HomePage_Banner
HomePage_Banner
HomePage_Banner

ಪುಷ್ಪ ಲೋಕದ ವಿಸ್ಮಯ ! ಬ್ರಹ್ಮ ಕಮಲ ಎಂಬ ರಾತ್ರಿ ರಾಣಿ…


ಹೌದು ನಮ್ಮ ಮನೆಯಲ್ಲರಳಿದ ಬ್ರಹ್ಮ ಕಮಲ ನನ್ನ ಮನಸ್ಸನ್ನೂ ಅರಳಿಸಿದೆ. ಹೂವುಗಳೆಂದರೆ ಯಾರಿಗೆ ತಾನೇ ಇಷ್ಟವಿಲ್ಲ? ಅದೇ ರೀತಿ ನನಗೂ ಹೂವುಗಳೆಂದರೆ ತುಂಬಾ ಪ್ರೀತಿ ಮನೆಯ ಮುಂದಿರುವ ಹೂವಿನ ಗಿಡಗಳ ಬುಡಕ್ಕೆ ಬೆಳಿಗ್ಗೆ ಎದ್ದಕೂಡಲೇ ಒಂದು ರೌಂಡ್ ಹೊಡೆಯದಿದ್ದರೆ ನನಗೆ ನೆಮ್ಮದಿಯೂ ಇಲ್ಲ.

ಕಳೆದ ವಾರ ಹೀಗೇ ಹೂವಿನ ಗಿಡಗಳನ್ನು ನೋಡಿಕೊಂಡು ಸುತ್ತುತ್ತಿರುವಾಗ ನಾನು ೨ ವರುಷಗಳ ಹಿಂದೆ ನೆಟ್ಟಿದ್ದ ಬ್ರಹ್ಮಕಮಲ ಹೂವಿನ ಗಿಡದಲ್ಲಿ ಮೊಗ್ಗೊಂದು ಗೋಚರಿಸಿತು. ತುಂಬಾ ಸಂತೋಷವಾಯಿತು ನನಗೆ. ಯಾಕೆಂದರೆ ಅಷ್ಟೂ ಪ್ರೀತಿಯಿಂದ ಅದನ್ನು ಸಾಕಿ ಸಲಹಿದ್ದೆ. ಯಾವಾಗ ಹೂ ಬಿಡುತ್ತದೋ ಎಂಬ ಕಾತರತೆಯಿತ್ತು. ಮೊಗ್ಗು ನನ್ನ ಕಣ್ಣಿಗೆ ಬಿದ್ದ ಮೇಲಂತೂ ಎಲ್ಲರನ್ನು ಕರೆದು ಅದನ್ನು ತೋರಿಸಿದ್ದೆ. ಇನ್ನು ಇದು ಯಾವಾಗ ಅರಳಿ ಹೂವಾಗುವುದೋ ಅದರ ಚೆಲುವನ್ನು ಕಣ್ತುಂಬಿಕೊಳ್ಳಬೇಕೆಂಬ ಆಸೆ ನನ್ನನ್ನು ಕಾಡತೊಡಗಿತು.

ಪ್ರತಿ ಸಂಜೆ, ಬೆಳಿಗ್ಗೆ ಅದರ ಬಳಿ ಹೋಗಿ ಅರಳಿದೆಯೋ ಎಂದು ಇಣಿಕಿ ನೋಡುವುದೇ ಆಯಿತು. ಅಬ್ಬಾ! ಅಂತೂ ಅರಳಿದೆ ಬ್ರಹ್ಮಕಮಲ !
’ಹೂವು ಚೆಲುವೆಲ್ಲಾ ತನ್ನದೆಂದಿತು’ ಎಂಬಂತೆ ಈ ಹೂವಿನ ಕುಸುಮಗಳು ಪ್ರಕೃತಿಯ ಅಂದವನ್ನು, ಸೊಬಗನ್ನು ಹೆಚ್ಚಿಸಿವೆ ಎಂದೆನಿಸಿತು. ಪ್ರಕೃತಿಯ ಅತ್ಯಂತ ಸುಂದರವಾದ ಚೈತನ್ಯಪೂರ್ಣವಾದ ಸೃಷ್ಠಿ ಎಂದೆನಿಸಿತು.

