ಬಿ.ಜೆ.ಪಿ. : ನಳಿನ್, ಶೋಭಾ, ಡಿ.ವಿ. ಹೆಸರು ಫೈನಲ್, ಕಾಂಗ್ರೆಸ್ : ರೈ, ಸೊರಕೆ, ಬಿ.ಕೆ., ಮೋನು, ಡಾ|ಎಂ.ಎನ್‌ರಲ್ಲಿ ಯಾರು?

Advt_Headding_Middle
Advt_Headding_Middle

 

ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ರಾಜ್ಯ ಬಿಜೆಪಿಯ ಕೋರ್ ಕಮಿಟಿ ಸಭೆ ಮಾ.೧೭ರಂದು ಮಧ್ಯಾಹ್ನ ಬೆಂಗಳೂರಿನಲ್ಲಿ ನಡೆದಿದ್ದು ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ನಳಿನ್ ಕುಮಾರ್ ಕಟೀಲ್, ಉಡುಪಿ-ಚಿಕ್ಕಮಗಳೂರು ಅಭ್ಯರ್ಥಿಯಾಗಿ ಶೋಭಾ ಕರಂದ್ಲಾಜೆ ಮತ್ತು ಬೆಂಗಳೂರು ಉತ್ತರದ ಅಭ್ಯರ್ಥಿಯಾಗಿ ಡಿ.ವಿ.ಸದಾನಂದ ಗೌಡರವರ ಹೆಸರನ್ನು ಅಂತಿಮಗೊಳಿಸಿ ಹೈಕಮಾಂಡ್ ಗೆ ರವಾನಿಸಲು ನಿರ್ಧರಿಸಿದೆ.

