Breaking News

ಬದುಕಿದ್ದಿದ್ದರೆ ಡಿಸ್ಟಿಂಕ್ಷನ್ ಲಿಸ್ಟ್‌ನಲ್ಲಿ ಆಕೆಯ ಹೆಸರೂ ಇರುತ್ತಿತ್ತು… ಸಹಪಾಠಿಗಳಿಗೆ ನೆನಪಾಗುತ್ತಿದ್ದಾರೆ ಅಕ್ಷತಾ !

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

 

 

( ಬರಹ : ದುರ್ಗಾಕುಮಾರ್ ನಾಯರ್‌ಕೆರೆ )

ಒಂದಷ್ಟು ಸಂತಾಪಗಳು, ಮತ್ತೊಂದಷ್ಟು ಖಂಡನೆ, ಒಂದೆರಡು ಕ್ಯಾಂಡಲ್ ಪ್ರತಿಭಟನೆ, ಕೆಲವು ಶ್ರದ್ಧಾಂಜಲಿ ಸಭೆಗಳು, ಕೆಲವರ ಮನೆ ಭೇಟಿ, ಸಹಾಯಧನ, ಸಾಂತ್ವಾನ …

ಹೀಗೆ ಕಾಲ ಕ್ರಮಿಸಿದ ಸಮಾಜದ ಪಾಲಿಗೆ ಆಕೆ ಮರೆತು ಹೋಗಿರಬಹುದೇನೋ?, ಆದರೆ ಅಂತಹ ಸಂಭಾವಿತ ಮತ್ತು ಪ್ರತಿಭಾನ್ವಿತ ಮಗಳನ್ನು ಸಾಕಿ ಸಲಹಿ ಬೆಳೆಸಿದ ಮಮತೆಯ ಮನೆಯವರಿಗೆ ಆಕೆಯ ನೆನಪು ಮರೆಯುವುದುಂಟೇ? ಮಿಗಿಲಾಗಿ ಮೊನ್ನೆ ಮೊನ್ನೆ ಸುಳ್ಯ ನೆಹರೂ ಸ್ಮಾರಕ ಕಾಲೇಜಿನಲ್ಲಿ ಪದವಿ ಫಲಿತಾಂಶ ನೋಡಿ ಕಾಲೇಜಿನ ಮೆಟ್ಟಿಲಿಳಿದು ಬಂದ ಸಹಪಾಠಿಗಳಿಗೆ ಆಕೆಯ ನೆನಪು ಬಾರದಿರಲು ಸಾಧ್ಯವೇ?

ಹೌದು, ಪದವಿ ವಿದ್ಯಾರ್ಥಿನಿ ಅಕ್ಷತಾ ಕರಣಿ ಕೊಲೆ ನಡೆದು ಒಂದೂವರೆ ವರ್ಷ ಸಮೀಪಿಸುತ್ತಿದೆ. ಮೊನ್ನೆ ಮೊನ್ನೆ ಪದವಿ ಫಲಿತಾಂಶ ಪ್ರಕಟವಾಯಿತು. ಹಲವು ವಿದ್ಯಾರ್ಥಿಗಳು ಸಾಧನೆ ಮೆರೆದು, ಡಿಸ್ಟಿಂಕ್ಷನ್‌ನಲ್ಲಿ ಪಾಸಾಗಿ ಅವರ ಫೋಟೋಗಳು ಪತ್ರಿಕೆಗಳಲ್ಲಿ ಅಚ್ಚಾಯಿತು. ಅಕ್ಷತಾ ಬದುಕಿದ್ದಿದ್ದರೆ ಆಕೆಯ ಫೋಟೋವೂ ಈ ಸಾಲಿನಲ್ಲಿ ಕಂಡುಬರುತ್ತಿತ್ತು. ಇದನ್ನು ನೆನಪು ಮಾಡಿಕೊಂಡೇ ಆಕೆಯ ಸಹಪಾಠಿಗಳು ಕಣ್ಣೀರಾಗಿರುವುದು…


ಇಷ್ಟಕ್ಕೂ ನಡೆದಿದ್ದೇನು?

