HomePage_Banner
HomePage_Banner

ಹಣದಾಸೆಗೆ ಬ್ರೋಕರ್ ಎಡವಟ್ಟು- ಮಂಟಪದಲ್ಲಿ ಜಾತಿ ತಿಳಿದು ಮದುವೆ ಬೇಡವೆಂದ ವಧು-ವರ

ಇನ್ನೇನೂ ತಾಳಿ ಕಟ್ಟಲು ಕ್ಷಣ ಮಾತ್ರ ಉಳಿದಿತ್ತು. ಆ ವೇಳೆಗೆ ತಮ್ಮಿಬ್ಬರ ಜಾತಿ ಬೇರೆ ಬೇರೆ ಎಂದು ತಿಳಿದ ವಧು ಮತ್ತು ವರ ಇಬ್ಬರೂ ಮದುವೆ ಆಗದಿರಲು ನಿರ್ಧರಿಸಿದ ಹಾಗೂ ಬಳಿಕ ಪೋಲೀಸ್ ಠಾಣೆಯಲ್ಲಿ ಮುಚ್ಚಳಿಕೆ ಬರೆದು ಕೊಟ್ಟ ಘಟನೆ ಜು.10ರಂದು ವರದಿಯಾಗಿದೆ.
ಪಿರಿಯಾಪಟ್ಟಣದ ಅಭಿಷೇಕ್ ಹಾಗೂ ಉಪ್ಪಿನಂಗಡಿಯ ಹಿರೇಬಂಡಾ ಡಿಯ ಯುವತಿಯೊಬ್ಬರಿಗೆ ಸುಳ್ಯ ತಾಲೂಕು ಹರಿಹರಪಲ್ಲತಡ್ಕ ಹರಿಹರೇ ಶ್ವರ ಸಭಾಭವನದಲ್ಲಿ ಜು.10ರಂದು ಮದುವೆ ನಿಗದಿ ಪಡಿಸಲಾಗಿದ್ದು ಈ ಮದುವೆ ಜಾತಿಯ ವಿಚಾರಕ್ಕೆ ರದ್ದುಗೊಂಡಿದೆ.
ಅಭಿಷೇಕ್ ಕೆಲವು ತಿಂಗಳ ಹಿಂದೆ ಉಪ್ಪಿನಂಗಡಿಯ ಮದುವೆ ಕಾರ್ಯಕ್ರಮಕ್ಕೆ ಹೋಗಿದ್ದಾಗ ಅಲ್ಲಿ ನನಗೆ ಮದುವೆಯಾಗಲು ಹುಡುಗಿಯಿದ್ದರೆ ಹೇಳಬೇಕೆಂದು ಬ್ರೋಕರ್ ಒಬ್ಬರಲ್ಲಿ ಹೇಳಿದ್ದರೆಂದೂ ಅದರಂತೆ ಅದೇ ಮಂಟಪದಲ್ಲಿದ್ದ ಹಿರೇಬಂಡಾಡಿಯ ಯುವತಿ ಯನ್ನು ಬ್ರೋಕರ್ ಒಬ್ಬರು ತೋರಿಸಿದರೆನ್ನಲಾಗಿದೆ. ಆತ ಒಪ್ಪಿದ ಆ ಬಳಿಕ ಮದುವೆ ಮಾತುಕತೆ ನಡೆಯಿತು. ಮದುವೆಯ ದಿನವೂ ನಿಗದಿಯಾಯಿತು. ಎರಡೂ ಕಡೆಯವರಿಗೆ ಅನುಕೂಲವಾಗುವಂತೆ ಸುಬ್ರಹ್ಮಣ್ಯದಲ್ಲಿ ಮದುವೆ ಇಡಲು ನಿರ್ಧರಿಸಿದರು. ಅದರಂತೆ ಎರಡೂ ಕಡೆಯವರು ಸುಬ್ರಹ್ಮಣ್ಯಕ್ಕೆ ಬಂದು ಮದುವೆಗೆ ಹಾಲ್ ನೋಡುವಾಗ ಅಲ್ಲಿ ಸಿಗಲಿಲ್ಲವೆಂದೂ, ಬಳಿಕ ಹರಿಹರಕ್ಕೆ ಬಂದು ಹರಿಹರೇಶ್ವರ ಸಭಾಭವನವನ್ನು ಬುಕ್ ಮಾಡಿದರು.
