ನೀತಿ ಸಂಹಿತೆ ಉಲ್ಲಂಘಿಸದೆ ಚುನಾವಣೆ ನಡೆಯಲಿ: ರಾಜಕೀಯ ಪಕ್ಷಗಳು ಸಹಕಾರ ನೀಡುವಂತೆ ಎ.ಸಿ. ಮನವಿ

Advt_Headding_Middle
Advt_Headding_Middle

2019 ನೇ ಲೋಕಸಭಾ ಚುನಾವಣೆಯಲ್ಲಿ ಯಾವುದೇ ನೀತಿ ಸಂಹಿತೆ ಉಲ್ಲಂಘನೆ ಆಗುವುದು ಬೇಡ. ಎಲ್ಲಾ ಪಕ್ಷಗಳು ನೀತಿ ಸಂಹಿತೆ ಪಾಲಿಸಿಕೊಂಡು ಚುನಾವಣೆ ಎದುರಿಸಬೇಕು. ಎಲ್ಲಿಯಾದರೂ ನೀತಿ ಸಂಹಿತೆ ಉಲ್ಲಂಘನೆ ಆದರೆ ಯಾವ ಪಕ್ಷ ಎಂಬುದನ್ನು ನೋಡದೆ ತಕ್ಷಣ ಕ್ರಮ ಕೈಗೊಳ್ಳಲಾಗುವುದು ಎಂದು ಸಹಾಯಕ ಚುನಾವಣಾಧಿಕಾರಿಯಾಗಿರುವ ಸಹಾಯಕ ಕಮೀಷನರ್ ಹೆಚ್.ಕೆ.ಕೃಷ್ಣಮೂರ್ತಿ ತಿಳಿಸಿದ್ದಾರೆ.

ಅವರು ಮಾ.11ರಂದು ಸಹಾಯಕ ಕಮೀಷನರ್ ಕೋರ್ಟ್ ಹಾಲ್‌ನಲ್ಲಿ ರಾಜಕೀಯ ಪಕ್ಷದವರಿಗೆ ಚುನಾವಣೆ ನೀತಿ ಸಂಹಿತೆಯನ್ನು ವಿವರಿಸಿದರು. ನೀತಿ ಸಂಹಿತೆ ಉಲ್ಲಂಘನೆ ಕುರಿತು ಕೆಲವೊಮ್ಮೆ ನಾವು ಕ್ರಮ ಕೈಗೊಳ್ಳುವಾಗ ಒಂದು ಕಡೆ ಪರ ಎಂದು ಕಾಣಿಸಬಹುದು. ಆದರೆ ಎಲ್ಲಿಯೂ ಪಾರ್ಷಿಯಲಿಟಿ ಮಾಡುವುದಿಲ್ಲ ಎಂದ ಅವರು ‘ಸಮ್ ಟೈಮ್ ನಾವು ಟಫ್’ ಆಗಿರುತ್ತೇವೆ. ಎಲ್ಲಿಯೂ ಇನ್‌ಫ್ಲುಯೆನ್ಸ್ ಮಾಡಲು ಹೋಗಬೇಡಿ. ನಮ್ಮ ಎಲ್ಲಾ ಫೋನ್‌ಗಳು ಟ್ರ್ಯಾಕಿಂಗ್ ಆಗುತ್ತವೆ. ಕಳೆದ ವಿಧಾನಸಭಾ ಚುನಾವಣೆ ರೀತಿಯಲ್ಲೇ ಈ ಭಾರಿ ಬ್ಯಾನರ್, ಕಟೌಟ್ ಮುಕ್ತ ಚುನಾವಣೆ ನಡೆಸಲು ಸಹಕಾರ ನೀಡುವಂತೆ ರಾಜಕೀಯ ಪಕ್ಷದ ಪ್ರತಿನಿಧಿಗಳಿಗೆ ಮನವಿ ಮಾಡಿದರು.

ಮತಗಟ್ಟೆಗಳಿಗೆ ಸಿಸಿ ಟಿವಿ: ಮತಗಟ್ಟೆಗಳಿಗೆ ಸಿಸಿ ಟಿವಿ ಹಾಕುವ ಪ್ರಕ್ರಿಯೆ ಇದೆ. ಆದರೆ ಈ ಕುರಿತು ಸೂಚನೆ ಬಂದಿಲ್ಲ. ಚುನಾವಣಾ ಆಯೋಗ ದಿನದಿಂದ ದಿನಕ್ಕೆ ಬೆಳವಣಿಗೆ ತಂದಂತೆ ಅನಿವಾರ್ಯವಾಗಿ ಸಿಸಿ ಟಿವಿ ಹಾಕುವ ಸಂದರ್ಭ ಬರುವ ಸಾಧ್ಯತೆ ಇದೆ ಎಂದು ಚುನಾವಣಾಧಿಕಾರಿ ಹೇಳಿದರು.