ಈ ಹೂವಿನ ಚೆಲುವನ್ನು ನೋಡುತ್ತಿದ್ದ ಹಾಗೆಯೇ ವಿಚಲಿತಗೊಂಡ ಮನಸ್ಸುಗಳು ನವಚೈತನ್ಯ ಪಡೆದು ಗರಿಬಿಚ್ಚಿದ ಹಕ್ಕಿಯಂತೆ ಹಾರಾಡಿತ್ತು.
ಪ್ರಕೃತಿಯ ನಿಯಮದಂತೆ ಎಲ್ಲಾ ಹೂಗಳು ಸೂರ್ಯನ ಕಿರಣಗಳು ತಾಗಿದ ಮೇಲೆ ಅರಳುವುದುಂಟು. ಇದಕ್ಕೆ ಅಪವಾದವೆಂಬಂತೆ ಈ ರಾತ್ರಿ ರಾಣಿ ಹೂವು ರಾತ್ರಿಯ ಹೊತ್ತಿನಲ್ಲಿ ಅರಳುತ್ತದೆ! ಆ ಅಪರೂಪದ ಹೂವಿನ ಹೆಸರೇ ಬ್ರಹ್ಮಕಮಲ.

ಬ್ರಹ್ಮಕಮಲ ವರ್ಷಕ್ಕೊಮ್ಮೆ ಕಾಣಸಿಗುವ ವಿಶೇಷ ಹೂವುಗಳಲ್ಲಿ ಒಂದು. ಎಂಥವರಿಗೂ ಕಾದು ನೋಡುವ ಕಾತುರತೆ ಇದ್ದೇ ಇರುತ್ತೆ. ಈ ಹೂವು ಅರಳುವ ಪ್ರಕ್ರಿಯೆ ಬಲು ವಿಶಿಷ್ಟವಾದದ್ದು. ಹೂವು ಅರಳಿದಾಗ ಅದನ್ನು ನೋಡುವವರ ಮನವೂ ಅರಳುತ್ತದೆ. ಎಲ್ಲ ಹೂವುಗಳು ಮೊಗ್ಗಿನ ಹಂತ ದಾಟಿ ಅರಳಲೇಬೇಕು. ಆ ಅರಳುವ ಹಂತವನ್ನು ಯಾರೂ ಅಷ್ಟು ಕುತೂಹಲವಾಗಿ ಗಮನಿಸುವುದಿಲ್ಲ. ಆದರೆ ಈ ಹೂವಿದೆಯಲ್ಲ, ಇದರ ವೈಶಿಷ್ಟ್ಯವೇ ವಿಭಿನ್ನವಾದದ್ದು. ಈ ಹೂವನ್ನು ಬೆಳೆಸುವ ಎಲ್ಲರೂ ಅದು ಅರಳುವಾಗ ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಕಾದುಕುಳಿತಿರಬೇಕು. ಆ ಕ್ಷಣಕ್ಕಾಗಿ ಕಾದಿದ್ದೆ. ಏಕೆಂದರೆ, ಅರಳಿ ವಿಸ್ಮಯ ಮೂಡಿಸುವ ಈ ಹೂವಿನ ಆಯಸ್ಸು ತುಂಬಾ ಕಡಿಮೆ. ರಾತ್ರಿಯರಳಿ ಬೆಳಗಾಗುವ ಹೊತ್ತಿಗೆ ಮುದುಡಿ ಮುದ್ದೆಯಾಗಿರುತ್ತದೆ. ಹೌದು, ಅದೇ ಬ್ರಹ್ಮ ಕಮಲ. ವರ್ಷದಲ್ಲಿ ಒಮ್ಮೆ ಮಾತ್ರ ಅರಳುವ ಈ ಹೂವು ಸೂರ್ಯನ ಬೆಳಕಿನಲ್ಲಿ ಮೊಗ್ಗಾಗಿ ರಾತ್ರಿ ಚಂದ್ರ ಬರುವುದನ್ನು ಕಾದು, ರಾತ್ರಿ ಅರಳಿ ಬೆಳಗಾಗುವ ಮುಂಚೆಯೇ ಕಮರುವ ಈ ಪುಷ್ಪವೆ ರಾತ್ರಿಯ ರಾಣಿ.