ಜು.೧೦ರಂದು ಮದುವೆಯ ಹಿಂದಿನ ದಿನ ರಾತ್ರಿ ಅಭಿಷೇಕ್ ಕಡೆಯವರ ದಿಬ್ಬಣ ಬಂದಿತ್ತು. ವಧುವಿನ ದಿಬ್ಬಣ ಮರುದಿನ ಬೆಳಗ್ಗೆ ಬಂದಿತ್ತು. ಎರಡೂ ಕಡೆಯವರು ಸೇರಿ ಸುಮಾರು 250ಕ್ಕೂ ಹೆಚ್ಚು ಜನರು ಸೇರಿದ್ದರು. ಬೆಳಗ್ಗೆ ಮದುವೆಯ ಕಾರ್ಯಕ್ರಮಗಳು ನಡೆದು ಧಾರಾಮುಹೂರ್ತ ಮಾತ್ರ ಬಾಕಿ ಉಳಿದಿತ್ತು. ಬೆಳಗ್ಗೆಯಿಂದ ನಡೆದ ಕಾರ್ಯಕ್ರಮದ ಸಂಪ್ರದಾಯ ಎರಡೂ ಕಡೆಯವರದು ಬೇರೆಬೇರೆಯಾಗಿತ್ತು. ಇದರಿಂದ ಮದುವೆ ಮಂಟಪದಲ್ಲಿ ಇವರು ಬೇರೆ ಬೇರೆ ಜಾತಿಯವರೆಂದು ಗೊತ್ತಾಯಿತೆನ್ನಲಾಗಿದೆ. ಜಾತಿಯ ವಿಚಾರ ತಿಳಿಯಿತೆನ್ನಲಾಗಿದೆ. ಬಳಿಕ ಎರಡೂ ಕಡೆಯ ಹಿರಿಯರು ಮಾತುಕತೆ ನಡೆಸಿ ಮದುವೆ ಆಗದಿರಲು ನಿರ್ಧರಿಸಿದರೆಂದೂ, ಇದಕ್ಕೆ ವಧು ಹಾಗೂ ವರ ಇಬ್ಬರೂ ಸಮ್ಮತಿ ಸೂಚಿಸಿದರೆಂದು ತಿಳಿದು ಬಂದಿದೆ.
ವಿಷಯ ತಿಳಿದ ಹರಿಹರೇಶ್ವರ ದೇವಸ್ಥಾನ ಮೆನೇಜರ್ ಲೋಕನಾಥ್ ಕಿರಿಭಾಗರು ಸುಬ್ರಹ್ಮಣ್ಯ ಪೋಲೀಸರಿಗೆ ವಿಷಯ ತಿಳಿಸಿದರು. ಪೋಲೀಸರು ವಧು-ವರ ಹಾಗೂ ಎರಡೂ ಕಡೆಯ ವರನ್ನು ಸುಬ್ರಹ್ಮಣ್ಯ ಪೋಲೀಸ್ ಠಾಣೆಗೆ ಕರೆಸಿಕೊಂಡು ವಿಚಾರಣೆ ನಡೆಸಿ, ಅವರಿಂದ ಮುಚ್ಚಳಿಕೆ ಬರೆಯಿಸಿ ಕಳುಹಿಸಿಕೊಟ್ಟರೆಂದು ತಿಳಿದು ಬಂದಿದೆ.
ಮದುವೆಗೆಂದು ಬಂದವರು ಮದುವೆಯ ಊಟ ಮಾಡಿ ಅಲ್ಲಿಂದ ತೆರಳಿದರು.
ಹಾಲ್ ಬಾಡಿಗೆ, ಊಟದ ಕೆಟರಿಂ ಗ್‌ನ ದುಡ್ಡು ಸೇರಿದಂತೆ ಎಲ್ಲ ಹಣವನ್ನು ಎರಡೂ ಕಡೆಯವರು ಸೇರಿ ಪಾವತಿ ಮಾಡಿದರೆಂದು ತಿಳಿದು ಬಂದಿದೆ.

