Breaking News

ಆರೂವರೆ ತಿಂಗಳ ಹಿಂದೆ ನಾಪತ್ತೆಯಾಗಿದ್ದ ಬಡ್ಡಡ್ಕದ ವಿದ್ಯಾರ್ಥಿ ಮೋಕ್ಷಿತ್ ಮತ್ತೆ ಮರಳಿ ಮನೆಗೆ

ಆರೂವರೆ ತಿಂಗಳ ಹಿಂದೆ ಮನೆಯಿಂದ ಶಾಲೆಗೆಂದು ಹೊರಟು ಬಂದು ನಾಪತ್ತೆಯಾಗಿದ್ದ ಆಲೆಟ್ಟಿ ಗ್ರಾಮದ ಬಡ್ಡಡ್ಕ ಆಡಿಂಜ ನಿವಾಸಿ ಸೀತಾರಾಮ ಮತ್ತು ಗಿರಿಜಾ ದಂಪತಿಗಳ ಪುತ್ರ ಮೋಕ್ಷಿತ್ ಎಂಬ ವಿದ್ಯಾರ್ಥಿ ಕೆಲವು ದಿನಗಳ ಹಿಂದೆ ಪತ್ತೆಯಾಗಿ ಮನೆಗೆ ಮರಳಿದ್ದಾನೆ.
ಎಸ್.ಎಸ್.ಎಲ್.ಸಿ.ವಿದ್ಯಾರ್ಥಿ ಮೋಕ್ಷಿತ್ ಬೆಳ್ಳಾರೆಯಲ್ಲಿರುವ ಖಾಸಗಿ ಟ್ಯೂಟೋರಿಯಲ್ ಕ್ಲಾಸ್ ಗೆಂದು ಅಕ್ಟೋಬರ್ ೧ ರಂದು ಮನೆಯಿಂದ ಹೊರಟು ಬಂದವನು ನಾಪತ್ತೆಯಾಗಿದ್ದ. ಮನೆಯವರು ಆತನ ಗೆಳೆಯರ ಮನೆಯಲ್ಲಿ ಮತ್ತು ಸಂಬಂಧಿಕರ ಮನೆಗಳಲ್ಲಿ ಹೋಗಿ ವಿಚಾರಿಸಿ ಎಲ್ಲಾ ಕಡೆಗಳಲ್ಲಿ ಹುಡುಕಾಟ ನಡೆಸಿದರೂ ಅವನ ಪತ್ತೆಯಾಗಿರಲಿಲ್ಲ. ಬಳಿಕ ಸುಳ್ಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಯಿತು. ಪೋಲೀಸರು ಎಲ್ಲಾ ಠಾಣೆಗಳಿಗೆ ಮಾಹಿತಿ ನೀಡಿ ಹುಡುಕಾಟ ನಡೆಸಿದರೂ ಎಲ್ಲಿಯೂ ಆತನ ಸುಳಿವು ಸಿಗಲಿಲ್ಲ.
ಇತ್ತ ಮನೆಯವರು ದಿನಕಳೆದಂತೆ ಭಾರವಾದ ಮನಸ್ಸಿನಿಂದ ಮತ್ತೆ ಮಗನ ಪತ್ತೆಯ ಬಗ್ಗೆ ಜ್ಯೋತಿಷ್ಯರಲ್ಲಿಗೆ ಹೋಗಿ ಅವರ ನಿದೇಶನದ ಪ್ರಕಾರ ಹುಡುಕಾಡಿದರೂ ಪ್ರಯೋಜನವಾಗಲಿಲ್ಲ. ಮಗನ ಪತ್ತೆಗಾಗಿ ಹಲವು ದೇವಸ್ಥಾನಗಳಿಗೆ ತೆರಳಿ ದೇವರ ಹಾಗೂ ದೈವದ ಮೋರೆ ಹೋಗಿದ್ದರು.
ಯಾವುದೇ ಪ್ರಯೋಜನ ಕಾಣದಿದ್ದಾಗ ಜ್ಯೋತಿಷ್ಯರ ನಹೇಳಿಕೆಯಂತೆ ಮಗ ಮತ್ತೆ ಬರುತ್ತಾನೆ ಎಂಬ ಭರವಸೆಯಿಂದ ದೇವರ ಮೇಲೆ ಭಾರ ಹಾಕಿ ದಿನ ಕಳೆದಿದ್ದರು.
ಫೋನ್ ಕರೆ ಬಂತು ! :
ಕೆಲವು ದಿನಗಳ ಹಿಂದೆ ಇದ್ದಕ್ಕಿದ್ದಂತೆ ಒಂದು ಅಪರಿಚಿತ ನಂಬರಿನಿಂದ ಸೀತಾರಾಮರವರ ಮೊಬೈಲಿಗೆ ಕರೆ ಬಂತು. ರಿಸೀವ್ ಮಾಡಿ ಮಾತ ನಾಡಿದಾಗ ಮೋಕ್ಷಿತ್‌ನ ಧ್ವನಿ ಕೇಳಿ ಸಿತು. ಇದ್ದಕಿದ್ದಂತೆ ಗದ್ಗದಿತರಾಗಿ ವಿಚಾ ರಿಸತೊಡಗಿದರು.
