Breaking News

ಬೆಳದಿಂಗಳು ಚೆಲ್ಲಿ ಮರೆಯಾದ ಚಂದ್ರ…. – ಸಮನ್ವತೆಯಿಂದ ಸಮಷ್ಠಿ ಸೌಖ್ಯ ಸಾಧಿಸಿದ ಬಾಲಚಂದ್ರ ಕಳಗಿಯವರಿಗೊಂದು ನುಡಿ ನಮನ

Advt_Headding_Middle
Advt_Headding_Middle

 

( ವರದಿ : ದುರ್ಗಾಕುಮಾರ್ ನಾಯರ್‌ಕೆರೆ)

ಬಾಲಚಂದ್ರ ಕಳಗಿ !
ಏಳೂ ಮುಕ್ಕಾಲು ಅಕ್ಷರದ ಈ ಹೆಸರಿಗೆ ಎಷ್ಟು ಅಯಸ್ಕಾಂತೀಯ ಶಕ್ತಿ ಇದೆ ಎಂದು ಮೊನ್ನೆ ಮೊನ್ನೆ ಅವರ ಸಾವಿನ ಸಂದರ್ಭ ಸೇರಿದ ಸಾವಿರ ಸಾವಿರ ಜನರೇ ಸಾಕ್ಷಿ. ಒಂದು ಊರಿನ ಜನ ಮಾನಸದಲ್ಲಿ ಜನಾನುರಾಗಿಯಾಗಿ ಬಾಳಿ ಬೆಳೆದು ವಿಧಿಯ ವಿಕಟ ಅಟ್ಟ ಹಾಸಕ್ಕೆ ಬಲಿಯಾಗಿ ಅಕಾಲದಲ್ಲಿ ಬದುಕಿನ ಆಟ ಮುಗಿಸಿ ಪೆವಿಲಿಯನ್ ಸೇರಿದ ಬಾಲಚಂದ್ರ ಕಳಗಿ ಜನ ಪ್ರೀತಿ ಏನೆಂಬುದನ್ನು ನಿಜ ಅರ್ಥದಲ್ಲಿ ತೋರಿಸಿಕೊಟ್ಟ ಅಪರೂಪದ ನಾಯಕ.


ರಾಜಕಾರಣಿಯಾಗಿ, ಜನಪ್ರತಿ ನಿಧಿಯಾಗಿ, ಸಹಕಾರಿಯಾಗಿ, ಸಂಘ ಟಕನಾಗಿ, ಕೃಷಿಕನಾಗಿ… ಎಲ್ಲಕ್ಕೂ ಮಿಗಿಲಾಗಿ ಮಾನವೀಯ ತುಡಿತದ ನಗುಮುಖದ, ಶುಭ್ರ ಸ್ನೇಹದ ಬಾಲಚಂದ್ರ ಕಳಗಿ ಇನ್ನು ನೆನಪು ಮಾತ್ರ. ಬೆಳದಿಂಗಳಂತೆ ಬೆಳಕು ಚೆಲ್ಲಿ ಬಾಳ ಮುಗಿಸಿ ಚಂದಿರ ಮರೆಗೆ ಸರಿ ದಿದ್ದಾರೆ. ಬದುಕಿದ್ದು ಅಲ್ಪವಾದರೂ ಉಳಿಸಿ ಹೋದದ್ದು ಅಗಾಧ.

