HomePage_Banner
HomePage_Banner
HomePage_Banner
HomePage_Banner

 ಯುವ ಜನತೆಯ ನಿದ್ದೆಗೆಡಿಸುವ ಪಬ್‌ಜಿ! ಮಾನಸಿಕ ಖಿನ್ನತೆಗೆ ಒಳಗಾಗುವ ಮುನ್ನ ಎಚ್ಚೆತ್ತುಕೊಳ್ಳಿ

 

     ಮಾರಣಾಂತಿಕ ಮೊಬೈಲ್ ಗೇಮ್‌ಗಳ ಹಾವಳಿ ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಲೇ ಇದೆ. ಬ್ಲೂವೇಲ್ ಸೇರಿದಂತೆ ಹಲವು ಮೊಬೈಲ್ ಗೇಮ್‌ಗಳ ಹಾವಳಿಯಿಂದ ತತ್ತರಿಸಿದ್ದ ಜನರಿಗೆ ಇದೀಗ ಇನ್ನೊಂದು ಗೇಮ್ ತಲೆ ನೋವು ತಂದಿದೆ. ಬ್ಲೂವೇಲ್‌ನಷ್ಟು ಖತರ್ನಾಕ್ ಗೇಮ್ ಅಲ್ಲದಿದ್ದರೂ ಇದನ್ನು ಆಡಿದವರ ಮಾನಸಿಕ ಸಮತೋಲನದಲ್ಲಿ ವ್ಯತ್ಯಾಸ ಕಂಡು ಬರುತ್ತಿದೆ. ಯುವಜನತೆಯ ನಿದ್ದೆಗೆಡಿಸುವ ಈ ಆನ್‌ಲೈನ್ ಆಟದ ಹೆಸರು `ಪಬ್‌ಜಿ’ ಗೇಮ್.

     ಬೆಂಗಳೂರಿನ ಯುವಕ ಯುವತಿಯರು ವ್ಯಾಪಕವಾಗಿ ಅಡಿಕ್ಟ್ ಆಗಿದ್ದ ಪಬ್‌ಜಿ ಗೇಮ್ ಇದೀಗ ಹಳ್ಳಿ ಹಳ್ಳಿಗೂ ಕಾಲಿಟ್ಟಿದ್ದು ಹೆಚ್ಚಾಗಿ ಯುವಕರೇ ಈ ಗೇಮ್‌ನಲ್ಲಿ ತಲ್ಲೀನರಾಗುತ್ತಿದ್ದಾರೆ. ಯುದ್ಧ ಭೂಮಿಯಲ್ಲಿ ಶೂಟ್ ಮಾಡುವ ಈ ಆಟ ವರ್ಷದ ಹಿಂದೆಯಷ್ಟೇ ಭಾರತಕ್ಕೆ ಕಾಲಿಟ್ಟಿದೆ.

    ಹೌದು, ಹಿಂದೆ ಬ್ಲೂವೇಲ್‌ನಂತಹ ಡೆಡ್ಲಿ ಗೇಮ್ ಸಾಕಷ್ಟು ಜನರ ಬಲಿ ಪಡೆದಿತ್ತು. ಆದ್ರೆ ಈಗ ಬಂದಿರುವ ಪಬ್‌ಜಿ ಕೂಡ ಬ್ಲೂವೇಲ್‌ನಂತೆ ಡೆಡ್ಲಿ ಗೇಮ್ ಆಗಿ ಮಾರ್ಪಾಡಾಗುತ್ತಿದೆ. ಇತ್ತೀಚೆಗೆ ಪಬ್‌ಜಿ ಗೇಮ್‌ಗೆ ಸಾವಿರಾರು ಜನರು ಅಡಿಕ್ಟ್ ಆಗಿಹೋಗಿದ್ದಾರೆ. ಅದರಲ್ಲೂ ಯುವ ಪೀಳಿಗೆ ಪಬ್‌ಜಿ ಗೇಮ್‌ನಲ್ಲಿಯೇ ಬಹುತೇಕ ಮುಳುಗಿ ಹೋಗಿದೆ. ಹಳ್ಳಿಯ ಅಂಗಡಿ ಮುಂಗಟ್ಟುಗಳಲ್ಲಿ, ಮೋರಿಗಳಲ್ಲಿ ಹೀಗೆ ಎಲ್ಲೆಂದರಲ್ಲಿ ಈ ಆಟ ಆಡುವ ಯುವಕರ ಸಂಖ್ಯೆ ಹೆಚ್ಚುತ್ತಿದ್ದು ಹೆಚ್ಚಾಗಿ 15ರಿಂದ 30 ವರ್ಷದೊಳಗಿನವರೇ ಇದಕ್ಕೆ ಮಾರು ಹೋಗುತ್ತಿದ್ದಾರೆ.