ಅವನು ಇರುವ ವಿಳಾಸ ತಿಳಿದು ಸೀತಾರಾಮರು ಅವನು ಇರುವ ಸ್ಥಳಕ್ಕೆ ತೆರಳಿ ಮಗನನ್ನು ಮನೆಗೆ ಕರೆತಂದರು. ಪತ್ತೆಯಾದ ಮಗನ ಕುರಿತು ಸುಳ್ಯ ಪೋಲಿಸರಿಗೆ ಮಾಹಿತಿ ನೀಡಲಾಯಿತು. “ಈಗ ಮಗ ಮನೆಯಲ್ಲಿದ್ದು ಮತ್ತೆ ಶಾಲೆಗೆ ಹೋಗುವ ಬಗ್ಗೆ ಆಸಕ್ತಿ ವಹಿಸಿದ್ದಾನೆ. ಆರೋಗ್ಯದಲ್ಲಿ ಏನೂ ತೊಂದರೆ ಇಲ್ಲ” ಎಂದು ಸೀತಾರಾಮರು ಪತ್ರಿಕೆಗೆ ತಿಳಿಸಿದ್ದಾರೆ.
ಹಣ ಸಂಪಾದನೆಗೆಂದು ತೆರಳಿದ್ದ : ಮೋಕ್ಷಿತ್‌ಗೆ ಸುಳ್ಯದ ಗ್ಯಾರೇಜ್ ಮೆಕ್ಯಾನಿಕ್ ಎಂದು ಹೇಳಿಕೊಂಡ ಅಪರಿಚಿತ ವ್ಯಕ್ತಿಯೊಬ್ಬರ ಪರಿಚಯವಾಯಿತು. ಆತನ ಜತೆ ಹಣ ಸಂಪಾದಿಸಲು ಕೆಲಸಕ್ಕೆಂದು ಅಕ್ಟೋಬರ್ ೧ ರಂದು ಸುಳ್ಯದಿಂದ ಮೈಸೂರಿಗೆ ಬಸ್‌ನಲ್ಲಿ ಪ್ರಯಾಣ ಬೆಳೆಸಿದ್ದರು. ಮೈಸೂರಿಗೆ ತಲುಪುವಷ್ಟರಲ್ಲಿ ಕರೆದೊಯ್ದ ವ್ಯಕ್ತಿ ಕಾಣಿಸಲಿಲ್ಲ.
“ನನ್ನ ಬಳಿ ಇದ್ದ ಬ್ಯಾಗ್‌ನ್ನು ಅವರು ತೆಗೆದುಕೊಂಡು ಹೋಗಿದ್ದರು. ಅದೃಷ್ಟವಶಾತ್ ನನ್ನ ಪ್ಯಾಂಟಿನ ಕಿಸೆಯಲ್ಲಿ ಹಣ ರೂ. ೨೫೦೦ ದಷ್ಟು ಉಳಿದಿತ್ತು. ನಂತರ ಒಂದು ವಾರ ಮೈಸೂರಿನ ಬಸ್ ನಿಲ್ದಾಣದಲ್ಲಿ ಕಾಲ ಕಳೆದಿದ್ದೆ. ಬಳಿಕ ಅಲ್ಲಿಯ ಬ್ರೋಕರ್ ನ ಸಹಾಯದಿಂದ ಕೆಲಸಕ್ಕೆಂದು ನಂಜನಗೂಡಿಗೆ ಹೋದೆ ಅಲ್ಲಿ ಹೋಟೇಲೊಂದರಲ್ಲಿ ಕೆಲಸಕ್ಕೆ ಸೇರಿದೆ. ೬ ತಿಂಗಳು ಆ ಹೋಟೇಲಿನಲ್ಲಿ ಕೆಲಸ ಮಾಡಿದೆ. ಆದರೆ ಹೋಟೇಲಿನ ಮಾಲಕ ಸಂಬಳ ಸರಿಯಾಗಿ ನೀಡಲಿಲ್ಲ. ಫೋನ್ ಮಾಡಲು ಅವಕಾಶ ಕೊಡದೆ ಹಿಂಸೆ ನೀಡಿದರು. ಒಂದು ದಿನ ತರಕಾರಿ ತರಲು ಹಣ ನೀಡಿ ಕಳಿಸಿದರು.ಮತ್ತೆ ಆಕಡೆ ಹೋಗದೇ ಅಲ್ಲಿಂದ ಮತ್ತೆ ಬೇರೊಬ್ಬ ಬ್ರೋಕರಿನ ಸಹಾಯ ಪಡೆದು ನೇರವಾಗಿ ಮೈಸೂರಿಗೆ ವಾಪಾಸ್ಸಾಗಿ ಕೊಳ್ಳೆಗಾಲದಲ್ಲಿರುವ ಕೆಂಪೇಗೌಡ ಹೋಟೇಲಿನಲ್ಲಿ ಕೆಲಸಕ್ಕೆ ಸೇರಿದೆ. ಈ ಸಂದರ್ಭದಲ್ಲಿ ಅವರು ನನ್ನಬಗ್ಗೆ ಕಾಳಜಿ ವಹಿಸಿ ವಿಚಾರಿಸಿ ನನಗೆ ಒಳ್ಳೆಯ ಬುದ್ಧಿವಾದ ಹೇಳಿ ಮನೆಗೆ ಹಿಂತಿರುಗುವಂತೆ ಸಲಹೆ ನೀಡಿದರು. ಅದರಂತೆ ಅವರ ಫೋನಿನಿಂದಲೇ ಮನೆಗೆ ಕರೆ ಮಾಡಿ ಕರೆದುಕೊಂಡು ಹೋಗಲು ಬರುವಂತೆ ತಿಳಿಸಿ ವಿಳಾಸ ನೀಡಿz“ ಎಂದು ಮೋಕ್ಷಿತ್ ಸುದ್ದಿಗೆ ಕಾಣೆಯಾದ ಬಗ್ಗೆ ವಿವರಣೆ ನೀಡಿದ್ದಾನೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.