ಬಾಲಚಂದ್ರ ಕಳಗಿ ಪಟೇಲ ಮನೆ ತನದ ಹಿನ್ನಲೆಯವರು. ಅವರ ತಾತ ರಾಮಯ್ಯ ಕಳಗಿಯವರು ಊರಿನ ಪಟೇಲರಾಗಿದ್ದರು. ತಂದೆ ಅಪ್ಪಟ ಕೃಷಿಕ. ಇಂತಹ ಪರಂಪರೆಯಲ್ಲಿ ಬೆಳೆದ ಬಾಲಚಂದ್ರರವರು ಎಳವೆಯಿಂ ದಲೇ ಸಂಘ ಪರಿವಾರದ ಕಡೆ ಆಕರ್ಷಿತರಾಗಿದ್ದರು. ಸಂಪಾಜೆಯಲ್ಲಿ ಆರ್.ಎಸ್.ಎಸ್ ಶಿಕ್ಷಕ್ ಕೂಡಾ ಆಗಿದ್ದರು . ನಾಯಕತ್ವ ಗುಣ ಮೈಗೂಡಿಸಿಕೊಂಡಿದ್ದರು. ಸುಳ್ಯ ನೆಹರು ಸ್ಮಾರಕ ಪದವಿ ಕಾಲೇಜಿನಲ್ಲಿ ಕಲಾ ವಿಭಾಗದಲ್ಲಿ ಪದವಿ ಶಿಕ್ಷಣವನ್ನು ಪೂರ್ಣಗೊಳಿಸಿ ಔಪಚಾರಿಕ ಶಿಕ್ಷಣ ಕ್ಕೆ ವಿದಾಯ ಹೇಳಿದ ಅವರು ಬಳಿಕ ದೂರ ಸಂಪರ್ಕ ಶಿಕ್ಷಣದ ಮೂಲಕ ಸ್ನಾತಕೋತ್ತರ ಪದವಿ ಗಳಿಸಿ ಕೊಂಡವರು.

ಕಳಗಿಯವರು ಕಲಿಕೆಯಲ್ಲಿ ಸದಾ ಮುಂದು. ಬುದ್ಧಿ ಮತ್ತು ಜ್ಞಾನ ಅವರಿಗೆ ದೈವದತ್ತ. ಅಗಾಧ ನೆನಪು ಶಕ್ತಿ. ಸಹಜವಾಗಿಯೇ ಎಲ್ಲಾ ರಂಗಗಳಲ್ಲೂ ಮುಂಚೂಣಿ ಯಲ್ಲಿದ್ದರು. ಶಿಕ್ಷಣದ ಬಳಿಕ ರಾಜಕೀಯ ರಂಗ ಪ್ರವೇಶಿಸಿದ ಅವರು ಬಿಜೆಪಿಯ ಕೊಡಗು ಸಂಪಾಜೆ ಗ್ರಾಮ ಸಮಿತಿ ಅಧ್ಯಕ್ಷರಾದರು. ಆಗ ಗ್ರಾಮ ಪಂಚಾಯತ್ ಸದಸ್ಯರಾಗಿದ್ದ ಎಸ್.ಇ. ಮಹಮ್ಮದ್ ಕುಂಞ ಕೊಯಿನಾಡು ಅವರು ಜಿಲ್ಲಾ ಪಂಚಾಯತ್ ಸದಸ್ಯರಾಗಿ ಆಯ್ಕೆಗೊಂಡಾಗ ಅಲ್ಲಿಗೆ ನಡೆದ ಉಪಚುನಾವಣೆಯಲ್ಲಿ ಬಿಜೆಪಿ ಬೆಂಬಲಿತರಾಗಿ ಸ್ಪರ್ಧಿಸಿದ್ದರು ಪ್ರಥಮ ಯತ್ನದಲ್ಲಿ ಸೋಲನುಭವಿಸಿದ ಅವರು ಬಳಿಕ ಸತತ ಐದು ಬಾರಿ ಕೊಡಗು ಸಂಪಾಜೆ ಪಂಚಾಯತ್ ಸದಸ್ಯರಾಗಿದ್ದು, ಈ ಪೈಕಿ ಮೂರು ಅವಧಿಗೆ ಅಧ್ಯಕ್ಷರಾಗಿದ್ದಾರೆ. ಇಡೀ ಗ್ರಾಮ ಪಂಚಾಯತ್‌ನ್ನು ಮಾದರಿ ಪಂಚಾಯತ್ ಆಗಿ ರೂಪುಗೊಳಿಸುವತ್ತ ಮಹತ್ವದ ಹೆಜ್ಜೆ ಇಟ್ಟರು. ಅವರ ಸಾರಥ್ಯದ ಈ ಸಾಧನೆಗಾಗಿ ರಾಷ್ಟ್ರ ಪ್ರಶಸ್ತಿ ಗರಿ ಮೂಡಿತು. ರಾಷ್ಟ್ರ ಪ್ರಶಸ್ತಿಯನ್ನು ಪಡೆದುಕೊಂಡು ಊರಿಗ ಮರಲಿದ ಅವರನ್ನು ಸ್ವಾಗತಿಸಲು ನಡೆದ ಸಂಭ್ರಮ, ಸಡಗರದ ಮೆರವಣಿಗೆ ಈಗ ಇತಿಹಾಸ .
ಈ ಮಧ್ಯೆ ಸಹಕಾರಿ ರಂಗಕ್ಕೂ ಪಾದರ್ಪಣೆ ಮಾಡಿದ ಕಳಗಿಯವರು ಕೊಡಗು ಸಂಪಾಜೆಯ ಪಯಸ್ವಿನಿ ಸೇವಾ ಸಹಕಾರಿ ಬ್ಯಾಂಕಿನ ನಿರ್ದೇಶಕ ರಾಗಿ, ಉಪಾಧ್ಯಕ್ಷರಾಗಿ ಸೇವಸಲ್ಲಿಸಿ ಕಳೆದ ಮೂರು ಅವಧಿಗಳಲ್ಲಿ ಅಧ್ಯಕ್ಷ ರಾಗಿದ್ದಾರೆ. ಬ್ಯಾಂಕಿನ ಸಾಧನೆಗಾಗಿ ಜಿಲ್ಲಾ ಪ್ರಶಸ್ತಿಯ ಗೌರವ ಸಿಗಲು ಕಾರಣಕರ್ತರಾಗಿದ್ದಾರೆ.
ಸಮನ್ವಯದ ಸಾಧಕ .