ಬ್ರೋಕರ್‌ಗೆ ತರಾಟೆ
ಮದುವೆ ಮಾತುಕತೆಯ ಸಂದರ್ಭ ಜಾತಿಯ ವಿಚಾರ ಬಂದಿತ್ತೆಂ ದೂ, ಆಗ ಮಾತುಕತೆ ಮಾಡಿದ ಬ್ರೋಕರ್ ದ.ಕ.ದ ಮುಗೇರ ಜಾತಿ ಎಂದರೆ ಪಿರಿಯಾ ಪಟ್ಟಣದ ಗೌಡರೇ ಆಗುತ್ತಾರೆ ಎಂದು ಹೇಳಿದ್ದರಿಂದ ಮಾತುಕತೆ ಮುಂದುವರಿದಿತ್ತೆಂದೂ, ಇದು ಮದುವೆ ಮಂಟಪದಲ್ಲಿ ತಿಳಿದು ಸ್ಥಳದಲ್ಲಿದ್ದ ಬ್ರೋಕರನ್ನು ಎರಡೂ ಕಡೆಯವರು ತರಾಟೆಗೆತ್ತಿ ಕೊಂಡಿದ್ದರೆಂದು ತಿಳಿದು ಬಂದಿದೆ.
ಹಣದಾಸೆಗಾಗಿ ಬ್ರೋಕರ್ ಈ ರೀತಿ ಎಡವಟ್ಟು ಮಾಡಿರಬಹುದೆಂದು ಹೇಳಲಾಗುತ್ತಿದೆ.

ಮದುವೆಯ ಹಾಲ್ ಬುಕ್ಕಿಂಗ್ ಗೆ ಇಲ್ಲಿಗೆ ಬಂದಾಗ ದೂರದವರು ಇಲ್ಲಿಗೆ ಬಂದುದು ಯಾಕೆಂದು ವಿಚಾರಿಸಿದಾಗ ಸುಬ್ರಹ್ಮಣ್ಯದಲ್ಲಿ ಹಾಲ್ ಸಿಕ್ಕಿಲ್ಲ ಆದ್ದರಿಂದ ಇಲ್ಲಿಗೆ ಬಂದೆವು ಎಂದಿದ್ದರು. ಬಳಿಕ ಅವರಿಂದ ನಮಗೆ ಬೇಕಾಗಿರುವ ಎಲ್ಲ ದಾಖಲೆ ಪಡೆದುಕೊಂಡಿವೆ. ಹುಡುಗ ಪಿರಿಯಾ ಪಟ್ಟಣ ಎನ್ನುವುದಕ್ಕೆ ಕೂಡಾ ಅವನ ಊರಿನ ಗ್ರಾ.ಪಂ.ನಿಂದ ದೃಡೀಕರಣ ಪತ್ರವನ್ನೂ ಪಡೆದುಕೊಂಡಿವೆ. ಮದುವೆ ರದ್ದಾಗಿರುವ ವಿಷಯ ತಿಳಿದು ನಾನೇ ಪೋಲೀಸ್ ಠಾಣೆಗೆ ತಿಳಿಸಿದೆ. ಪೋಲೀಸರು ಕರೆದು ವಿಚಾರಣೆ ನಡೆಸಿದ್ದಾರೆ.
ನಮ್ಮ ಹಾಲ್ ಬಾಡಿಗೆ ಸೇರಿದಂತೆ ಎಲ್ಲ ಹಣವನ್ನು ಪಾವತಿಸಿ ಹೋಗಿದ್ದಾರೆ.
-ಲೋಕನಾಥ್ ಕೆ
ಮೆನೇಜರ್ ಹರಿಹರೇಶ್ವರ ದೇವಸ್ಥಾನ

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.