HomePage_Banner
HomePage_Banner
HomePage_Banner

ಅಮಾನತುಗೊಂಡ ಗ್ರಾ.ಪಂ. ಸಿಬ್ಬಂದಿ ಆತ್ಮಹತ್ಯೆ ಪ್ರಕರಣ

ಪ್ರತಿಭಟನೆಗೆ ಮುಂದಾದ ದಲಿತ ಸಂಘಟನೆ ಸಮಿತಿ ಮುಖಂಡರು
ಪಂಚಾಯತ್, ಇ.ಓ., ಎಸ್.ಐ. ಮಧ್ಯಪ್ರವೇಶದಿಂದ ತಿಳಿಗೊಂಡ ಪರಿಸ್ಥಿತಿ

ಎಣ್ಮೂರು ಗ್ರಾಮಪಂಚಾಯತ್ ಬಿಲ್‌ಕಲೆಕ್ಟರ್ ಆಗಿದ್ದು, ಅಮಾನತುಗೊಂಡಿದ್ದ ಮೋಹನ್ ಅವರ ಆತ್ಮಹತ್ಯೆ ಪ್ರಕರಣಕ್ಕ ಸಂಬಂಧಿಸಿ ದಲಿತ ಸಂಘಟನೆ ಮುಖಂಡರು ಮೃತದೇಹವನ್ನು ಪಂಚಾಯತ್ ಎದುರು ಇಟ್ಟು ಪ್ರತಿಭಟಿಸುವ ಎಚ್ಚರಿಕೆ ನೀಡಿದ ಹಾಗೂ ಪಂಚಾಯತ್, ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಹಾಗೂ ಎಸ್‌ಐ ಮಧ್ಯಪ್ರವೇಶದಿಂದ ಪರಿಸ್ಥಿತಿ ತಿಳಿಗೊಂಡ ಘಟನೆ ನಡೆದಿದೆ.
ಎಣ್ಮೂರು ಗ್ರಾಮ ಪಂಚಾಯತ್‌ನಲ್ಲಿ ಮೋಹನ್ ಕಳೆದ ಹಲವಾರು ವರ್ಷಗಳಿಂದ ಬಿಲ್ ಕಲೆಕ್ಟರ್ ಆಗಿದ್ದರು. ಕೆಲವು ತಿಂಗಳ ಹಿಂದೆ ಪಂಚಾಯತ್‌ನಲ್ಲಿ ನಡೆದ ಹಣ ದುರುಪಯೋಗ ಪ್ರಕರಣಕ್ಕೆ ಸಂಬಂಧಿಸಿ ಜಿಲ್ಲಾ ಪಂಚಾಯತ್‌ನಿಂದ ಆಡಿಟ್‌ಗೆ ನಿರ್ಧರಿಸಿ ಆಡಿಟ್ ಪೂರ್ತಿಗೊಳ್ಳುವವರೆಗೆ ಗುಮಾಸ್ತೆ ಶಶಿಕಲಾ ಹಾಗೂ ಮೋಹನ್ ಅವರನ್ನು ಮೂರು ತಿಂಗಳ ಹಿಂದೆ ಅಮಾನತುಗೊಳಿಸಲಾಗಿತ್ತು. ಆಡಿಟ್ ಪ್ರಗತಿಯಲ್ಲಿದ್ದು, ಇನ್ನು ಎರಡು ಮೂರು ದಿನಗಳಲ್ಲಿ ಮುಗಿಯಲಿತ್ತು.

ಮೋಹನ್ ಇದುಂಗುಳಿ ಕಾಲೊನಿಯ ನಿವಾಸಿಯಾಗಿದ್ದು, ಇವರ ಪತ್ನಿ ಆಶಾ ಪುತ್ತೂರು ನಿವಾಸಿ. ಮೋಹನ್ ಅಮಾನತುಗೊಂಡ ಬಳಿಕ ಹೆಚ್ಚಾಗಿ ಇಬ್ಬರೂ ಪುತ್ತೂರಿನ ಆಶಾ ಅವರ ಮನೆಯಲ್ಲಿಯೇ ಇರುತ್ತಿದ್ದರು. ಮಂಗಳವಾರ ಮನೆಯಿಂದ ಬಂದಿದ್ದ ಅವರು ಮಧ್ಯಾಹ್ನ ಕಡೀರದಲ್ಲಿರುವ ಸೋದರ ಮಾವನ ಮನೆಗೆ ಹೋಗಿದ್ದರು. ಅಲ್ಲಿ ಅಪರಾಹ್ನ ವಿಷ ಸೇವಿಸಿದರೆನ್ನಲಾಗಿದೆ. ಬಳಿಕ ಮಲಗಿದ್ದ ಅವರು ಅಸ್ವಸ್ಥಗೊಂಡರು. ಇತ್ತೀಚೆಗೆ ಮೋಹನ್ ಕೆಲವೊಮ್ಮೆ ಹೆಚ್ಚಾಗಿ ಅಮಲು ಪದಾರ್ಥ ಸೇವಿಸುತ್ತಿದ್ದುದರಿಂದ ಈ ಕಾರಣದಿಂದ ಅಸ್ವಸ್ಥಗೊಂಡಿರಬೇಕೆಂದು ಸಂಬಂಧಿಕರು ರಿಕ್ಷಾವೊಂದರಲ್ಲಿ ಮೋಹನ್‌ರನ್ನು ಇದುಂಗುಳಿ ಮನೆಗೆ ಕರೆದೊಯ್ದರೆನ್ನಲಾಗಿದೆ.