ಒಂದು ರಾಜಕೀಯ ಪಕ್ಷದ ನಾಯಕನಾದರೂ ಕೊಡಗು ಸಂಪಾಜೆಯ ಮಟ್ಟಿಗೆ ಅವರೊಬ್ಬ ಅಜಾತ ಶತ್ರು . ಶ್ರಮ ಜೀವಿ ಕೆಲಸಗಾರ. ಪಕ್ಷವನ್ನು ಮೀರಿದ ಸ್ನೇಹಾಚಾರದ ಗುಣ ಅವರನ್ನು ಈ ಸ್ಥಾನಕ್ಕೆ ತಂದು ನಿಲ್ಲಿಸಿತ್ತು. ನೊಂದು ತನ್ನ ಬಳಿ ಬಂದ ಎಲ್ಲರಿಗೂ ಅವರ ಸಾಂತ್ವನದ ಹಸ್ತ ತಲುಪುತ್ತಿತ್ತು. ತನ್ನ ಮಂದಸ್ಮಿತ ಮುಖದಿಂದ, ಮೃದು ಮಧುರ ಮಾತುಗಳಿಂದ ಅವರು ಜನರ ಮನಗೆಲ್ಲುತ್ತಿದ್ದರು. ಬಹಳ ಬಾರಿ ಅದುವೇ ನೊಂದ ಜನರ ಕ್ಷಣದ ಪರಿಹಾರವಾಗುತ್ತಿತ್ತು.

ಆದರೆ ವೇದಿಕೆ ಹತ್ತಿದರೆ ಅವರೊಬ್ಬ ಒಳ್ಳೆಯ ಮಾತುಗಾರ. ತನ್ನ ಪಕ್ಷ ಅಥವಾ ಪರಿವಾರ ಸಂಘಟನೆಗಳ ವೇದಿಕೆಗಳಲ್ಲಿ ಪ್ರಖರ ಮಾತುಗಳು ಬರುತಿದ್ದರೂ ಸಮಚಿತ್ತ ಭಾವ ಮರೆಯಾಗುತ್ತಿರಲಿಲ್ಲ. ಪಕ್ಷದ ವತಿಯಿಂದ ಏನಾದರೂ ಪ್ರತಿಭಟನೆ ಘೋಷಣೆಯಾದರೆ ಅವರ ನೇತೃತ್ವದ ತಂಡವೊಂದು ಸಂಪಾಜೆ ಗೇಟ್ ಬಳಿ ಸೇರುವುದು ಮಾಮೂಲಾಗಿತ್ತು.