ಅಕ್ಷತಾ ಕಾಸರಗೋಡು ಜಿಲ್ಲೆಯ ಮುಳ್ಳೇರಿಯದ ಕಾರಡ್ಕ ಗ್ರಾಮದ ಶಾಂತಿನಗರದ ಕರಣಿ ಮನೆಯ ರಾಧಾಕೃಷ್ಣ ಭಟ್ -ಶ್ರೀಮತಿ ದೇವಕಿ ದಂಪತಿಯ ಪುತ್ರಿ. ಸುಳ್ಯ ನೆಹರೂ ಸ್ಮಾರಕ ಕಾಲೇಜಿನಲ್ಲಿ ದ್ವಿತೀಯ ಬಿಎಸ್ಸಿ ವಿದ್ಯಾರ್ಥಿನಿಯಾಗಿದ್ದಳು. ತನ್ನ ಪ್ರೀತಿ ನಿರಾಕರಿಸಿದಳೆಂಬ ಕಾರಣಕ್ಕೆ ಸಹಪಾಠಿ ವಿದ್ಯಾರ್ಥಿ ನೆಲ್ಲೂರು ಕೆಮ್ರಾಜೆ ಗ್ರಾಮದ ಸುಳ್ಳಿ ನಿವಾಸಿ ಕಾರ್ತಿಕ್ ಈಕೆಯನ್ನು ಹಾಡ ಹಗಲೇ ನಡು ರಸ್ತೆಯಲ್ಲಿ ಚೂರಿಯಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಿದ್ದ.

ಕಾರ್ತಿಕ್ ಮತ್ತು ಅಕ್ಷತಾ ಒಂದೇ ತರಗತಿಯಲ್ಲಿ ಇದ್ದುದರಿಂದ ಸಹಜವಾಗಿಯೇ ಪರಸ್ಪರ ಮಾತನಾಡಿಕೊಳ್ಳುತ್ತಿದ್ದರು. ಆದರೆ ಇದನ್ನು ತಪ್ಪಾಗಿ ಅರ್ಥಮಾಡಿಕೊಂಡಿದ್ದ ಕಾರ್ತಿಕ್ ಆಕೆಯನ್ನು ಪ್ರೀತಿಸಲಾರಂಭಿಸಿದ್ದ. ಫೋನ್ ಮಾಡುವುದು, ಮೆಸೇಜ್ ಮಾಡುವುದು ನಡೆದಿತ್ತು. 2018 ರ ಫೆ.14 ರ ಪ್ರೇಮಿಗಳ ದಿನದಂದು ಕಾರ್ತಿಕ್ ಸಂದೇಶದ ಮೂಲಕ ಪ್ರೇಮ ನಿವೇದನೆ ಮಾಡಿಕೊಂಡಿದ್ದ. ಇದಕ್ಕೆ ಫೋನ್‌ನಲ್ಲಿ ಪ್ರತಿಕ್ರಿಯಿಸದ ಆಕೆ ಮುಖತ: ಕಂಡಾಗ ಪ್ರೀತಿಯನ್ನು ನಿರಾಕರಿಸಿದ್ದಳು. ಆ ಬಳಿಕ ಕಾರ್ತಿಕ್ ಫೋನ್ ಕರೆ ಮತ್ತು ಸಂದೇಶಗಳನ್ನು ಹೆಚ್ಚುಹೆಚ್ಚಾಗಿಯೇ ಕಳುಹಿಸತೊಡಗಿದ್ದುದರಿಂದ ಫೆ.19  ರಂದು ಆಕೆ ಕಾಲೇಜಿನಲ್ಲಿ ಕಾರ್ತಿಕ್‌ನನ್ನು ತರಾಟೆಗೆತ್ತಿಕೊಂಡಿದ್ದಳು. ಈ ವಿಚಾರವನ್ನು ಗೆಳತಿಯರೊಂದಿಗೂ ಹಂಚಿಕೊಂಡಿದ್ದಳು.

ಅಂದು ಬಂದಿತ್ತು ಆ ದುರ್ದಿನ:

ಕಾಲೇಜಿಗೆ ಸೇರಿದ ಆರಂಭದಲ್ಲಿ ಅಕ್ಷತಾ ಕನಕಮಜಲಿನ ತನ್ನ ಸಂಬಂಧಿಕರ ಮನೆಯಿಂದ ಕಾಲೇಜಿಗೆ ಬಂದು ಹೋಗುತ್ತಿದ್ದಳು. 2017 ರ ಡಿಸೆಂಬರ್‌ನಲ್ಲಿ ಅಕ್ಷತಾಳ ಅಕ್ಕನ ವಿವಾಹವಾಗಿ ಆಕೆ ಬೆಂಗಳೂರಿಗೆ ತೆರಳಿದ್ದರಿಂದ ಮನೆಯಿಂದಲೇ ಕಾಲೇಜಿಗೆ ಬಂದು ಹೋಗುತ್ತಿದ್ದಳು. ಫೆ. 20  ರಂದು ಕೇರಳದಲ್ಲಿ ಬಸ್ ಮುಷ್ಕರವಿತ್ತು. ಎಂದಿನಂತೆ ನಿಗದಿತ ಸ ಮಯಕ್ಕೆ ತಾನು ಹೋದರೆ ವಾಹನ ಸಿಗದೇ ಕಷ್ಟವಾಗ ಬಹುದೆಂಬ ಕಾರ ಣಕ್ಕೆ ಆಕೆ ಮತ್ತು ಕಾಸರಗೋಡು ಕಡೆ ಯಿಂದ ಬರುವ ಇತರ ಮೂವರು ವಿದ್ಯಾ ರ್ಥಿಗಳು ಕಾಲೇಜಿನ ಅನು ಮತಿ ಕೇಳಿ 3.3೦ಕ್ಕೆ ಕಾಲೇಜಿನಿಂದ ಹೊರಟು ಸುಳ್ಯ ಬಸ್ ನಿಲ್ದಾಣಕ್ಕೆ ನಡೆದುಕೊಂಡು ಬರುತ್ತಿದ್ದಳು.
ಸುಳ್ಯ ಚೆನ್ನ ಕೇಶವ ದೇವಸ್ಥಾನ ದಾಟಿ ನಾರ್ಕೋಡು ಕಾಂಪ್ಲೆಕ್ಸ್ ಎದುರು ತಲುಪಿದಾಗ ಆಗ್ರೋ ಸಂಸ್ಥೆಯ ಬಳಿ ಬೈಕ್ ನಿಲ್ಲಿಸಿದ್ದ ಕಾರ್ತಿಕ್ ಅಕ್ಷತಾಳ ಬಳಿಗೆ ನಡೆದುಕೊಂಡು ಬಂದು ‘ನಾನು ನಿನಗೆ ಇನ್ನು ಮುಂದೆ ಟಾರ್ಚರ್ ಕೊಡುವುದಿಲ್ಲ’ ಎಂದು ಹೇಳಿ ಆಕೆಯ ಹೊಟ್ಟೆಗೆ ಮತ್ತು ಎದೆಗೆ ಚೂರಿಯಿಂದ ಬಲವಾಗಿ ತಿವಿದಿದ್ದ. ದಿಢೀರನೆ ಕಾರ್ತಿಕ್ ನಡೆಸಿದ ದಾಳಿಯಿಂದ ತೀವ್ರ ಗಾಯಗೊಂಡ ಅಕ್ಷತಾ ನೆಲಕ್ಕೆ ಕುಸಿದು ಬಿದ್ದಿದ್ದಳು. ಆಕೆ ಬಿದ್ದಲ್ಲಿಗೇ ಮತ್ತೆ ಮತ್ತೆ ಕಾರ್ತಿಕ್ ಚೂರಿಯಿಂದ ಇರಿದಿದ್ದ. ಹಾಗೆ ೯ ಬಾರಿ ಕಾರ್ತಿಕ್ ಆಕೆಗೆ ನಿರ್ದ ಯವಾಗಿ ಇರಿದ ಪರಿಣಾಮ ಆಕೆಯ ಶ್ವಾಸಕೋಶದ ರಕ್ತನಾಳವೇ ತುಂಡಾಗಿ ರಕ್ತ ಸಂಪೂರ್ಣ ಹರಿದಿತ್ತು. ಆಕೆಯ ಮತ್ತು ಆಕೆಯ ಜೊತೆಗಿದ್ದ ವಿದ್ಯಾರ್ಥಿನಿಯ ಚೀರಾಟ ಕೇಳಿ ಅಕ್ಕ ಪಕ್ಕದ ಅಂಗಡಿಗಳಲ್ಲಿದ್ದವರು ಧಾವಿಸಿ ಬಂದಾಗ ಕಾರ್ತಿಕ್ ಚೂರಿಯನ್ನು ಕೈಯಲ್ಲೇ ಹಿಡಿದುಕೊಂಡು ನಿಂತಿದ್ದ. ಸ್ವಲ್ಪ ಹೊತ್ತಿನಲ್ಲಿ ಚೂರಿಯನ್ನು ಎಸೆದು ನಾಲ್ಕು ಹೆಜ್ಜೆ ಮುಂದೆ ಹೋಗಿದ್ದ. ಅಷ್ಟರಲ್ಲಾಗಲೇ ರಿಕ್ಷಾ ಚಾಲಕರು ಮತ್ತು ಅಲ್ಲಿ ಸೇರಿದ್ದ ಜನ ಧಾವಿಸಿ ಆತನನ್ನು ಹಿಡಿದರು. ಆಕ್ರೋಶಗೊಂಡಿದ್ದ ಕೆಲವರು ಹೊಡೆದರು. ಬಳಿಕ ಪೋಲೀಸರಿಗೆ ಒಪ್ಪಿಸಲಾಯಿತು.