ಮಾನಸಿಕ ಖಿನ್ನತೆಗೆ ಒಳಗಾಗುವ ಸಾಧ್ಯತೆ…

ಡೆಡ್ಲಿ ಗೇಮ್‌ನಿಂದ ಯುವ ಸಮೂಹ ಹೆಚ್ಚಾಗಿ ಮಾನಸಿಕ ಖಿನ್ನತೆಗೆ ಒಳಗಾಗುತ್ತಿದೆ. ಈ ಆಟದಿಂದ ಸಾಕಷ್ಟು ಜನರ ಜೀವನ ಹಾಳಾಗುತ್ತಿದೆ. ಚಿಕ್ಕ ಮಕ್ಕಳಿಂದ ಹಿಡಿದು ಯುವಕರವರೆಗೂ ಪಬ್‌ಜಿ ಗೇಮ್ ಪ್ರಭಾವ ಬೀರುತ್ತಿದೆ. ಇದರಿಂದ ಹೆಚ್ಚಾಗಿ ವಿದ್ಯಾರ್ಥಿಗಳು ಮಾನಸಿಕ ಸಮಸ್ಯೆಗೆ ಒಳಗಾಗುತ್ತಿದ್ದಾರೆ ಎಂದು ಮನೋಶಾಸ್ರ್ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.

ಯುದ್ಧ ಭೂಮಿಯಲ್ಲಿ ಶೂಟ್ ಮಾಡುವ ಈ ಆಟದ ಮೇಲಿನ ಅವಲಂಬನೆ ನಿತ್ಯದ ಬದುಕಿನ ಮೇಲೆ ದುಷ್ಪರಿಣಾಮ ಬೀರಲಿದೆ ಎನ್ನಲಾಗುತ್ತದೆ. ಚಟದ ಹಂತಕ್ಕೆ ಕರೆದೊಯ್ಯುವ ಈ ಆಟ ಹಿಂಸೆಯನ್ನು ಪ್ರಚೋದಿಸದಿದ್ದರೂ ಮೋಜು ನೀಡುವ ಮೂಲಕ ಮಕ್ಕಳ ಮಾನಸಿಕ ಆರೋಗ್ಯದ ಮೇಲೆ ಮಾರಕ ಪರಿಣಾಮ ಬೀರುತ್ತದೆ ಎಂದು ಹೇಳಲಾಗಿದೆ.

ಅನಾಹುತಗಳಿಗೆ ಕಾರಣವಾದ ಪಬ್‌ಜಿ ಗೇಮ್…?