ಜೋಡುಪಾಲ ನಿರಾಶ್ರಿತರಿಗಾಗಿ
ಊಟ, ನಿದ್ದೆ ಬಿಟ್ಟಿದ್ದರು… ಕಳಗಿಯವರ ಕಾರ‍್ಯ ಶೈಲಿಯೇ ಅಂಥಾದ್ದು. ಆಗಸ್ಟ್‌ನಲ್ಲಿ ಸಂಭವಿಸಿದ ಕೊಡಗು ಪ್ರಕೃತಿ ದುರಂತದ ವೇಳೆ ಜೋಡುಪಾಲದ ದುರ್ಘಟನೆಯಿಂದ ನಿರಾಶ್ರಿತರಾದ ನೂರಾರು ಮಂದಿ ಕೊಡಗು ಸಂಪಾಜೆ ಶಾಲೆಯ ನಿರಾಶ್ರಿತ ಕೇಂದ್ರದಲ್ಲಿ ಆಶ್ರಯ ಪಡೆದಿದ್ದರು. ಈ ವೇಳೆ ಇಲ್ಲಿಯ ಪೂರ್ಣ ಉಸ್ತುವಾರಿ ನೋಡಿಕೊಂಡ ಕಳಗಿಯವರ ಕರ್ತವ್ಯ ಪ್ರಜ್ಞೆ ಯಾರೂ ಮರೆಯು ವಂತದ್ದಲ್ಲ. ನಿರಾಶ್ರಿತರ ವಿವರ ದಾಖಲಿಸುವುದು, ಅವರಿಗೆ ಬಟ್ಟೆ ಬರೆ, ಆಹಾರ ನೀಡುವುದು, ಕೊಡುಗೆಯಾಗಿ ಬಂದ ವಸ್ತುಗಳನ್ನು ವ್ಯವಸ್ಥಿತವಾಗಿ ಇಡುವುದು, ಅಗತ್ಯ ವಸ್ತುಗಳಿಗಾಗಿ ದಾನಿಗಳನ್ನು ಸಂಪರ್ಕಿಸುವುದು.. ಹೀಗೆ ಎಲ್ಲವೂ ಕಳಗಿ ಯವರ ಪಳಗಿದ ಕೈಗಳಲ್ಲಿ ಪಕ್ಕಾ ಆಗುತ್ತಿತ್ತು. ಕೂಗಳತೆಯ ದೂರದಲ್ಲಿ ಅವರ ಮನೆಯಿದ್ದರೂ ನಿರಾಶ್ರಿತರ ಕೂಗಿಗೆ ಕಿವಿಯಾಗಿ ಅವರು ಊಟ, ನಿದ್ರೆ ಬಿಟ್ಟು ನಿರಾಶ್ರಿತ ಕೇಂದ್ರದಲ್ಲಿ ಇದ್ದz ಜಾಸ್ತಿ. ನಾಯಕತ್ವದ ಪ್ರಭೆ ಬೆಳಗುವುದು ಇಂಥ ಹೊತ್ತಿನಲ್ಲೇ ಅಲ್ಲವೇ?

