ಸ್ವಾತಂತ್ರ್ಯ ಹೋರಾಟದ ಐತಿಹಾಸಿಕ ಸ್ಥಳವಾಗಿದ್ದ ಬೆಳ್ಳಾರೆಯ ಬಂಗ್ಲೆಗುಡ್ಡೆಯಲ್ಲಿ ಅಮರ ಸುಳ್ಯ ಸ್ವಾತಂತ್ರ್ಯ ಸದನ ನಿರ್ಮಾಣವಾಗಬೇಕು ಎಂದು ಬೆಳ್ಳಾರೆಯ ಸ್ನೇಹಿತರ ಕಲಾ ಸಂಘದ ವತಿಯಿಂದ ಸುಳ್ಯ ಶಾಸಕ ಎಸ್ ಅಂಗಾರ ಅವರಿಗೆ ಮನವಿ ಸಲ್ಲಿಸಲಾಯಿತು.
ಸ್ನೇಹಿತರ ಕಲಾ ಸಂಘದ ಅಧ್ಯಕ್ಷ ಕೊರಗಪ್ಪ ನಾಯ್ಕ ಕುರುಂಬುಡೇಲು ಶಾಸಕರಿಗೆ ಮನವಿ ಪತ್ರ ನೀಡಿದರು. ಪೂರ್ವಾಧ್ಯಕ್ಷರುಗಳಾದ ಚಂದ್ರಶೇಖರ ಪನ್ನೆ, ಪದ್ಮನಾಭ ಬೀಡು, ಆನಂದ ಗೌಡ ಪಡ್ಪು, ಕಾರ್ಯದರ್ಶಿ ಸಂಜಯ ನೆಟ್ಟಾರು, ಸದಸ್ಯರುಗಳಾದ ಶಿವರಾಮ ನಾಯಕ್ ಪನ್ನೆ, ಶೇಷಪ್ಪ ಕುಲಾಲ್ ಬಸ್ತಿಗುಡ್ಡೆ, ಜಯಂತ ಪೂಜಾರಿ ಕಾವಿನ ಮೂಲೆ, ಸತೀಶ್ ಕುಮಾರ್ ಕಿಲಂಗೋಡಿ ಉಪಸ್ಥಿತರಿದ್ದರು.
ಬೆಳ್ಳಾರೆ ಕೋಟೆಯಲ್ಲಿ ಒಂದು ಅಮರ ಸುಳ್ಯ ಸ್ವಾತಂತ್ರ್ಯ ಭವನ ನಿರ್ಮಾಣವಾಗಬೇಕು. ಆ ಭವನದಲ್ಲಿ ೧೮೩೭ರ ಬಂಡಾಯದಲ್ಲಿ ಪಾಲ್ಗೊಂಡ ಹಿರಿಯರ ಬಗೆಗಿನ ದಾಖಲೆಗಳು, ಆಗ ಬಳಸಲಾದ ಕತ್ತಿ, ಕೋವಿ ಮತ್ತು ಇತರ ಆಯುಧಗಳು, ರೈತ ಸಂಗ್ರಾಮದ ಬಗ್ಗೆ ಹೊರಬಂದಿರುವ ಎನ್. ಎಸ್. ದೇವಿಪ್ರಸಾದರ ಅಮರ ಸುಳ್ಯದ ಸ್ವಾತಂತ್ರ್ಯ ಸಮರ, ನಿರಂಜನರ ಕಲ್ಯಾಣ ಸ್ವಾಮಿ ಮತ್ತು ಅಪರಂಪಾರ, ಡಾ. ಪ್ರಭಾಕರ ಶಿಶಿಲರ ಮೂಡಣದ ಕೆಂಪು ಕಿರಣ ಮತ್ತು ಅಮರ ಕ್ರಾಂತಿ ವೀರರು, ವಿದ್ಯಾಧರ ಬಡ್ಡಡ್ಕ ಅವರ ಕೆದಂಬಾಡಿ ರಾಮಗೌಡ, ಪಾಲ್ತಾಡಿ ರಾಮಕೃಷ್ಣ ಆಚಾರ್ರ ಸ್ವಾತಂತ್ರ್ಯ ಯೋಧ ಕೆದಂಬಾಡಿ ರಾಮ ಗೌಡ, ಡಾ. ಪ್ರತಿಮಾ ಜಯರಾಂರ ೧೮೩೭ರ ಕೊಡಗು ಕೆನರಾ ಬಂಡಾಯ ಎಂಬಿತ್ಯಾದಿ ಕೃತಿಗಳಲ್ಲದೆ ಭಾರತದ ಸ್ವಾತಂತ್ರ್ಯ ಹೋರಾಟದ ಗಾಂಧೀ, ನೆಹರೂ, ಸುಭಾಶ್ಚಂದ್ರ ಭೋಸ್, ವಲ್ಲಭಬಾಯಿ ಪಟೇಲರಂತಹ ದೇಶ ಭಕ್ತರ ಬಗೆಗಿನ ಕೃತಿಗಳು ಓದುಗರಿಗೆ ಲಭ್ಯವಾಗುವಂತೆ ಮಾಡುವ ಗ್ರಂಥಾಲಯವೊಂದು ನಿರ್ಮಾಣವಾಗಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ. ಸ್ವಾತಂತ್ರ್ಯ ಸಮರದ ವಿವರದ ಕೆಲವು ದಾಖಲೆಗಳನ್ನು ಮತ್ತು ಅಮರಕ್ರಾಂತಿ ಸ್ವಾತಂತ್ರ್ಯ ಭವನದ ನಿರ್ಮಾಣ ವೆಚ್ಚದ ನೀಲಿ ನಕಾಶೆಯೊಂದನ್ನು ಪತ್ರದೊಂದಿಗೆ ನೀಡಲಾಯಿತು.