ಈ ಸಮಯದಲ್ಲಿ ಬ್ರಹ್ಮ ಕಮಲ ಹೂವಿನದೆ   ದರ್ಬಾರು. ವರ್ಷಕೊಮ್ಮೆ ರಾತ್ರಿ ಸಮಯದಲ್ಲಿ ಮಾತ್ರ ಅರಳುವ ಹೂವುಗಳಲ್ಲಿ ಬ್ರಹ್ಮ ಕಮಲವೂ ಒಂದಾಗಿದೆ. ಹಿಂದೂ ಧರ್ಮದ ನಂಬಿಕೆಯ ಪ್ರಕಾರ ಬಿಳಿ ಕಮಲವೆಂದೂ, ವೈಜ್ಞಾನಿಕವಾಗಿ ಇದನ್ನು ಸೋಸೂರಿಯಾಅಬ್ವಲ್ಲಾಟ ಎಂದೂ ಕರೆಯಲ್ಪಡುತ್ತದೆ. ಉತ್ತರಖಾಂಡ ಮತ್ತು ಹಿಮಾಲಯಗಳಲ್ಲಿ ಹೆಚ್ಚಾಗಿ ಕಂಡುಬರುವ ಈ ಹೂವು ಅತೀ ಎತ್ತರದಲ್ಲಿ ಬೆಳೆಯುವ ಹೂವೆಂದು ಹೇಳುತ್ತಾರೆ. ಸೃಷ್ಟಿಕರ್ತ ಬ್ರಹ್ಮನ ಕೈಯಲ್ಲಿ ಈ ಹೂ ಇರುವುದರಿಂದಲೋ ಏನೊ ಇದನ್ನು ಬ್ರಹ್ಮ ಕಮಲವೆಂದು ಕರೆಯುತ್ತಾರೆ.
ಇದಕ್ಕೊಂದು ಪೌರಾಣಿಕ ಹಿನ್ನೆಲೆಯೂ ಇದೆ. ಪುರಾಣದ ಪ್ರಕಾರ, ಗಣೇಶನ ತಲೆಯನ್ನು ಕತ್ತರಿಸಿದ ನಂತರ ಶಿವನು ಆನೆಯ ತಲೆಯನ್ನು ಜೋಡಿಸಿ ಈ ಹೂವಿನ ನೀರನ್ನು ಪ್ರೋಕ್ಷಿಸಿ ಬದುಕಿಸಿದರೆಂದೂ ಪ್ರತೀತಿಯಿದೆ. ಅಷ್ಟೇ ಅಲ್ಲ ಪಾಂಡವರು ತಮ್ಮ ವನವಾಸ ಕಾಲದಲ್ಲಿ ದ್ರೌಪದಿ ಈ ಹೂವನ್ನು ತಂದು ಕೊಡುವಂತೆ ತನ್ನ ಪತಿಯಾದ ಭೀಮನಿಗೆ ಹೇಳಿದ್ದಾಗಿ ಹಿನ್ನೆಲೆಯಿದೆ. ಬ್ರಹ್ಮ ಕಮಲ ಹೂ ಅರಳುವುದನ್ನು ಕಾದು ತಮ್ಮ ಮನಸ್ಸಿನ ಇಂಗಿತವನ್ನು ಬೇಡಿಕೊಂಡರೆ ಅವರ ಆಸೆ ಈಡೇರುತ್ತದೆ ಎಂಬ ನಂಬಿಕೆಯೂ ಇದೆ. ಇಷ್ಟೇ ಅಲ್ಲ ಈ ಹೂವು ಅರಳುವ ಮನೆಯವರು ಸಂಪತ್ಭರಿತರಾಗುತ್ತಾರೆ ಎಂಬ ಪ್ರತೀತಿ ಕೂಡ ಇದೆ.