ಬಾಲಚಂದ್ರ ಕಳಗಿಯವರು ರಾಜಕಾರಣದಲ್ಲಿ ಸಮನ್ವಯತೆ ಸಾಧಿಸಿದ ನಾಯಕ. ಈ ಗುಣ ಎಲ್ಲರಿಗೂ ಸಿದ್ಧಿಸುವಂತದ್ದಲ್ಲ. ಇತರ ಪಕ್ಷದವ ರೊಂದಿಗೆ ಸಮನ್ವಯತೆ ಸಾಧಿಸಿದ್ದಲ್ಲದೆ, ತನ್ನದೇ ಪಕ್ಷದಲ್ಲಿ ಉಂಟಾದ ಸಮಸ್ಯೆಗಳ ಸಂದರ್ಭದಲ್ಲೂ ಅವರು ಈ ಸಮನ್ವಯ ಗುಣದಿಂದಲೇ ಯಶಸ್ಸು ಗಳಿಸಿದ್ದರು. ಕೊಡಗು ಬಿಜೆಪಿಯಲ್ಲಿ ಕೆ.ಜಿ.ಬೋಪಯ್ಯ ಮತ್ತು ಡಿ.ಎಸ್.ಮಾದಪ್ಪ ಬಣಗಳು ಉಂಟಾದಾಗ ಕಳಗಿಯವರು ಬೋಪಯ್ಯರವರ ಬೆಂಬಲಿಗರಾಗಿ ಗುರುತಿಸಿಕೊಂಡು ಕೆಲಸ ಮಾಡಿದರು. ಬೋಪಯ್ಯರ ರಾಜಕಾರಣದ ಯಶಸ್ಸಿನ ಬಲಗೈ ಕಳಗಿಯವರೆಂದರೆ ತಪ್ಪಾಗಲಾರದು. ಪ್ರತಿ ಚುನಾವಣೆಗಳಲ್ಲೂ ಬೋಪಯ್ಯ ಸೇರಿದಂತೆ ಬಿಜೆಪಿ ಅಭ್ಯರ್ಥಿಗಳಿಗೆ ದೊಡ್ಡ ಮಟ್ಟದ ಗೆಲುವನ್ನು ತಂದುಕೊಡಲು ಅವರಿಂದ ಸಾಧ್ಯವಾಗಿತ್ತು. ಈ ಚತುರತೆ ಯನ್ನು ಅಭಿವೃದ್ಧಿ ಕಾರ್ಯಗಳಿಗೂ ವಿನಿಯೋಗಿಸುವ ಛಲ ಕೂಡ ಅವರಿ ಗಿತ್ತು. ಪರಿಣಾಮ ಬೋಪಯ್ಯ ಅವರ ಸಹಕಾರದಿಂದ ಈ ಭಾಗದಲ್ಲಿ ಅನೇಕ ಅಭಿವೃದ್ಧಿ ಯೋಜನೆಗಳು ಅನುಷ್ಠಾನಗೊಳ್ಳಲು ಅವರು ಕಾರಣಕರ್ತರಾಗಿದ್ದರು. ಡಿ.ವಿ ಸದಾನಂದ ಗೌಡರಿಗೂ ಆಪ್ತರಾಗಿದ್ದ ಅವರು ಡಿ.ವಿ.ಯವರು ಆಗ ಕೊಡಗು ಸೇರಿದ ಮಂಗಳೂರು ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಸ್ಪರ್ದಿಸಿದ್ದಾಗ ಗೆಲುವಿಗಾಗಿ ಶ್ರಮಿಸಿದ್ದರು .