ಇತ್ತ ರಕ್ತದ ಮಡುವಿನಲ್ಲಿ ಬಿದ್ದಿದ್ದ ಅಕ್ಷತಾಳನ್ನು ಕೂಡಲೇ ರಿಕ್ಷಾದಲ್ಲಿ ಕೆವಿಜಿ ಆಸ್ಪತ್ರೆಗೆ ಕೊಂಡೊಯ್ಯಲಾಗಿತ್ತು. ಜೀವನ್ಮರಣ ಹೋರಾಟದಲ್ಲಿದ್ದ ಅಕ್ಷತಾಳ ಜೀವ ಉಳಿಸಲು ಡಾ.ಕೆ.ವಿ ಚಿದಾನಂದರ ನೇತೃತ್ವದ ವೈದ್ಯರ ತಂಡ ಪ್ರಯತ್ನಿಸಿತಾದರೂ ಗಾಯಗಳ ಸ್ವರೂಪ ದೊಡ್ಡದಿದ್ದು ಸಾಕಷ್ಟು ರಕ್ತಸ್ರಾವವಾಗಿದ್ದುದರಿಂದ ತಕ್ಷಣವೇ ಆಂಬುಲೆನ್ಸ್‌ನಲ್ಲಿ ಮಂಗಳೂರಿಗೆ ಕಳುಹಿಸಲಾಗಿತ್ತು. ಆಂಬುಲೆನ್ಸ್ ಜಾಲ್ಸೂರು ದಾಟಿ ಹೋಗುತ್ತಿದ್ದಂತೆ ಅಕ್ಷತಾ ಕೊನೆಯುಸಿರೆಳೆದಿದ್ದಳು. ಬಳಿಕ ಮೃತ ದೇಹವನ್ನು ಹಿಂತಿರುಗಿ ತಂದು ಸುಳ್ಯ ಸರಕಾರಿ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿತ್ತು. ಮರಣೋತ್ತರ ಶವ ಪರೀಕ್ಷೆಯ ಬಳಿಕ ಮಧ್ಯರಾತ್ರಿ ಮೃತದೇಹವನ್ನು ಸುಳ್ಯದಿಂದ ಆಕೆಯ ಮನೆಗೆ ಕೊಂಡೊಯ್ಯಲಾಯಿತು. ಮರುದಿನ ಬೆಳಗ್ಗೆ ಅಂತ್ಯ ಸಂಸ್ಕಾರ ನೆರವೇರಿಸಲಾಯಿತು.

ಅವಳಿ ಜಿಲ್ಲೆಗಳಲ್ಲಿ ತಲ್ಲಣ:

ಈ ಘಟನೆ ದಕ್ಷಿಣ ಕನ್ನಡ ಮತ್ತು ಕಾಸರಗೋಡು ಜಿಲ್ಲೆಯನ್ನು ತಲ್ಲಣಗೊಳಿಸಿತ್ತು. ಹಲವು ಸಂಘಟನೆಗಳು ಘಟನೆಯನ್ನು ಖಂಡಿಸಿತು. ಹಲವರು ಶ್ರದ್ಧಾಂಜಲಿ ಸಲ್ಲಿಸಿ ದ್ದರು. ಆರೋಪಿಯ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಲಾಯಿತು. ನೂರಾರು ಮಂದಿ ಮುಳ್ಳೇರಿಯಾದ ಆಕೆಯ ಮನೆಗೂ ಭೇಟಿ ಕೊಟ್ಟರು. ಸಹಾಯವನ್ನೂ ಮಾಡಿದರು.
ಇದೆಲ್ಲಾ ಆಗಿ ಹದಿನಾರು ತಿಂಗಳು ಕಳೆದಿದೆ. ಅಕ್ಷತಾ ಎಂಬ ಅಮಾಯಕ ಹೆಣ್ಣು ಮಗಳು ಜನರ ಸೃತಿ ಪಟಲದಿಂದ ನಿಧಾನಕ್ಕೆ ಮರೆಯಾಗುತ್ತಿದ್ದರೂ ಆಕೆಯ ಸಹಪಾಠಿಗಳಿಗೆ ಮೊನ್ನೆಯ ಫಲಿತಾಂಶದ ದಿನ ಆಕೆಯ ನೆನಪುಗಳು ಒತ್ತರಿಸಿ ಬಂದಿದೆ. ಅದಕ್ಕೆ ಕಾರಣವೂ ಇದೆ.
ಅಕ್ಷತಾ ಓದಿನಲ್ಲಿ ಸದಾ ಮುಂದಿದ್ದಳು. ಕಾಲೇಜಿನಲ್ಲಿ 3 ಅಥವಾ 3ನೇ ಸ್ಥಾನವನ್ನು ಕಾಯ್ದುಕೊಂಡಿದ್ದಳು. ಎಲ್ಲಾ ಪರೀಕ್ಷೆಯಲ್ಲಿಯೂ ಉತ್ತಮ ಅಂಕ ಪಡೆಯುತ್ತಿದ್ದಳು. ಉತ್ತಮವಾಗಿ ಓದಿ ಡಾಕ್ಟರೇಟ್ ಸಂಪಾದಿಸಬೇಕೆಂಬ ಹಂಬಲ ಆಕೆಯಲ್ಲಿತ್ತು. ಸಾಂಸ್ಕೃತಿಕ ಚಟುವಟಿಕೆಯಲ್ಲಿಯೂ ಸಕ್ರಿಯವಾಗಿದ್ದ ಆಕೆ ಎನ್.ಎಸ್.ಎಸ್ ನಲ್ಲೂ ಕ್ರಿಯಾಶೀಲವಾಗಿ ಭಾಗವಹಿಸುತ್ತಿದ್ದಳು. ಉಪನ್ಯಾಸಕರಿಗೆ ಮತ್ತು ವಿದ್ಯಾರ್ಥಿ ವೃಂದಕ್ಕೆ ಅಚ್ಚು ಮೆಚ್ಚಿನ ವಿದ್ಯಾರ್ಥಿನಿಯಾಗಿದ್ದಳು ಅಕ್ಷತಾ.
ಇಂತಹ ವಿದ್ಯಾರ್ಥಿನಿಗೆ ಪದವಿ ಪರೀಕ್ಷೆಯಲ್ಲಿ ಡಿಸ್ಟಿಂಕ್ಷನ್ ಬರುವುದು ಸಹಜವೇ ಆಗಿತ್ತು. ಟಾಪರ‍್ಸ್‌ಗಳ ಲಿಸ್ಟ್‌ನಲ್ಲಿ ಆಕೆಯ ಫೋಟೋ ಕಾಣಲೇ ಬೇಕಿತ್ತು. ವಿಧಿಯ ವಿಪರ್ಯಾಸ ನೋಡಿ , ಅಕ್ಷತಾಳ ಫೋಟೋ ಅದಕ್ಕೂ ಮೊದಲೇ ಪತ್ರಿಕೆಗಳಲ್ಲಿ ಅಚ್ಚಾಗಬೇಕಾಯಿತು. ಆಗಲೇ ಬಾರದ ಕಾರಣಕ್ಕಾಗಿ ಮತ್ತು ಕಾಣಲೇ ಬಾರದ ರೀತಿಯಲ್ಲಿ. ಅಪರಾಧಿ ಮನಸ್ಸಿನ ವಿಕೃತ ಕೃತ್ಯಕ್ಕೆ ಅಮಾಯಕ ಅಕ್ಷತಾ ಬಲಿಯಾಗಬೇಕಾಯಿತು. ಆ ಭಯಾನಕ ನೆನಪುಗಳ ಮರೆಯಲ್ಲಿ ಪ್ರೀತಿಯ ಒಡನಾಟದ ಸಹಪಾಠಿಗಳು ಈಗಲೂ ಕೇಳುವುದಿಷ್ಟೆ, – ಈ ಸಾವು ನ್ಯಾಯವೇ ?