ರಾಜ್ಯದ ೨೮ ಲೋಕಸಭಾ ಕ್ಷೇತ್ರದ ಅಭ್ಯರ್ಥಿಗಳ ಆಯ್ಕೆಯ ಬಗ್ಗೆ ಕರ್ನಾಟಕ ಬಿಜೆಪಿಯ ಕೋರ್ ಕಮಿಟಿ ಸಭೆಯಲ್ಲಿ ಚರ್ಚೆ ನಡೆಸಲಾಗಿದ್ದು ದಕ್ಷಿಣ ಕನ್ನಡ, ಉಡುಪಿ-ಚಿಕ್ಕಮಗಳೂರು ಮತ್ತು ಬೆಂಗಳೂರು ಉತ್ತರ ಕ್ಷೇತ್ರ ಸೇರಿದಂತೆ ಬಹುತೇಕ ಕ್ಷೇತ್ರಗಳಲ್ಲಿ ಹಾಲಿ ಸಂಸದರನ್ನೇ ಮತ್ತೆ ಕಣಕ್ಕಿಳಿಸಲು ಶಿಫಾರಸ್ಸು ಮಾಡಿದೆ. ನಳಿನ್ ಕುಮಾರ್, ಶೋಭಾ ಕರಂದ್ಲಾಜೆ ಮತ್ತು ಡಿ.ವಿ.ಸದಾನಂದ ಗೌಡರವರ ಕ್ಷೇತ್ರದಲ್ಲಿ ಇತರ ಬಿಜೆಪಿ ನಾಯಕರ ಹೆಸರು ಕೇಳಿ ಬರುತ್ತಿತ್ತಾದರೂ ಇದೀಗ ರಾಜ್ಯ ಕಮಿಟಿ ಈ ಮೂವರ ಹೆಸರನ್ನು ಮಾತ್ರ ದೆಹಲಿಗೆ ಕಳುಹಿಸಿಕೊಡಲು ತೀರ್ಮಾನಿಸಿದೆ. ರಾಷ್ಟ್ರೀಯ ಬಿಜೆಪಿ ನಾಯಕರು ಅಂತಿಮಗೊಳಿಸುವ ಅಭ್ಯರ್ಥಿಗಳ ಹೆಸರನ್ನು ಒಪ್ಪಿಕೊಳ್ಳುವುದಾಗಿಯೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ. ದೆಹಲಿಯಲ್ಲಿ ನಡೆಯುವ ಬಿಜೆಪಿಯ ಕೇಂದ್ರೀಯ ಚುನಾವಣಾ ಸಮಿತಿಯ ಸಭೆಯಲ್ಲಿ ಅಭ್ಯರ್ಥಿಗಳ ಹೆಸರು ಅಂತಿಮಗೊಳ್ಳಲಿದೆ.
ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಪ್ರಕಟಣೆ ಇನ್ನೆರಡು ದಿನ ವಿಳಂಬವಾಗುವ ಸಾಧ್ಯತೆ ಇದೆ. ಮಂಗಳವಾರ ಪಟ್ಟಿ ಪ್ರಕಟವಾಗಬಹುದೆಂದು ಹೇಳಲಾಗುತ್ತಿದೆ.
೧೯೭೭ರಿಂದ ಇದುವರೆಗೆ ಮಂಗಳೂರು ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್‌ನಿಂದ ಜನಾರ್ದನ ಪೂಜಾರಿ ಮತ್ತು ವೀರಪ್ಪ ಮೊಯಿಲಿಯವರಿಬ್ಬರೇ ಅಭ್ಯರ್ಥಿಯಾಗಿ ಕಾಣಿಸಿಕೊಂಡಿದ್ದರು. ಇದರಲ್ಲಿ ಜನಾರ್ದನ ಪೂಜಾರಿಯವರು ೪ ಬಾರಿ ಗೆದ್ದು ೫ ಬಾರಿ ಸೋತಿದ್ದರೆ, ವೀರಪ್ಪ ಮೊಯಿಲಿಯವರು ೨ ಬಾರಿಯೂ ಸೋತಿದ್ದರು. ಈ ಬಾರಿ ಇವರಿಬ್ಬರನ್ನು ಹೊರತು ಪಡಿಸಿ ಬೇರೆ ವ್ಯಕ್ತಿ ಅಭ್ಯರ್ಥಿಯಾಗುವುದು ನಿಶ್ಚಿತ. ಮಾಜಿ ಸಚಿವ ಬಿ.ರಮಾನಾಥ ರೈ, ಮಾಜಿ ಸಚಿವ ವಿನಯಕುಮಾರ್ ಸೊರಕೆ, ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಡಾ| ಎಂ.ಎನ್.ರಾಜೇಂದ್ರ ಕುಮಾರ್, ಅಲ್ಪಸಂಖ್ಯಾತ ನಾಯಕರಾಗಿರುವ ಯು.ಕೆ.ಮೋನು ಹಾಗೂ ಎ.ಐ.ಸಿ.ಸಿ.ಪ್ರಧಾನ ಕಾರ್ಯದರ್ಶಿಯಾಗಿ ಬಹುಕಾಲ ದೆಹಲಿ ರಾಜಕಾರಣದಲ್ಲಿ ಪಳಗಿರುವ ಬಿ.ಕೆ.ಹರಿಪ್ರಸಾದ್ ಇವರಲ್ಲಿ ಒಬ್ಬರು ಅಭ್ಯರ್ಥಿಯಾಗಿ ಬರುವುದು ಖಂಡಿತ. ಆದರೆ ಪೈಪೋಟಿ ಹೆಚ್ಚಾಗಿರುವ ಕಾರಣ ಹೈಕಮಾಂಡ್ ಬಹು ಆಯಾಮಗಳ ಚರ್ಚೆಯ ಬಳಿಕವೇ ಅಭ್ಯರ್ಥಿ ಅಂತಿಮ ಗೊಳಿಸಲಿರುವುದರಿಂದ ಘೋಷಣೆ ವಿಳಂಬವಾಗಿದೆ. ಮಾರ್ಚ್೨೬ರಂದು ನಾಮಪತ್ರ ಸಲ್ಲಿಕೆ ಕೊನೆಗೊಳ್ಳುವುದರಿಂದ ಅದಕ್ಕಿಂತ ಮೊದಲು ಅಭ್ಯರ್ಥಿ ಘೋಷಣೆ ಆಗುತ್ತದೆ.