ತಾತನಿಂದ ಬಂದ ಪಟೇಲಿಕೆಯ ಗುಣವೋ ಏನೋ ಕಳಗಿಯವರಿಗೂ ಸಂಧಾನ ಸೂತ್ರಗಳು ಸಿದ್ಧಿಸಿತ್ತು. ಅನೇಕ ವಿವಾದಗಳನ್ನು ಪಂಚಾತಿಕೆಗಳ ಮೂಲಕ ಇತ್ಯರ್ಥ ಪಡಿಸುತ್ತಿದ್ದರು. ಕಳಗಿಯವರ ರಾಜಕೀಯ ಕ್ಷೇತ್ರದ ನಿಷ್ಠೆ, ಬದ್ಧತೆ, ಪ್ರೌಢಿಮೆ ಮತ್ತು ಸಂಘಟನಾ ಶೈಲಿಯಿಂದಾಗಿ ಜಿಲ್ಲಾ ಮಟ್ಟದಲ್ಲೂ ಅವರಿಗೆ ಸ್ಥಾನಮಾನಗಳು ದೊರೆತವು. ಯುವಮೋರ್ಛಾದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮತ್ತು ಅಧ್ಯಕ್ಷರಾಗಿದ್ದ ಅವರು ಪ್ರಸ್ತುತ ಜಿಲ್ಲಾ ಬಿಜೆಪಿಯ ಪ್ರಧಾನ ಕಾರ್ಯದರ್ಶಿಯಾಗಿದ್ದರು. ಲೋಕಸಭಾ ಚುನಾವಣಾ ಪ್ರಚಾರ ಕಾರ‍್ಯದ ಬಿಸಿಯಲ್ಲಿದ್ದರು. ಭವಿಷ್ಯದ ಶಾಸಕ ಅಥವಾ ಸಂಸದ ಸ್ಥಾನದ ಅಭ್ಯರ್ಥಿಯಾಗುವ ಎಲ್ಲಾ ಅರ್ಹತೆ ಗಳು ಕಳಗಿಯವರಿಗಿತ್ತು. ಆದರೆ ವಿಧಿ ಅವಕಾಶ ಮಾಡಿ ಕೊಟ್ಟಿಲ್ಲ. ಮೃತ್ಯು ಪಾಶ ಅಪಘಾತ ರೂಪದಲ್ಲಿ ಅವರನ್ನು ಬರಸೆಳೆದಿದೆ. ಈ ಸಾವಿನ ಸುತ್ತ ಅನುಮಾನದ ಹುತ್ತ ಬೆಳೆದಿದ್ದು ಸೂಕ್ತ ತನಿಖೆ ನಡೆಯಬೇಕಾಗಿದೆ.

ಅಂದು ಸಂಭ್ರಮದ ಯಾತ್ರೆ,
ಇಂದು ಅಂತಿಮ ಯಾತ್ರೆ… ಎರಡು ವರ್ಷದ ಹಿಂದಿನ ಮಾತು. ಪಂಚಾಯತಿನ ಮಾದರಿ ಕೆಲಸಗಳಿಗಾಗಿ ರಾಷ್ಟ್ರ ಪ್ರಶಸ್ತಿ ಸ್ವೀಕರಿಸಿ ಊರಿಗೆ ಮರಳಿದ ಕಳಗಿ ನೇತೃತ್ವದ ತಂಡವನ್ನು ಕೊಯನಾಡಿನಿಂದ ಬೃಹತ್ ಮೆರವಣಿಗೆಯಲ್ಲಿ ತೆರೆದ ವಾಹನದಲ್ಲಿ ಕರೆತರಲಾಗಿತ್ತು. ಸೇರಿದ ನೂರಾರು ಜನ ಹಾರಾರ್ಪಿಸಿ ಅಭಿನಂದಿಸುತ್ತಿದ್ದರು. ಕಳಗಿಯವರ ಕಣ್ಣಲ್ಲಿ ಆನಂದ ಭಾಷ್ಪ. ಅದೇ ರಸ್ತೆಯಲ್ಲಿ ಮೊನ್ನೆ ಮೊನ್ನೆ ಕಳಗಿಯವರ ಅಂತಿಮ ಯಾತ್ರೆ ನಡೆಯುತ್ತಿತ್ತು. ನೂರಾರು ಹಾರಗಳು ಬಂದು ಬೀಳುತ್ತಿತ್ತು. ಕಣ್ತುಂಬಿಕೊಳ್ಳಲು ಕಳಗಿಯವರಿರಲಿಲ್ಲ. ಸೇರಿದವರ ಕಣ್ಣುಗಳು ಮಾತ್ರ ಕಡಲಾಗಿತ್ತು. ಮನುಷ್ಯ ಬದುಕು ಇಷ್ಟೇ ಅಲ್ಲವೇ?