ಮುದ್ದಿನ ಮಗಳ ಮುಖ ಮರೆಯಾಗುತ್ತಿಲ್ಲ…

ಮುಳ್ಳೇರಿಯಾದ ಕರಣಿ ಮನೆ ರಾಧಾಕೃಷ್ಣ ಭಟ್ ಮತ್ತು ದೇವಕಿ ದಂಪತಿಗೆ ಇಬ್ಬರು ಮಕ್ಕಳು. ಹಿರಿಯಾಕೆ ಅನುಷಾರಿಗೆ ಈ ಘಟನೆಗಿಂತ ಎರಡು ತಿಂಗಳ ಹಿಂದಷ್ಟೇ ಮದುವೆಯಾಗಿತ್ತು. ರಾಧಾಕೃಷ್ಣ ಭಟ್ ಮುಳ್ಳೇರಿಯಾದಲ್ಲಿ ಬಾಳೆಗೊನೆ ಅಂಗಡಿಯೊಂದನ್ನು ಹೊಂದಿದ್ದರು.
ಈ ದುರ್ಘಟನೆಯಲ್ಲಿ ಮುದ್ದಿನ ಮಗಳು ಇನ್ನಿಲ್ಲವಾದ ಸುದ್ದಿ ಕೇಳಿ ಅಕ್ಷತಾಳ ತಂದೆ ಮತ್ತು ತಾಯಿ ಸುಳ್ಯ ಆಸ್ಪತ್ರೆಗೆ ಬಂದು ಮೃತ ದೇಹವನ್ನು ನೋಡಿ ಅಕ್ಷರಶ: ಕುಸಿದು ಹೋಗಿದ್ದರು. ಹತ್ಯೆಗೀಡಾದ ಮಗಳ ಮೃತದೇಹವನ್ನು ನೋಡಲು ತಂದೆ ಮತ್ತು ತಾಯಿಯನ್ನು ಶವಾಗಾರಕ್ಕೆ ಕರೆತಂದಾಗ ಮಗಳ ಪಾರ್ಥೀವ ಶರೀರವನ್ನು ನೋಡಿ ತಾಯಿ ಸ್ತಂಭೀಭೂತರಾಗಿದ್ದರು. ಏನೂ ಪ್ರತಿಕ್ರಿಯೆ ನೀಡದೇ ನಿಂತಲ್ಲಿಯೇ ಕಲ್ಲಿನಂತಾಗಿದ್ದ ಅವರ ಕಣ್ಣಿನಿಂದ ಧಾರಾಕಾರ ನೀರು ಇಳಿಯ ತೊಡಗಿತ್ತು. ತಂದೆಯಂತೂ ಮಗಳ ಮೃತದೇಹ ನೋಡುತ್ತಾ ’ ನಾನು ಇನ್ನು ಯಾರನ್ನು ಕಾಲೇಜಿಗೆ ಕಳಿಸಬೇಕು ಮಗಳೇ? ಇನ್ನು ನಾನು ಯಾರಿಗಾಗಿ ದುಡಿಯಬೇಕು?’ ಎಂದು ಆರ್ತವಾಗಿ ಕೇಳಿದಾಗ ಸೇರಿದ ಜನರ ಕಣ್ಣುಗಳಲ್ಲೂ ನೀರಾಡಿತ್ತು. ಬೆಂಗಳೂರಿನಲ್ಲಿದ್ದ ಅಕ್ಕ ಅನುಷಾ ಮರುದಿನ ಬೆಳಿಗೆ ಮನೆ ತಲುಪಿದ್ದರು. ತಂಗಿಯ ಅಗಲುವಿಕೆಯ ಆಘಾತದಿಂದ ಸಹಜ ಸ್ಥಿತಿಗೆ ಬರಲು ಅವರಿಗೆ ಅನೇಕ ಸಮಯವೇ ಹಿಡಿದಿತ್ತು. ಪ್ರಸ್ತುತ ಅನುಷಾ ಸ್ನಾತಕೋತ್ತರ ಪದವಿ ( ಸೈಕಾಲಜಿ) ಪಡೆಯುತ್ತಿದ್ದಾರೆ.
ಅಕ್ಷತಾ ಅಗಲಿ ಸುಮಾರು ಒಂದೂವರೆ ವರ್ಷ ಕಳೆದರೂ ಮುದ್ದಿನ ಮಗಳ ನೆನಪಿನಿಂದ ಹೊರಬರಲು ತಂದೆ, ತಾಯಿ ಮತ್ತು ಅಕ್ಕನಿಗೆ ಇನ್ನೂ ಸಾಧ್ಯವಾಗಿಲ್ಲ.

ಅಕ್ಷತಾ ಇದ್ದಿದ್ದರೆ ಸ್ನಾತಕೋತ್ತರ ಪದವಿಗೆ ತೆರಳುತ್ತಿದ್ದಳು:

ವಿಧಿಯ ಕ್ರೂರ ಲೀಲೆಗೆ ಬಲಿಯಾಗಿ ವರುಷಗಳ ಹಿಂದೆ ನಮ್ಮನ್ನಗಲಿದ ನನ್ನ ಮೆಚ್ಚಿನ ವಿದ್ಯಾರ್ಥಿನಿ ಅಕ್ಷತಾಳನ್ನು ನೆನೆದಾಗ ಮನಸ್ಸು ಕಂಬನಿ ಮಿಡಿಯುತ್ತಿದೆ. ತನ್ನ ಜೀವನವೆಂಬ ಸಾಗರದ ಯಶಸ್ಸಿನ ಉನ್ನತಿಗೇರುವ ನಿರೀಕ್ಷೆಗಳನ್ನಿರಿಸಿಕೊಂಡು ಪದವಿ ವಿಭಾಗದಲ್ಲಿ ಜೀವವಿಜ್ಞಾನ ವಿಷಯವನ್ನು ಆಯ್ಕೆ ಮಾಡಿಕೊಂಡು ನಮ್ಮ ವಿದ್ಯಾರ್ಥಿನಿಯಾಗಿ ಸದಾ ಲವಲವಿಕೆಯಿಂದಿರುತ್ತಿದ್ದ ಅಕ್ಷತಾ, ವಿಶೇಷವಾಗಿ ಸಸ್ಯಶಾಸ್ತ್ರ ಮತ್ತು ರಸಾಯನಶಾಸ್ತ್ರ ವಿಷಯಗಳಲ್ಲಿ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದಳು. ಆ ವಿಷಯಗಳಲ್ಲಿ ಹೆಚ್ಚಿನ ಜ್ಞಾನಾರ್ಜನೆ ಮಾಡಿ ಸಂಶೋಧಕಿಯಾಗಿ ಬೆಳೆದು ಡಾಕ್ಟರೇಟ್ ಪದವಿ ಪಡೆದುಕೊಳ್ಳುವ ಅಭಿಲಾಷೆ ಹೊಂದಿದ್ದಳು. ಉತ್ತಮ ಗುಣನಡತೆಯೊಂದಿಗೆ ಕಾಲೇಜಿನ ಎನ್.ಎಸ್.ಎಸ್ ಘಟಕ ಮತ್ತು ಪ್ರಕೃತಿ ಸಂಘದ ಸಕ್ರಿಯ ಸದಸ್ಯೆಯಾಗಿದ್ದು ಪಠ್ಯ ಪೂರಕ ಚಟುವಟಿಕೆಯಲ್ಲೂ ಮುಂಚೂಣಿಯಲ್ಲಿದ್ದಳು. ನಿಷ್ಕಲ್ಮಷ ಮನಸ್ಸಿನ ಮೃದು ಸ್ವಭಾವದವಳಾಗಿದ್ದು ಎಲ್ಲಾ ಉಪನ್ಯಾಸಕ ವೃಂದದವರಲ್ಲಿಯೂ ವಿಧೇಯತೆಯಿಂದಿದ್ದು, ಕಲಿಕೆಯಲ್ಲೂ ಮುಂದಿದ್ದಳು. ಅಕ್ಷತಾ ಇಂದು ಇದ್ದಿದ್ದರೆ ಆಕೆಯ ಪದವಿ ಶಿಕ್ಷಣವನ್ನು ಉನ್ನತ ಶ್ರೇಣಿಯೊಂದಿಗೆ ಪೂರೈಸಿ, ತನ್ನ ಆಯ್ಕೆಯ ವಿಷಯದಲ್ಲಿ ಸ್ನಾತಕೋತ್ತರ ಪದವಿಗೆ ತೆರಳುವವಳಾಗಿದ್ದಳು. ಆದರೆ ಇಂದು ತರಗತಿಯೆಂಬ ಉದ್ಯಾನವನದಲ್ಲಿ ಸ್ವಚ್ಛಂದವಾಗಿ ಅರಳುತ್ತಿದ್ದ ಗುಲಾಬಿ ಹೂವೊಂದು ಗಿಡದಲ್ಲಿದ್ದ ದುಷ್ಟ ಮುಳ್ಳಿಗೆ ಬಲಿಯಾಗಿ ಮುದುಡಿಹೋದ ದುಃಖ ಮಾತ್ರ ಶಾಶ್ವತವಾಗಿ ಉಳಿದಿದೆ ಅಷ್ಟೆ.

– ಕುಲದೀಪ್ ಪೆಲ್ತಡ್ಕ , ಸಸ್ಯಶಾಸ್ತ್ರ ವಿಭಾಗ ಮುಖ್ಯಸ್ಥರು, ನೆಹರೂ ಮೆಮೋರಿಯಲ್ ಸುಳ್ಯ

ಕಹಿ ಸತ್ಯ ಇನ್ನೂ ಮನಸ್ಸು ಒಪ್ಪುತ್ತಿಲ್ಲ:

ಅಕ್ಷತಾ ನಮ್ಮಿಂದ ದೂರವಾಗಿ ಸುಮಾರು ಒಂದೂವರೆ ವರುಷ ಕಳೆದರೂ ಆಕೆಯೊಂದಿಗೆ ಬೆರೆತ ನೆನಪುಗಳು ಇನ್ನೂ ಹಸಿಯಾಗಿದೆ. ಅವಳು ನಮ್ಮೊಂದಿಗೆ ಇಲ್ಲ ಎನ್ನುವ ಕಹಿ ಸತ್ಯವನ್ನು ಇನ್ನೂ ನನ್ನ ಮನಸ್ಸು ಒಪ್ಪುತ್ತಿಲ್ಲ. ಕಾಲೇಜಿನಲ್ಲಿ ಅವಳಿಲ್ಲದೆ ಕಳೆದ ದಿನಗಳು ತುಂಬಾ ಕಷ್ಟದಾಯಕವಾದುದು. ಪ್ರತಿಯೊಂದು ಸನ್ನಿವೇಶಗಳು ಅವಳ ಇರುವಿಕೆಯನ್ನು ಬಯಸುತ್ತಿತ್ತು. ಅದೆಷ್ಟೇ ದಿನಗಳು ಉರುಳಿದರೂ ಆಕೆ ನನಗೆ ತೋರಿದ ಸ್ನೇಹ, ಪ್ರೀತಿ, ಪ್ರೋತ್ಸಾಹ ಪ್ರತಿಯೊಂದು ಹಂತದಲ್ಲಿನ ಭರವಸೆಯನ್ನು ಮರೆಯಲು ಸಾಧ್ಯವಿಲ್ಲ. ಗೆಳತಿ, ನಿನ್ನ ಕನಸುಗಳು, ನಿನ್ನ ನೆನಪುಗಳು ಎಂದೆಂದಿಗೂ ಶಾಶ್ವತ.

