ಅಗಲಿದ ಜನನಾಯಕನಿಗೆ ಕಣ್ಣೀರ ವಿದಾಯ : ಬಾಲಚಂದ್ರ ಕಳಗಿ ಅಂತಿಮ ಸಂಸ್ಕಾರ


ನಿನ್ನೆ ಮಡಿಕೇರಿ ಸಮೀಪ ಅಪಘಾತದಲ್ಲಿ ದುರ್ಮರಣಕ್ಕೀಡಾದ ಕೊಡಗು ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ, ಸಂಪಾಜೆ ಪಯಸ್ವಿನಿ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಬಾಲಚಂದ್ರ ಕಳಗಿಯವರ ಪಾರ್ಥಿವ ಶರೀರದ ಅಂತ್ಯಕ್ರಿಯೆ ಕೊಡಗು ಸಂಪಾಜೆಯ ಅವರ ಜಾಗದಲ್ಲಿ ಇಂದು ಮಧ್ಯಾಹ್ನ ನೆರವೇರಿತು.


ನಿನ್ನೆಯೇ ಮಡಿಕೇರಿಯಿಂದ ಮೃತದೇಹವನ್ನು ಕಳಗಿಯ ಅವರ ಮನೆಗೆ ತರಲಾಗಿತ್ತು. ರಾತ್ರಿಯಿಂದಲೇ ಜನಪ್ರವಾಹ ಇತ್ತ ಹರಿದು ಬರತೊಡಗಿತ್ತು. ಇಂದು ಬೆಳಗ್ಗಿನಿಂದ ಸಾವಿರಾರು ಸಂಖ್ಯೆಯಲ್ಲಿ ಅವರ ಅಭಿಮಾನಿಗಳು, ಹಿತೈಷಿಗಳು, ಪಕ್ಷದ ಕಾರ್ಯಕರ್ತರು, ಬಂಧುಮಿತ್ರರು ಆಗಮಿಸಿ ಅಂತಿಮ ದರ್ಶನ ಪಡೆದರು.

ತಮ್ಮ ಪ್ರೀತಿಯ ಜನನಾಯಕನ ಅಗಲಿಕೆಗಾಗಿ ಕಣ್ಣೀರು ಸುರಿಸಿದರು. ಪಕ್ಷ, ಜಾತಿ ಬೇಧ ಮರೆತು ಎಲ್ಲರೂ ಬಾಲಚಂದ್ರ ಕಳಗಿಯವರ ಅಂತಿಮ ದರ್ಶನ ಪಡೆದು ಶ್ರದ್ಧಾಂಜಲಿ ಅರ್ಪಿಸಿದರು.

 

ಮಡಿಕೇರಿ ಶಾಸಕ ಕೆ.ಜಿ.ಬೋಪಯ್ಯ, ವಿರಾಜಪೇಟೆ ಶಾಸಕ ಅಪ್ಪಚ್ಚು ರಂಜನ್, ವಿಧಾನ ಪರಿಷತ್ ಸದಸ್ಯ ಸುನಿಲ್ ಸುಬ್ರಹ್ಮಣಿ, ಕೊಡಗು ಜಿಲ್ಲಾ ಪಂಚಾಯತ್ ಅಧ್ಯಕ್ಷ ಹರೀಶ್, ಉಪಾಧ್ಯಕ್ಷೆ ಲೋಕೇಶ್ವರಿ, ಮಡಿಕೇರಿ ತಾಲೂಕು ಪಂಚಾಯತ್ ಅಧ್ಯಕ್ಷೆ ಶೋಭಾ, ಕೊಡಗು ಜಿಲ್ಲಾ ಬಿಜೆಪಿ ಭಾರತೀಶ್, ಮಾಜಿ ಅಧ್ಯಕ್ಷ ಸುಜಾ ಕುಶಾಲಪ್ಪ, ಸುಳ್ಯ ಮಂಡಲ ಬಿಜೆಪಿ ಅಧ್ಯಕ್ಷ ವೆಂಕಟ್ ದಂಬೆಕೋಡಿ, ಕೆಪಿಸಿಸಿ ಸದಸ್ಯ ಎಂ. ವೆಂಕಪ್ಪ ಗೌಡ, ಡಿಸಿಸಿ ಬ್ಯಾಂಕ್‌ನ ನಿರ್ದೇಶಕ ಕೆ.ಎಸ್.ದೇವರಾಜ್, ಟೆಲಿಕಾಂ ಸಲಹಾ ಸಮಿತಿ ಸದಸ್ಯ ವೆಂಕಟ್ ದಂಬೆಕೋಡಿ, ಬಿಜೆಪಿ ಮುಖಂಡರಾದ ಎ.ವಿ.ತೀರ್ಥರಾಮ್, ಜಯಪ್ರಕಾಶ್ ಕುಂಚಡ್ಕ, ಪಿ.ಕೆ.ಉಮೇಶ್, ಗೌಡ ಯುವ ಸೇವಾ ಸಂಘದ ಅಧ್ಯಕ್ಷ ಮೋಹನ್‌ರಾಮ್ ಸುಳ್ಳಿ, ಮಾಜಿ ಅಧ್ಯಕ್ಷ ದಿನೇಶ್ ಮಡಪ್ಪಾಡಿ ಸೇರಿದಂತೆ ಮಡಿಕೇರಿ ಹಾಗೂ ಸುಳ್ಯದ ಸಾವಿರಾರು ಮಂದಿ ಈ ಸಂದರ್ಭದಲ್ಲಿ ಸೇರಿದ್ದರು.

ಅಂತಿಮ ದರ್ಶನದ ಬಳಿಕ ಪಾರ್ಥಿವ ಶರೀರದ ಅಂತಿಮ ಯಾತ್ರೆ ನಡೆಯಿತು. ಮನೆಯಿಂದ ಆರಂಭಗೊಂಡ ಮೆರವಣಿಗೆಯು ಕೊಯಿನಾಡು ಬಳಿಯ ಚಡಾವು ಬಳಿ ಸಾಗಿ ಹಿಂತಿರುಗಿ ಕೊಡಗು ಸಂಪಾಜೆ ಸೊಸೈಟಿ ವರೆಗೆ ಬಂದು ವಾಪಾಸ್ ತೆರಳಿ ಅಂತ್ಯಸಂಸ್ಕಾರ ನಡೆಸಲಾಯಿತು.

ಸಾವಿರಾರು ಮಂದಿ ಅಂತಿಮ ಯಾತ್ರೆಯಲ್ಲಿ ಪಾಲ್ಗೊಂಡರು. ರಸ್ತೆಯ ಇಕ್ಕೆಲಗಳಲ್ಲಿ ನಿಂತಿದ್ದ ನೂರಾರು ಮಂದಿ ಪಾರ್ಥಿವ ಶರೀರಕ್ಕೆ ಪುಷ್ಪ ನಮನ ಸಲ್ಲಿಸಿದರು.

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.