ಕೊನೆಯ ಮಾತುಗಳು…
ತನ್ನ ಜೀವಿತಾವಧಿಯ ಕೊನೆಯವರೆಗೂ ಪಕ್ಷಕ್ಕಾಗಿ ಬದುಕು ತೇದವರು ಕಳಗಿಯವರು. ಮೈಸೂರು ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಪ್ರತಾಪಸಿಂಹರವರು ಮಾ. 18 ರಂದು ಪೆರಾಜೆಯಿಂದ ಚುನಾವಣಾ ಪ್ರಚಾರ ಆರಂಭಿಸಿದ್ದರು. ಇವರಿಗೆ ಕಳಗಿಯವರು ಸಾಥ್ ನೀಡಿದ್ದರು. ಅವರ ಗೆಲುವಿಗಾಗಿ ಪೆರಾಜೆ ದೇವಸ್ಥಾನದಲ್ಲಿ ಪೂಜೆಯನ್ನೂ ಮಾಡಿಸಿದ್ದರು. ಅಂದು ಹತ್ತು ಪಂಚಾಯತ್ ವ್ಯಾಪ್ತಿಯಲ್ಲಿ ಸಭೆ ನಡೆದಿತ್ತು. ಸಂಪಾಜೆಯಲ್ಲೂ ಕಾರ‍್ಯಕರ್ತರ ಸಭೆ ನಡೆದಿತ್ತು. ಅಲ್ಲಿ ಅವರು ಮಾತನಾಡಿz ಅವರ ಬದುಕಿನ ಕೊನೆಯ ಭಾಷಣ.. ಱಱಇನ್ನು ಕೆಲವೇ ದಿನಗಳಷ್ಟೇ. ನರೇಂದ್ರ ಮೋದಿಯವರನ್ನು ಮತ್ತೊಮ್ಮೆ ದೇಶದ ಪ್ರಧಾನ ಮಂತ್ರಿಯನ್ನಾಗಿಸುವವರೆಗೆ ನಾವು ವಿರಮಿಸಬಾದರುೞೞ ಎಂದು ಹೇಳಿದ್ದರು. ಮಾ.19 ರಂದು ಸಂಜೆ ವೇಳೆಗೆ ನಡೆದ ದುರ್ಘಟನೆಯಲ್ಲಿ ಬದುಕಿನಿಂದಲೇ ವಿರಮಿಸಿದ್ದಾರೆ. ಈ ನಷ್ಟದ ಮೌಲ್ಯ ದೊಡ್ಡದು. ಬಿಜೆಪಿಗೆ ಮಾತ್ರವಲ್ಲ, ಸಮಾಜಕ್ಕೂ.

ಸಂಪಾಜೆಗೆ ಇನ್ಯಾರು ?
ಕಳಗಿಯವರ ಅಂತಿಮ ಸಂಸ್ಕಾರ ದ ದಿನ ಕೊಯನಾಡಿನಲ್ಲಿ ರಸ್ತೆ ಬದಿ ನಿಂತಿದ್ದ ಮುಸ್ಲಿಂ ಸಮುದಾಯದ ವ್ಯಕ್ತಿಯೊಬ್ಬರು ಪಕ್ಕದ ವ್ಯಕ್ತಿಯೊಂದಿಗೆ ಮಾತನಾಡುತಿದ್ದರು –
” ಒಳ್ಳೆಯ ಜನ, ಒಳ್ಳೆಯ ಮಾತುಗಾರ. ಯಾರ ಕೆಲಸಗಳನ್ನೂ ಮಾಡಿ ಕೊಡುತ್ತಿದ್ದರು. ಅವರ ಸ್ಥಾನ ತುಂಬಲು ಇನ್ಯಾರಿದ್ದಾರೆ ನಮ್ಮ ಸಂಪಾಜೆಯಲ್ಲಿ ?”.
ಹೌದು, ಬಾಲಚಂದ್ರ ಕಳಗಿ ಯವರು ಉಳಿಸಿ ಹೋದ ಪ್ರಶ್ನೆಯಿದು. ಅವರ ಬದುಕಿನ ಸಾಧನೆಗಳಿಗೆ ಉತ್ತರವಾಗಿ ನೂರಾರು ದೃಷ್ಟಾಂತಗಳು ಸಂಪಾಜೆಯಲ್ಲಿದೆ. ಆದರೆ ಈ ಪ್ರಶ್ನೆಗೆ ಮಾತ್ರ ಉತ್ತರವಿಲ್ಲ. ಈ ಸಾವು ನ್ಯಾಯವಲ್ಲ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.