– ಸುಶ್ಮಿತಾ ಕಡಪಳ

 

ನಗುತ್ತಾ, ನಗಿಸುತ್ತಾ ಇದ್ದ ಗೆಳತಿ:

ಅಕ್ಷತಾ ನನಗೆ ಉತ್ತಮ ಗೆಳತಿಯಾಗಿ, ಪ್ರೀತಿಯ ತಂಗಿಯಾಗಿ, ಸದಾ ಪ್ರತಿಯೊಬ್ಬರಿಗೂ ಒಳ್ಳೆಯದನ್ನು ಬಯಸುತ್ತಿದ್ದಳು. ತಾನು ಮತ್ತು ತನ್ನ ಗುರಿಯಷ್ಟೇ ಅವಳ ಯೋಚನೆಯಾಗಿತ್ತು. ಆದರೆ ವಿಧಿಯ ಕ್ರೂರತೆಗೆ ಸಿಲುಕಿ ನಮ್ಮನ್ನೆಲ್ಲಾ ಅಗಲಿ ಅದೆಷ್ಟೋ ನೆನಪುಗಳನ್ನು ಬಿಟ್ಟುಹೋಗಿದ್ದಾಳೆ. ಇಂದು ನೀನು ಇರುತ್ತಿದ್ದರೆ ಅನ್ನುವ ಅದೆಷ್ಟೋ ಕ್ಷಣಗಳು ಕಣ್ಣಂಚಿನಲ್ಲಿ ನೀರು ತರಿಸಿವೆ. ಆಕೆ ಬದುಕಿದಷ್ಟೂ ದಿನ ನಗಿಸುತ್ತಾ, ನಗುತ್ತಾ ದಿನಗಳು ಮಾತ್ರ ಮನದ ಪುಟದಲ್ಲಿ ಅಳಿಸಲಾಗದೇ ಉಳಿದಿದೆ.
– ಯಶ್ವಿನ್ ಟಿ.ಸಿ.

 

ಕಳೆದ ಕ್ಷಣಗಳು ಅದೆಷ್ಟು ಸಂತಸಕರ?

ಎರಡು ವರುಷ ಆಕೆಯೊಂದಿಗೆ ಕಳೆದ ಕ್ಷಣಗಳು ಅದೆಷ್ಟು ಸಂತಸಕರ? ಆಕೆಯ ಅಗಲುವಿಕೆಯಿಂದ ಕಳೆದ ಒಂದು ವರುಷದ ಕಾಲೇಜು ಜೀವನ ಅಷ್ಟೇ ಕ್ಲಿಷ್ಟಕರವಾಗಿತ್ತು.. ಪ್ರತಿಯೊಂದು ಸಂತೋಷದ ನಿಮಿಷಗಳಲ್ಲಿ ಆಕೆಯ ಇರುವಿಕೆಯನ್ನು ಬಯಸುತ್ತಿದ್ದೆವು. ಆಕೆಯ ನಗು, ಆಕೆಯ ಮಾತುಗಳು ಮನದಲಿ ಅಚ್ಚಳಿಯದ, ಶಾಶ್ವತವಾಗಿರುವ ನೆನಪುಗಳು. ನಾವು ಕಾಣುವ ಸಾಧನೆಯ ಹಾದಿಗಳಲ್ಲಿ, ಜೀವನದ ಪ್ರತಿಯೊಂದು ಸುಂದರವಾದ ಕ್ಷಣಗಳಲ್ಲಿ, ನೀನು ನಮ್ಮೊಳಗಾಗಿ, ನಮ್ಮೆಲ್ಲರ ಬೆನ್ನೆಲುಬಾಗಿ, ನಮ್ಮೊಂದಿಗೆ ಹೆಜ್ಜೆ ಹಾಕಬೇಕೆಂಬುದು ನನ್ನ ಮನದಾಳದ ಬಯಕೆ.

– ಶುಶ್ಮಿತ ನಂಗಾರು

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

2 Comments

  1. ಮಧುಕುಮಾರ್ ಬಿ ಆರ್

    ನಮ್ಮ ಸುಳ್ಯದಲ್ಲಿ ಬೀದಿ ದೀಪಗಳು ಸುಮಾರು 8 ಗಂಟೆಯಾದರೂ ಉರಿಯುತ್ತಿರುತ್ತವೆ. ಇದಕ್ಕೆ ಸಂಬಂಧ ಪಟ್ಟವರು ಸೂಕ್ತ ಕ್ರಮ ಕೈಗೊಳ್ಳಬೇಕು, ವಿದ್ಯುಚ್ಛಕ್ತಿ ಉಳಿಸಬೇಕು ಎಂದು ಈ ಮೂಲಕ ಮನವಿ

    Reply

Leave a Reply to Joe Cancel Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.