Breaking News

ನಮ್ಮ ಗ್ರಾಮದ ಅಭಿವೃದ್ಧಿ ನಮ್ಮ ಕೈಯಲ್ಲಿ, ದ್ವೇಷ ಸಮಾಜಕ್ಕೂ, ಆರೋಗ್ಯಕ್ಕೂ ಒಳಿತಲ್ಲ : ಪ್ರೀತಿ, ವಿಶ್ವಾಸವೇ ಅಭಿವೃದ್ಧಿಗೆ, ಆರೋಗ್ಯಕರ ಸಮಾಜಕ್ಕೆ ದಾರಿ

Advt_Headding_Middle

ಗ್ರಾಮ ಸ್ವರಾಜ್ಯ ಅಂದರೆ ಜನರಿಗೆ ಅಧಿಕಾರ. ಅದು ದೊರೆಯಬೇಕಾದರೆ, ಜನರು ಅದಕ್ಕಾಗಿ ಪ್ರಯತ್ನ ಪಡಬೇಕು, ಜವಾಬ್ದಾರಿ ವಹಿಸಿಕೊಳ್ಳಬೇಕು ಎಂಬ ವಿಚಾರವನ್ನು ಮಹಾತ್ಮ ಗಾಂಧಿಯವರು ಹೇಳಿದ್ದಾರೆ. ಜನರ ಆ ರೀತಿಯ ಪ್ರಯತ್ನಕ್ಕೆ ವೇದಿಕೆಯಾಗಿ `ಸುದ್ದಿ’ ಪತ್ರಿಕೆ `ನಮ್ಮ ಗ್ರಾಮದ ಅಭಿವೃದ್ಧಿ’ ಎಂಬ ಅಂಕಣವನ್ನು ಪ್ರಾರಂಭಿಸಿದೆ. ಸುಳ್ಯ ನಗರ ಪಂಚಾಯತಿಗೆ ನೂತನ ಸದಸ್ಯರು ಆಯ್ಕೆಯಾಗಿದ್ದಾರೆ.

ಅವರುಗಳು ತಮ್ಮ ಅವಧಿಯಲ್ಲಿ ಮಾಡುವ ಕೆಲಸಗಳ ವಿವರಗಳನ್ನು ಪತ್ರಿಕೆಯ ಮುಖಾಂತರ ಜನತೆಗೆ ನೀಡಿದ್ದಾರೆ. ಅದನ್ನು ಅವರು ಕಾರ್ಯರೂಪಕ್ಕೆ ತರುವಂತೆ ನೋಡಿಕೊಳ್ಳಬೇಕಾದದ್ದು ಜನರ ಕರ್ತವ್ಯ. ಅದೇ ರೀತಿ ತಮ್ಮ ತಮ್ಮ ಗ್ರಾಮಗಳಲ್ಲಿರುವ ವ್ಯವಸ್ಥೆಯನ್ನು ಅಭಿವೃದ್ಧಿಗೊಳಿಸುವ ಜವಾಬ್ಧಾರಿಯನ್ನು ಆಯಾ ಗ್ರಾಮದ ಜನರೇ ನೋಡಿಕೊಳ್ಳಬೇಕಾಗಿದೆ. ಈ ಅಭಿವೃದ್ಧಿಯ ಕೆಲಸ ಆಗಬೇಕಾದರೆ ಊರಿನಲ್ಲಿ ಶಾಂತಿ, ಸೌಹಾರ್ದತೆ ಇರುವಂತೆ ನೋಡಿಕೊಳ್ಳಬೇಕಾದದ್ದು ಅತ್ಯಂತ ಅಗತ್ಯದ ವಿಷಯವಾಗಿದೆ. ಉದಾಹರಣೆಗೆ ಸುಳ್ಯದ ಮಡಪ್ಪಾಡಿಯಲ್ಲಿ ಎಂ.ಡಿ.ವಿಜಯಕುಮಾರ್ ನೇತೃತ್ವದ ತಂಡ ಅಂತಹ ಒಂದು ಕೆಲಸವನ್ನು ಮಾಡುತ್ತಿದೆ. ಊರಿನಲ್ಲಿ ಸೇವೆ ಮಾಡುವುದರೊಂದಿಗೆ ಸೌಹಾರ್ದತೆಗೆ ಕಾರಣವಾಗಿದ್ದಾರೆ. ಆದ್ದರಿಂದ ಎಷ್ಟೇ ರಾಜಕೀಯವಿದ್ದರೂ ಯಾರೇ ಅಧಿಕಾರಕ್ಕೆ ಬಂದರೂ ಆ ಊರಿನಲ್ಲಿ ರಾಜಕೀಯ ಪ್ರೇರಿತ ಗಲಾಟೆಗಳು ಕಂಡುಬರುವುದಿಲ್ಲ. ಅಭಿವೃದ್ಧಿಗೆ ಎಲ್ಲರೂ ಕೈಜೋಡಿಸುತ್ತಾರೆ. ಇನ್ನೊಬ್ಬರ ಬಗ್ಗೆ ದ್ವೇಷವಿಟ್ಟುಕೊಳ್ಳುವುದು ಮತ್ತು ಅದನ್ನು ಸಾಧಿಸಲು ಪ್ರಯತ್ನಿಸುವುದು ಸಮಾಜಕ್ಕೆ ಒಳ್ಳೆಯದಲ್ಲ. ಅಷ್ಟು ಮಾತ್ರವಲ್ಲ ಡಾ.ಬಿ.ಎಂ ಹೆಗ್ಡೆ ಹೇಳಿದಂತೆ ಆ ವ್ಯಕ್ತಿಯ ಆರೋಗ್ಯಕ್ಕೂ ಒಳಿತನ್ನು ಮಾಡುವುದಿಲ್ಲ. ದ್ವೇಷ ವ್ಯಕ್ತಿಯ ಮನಸ್ಸನ್ನು ಕೊರೆಯುವುದು ಮಾತ್ರವಲ್ಲ, ಅವನ ದೇಹದಲ್ಲಿ ಹಾನಿಕಾರಕ ರಸಗಳ ಉತ್ಪನ್ನದಿಂದ ದೇಹಕ್ಕೂ ಹಾನಿಮಾಡುತ್ತದೆ, ಅನಾರೋಗ್ಯಕ್ಕೂ ಕಾರಣವಾಗುತ್ತದೆ ಎಂದು ಹೇಳಿದ್ದಾರೆ. ಇನ್ನೊಬ್ಬರ ಬಗ್ಗೆ ಪ್ರೀತಿ ವಿಶ್ವಾಸವಿದ್ದರೆ ಆರೋಗ್ಯಕರ ರಸಗಳ ಉತ್ಪನ್ನದಿಂದ ಆ ವ್ಯಕ್ತಿಯ ಮನಸ್ಸು ಚೆನ್ನಾಗಿರುತ್ತದೆ.