ಭಾರತದಲ್ಲಿ ಪಬ್‌ಜಿ ಮೊಬೈಲ್ ಗೇಮ್ ವ್ಯಾಪಕ ಕ್ರೇಜ್ ಹುಟ್ಟುಹಾಕಿದೆ. ಈ ಗೇಮಿಂಗ್‌ಗೆ ಮಾರು ಹೋಗಿರುವ ಯುವ ಸಮೂಹ ಹೊಸ ರೀತಿಯ ಮಾನಸಿಕ ಅಸ್ವಸ್ಥೆಗೆ ಒಳಗಾಗುತ್ತಿದೆ ಎಂಬ ದೂರುಗಳು ಕೇಳಿ ಬರುತ್ತಿದೆ. ಈ ಹಿನ್ನೆಲೆಯಲ್ಲಿ ಈಗಾಗಲೇ ಗುಜರಾತ್‌ನ ರಾಜ್‌ಕೋಟ್ ಹಾಗೂ ಸೂರತ್ ವ್ಯಾಪ್ತಿಯಲ್ಲಿ ತಾತ್ಕಾಲಿಕ ಪಬ್‌ಜಿ ಆಡುವುದನ್ನು ನಿಷೇಧಿಸಿರುವ ಬಗ್ಗೆ ವರದಿಯಾಗಿದೆ. ಪಬ್‌ಜಿ ಆಟದಿಂದ ವಿದ್ಯಾರ್ಥಿಗಳ ಅಧ್ಯಯನದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಈ ಬಗ್ಗೆ ಪೋಷಕರಿಂದ ಆಯೋಗಕ್ಕೆ ವ್ಯಾಪಕ ದೂರುಗಳು ಬರುತ್ತಿದ್ದ ಹಿನ್ನೆಲೆಯಲ್ಲಿ ರಾಜ್‌ಕೋಟ್ ಹಾಗೂ ಸೂರತ್‌ನಲ್ಲಿ ಪಬ್‌ಜಿಗೆ ನಿರ್ಬಂಧ ಹೇರಲಾಗಿತ್ತು. ಹಾಗೆಯೇ ಈ ಆಕ್ರಮಣಕಾರಿ ಆಟವನ್ನು ನಿಷೇಧಿಸಬೇಕೆಂದು ಇತ್ತೀಚೆಗೆ ತಮಿಳುನಾಡು ವಿಧಾನಸಭೆಯಲ್ಲೂ ಚರ್ಚೆ ನಡೆಸಲಾಗಿತ್ತು. ಅಲ್ಲದೆ ಕೆಲ ದಿನಗಳ ಹಿಂದೆ ದೆಹಲಿಯಲ್ಲಿ ಪಬ್‌ಜಿ ಆಟದ ವ್ಯಸನಕ್ಕೆ ಸಿಲುಕಿದ್ದ ೧೯ ವರ್ಷದ ಯುವಕನೊಬ್ಬ ಹೆತ್ತ ತಂದೆ, ತಾಯಿ ಹಾಗೂ ತಂಗಿಯನ್ನು ಕೊಲೆ ಮಾಡಿದ ಆರೋಪದ ಮೇಲೆ ಬಂಧನಕ್ಕಿಡಾಗಿದ್ದನು. ಅದೇ ರೀತಿ ಜಮ್ಮು ಕಾಶ್ಮೀರದ ಯುವಕನೊಬ್ಬ ಪಬ್‌ಜಿ ಚಟಕ್ಕೆ ಬಿದ್ದು ಮಾನಸಿಕ ಅಸ್ವಸ್ಥನಾಗಿದ್ದಾನೆ ಎಂದು ಹೇಳಲಾಗಿದೆ. ಹಾಗೆಯೇ ವ್ಯಕ್ತಿಯೊಬ್ಬರು ಪಬ್‌ಜಿ ಆಟದಲ್ಲಿ ನಿರತರಾಗಿದ್ದ ವೇಳೆ ನೀರೆಂದು ಆಸಿಡ್ ಕುಡಿದ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ಗದಗ ವಿದ್ಯಾರ್ಥಿಯೊಬ್ಬ ಉತ್ತರ ಪತ್ರಿಕೆಯಲ್ಲಿ ಪಬ್‌ಜಿ ಆಡುವುದು ಹೇಗೆ ಎಂದು ಬರೆದು ಅನುತ್ತೀರ್ಣನಾಗಿದ್ದನು. ಎಸ್‌ಎಸ್‌ಎಲ್‌ಸಿ ಉತ್ತಮ ಅಂಕ ಪಡೆದಿದ್ದ ಈ ವಿದ್ಯಾರ್ಥಿ ಫೇಲ್ ಆಗಲು ಪಬ್‌ಜಿ ಆಟವನ್ನು ನೆಚ್ಚಿಕೊಂಡಿದ್ದೆ ಮುಖ್ಯ ಕಾರಣ ಎನ್ನಲಾಗಿತ್ತು.

  ಪಬ್‌ಜಿ ಆಡುತ್ತಿದ್ದ ಇಬ್ಬರು ಯುವಕರು ರೈಲಿನಡಿಗೆ ಬಿದ್ದು ಮೃತಪಟ್ಟಿರುವ ಘಟನೆ ಮಹಾರಾಷ್ಟ್ರದ ಹಿಂಗೊಲಿ ಜಿಲ್ಲೆಯ ಖಟ್ಕಲಿ ಬೈಪಾಸ್‌ನಲ್ಲಿ ಇತ್ತೀಚೆಗೆ ನಡೆದಿತ್ತು. ಇಂತಹ ಪ್ರಕರಣಗಳು ಇತ್ತೀಚೆಗೆ ದೇಶದೆಲ್ಲೆಡೆ ಕೇಳಿ ಬರುತ್ತಿದೆ.

ಬ್ಲೂವೇಲ್ ಹೋಯ್ತು ಪಬ್‌ಜಿ ಬಂತು…!

