲೂಕಿನ ವಿವಿಧ ಕಾಲೇಜುಗಳ ೫೩ ವಿದ್ಯಾರ್ಥಿಗಳು ಹಾಗೂ ಎಂಟು ಮಂದಿ ತರಬೇತುದಾರರು ಶಿಬಿರದಲ್ಲಿ ಭಾಗವಹಿಸುತ್ತಿದ್ದಾರೆ ಎಂದರು. ಘಟಕ ನಾಯಕರಾದ ದೀಕ್ಷಿತ್ ಕೆ ಪಿ ಹಾಗೂ ನಳಿನಿ ಎಂ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸ್ಮಿತಾ ಮತ್ತು ತೃಪ್ತಿ ಪ್ರಾರ್ಥಿಸಿದ ಕಾರ್ಯಕ್ರಮದಲ್ಲಿ ಭುವನಾ ಸ್ವಾಗತಿಸಿ, ರಶ್ಮಿ ವಂದಿಸಿದರು. ಚೈತ್ರಾ ಎಂ ಪಿ ಕಾರ್ಯಕ್ರಮ ನಿರೂಪಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.