HomePage_Banner
HomePage_Banner
Breaking News

ಬತ್ತಿ ಹೋದ ಬಾವಿಯ ಸುತ್ತಮುತ್ತ..!

ಬಿರು ಬಿಸಿಲಿನ ಧಗೆ ತಾಳಲಾರದೆ ಎಲ್ಲೆಲ್ಲೂ ಹಾಹಾಕಾರ ಮುಗಿಲು ಮುಟ್ಟಿದೆ. ಮಠ ಮಂದಿರಗಳಲ್ಲಿ ಪೂಜೆ ಪ್ರಾರ್ಥನೆ ನಡೆಸುತ್ತಿರುವ ಭಕ್ತರು ಮಳೆಗಾಗಿ ದೇವರ ಮೊರೆ ಹೋಗುತ್ತಿದ್ದಾರೆ. ಪ್ರಕೃತಿ ಮುನಿಸಿದ ಕಾರಣವೋ, ಜನರೇ ಪ್ರಕೃತಿಯ ವಿರುದ್ಧ ನಡೆಸಿದ ಪಿತೂರಿಯಿಂದಲೋ ಸಕಾಲಕ್ಕೆ ಮಳೆ ಬಾರದೆ ಬರಗಾಲ ಎದುರಿಸುವಂತಾಗಿದೆ. ಈ ಬರಗಾಲದ ಬಿಸಿ ಸುಳ್ಯಕ್ಕೂ ತಟ್ಟಿದ್ದು ಕುಡಿಯುವ ನೀರಿಗೂ ಪರದಾಡುವಂತಾಗಿದೆ. ಹಿಂದೆಂದೂ ಬತ್ತದೆ ಇದ್ದ ನೀರಿನ ಮೂಲಗಳು ಕೂಡಾ ಬತ್ತಿದ್ದು, ಜನಸಾಮಾನ್ಯರಿಗೆ ದಿಕ್ಕೇ ತೋಚದಂತಾಗಿದೆ.
ಸುಳ್ಯದ ಬೂಡು ಪರಿಸರದ ಬಿ.ಗೋಪಾಲ ಆಚಾರ್ಯ ಹಾಗೂ ಗಣೇಶ ಆಚಾರ್ಯರ ಮನೆಯಲ್ಲಿ ಸುರಂಗ ಬಾವಿಯೊಂದಿದ್ದು, ಕಳೆದ ಸುಮಾರು ೮೦ ವರ್ಷಗಳಿಂದ ಈ ಬಾವಿ ಇಲ್ಲಿನ ಪರಿಸರದ ಜನರ ದಾಹ ತೀರಿಸುತ್ತಿದ್ದು, ದಾರಿಹೋಕರು ಕೂಡಾ ಕುಡಿಯುವ ನೀರಿಗಾಗಿ ಇದೇ ಬಾವಿಯನ್ನು ಆಶ್ರಯಿಸಿದ್ದರು. ಸ್ಥಳೀಯರ ಪಾಲಿಗೆ ಈ ಮನೆ ನೀರು ಕುಡಿಯುವ ಮನೆ ಎಂದೇ ಪ್ರಸಿದ್ಧಿ ಪಡೆದಿದೆ. ಬಾಯಾರಿ ಬಂದವರಿಗೆ ನೀರು ನೀಡುತ್ತಿದ್ದ ಈ ಬಾವಿಯಲ್ಲಿ ಇದೀಗ ಬಿಸಿಲಿನ ಧಗೆಯಿಂದಾಗಿ ಒಂದು ಹನಿಯೂ ನೀರು ಸಿಗುತ್ತಿಲ್ಲ.
ಬಿ.ಗೋಪಾಲ ಆಚಾರ್ಯರ ತಂದೆ ದಿ.ರಾಮಯ್ಯ ಆಚಾರ್ಯ ಹಾಗೂ ಅಜ್ಜ ದಿ.ಮಂಜುನಾಥ ಆಚಾರ್ಯರು ೮೦ ವರ್ಷಗಳ ಹಿಂದೆ ಈ ಬಾವಿಯನ್ನು ನಿರ್ಮಿಸಿದ್ದು, ಇದಕ್ಕೆ ಸಂಪರ್ಕ ಕಲ್ಪಿಸಲು ಸುರಂಗ ಕೂಡಾ ನಿರ್ಮಿಸಿದ್ದಾರೆ. ಈ ಮನೆಯ ಮೊಮ್ಮಕ್ಕಳು ರಜೆಯಲ್ಲಿ ಊರಿಗೆ ಬಂದಾಗ ಆಟ ಆಡುವ ಚೆಂಡು ಬಾವಿಯೊಳಗೆ ಬಿದ್ದಾಗ ಇದೇ ಸುರಂಗದ ಮೂಲಕ ಇಳಿದು ತರುತ್ತಿದ್ದರಂತೆ..! ಬಹಳ ವರ್ಷಗಳ ಹಿಂದೆ ಈ ಮನೆಯಲ್ಲಿ ಏತದ ವ್ಯವಸ್ಥೆಯಿದ್ದು, ಮೂರು ಕಡೆಗಳಿಂದಲೂ ನೀರನ್ನು ಸೇದಲಾಗುತ್ತಿತ್ತು. ಆ ಬಳಿಕ ಅನುಕೂಲಕ್ಕೆ ತಕ್ಕಂತೆ ಮನೆಯೊಳಗಿನಿಂದಲೇ ನೀರು ಸೇದುವ ವ್ಯವಸ್ಥೆ ಮಾಡಲಾಯಿತು. ಈ ಬಾವಿಯ ನೀರನ್ನೇ ಆಶ್ರಯಿಸಿರುವ ಮೂರು ಮನೆಗಳಿದ್ದು, ಗೋಪಾಲ ಆಚಾರ್ಯರ ತಮ್ಮ ಗಣೇಶ ಆಚಾರ್ಯ ಹಾಗೂ ಅಕ್ಕ ಯಶೋಧಾರ ಮನೆಗೆ ಇದೇ ನೀರನ್ನು ಬಳಸಲಾಗುತ್ತಿದ್ದು, ಪ್ರಸ್ತುತ ಈ ಬಾವಿ ಬತ್ತಿಹೋದ ಪರಿಣಾಮ ಹನಿ ನೀರಿಗೂ ಪರದಾಡುವಂತಾಗಿದೆ. ಬಾವಿ ತೋಡಿದ ದಿ.ಮಂಜುನಾಥ ಆಚಾರ್ಯರು ತಮ್ಮ ಮಕ್ಕಳಲ್ಲಿ ಯಾರೇ ನೀರು ಕೇಳಿದರೂ ಇಲ್ಲ ಎನ್ನಬಾರದು ಎಂದು ಹೇಳಿದ್ದರಂತೆ. ಅಲ್ಲಿಂದ ಇಲ್ಲಿಯವರೆಗೆ ಈ ಮನೆಯವರು ಯಾರೊಬ್ಬರಿಗೂ ನೀರಿಲ್ಲ ಎಂದು ಹೇಳದೆ ಬೇಕಾದಷ್ಟು ನೀರು ಕೊಡುತ್ತಿದ್ದರು. ಇದಲ್ಲದೇ ಬೂಡು ಪರಿಸರದಲ್ಲಿ ನಿರ್ಮಾಣಗೊಂಡ ಕೆ.ಇ.ಬಿ. ಸಿಬ್ಬಂದಿಗಳ ವಸತಿ ಗೃಹಕ್ಕೆ ಹಾಗೂ ಸ್ಥಳೀಯ ಪರಿಸರದಲ್ಲಿ ನಿರ್ಮಾಣಗೊಂಡ ಬಹುತೇಕ ಕಟ್ಟಡಗಳಿಗೆ ಇದೇ ಬಾವಿಯ ನೀರನ್ನು ಬಳಸಲಾಗಿತ್ತು.
ಈ ರೀತಿಯಲ್ಲಿ ಬೂಡು ಪರಿಸರದ ಹಲವು ಜನರ ದಾಹ ತಣಿಸಿದ ಬಾವಿ ಇದೀಗ ಸೊರಗಿ ಹೋಗಿರುವುದನ್ನು ಕಂಡಾಗ ಸ್ಥಳೀಯ ನಿವಾಸಿಗಳು ಬೇಸರ ಹಾಗೂ ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ.
                                                                                                                                        – ಮಧುಶ್ರೀ ಆಚಾರ್ಯ

Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.