ಭಾರೀ ಜನಪ್ರಿಯತೆ ಪಡೆದ ಈ ಆಟದಿಂದ ಯುವಕರು ಹಿಂಸಾಕೃತ್ಯದಿಂದ ವಿಕೃತ ಸಂತೋಷ ಪಡುವಂತಾಗಿದೆ ಎಂದು ಮಾನಸಿಕ ತಜ್ಞರೇ ಅಭಿಪ್ರಾಯಪಟ್ಟಿದ್ದಾರೆ. ಪಬ್‌ಜೀ ಗೇಮ್ ಹಿಂದೆ ಬಿದ್ದಿದ್ದರಿಂದ ಯುವಕ-ಯುವತಿಯರು ಮಾನಸಿಕ ಸಮತೋಲನ ಕಳೆದುಕೊಳ್ಳುತ್ತಿದ್ದಾರೆ ಎಂಬ ಕಳವಳಕಾರಿ ವಿಚಾರ ಕೂಡಾ ಬೆಳಕಿಗೆ ಬರುತ್ತಿದೆ. ನಗರ ಪ್ರದೇಶಗಳಲ್ಲಿ ಪ್ರತಿ ತಿಂಗಳು ಈ ಗೇಮ್ ಗೀಳಿನಿಂದಾಗಿ ಆಸ್ಪತ್ರೆ ಬಾಗಿಲು ತಟ್ಟುತ್ತಿರುವುದರ ಬಗ್ಗೆ ಮಾನಸಿಕ ತಜ್ಞರೇ ಆತಂಕ ವ್ಯಕ್ತಪಡಿಸಿದ್ದಾರೆ. ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಯಲ್ಲಿ ಪಬ್‌ಜಿ ಗೇಮ್‌ನಿಂದ ಮಾನಸಿಕ ಖಿನ್ನತೆಗೆ ಒಳಗಾದ ಕೇಸ್‌ಗಳು ದಾಖಲಾಗುತ್ತಿದೆ. ಇಲ್ಲಿಯವರೆಗೆ ಪಬ್‌ಜಿ ಗೇಮ್ ಕ್ರೇಜ್‌ಗೆ ಸಂಬಂಧಿತ ಅನೇಕ ಮೆಂಟಲ್ ಹೆಲ್ತ್ ಕಂಡಿಷನ್ ಕೇಸ್‌ಗಳು ನಿಮ್ಹಾನ್ಸ್‌ನಲ್ಲಿ ದಾಖಲಾಗಿದೆ ಎನ್ನಲಾಗುತ್ತಿದೆ. ಮೊದಲು ಬ್ಲೂವೇಲ್ ಗೇಮ್ ಕ್ರೇಜ್ ಜಗತ್ತಿನಾದ್ಯಂತ ಭಯ ಹುಟ್ಟಿಸಿತ್ತು. ಈಗ ಪಬ್ ಜಿ ಗೇಮ್, ಬ್ಲೂವೇಲ್ ರೀತಿ ತಮ್ಮ ಮಕ್ಕಳನ್ನು ಬಲಿ ಪಡೆಯುತ್ತೋ ಎಂದು ಪೋಷಕರು ಚಿಂತಿಸುವಂತಾಗಿದೆ.

ನಾನು ಕೂಡಾ ಪಬ್‌ಜಿ ಗೇಮ್ ಆಡುತ್ತಿದ್ದೆ. ಈ ಗೇಮ್ ಆಡಲು ಪ್ರಾರಂಭಿಸಿದರೆ ಅಲ್ಲೇ ತಲ್ಲೀನನಾಗುತ್ತಿದ್ದೆ. ನಮ್ಮನ್ನು ಯಾರಾದರು ಕರೆದರೂ ಗೊತ್ತಾಗುತ್ತಿಲ್ಲ, ಕೆಲಸ ಮಾಡಲು ಆಸಕ್ತಿ ಇರಲಿಲ್ಲ. ಹೇಗಾದರೂ ಮಾಡಿ ಆ ಗೇಮ್ ಆಡುವುದನ್ನು ಈಗ ನಿಲ್ಲಿಸಿದ್ದೇನೆ – ಸಹೀರ್ ತಿಂಗಳಾಡಿ,