ಫೇಕ್ ನ್ಯೂಸ್ ಹಾಕುವಂತಿಲ್ಲ: ಚುನಾವಣೆಯ ಹಿತದೃಷ್ಟಿಯಿಂದ ಯಾವುದೇ ಕಾರಣಕ್ಕೂ ಫೇಕ್ ನ್ಯೂಸ್ ಹಾಕುವಂತಿಲ್ಲ. ಇಲ್ಲಿ ಪ್ರತಿಯೊಂದನ್ನು ದಾಖಲಿಸಲಾಗುತ್ತದೆ ಎಂದು ಚುನಾವಣಾಧಿಕಾರಿಗಳು ಹೇಳಿದರು.

ಪ್ಲೈಯಿಂಗ್ ಸ್ಕ್ವಾಡ್ ಬಂದಾಗ ಗೌರವಿಸಿ: ಚುನಾವಣೆಗೆ ಸಂಬಂಧಿಸಿ ಪಕ್ಷ ಕಾರ್ಯಕ್ರಮ ಅಥವಾ ಇನ್ನೇನಾದರೂ ಸಭೆ ಸಮಾರಂಭಗಳಿಗೆ ನಮ್ಮ ಪ್ಲೈಯಿಂಗ್ ಸ್ಕ್ವಾಡ್ ಬಂದಾಗ ಅವರನ್ನು ಗೌರವಿಸಿ. ಅವರು ನಿಮ್ಮಲ್ಲಿ ಏನು ಮಾತನಾಡುವುದಿಲ್ಲ. ನಿಮ್ಮ ಕಾರ್ಯಕ್ರಮದ ವಿಡಿಯೋ ದಾಖಲಿಸುತ್ತಾರೆ. ನೀವು ಎಲ್ಲಿಯಾದರೂ ನೀತಿ ಸಂಹಿತೆ ಉಲ್ಲಂಸಿದರೆ ತಕ್ಷಣ ಎಫ್.ಐ.ಆರ್ ಆಗುತ್ತದೆ. ಆ ತರ ಆಗದ ರೀತಿಯಲ್ಲಿ ನಿಮ್ಮ ಕಾರ್ಯಕ್ರಮ ನಡೆಸಿ ಎಂದು ಹೆಚ್.ಕೆ.ಕೃಷ್ಣ ಮೂರ್ತಿ ಹೇಳಿದರು.

ಸಿಂಗಲ್ ವಿಂಡೋ ವ್ಯವಸ್ಥೆ: ಕಳೆದ ವಿಧಾನಸಭಾ ಚುನಾವಣೆಯಂತೆ ಈ ಬಾರಿಯೂ ಸಿಂಗಲ್ ವಿಂಡೋ ಸಿಸ್ಟಮ್ ತೆರೆಯಲಾಗಿದೆ. ಸಭೆ ಸಮಾರಂಭಗಳಿಗೆ ಅನುಮತಿ ಇಲ್ಲಿ ನೀಡಲಾಗುತ್ತದೆ. ಸೌಂಡ್ ಸಿಸ್ಟಮ್ ಅನುಮತಿಗೆ ಸಂಬಂಧಪಟ್ಟ ಇಲಾಖೆಯನ್ನು ಸಂಪರ್ಕಿಸಬೇಕು ಎಂದು ಚುನಾವಣಾಧಿಕಾರಿಗಳು ತಿಳಿಸಿದರು.

ಮದುವೆಗೆ ಅನುಮತಿ ಬೇಡ, ಮಾಹಿತಿ ಬೇಕು: ಮದುವೆ ಸಮಾರಂಭಕ್ಕೆ ಚುನಾವಣಾ ನೀತಿ ಸಂಹಿತೆ ಅನ್ವಯಿಸುವ ಹಿನ್ನಲೆಯಲ್ಲಿ ಇಲ್ಲಿ ಅನುಮತಿ ಬೇಕಾಗಿಲ್ಲ. ಆದರೆ ಮಾಹಿತಿ ತಿಳಿಸಬೇಕು ಎಂದ ಸಹಾಯಕ ಚುನವಣಾಧಿಕಾರಿಗಳು ಅಲ್ಲಿ ಯಾವುದೇ ಪಕ್ಷದ ಪ್ರಚಾರ ಪರ ಕಾರ್ಯಕ್ರಮ ನಡೆಯಬಾರದು ಎಂದರು.