ಬಿಲ್ಲವ ಎಂದು ಬಲ್ಲವರಾದರೇ ಸತ್ಯಜಿತ್
ಬಂಡಾಯಕ್ಕೆ ಸಿದ್ಧತೆ
ಹಿಂದೂ ಸಂಘಟನೆಗಳ ಫೈರ್ ಬ್ರಾಂಡ್ ಆಗಿರುವ ಸತ್ಯಜಿತ್ ಸುರತ್ಕಲ್ ಈ ಬಾರಿ ಬಿಲ್ಲವ ಕೋಟಾದಡಿ ದಾಳ ಉರುಳಿಸಿದರೇ ಎಂಬ ಚರ್ಚೆಯಾಗುತ್ತಿದೆ. ಜಾತಿ ಸಂಘಟನೆಗಳಲ್ಲಿ ಸಕ್ರಿಯ ಆಗಿರದ ಸತ್ಯಜಿತ್ ಹಿಂದೂ ಸಂಘಟನೆಗಳಲ್ಲಿ ಮಾತ್ರ ಗುರುತಿಸಿಕೊಂಡವರು. ಅವರ ತಾಯಿ ಸಂಘ ಪರಿವಾರದ ಗರಡಿಯಲ್ಲಿ ಪಳಗಿ ದವರು. ಸತ್ಯಜಿತ್ ರವರೂ ಹಿಂದುತ್ವಕ್ಕಾಗಿ ಹತ್ತಾರು ಕೇಸ್ ಗೆ ಒಳಗಾದವರು. ಅವರನ್ನು ರಾಜಕೀಯವಾಗಿ ತುಳಿ ಯುವ ಷಡ್ಯಂತ್ರ ನಡೆಸಲಾಗುತ್ತಿದೆ ಎಂಬ ಕಾರಣಕ್ಕಾಗಿ ಹಿಂದುತ್ವದ ಜತೆಗೇ ಬಿಲ್ಲವ ಎಂಬ ಜಾತಿಯ ಲೇಬಲ್ ಕೂಡ ಸತ್ಯ ಜಿತ್ ಗೆ ನೀಡಲಾಗುತ್ತಿದೆ. ಸಂಘಟನೆಗಳು,ಅದರಲ್ಲೂ ಬಿಲ್ಲವ ಯುವಕರು ಬಿಜೆಪಿಗಾಗಿ ಹೋರಾಡುತ್ತಿದ್ದಾರೆ, ಆದರೆ ರಾಜಕೀಯ ಸ್ಥಾನಮಾನ ನೀಡುವಾಗ ಬಿಲ್ಲವರನ್ನು ಕಡೆಗಣಿಸಲಾಗುತ್ತಿದೆ ಎಂಬ ಮಾತುಗಳು ಕೇಳಿ ಬರುತ್ತಿರುವಾಗಲೇ ಸತ್ಯಜಿತ್ ಸುರತ್ಕಲ್ ಹೆಸರು ಪ್ರಬಲವಾಗಿ ಕಾಣಿಸಿ ಕೊಂಡಿದೆ. ಒಂದು ವೇಳೆ ನಳಿನ್ ರಿಗೇ ಮತ್ತೊಮ್ಮೆ ಅವಕಾಶ ನೀಡಿದರೆ ಸತ್ಯಜಿತ್ ರನ್ನು ಬಂಡಾಯವಾಗಿ ಕಣಕ್ಕಿಳಿಸಲು ಚಿಂತನೆ ರೂಪಿಸಲಾಗುತ್ತಿದೆ ಎಂದು ಮಾಹಿತಿ ಲಭ್ಯವಾಗಿದೆ. ಅವಳಿ ವೀರ ಪುರುಷರಾದ ಕೋಟಿ ಚೆನ್ನಯರು ಹುಟ್ಟಿದೂರಿಗೆ ಭೇಟಿ ನೀಡಿದ್ದ ಸತ್ಯಜಿತ್ ರವರು ತಾನು ಟಿಕೆಟ್ ಆಕಾಂಕ್ಷಿ ಎಂದು ಬಹಿರಂಗ ಹೇಳಿಕೆ ನೀಡಿರುವುದು ಇದಕ್ಕೆ ಪುಷ್ಠಿ ನೀಡಿದೆ.
ಸತ್ಯಜಿತ್ ಸುರತ್ಕಲ್ ಪ್ರತಿಕ್ರಿಯೆ
ಈ ಎಲ್ಲಾ ಬೆಳವಣಿಗೆಗಳ ಬಗ್ಗೆ ಸತ್ಯಜಿತ್ ಸುರತ್ಕಲ್‌ರನ್ನು ಸಂಪರ್ಕಿಸಿ ವಿಚಾರಿಸಿದಾಗ ’‘ಟಿಕೆಟ್ ಫೈನಲ್ ಆಗಿಲ್ಲ. ಪಕ್ಷದ ಕೇಂದ್ರ ನಾಯಕರು ಪಟ್ಟಿ ಘೋಷಣೆ ಮಾಡುತ್ತಾರೆ. ಕೊನೆಯ ಕ್ಷಣದವರೆಗೆ ನನಗೆ ಟಿಕೆಟ್ ಸಿಗುತ್ತದೆಂಬ ನಿರೀಕ್ಷೆ ಇದೆ ಸಿಗದಿದ್ದರೆ ಮುಂದಿನ ಬೆಳವಣಿಗೆಯನ್ನು ಕಾದು ನೋಡಿ‘’ ಎಂದು ಪ್ರತಿಕ್ರಿಯಿಸಿದ್ದಾರೆ.