ಈ ಪುಷ್ಪವನ್ನು ಹುಡುಕುತ್ತಾ ಹೋದ ಭೀಮನಿಗೆ ತನ್ನ ಸಹೋದರನಾದ ಹನುಮಂತನ ದರ್ಶನವಾಗುತ್ತದೆ. ರಾಮಾಯಣದಲ್ಲಿ, ಯುದ್ಧದಲ್ಲಿ ಪ್ರಜ್ಞೆ ಕಳೆದುಕೊಂಡ ಲಕ್ಷ್ಮಣನ ಮೇಲೆ ಸಂಜೀವಿನಿ ಪರ್ವತದಿಂದ ತಂದ ಬ್ರಹ್ಮಕಮಲದ ನೀರನ್ನು ಚಿಮುಕಿಸಿದಾಗ ಆತ ಮರುಜೀವ ಪಡೆದನೆಂದು ಕತೆ ಹೇಳುತ್ತದೆ. ಹೀಗಾಗಿ ಈ ಪುಷ್ಪವನ್ನು ‘ಜೀವರಕ್ಷಕ’ ವೆಂದು ಬಣ್ಣಿಸಲಾಗಿದೆ.ಇದರ ಎಲೆ, ಹೂವು, ಕಾಂಡ, ಬೇರು ಎಲ್ಲವೂ ಆರ್ಯುವೇದದ ಔಷಧಿಗಳಲ್ಲಿ ಬಳಕೆಯಾಗುತ್ತದೆ. ಪುಷ್ಪದ ದಳದಿಂದ ಸಿದ್ಧಪಡಿಸಿದ ತೈಲವನ್ನು ಮಾನಸಿಕ ಕಾಯಿಲೆಗಳಿಗೆ ಔಷಧಿಯಾಗಿ ಬಳಸುತ್ತಾರೆ. ಧಾರ್ಮಿಕವಾಗಿ ಅತ್ಯಂತ ಮಹತ್ವ ಪಡೆದಿದೆ. ಇನ್ನೂ ಕೆಲವರು ಅರಳಿದ ಈ ಪುಷ್ಪಕ್ಕೆ ಪೂಜೆಸಲ್ಲಿಸಿ ವರದಾಶಂಕರ ವ್ರತವನ್ನೂ ಆಚರಿಸುತ್ತಾರೆ.
ಇದೇನೆ ಇರಲಿ ಇಷ್ಟು ದೊಡ್ಡ ಗಾತ್ರದ ಹೂವೊದು ಅರಳಿ ನಿಂತಿರುವುದನ್ನು ರಾತ್ರಿ ವೇಳೆ ಕಣ್ತುಂಬಿಕೊಳ್ಳುವ ಸಂತಸವೇ ಬೇರೆ. ಈ ಹೂವಿನ ಅರಳಿದ ಕ್ಷಣ ನೋಡಿ ನನ್ನ ಜನ್ಮವಂತೂ ಸಾರ್ಥಕವಾದಂತಾಯಿತು. ನನಗೆ ಈ ಗಿಡವನ್ನು ಕೊಟ್ಟ ನನ್ನ ಅಮ್ಮನಿಗೊಂದು ದೊಡ್ಡ ಥ್ಯಾಂಕ್ಸ್…..

– ಜಯಶ್ರೀ ಕೊಯಿಂಗೋಡಿ

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.