ಬ್ಯಾನರ್, ಕಟೌಟ್ ಮುಕ್ತ ಚುನಾವಣೆಗೆ ಅವಕಾಶ ಮಾಡಿಕೊಡಿ: ಕಳೆದ ವಿಧಾನಸಭಾ ಚುನಾವಣೆಗೆ ಸಂಬಂಧಿಸಿ ಪುತ್ತೂರಿನಲ್ಲಿ ಎಲ್ಲಾ ರಾಜಕೀಯ ಪಕ್ಷಗಳು ಬ್ಯಾನರ್, ಕಟೌಟ್ ಮುಕ್ತ ಚುನಾವಣೆಗೆ ಅವಕಾಶ ಮಾಡಿಕೊಟ್ಟಿದ್ದಾರೆ. ಲೋಕಸಭಾ ಚುನಾವಣೆಯಲ್ಲೂ ಅದೇ ರೀತಿ ಅವಕಾಶ ಮಾಡಿಕೊಡುವಂತೆ ಚುನಾವಣಾಧಿಕಾರಿ ವಿನಂತಿಸಿದರು. ಬ್ಯಾನರ್ ಕಟೌಟ್ ಅಳವಡಿಸಬಾರದು ಎಂಬ ನಿಯಮ ಇಲ್ಲ. ಆದರೆ ಅನುಮತಿ ಪಡೆದು ನಿಮ್ಮ ಸಭಾ ಕಾರ್ಯಕ್ರಮದಲ್ಲಿ ಅಳವಡಿಸಬಹುದು. ಕಾರ್ಯಕ್ರಮ ಮುಗಿದ ತಕ್ಷಣ ನೀವೇ ಅದನ್ನು ತೆರವುಗೊಳಿಸಬೇಕು. ನೀವು ತೆಗೆಯದಿದ್ದರೆ ನಾವು ಅದನ್ನು ತೆಗೆಸಿ ಅದರ ಹಣವನ್ನು ನಿಮ್ಮಿಂದ ವಸೂಲಿ ಮಾಡಬೇಕಾಗುತ್ತದೆ. ಇನ್ನೂ ಕೆಲವು ಬ್ಯಾನರ್ ಬಂಟಿಂಗ್ಸ್ ಅಳವಡಿಸಿ ಗೊಂದಲ ಉಂಟಾಗುವ ಬದಲು ಅದನ್ನು ಅಳವಡಿಸದೆ ಚುನಾವಣೆ ಎದುರಿಸುವ ಕುರಿತು ಸಹಕಾರ ನೀಡಿ ಎಂದು ಸಹಾಯಕ ಕಮೀಷನರ್ ರಾಜಕೀಯ ಪಕ್ಷದ ಪ್ರತಿನಿಧಿಗಳಿಗೆ ಮನವಿ ಮಾಡಿದರು. ಸಭೆಯಲ್ಲಿ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೃಷ್ಣಪ್ರಸಾದ್ ಅಳ್ವ, ಬಿಜೆಪಿ ಗ್ರಾಮಾಂತರ ಮಂಡಲದ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ, ನಗರ ಮಂಡಲದ ಪ್ರಧಾನ ಕಾರ್ಯದರ್ಶಿ ರಾಮ್‌ದಾಸ್ ಹಾರಾಡಿ, ಶಂಭು ಭಟ್, ವಿಟ್ಲ ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮುರಳಿಧರ ರೈ ಮಠಂತಬೆಟ್ಟು, ತಾ.ಪಂ ಸದಸ್ಯ ಸಾಜ ರಾಧಾಕೃಷ್ಣ ಅಳ್ವ ವಿವಿಧ ವಿಚಾರಗಳ ಕುರಿತು ಮಾಹಿತಿ ಪಡೆದುಕೊಂಡರು.

ಸಿವಿಜಿಲ್ APP ದೂರಿಗೆ 90 ನಿಮಿಷದಲ್ಲಿ ಕ್ರಮ
‘ಚುನಾವಣಾ ಅಕ್ರಮಗಳ ಬಗ್ಗೆ ಸಾರ್ವಜನಿಕರು ಮಾಹಿತಿ ನೀಡಲು ಚುನಾವಣಾ ಆಯೋಗ ‘ಸಿವಿಜಿಲ್’ ಮೊಬೈಲ್ ಆಪ್ ಲೋಕಸಭಾ ಚುನಾವಣೆಗೆ ಜಾರಿ ಮಾಡಿದೆ. ಈ ಹಿಂದೆ ಬೆಂಗಳೂರಿನಲ್ಲಿ ಪ್ರಾಯೋಗಿಕವಾಗಿ ಇದರ ಕೆಲಸ ನಡೆದಿತ್ತು. ಇದೀಗ ಲೋಕಸಭಾ ಚುನಾವಣೆಯಲ್ಲಿ ಇದನ್ನು ಜಾರಿಗೊಳಿಸಲಾಗಿದ್ದು, ಈ ಆಪ್‌ನಲ್ಲಿ ಅಕ್ರಮದ ಫೋಟೋ, ವೀಡಿಯೋ ಅಪ್ ಲೋಡ್ ಮಾಡಿದ 90 ನಿಮಿಷಗಳಲ್ಲಿ ಅಧಿಕಾರಿಗಳು ತೆಗೆದುಕೊಂಡ ಕ್ರಮದ ಬಗ್ಗೆ ಮಾಹಿತಿಯೂ ಲಭಿಸಲಿದೆ. ಇಲ್ಲಿ ದೂರು ಕೊಡುವವನು ಕೂಡಾ ಜಾಗರುಕತೆಯಿಂದ ದೂರು ನೀಡಬೇಕು. – ಹೆಚ್.ಕೆ.ಕೃಷ್ಣಮೂರ್ತಿ ಸಹಾಯಕ ಚುನಾವಣಾಧಿಕಾರಿಗಳು

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.