ಈ ವೇಳೆ ಕೆಲವರಿಗೆ ವಿಷದ ವಾಸನೆ ಬಂದ ಹಿನ್ನಲೆಯಲ್ಲಿ ಕೂಡಲೇ ಅವರನ್ನು ಪುತ್ತೂರು ಆಸ್ಪತ್ರೆಗೆ ಕೊಂಡೊಯ್ಯಲಾಯಿತು. ಅಲ್ಲಿ ರಾತ್ರಿ ವೇಳೆ ಅವರು ಕೊನೆಯುಸಿರೆಳೆದರು. ಇಂದು ಬೆಳಿಗ್ಗೆ ಮೃತದೇಹವನ್ನು ಇದುಂಗುಳಿ ಮನೆಗೆ ತರಲಾಯಿತು.
ಮೋಹನ್‌ರವರ ಆತ್ಮಹತ್ಯೆಗೆ ಅಮಾನತು ಕಾರಣವೆಂದು ಆಕ್ರೋಶಗೊಂಡಿದ್ದ ದಲಿತ ಸಂಘಟನೆಗಳ ಮುಖಂಡರು ಅಲ್ಲಿ ಸೇರಿದ್ದರು. ಬಂಧುಗಳು ಕೂಡಾ ಆಕ್ರೋಶ ವ್ಯಕ್ತಪಡಿಸತೊಡಗಿದರು. ದಲಿತ ಸಂಘಟನೆಗಳ ಮುಖಂಡರಾದ ಲಕ್ಷ್ಮೀ ಸುಬ್ರಹ್ಮಣ್ಯ, ಗೋಪಾಲ ಪಡ್ಪಿನಂಗಡಿ ಮೊದಲಾದರು ಈ ಕುರಿತು ಸಮಗ್ರ ತನಿಖೆ ನಡೆಯಬೇಕು. ಪಂಚಾಯತ್‌ನವರು ಬಂದು ಸ್ಪಷ್ಟನೆ ನೀಡಬೇಕು ಇಲ್ಲದಿದ್ದರೆ ಶವವನ್ನು ಪಂಚಾಯತ್ ಎದುರು ಇಟ್ಟು ಪ್ರತಿಭಟಿಸುವುದಾಗಿ ಆಗ್ರಹಿಸತೊಡಗಿದರು. ವಿಷಯ ತಿಳಿದು ಬೆಳ್ಳಾರೆ ಎಸ್‌ಐ ಡಿ.ಎನ್.ಈರಯ್ಯ ಮತ್ತು ಸ್ಥಳಕ್ಕೆ ಬಂದರು. ಸುಳ್ಯದಿಂದ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಭವಾನಿಶಂಕರ ಸ್ಥಳಕ್ಕೆ ಹೋದರು. ತಾಲೂಕು ಪಂಚಾಯತ್ ಸದಸ್ಯ ಅಬ್ದುಲ್ ಗಫೂರ್, ಗ್ರಾ.ಪಂ. ಉಪಾಧ್ಯಕ್ಷ ಕರುಣಾಕರ ಹುದೇರಿ, ಕಾರ್ಯದರ್ಶಿ ಸೀತಾರಾಮ, ಸೊಸೈಟಿ ಅಧ್ಯಕ್ಷ ವಸಂತಕುಮಾರ್ ಹುದೇರಿ ಮೊದಲಾದವರು ಕೂಡಾ ಸ್ಥಳಕ್ಕೆ ಬಂದಿದ್ದರು.


ಮಾನವೀಯ ನೆಲೆಯಲ್ಲಿ ಮೋಹನರ ಪತ್ನಿಗೆ ಪಂಚಾಯತ್‌ನಲ್ಲಿ ಕೆಲಸ ನೀಡುವುದಾಗಿ ಪಂಚಾಯತ್‌ನವರು ಮತ್ತು ಕಾರ್ಯನಿರ್ವಹಣಾಧಿಕಾರಿ ಭರವಸೆ ನೀಡಿದರು. ಪ್ರತಿಭಟನೆ ಕೈಬಿಡುವಂತೆ ಎಸ್‌ಐಯವರೂ ಮನವಿ ಮಾಡಿಕೊಂಡರು. ಈ ಹಿನ್ನಲೆಯಲ್ಲಿ ಪ್ರತಿಭಟನೆ ನಡೆಯದೆ ಅಂತ್ಯಸಂಸ್ಕಾರ ನಡೆಸಲಾಯಿತು.
ಮೋಹನ್ ಹಣ ದುರುಪಯೋಗ ಮಾಡಿಲ್ಲ. ಬೇರೆಯವರಿಗೆ ಬೇಕಾಗಿ ಅವರನ್ನು ಬಲಿಪಶು ಮಾಡಲಾಗಿದೆ ಎಂದು ದಲಿತ ಸಂಘಟನೆಗಳ ಮುಖಂಡರು ಸುದ್ದಿಗೆ ಹೇಳಿದರು. ಮಾನವೀಯ ನೆಲೆಯಲ್ಲಿ ಅವರ ಪತ್ನಿಗೆ ಉದ್ಯೋಗ ನೀಡಲಾಗುವುದು ಪಂಚಾಯತ್‌ನಿಂದ ತಕ್ಷಣ ೫೦೦೦ ಪರಿಹಾರ ನೀಡಲಾಗುವುದು ಎಂದು ಉಪಾಧ್ಯಕ್ಷ ಕರುಣಾಕರ ಹುದೇರಿ ಹೇಳಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.