ಸರಕಾರವೇ ನಿಷೇಧ ಹೇರಬೇಕು

ಪಬ್‌ಜಿಯಂತಹ ಆನ್‌ಲೈನ್ ಗೇಮ್‌ಗಳು ಒಂದು ರೀತಿಯ ಮಾನಸಿಕ ವ್ಯಸನದಂತೆ. ಪ್ರಾರಂಭದಲ್ಲಿ ಎಂಜಾಯ್ ಅಥವಾ ಥ್ರಿಲ್ಲಿಂಗ್ ಸಿಗುತ್ತದೆಯೆಂದು ಆ ಆಟಕ್ಕೆ ಮಾರು ಹೋಗುವ ಯುವ ಸಮೂಹ ಬಳಿಕ ಅದರಿಂದ ಹೊರ ಬರಲು ಒದ್ದಾಟ ನಡೆಸಬೇಕಾದ ಸನ್ನಿವೇಶ ಉಂಟಾಗುತ್ತದೆ. ಯುವಕರು ಅಥವಾ ವಿದ್ಯಾರ್ಥಿಗಳು ಇಂತಹ ಆನ್‌ಲೈನ್ ಗೇಮ್‌ಗಳಿಗೆ ಮಾರು ಹೋಗುತ್ತಿದ್ದು ನಂತರ ವಾಸ್ತವ ಜೀವನವನ್ನು ಮರೆತು ಮನಸ್ಸಿಗೆ ಗೊಂದಲ ಉಂಟಾಗಿ ಖಿನ್ನತೆ ಉಂಟಾಗುವ ಸಾಧ್ಯತೆಯೂ ಅಧಿಕವಾಗಿರುತ್ತದೆ. ಇಂತಹ ಗೇಮ್‌ಗಳಿಗೆ ಅಡಿಕ್ಟ್ ಆಗದಂತೆ ಪೋಷಕರು ನಿಗಾ ವಹಿಸಬೇಕು. ಇಂತಹ ಗೇಮ್‌ಗಳನ್ನು ಸರಕಾರವೇ ನಿಷೇಧ ಮಾಡಬೇಕಾಗಿದೆ -ಡಾ.ಗಣೇಶ್ ಪ್ರಸಾದ್ ಮುದ್ರಜೆ, ನರ ಮಾನಸಿಕ ತಜ್ಞರು

ಏನಿದು ಪಬ್‌ಜಿ ಗೇಮ್…?

ಪಬ್‌ಜಿ ಗೇಮ್ ಎನ್ನುವುದು `ಒಂದು ಯುದ್ಧ ಭೂಮಿ ಆಟ’ ಈ ಆಟದ ಸಂಪೂರ್ಣ ಭೂಪಟವನ್ನು ಆಟಗಾರಿಗೆ ಮೊದಲು ತೋರಿಸಲಾಗುತ್ತದೆ. ಬಳಿಕ ಆಟಗಾರರು ತಮಗೆ ಬೇಕಾದ ಪ್ರದೇಶವನ್ನು ಆಯ್ದುಕೊಂಡು ಆ ಪ್ರದೇಶಕ್ಕೆ ವಿಮಾನದಿಂದ ಕೆಳಗೆ ಹಾರಿ ಮನೆಗಳತ್ತ ಓಡ್ತಾರೆ. ಆಟಗಾರರಿದ್ದ ಪ್ರದೇಶದಲ್ಲಿ ಸಿಕ್ಕ ಶಸ್ತ್ರಾಸ್ತ್ರಗಳನ್ನು, ಮೆಡಿಕಲ್ ಕಿಟ್‌ಗಳನ್ನು, ಯುದ್ಧಕ್ಕೆ ಬೇಕಾದ ಅಗತ್ಯ ವಸ್ತುಗಳನ್ನು ಆಯ್ದುಕೊಂಡು ಮುಂದೆ ಸಾಗುತ್ತಾರೆ. ಮಾರ್ಗ ಮಧ್ಯೆ ಎದುರಾಗುವ ಎದುರಾಳಿಗಳನ್ನು ಹೊಡೆದುರುಳಿಸುವ ರೋಮಾಂಚನಕಾರಿ ಗೇಮ್ ಇದು. ಆಟಗಾರರು ಇಳಿದ ಪ್ರದೇಶದ ಸುತ್ತ ವೃತ್ತವೊಂದು ಸಣ್ಣದಾಗುತ್ತೆ. ಆಗ ಅಲ್ಲಿದ್ದ ನೂರಾರು ಜನರ ಜೊತೆ ಹೋರಾಡಿ, ಉಳಿದರೇ ಗೆದ್ದಂತೆ, ಮೃತಪಟ್ಟರೆ ಸೋತಂತೆ. ಈ ಆಟದ ವಿಶೇಷ ಏನೆಂದರೆ ಸ್ನೇಹಿತರ ಜೊತೆ ಸೇರಿ ಆಡಬಹುದು. ಇದನ್ನು ಪೂರ್ಣಗೊಳಿಸಲು ತಾಸುಗಳೇ ಬೇಕಾಗುತ್ತದೆ.
                                                                                                                                 : ಯೂಸುಫ್ ರೆಂಜಲಾಡಿ  ಪುತ್ತೂರು

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.