ಸತ್ಯಜಿತ್ ಸುರತ್ಕಲ್ ಪರ ಬ್ಯಾಟಿಂಗ್ ನಡೆಸಿದರೇ ಕಲ್ಲಡ್ಕ ಪ್ರಭಾಕರ ಭಟ್?
ದ.ಕ. ಕ್ಷೇತ್ರದಲ್ಲಿ ಹಾಲಿ ಸಂಸದ ನಳಿನ್ ಕುಮಾರ್ ಕಟೀಲ್ ರವರ ಬದಲಾಗಿ ಸತ್ಯಜಿತ್ ಸುರತ್ಕಲ್ ರವರನ್ನು ಕಣಕ್ಕಿಳಿಸಲು ಆರ್.ಎಸ್.ಎಸ್.ಮುಖಂಡ ಡಾ.ಪ್ರಭಾಕರ ಭಟ್ ಕಲ್ಲಡ್ಕರವರು ಒತ್ತಡ ಹೇರಿದ್ದಾರೆ ಎಂದು ಸುದ್ದಿಯಾಗಿದೆ.


೨ ಬಾರಿ ಸಂಸದರಾಗಿ ಕಾರ್ಯ ನಿರ್ವಹಿಸಿರುವ ನಳಿನ್ ರವರನ್ನು ೩ನೇ ಬಾರಿ ಕಣಕ್ಕಿಳಿಸುವ ಬಗ್ಗೆ ಹಿಂದೂ ಸಂಘಟನೆಗಳಿಂದ ವಿರೋಧ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಪ್ರಭಾಕರ ಭಟ್ ಕೊನೇಯ ಕ್ಷಣದಲ್ಲಿ ಫೀಲ್ಡ್ ಗೆ ಇಳಿದಿದ್ದು ಸತ್ಯಜಿತ್ ಪರ ಬ್ಯಾಟ್ ಬೀಸಿದ್ದಾರೆ ಎಂದು ರಾಜಕೀಯ ವಲಯದಲ್ಲಿ ಸದ್ದು ಮಾಡುತ್ತಿದೆ.ಹಿಂದು ಜಾಗರಣ ವೇದಿಕೆಯ ಪ್ರಾಂತ ಸಂಚಾಲಕರಾಗಿದ್ದು ಇದೀಗ ರಾಜ್ಯ ಬಿಜೆಪಿಯ ಹಿಂದುಳಿದ ವರ್ಗಗಳ ಮೋರ್ಛಾದ ಕಾರ್ಯದರ್ಶಿಯೂ ಆಗಿರುವ ಸತ್ಯಜಿತ್ ಸುರತ್ಕಲ್ ಪರ ಕಾರ್ಯಕರ್ತರಿಂದ ಒಲವು ವ್ಯಕ್ತವಾಗುತ್ತಿದೆ. ಅಯೋಧ್ಯೆ ಚಳುವಳಿ, ಹುಬ್ಬಳ್ಳಿಯ ಕಿತ್ತೂರು ಚೆನ್ನಮ್ಮ ಮೈದಾನದ ಹೋರಾಟದಂತಹ ಆಂದೋಲನದಲ್ಲಿ ತೊಡಗಿಸಿಕೊಂಡಿದ್ದ ಸತ್ಯಜಿತ್ ರವರಿಗೆ ಈ ಬಾರಿ ಅವಕಾಶ ಮಾಡಿಕೊಡುವಂತೆ ಪ್ರಭಾಕರ ಭಟ್ ರವರು ಮಾ.೧೬ರಂದು ಬಿಜೆಪಿ ರಾಜ್ಯಾಧ್ಯಕ್ಷರಾದ ಮಾಜಿ ಮುಖ್ಯಮಂತ್ರಿ ಬಿ.ಯಸ್.ಯಡಿಯೂರಪ್ಪರವರನ್ನು ಭೇಟಿಯಾಗಿ ಒತ್ತಾಯಿಸಿದ್ದಾರೆ ಎಂಬ ವಿಚಾರ ವೈರಲ್ ಆಗಿದೆ. ನಳಿನ್ ರವರು ಸಂಸದರಾಗಲು ಪ್ರಮುಖ ಕಾತಣಕರ್ತರಾಗಿದ್ದು ಆ ಬಳಿಕದ ಚುನಾವಣೆಯಲ್ಲಿ ಬಹುತೇಕ ಮೌನಕ್ಕೆ ಶರಣಾಗಿದ್ದ ಪ್ರಭಾಕರ ಭಟ್ ರವರು ಸತ್ಯಜಿತ್ ಪರ ಒತ್ತಡ ಹೇರಿz ಹೌದಾದಲ್ಲಿ ದ.ಕ. ರಾಜಕೀಯ ಮತ್ತಷ್ಟು ರಂಗೇರಲಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.