ಆರೋಗ್ಯವೂ ಉತ್ತಮವಾಗಿರುತ್ತದೆ ಎಂದೂ ಹೇಳಿದ್ದಾರೆ. ಆದುದರಿಂದ ದ್ವೇಷ ಇಟ್ಟುಕೊಂಡ ವ್ಯಕ್ತಿಗಳಿಂದ ಅವರ ಆರೋಗ್ಯಕ್ಕೂ ಹಾನಿಯಾಗುತ್ತದೆ, ಸಮಾಜಕ್ಕೂ ಹಾನಿಯಾಗುತ್ತದೆ. ಅವರೂ ಅಭಿವೃದ್ಧಿಯಾಗುವುದಿಲ್ಲ (ನಾಶವಾಗಬಹುದು). ಪ್ರೀತಿ, ಸೌಹಾರ್ದತೆ ಇದ್ದಲ್ಲಿ ವ್ಯಕ್ತಿಗಳ ಆರೋಗ್ಯವೂ ಮಾತ್ರವಲ್ಲ, ಊರಿನ ಆರೋಗ್ಯವೂ ಚೆನ್ನಾಗಿರುತ್ತದೆ. ಅಭಿವೃದ್ಧಿಗೂ ಕಾರಣವಾಗುತ್ತದೆ. ಅವರುಗಳೂ ಅಭಿವೃದ್ಧಿಯಾಗುತ್ತಾರೆ. ಈ ಮಾತನ್ನು ಸುಬ್ರಹ್ಮಣ್ಯದ ಘಟನೆಗೆ ಅನ್ವಯಿಸಬೇಕು. ಅಲ್ಲಿ ಶಾಂತಿ, ಸೌಹಾರ್ದತೆ ನೆಲೆಸಿ ಊರಿನ ಮತ್ತು ಜನರ ಅಭಿವೃದ್ಧಿಯಾಗಬೇಕಾದರೆ ದ್ವೇಷದ ವಾತಾವರಣ ಹರಡುವವರನ್ನು ನಿಯಂತ್ರಿಸಬೇಕು. ಅಂತಹವರನ್ನು ಹೀರೋಗಳನ್ನಾಗಿ ಮಾಡಲೇ ಬಾರದು. ಪ್ರೀತಿ ವಿಶ್ವಾಸ ಹರಡುವವರನ್ನು ಪ್ರೋತ್ಸಾಹಿಸಬೇಕು ಅಂತವರು ನಾಯಕತ್ವ ವಹಿಸುವಂತಾಗಬೇಕು ಎಂದು ಹೇಳಿದರೆ ತಪ್ಪಾದೀತೆ? ಇಂದಿನ ರಾಜಕೀಯದ ಸ್ಥಿತಿಯಲ್ಲಿ ಯಾವುದೇ ಊರಿನ ಅಭಿವೃದ್ಧಿಗಂತೂ ಅದು ಅತ್ಯಂತ ಅಗತ್ಯದ ವಿಷಯ ಎಂದು ಹೇಳಲು ಇಚ್ಚಿಸುತ್ತೇನೆ. ಹಾಗೆಯೇ ಅಂತಹ ಉzಶ ಇಟ್ಟುಕೊಂಡು ನಮ್ಮ ನಮ್ಮ ಗ್ರಾಮದ ಅಭಿವೃದ್ಧಿಯ ಬಗ್ಗೆ ಕೆಲಸ ಮಾಡಲು ಜನರು ಮುಂದೆ ಬರಬೇಕು ಎಂದು ಆಶಿಸುತ್ತೇನೆ.

– ಡಾ. ಯು.ಪಿ.ಶಿವಾನಂದ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.