HomePage_Banner
HomePage_Banner
Breaking News

ಪಂಜ ದೇವಸ್ಥಾನದಲ್ಲಿ ನಡೆಯಿತೇ ವಿಸ್ಮಯ?

ತನ್ನಷ್ಟಕ್ಕೇ ಬಾರಿಸಿತು ಡೋಲು ಹಾಗೂ ಜಯಗಂಟೆ

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ ಘಟನೆ

ತಾಂಬೂಲ ಪ್ರಶ್ನಾಚಿಂತನೆಗೆ ನಿರ್ಧಾರ

ಪಂಜ ಶ್ರೀ ಪಂಚಲಿಂಗೇಶ್ವರ ದೇಗುಲದಲ್ಲಿ ಮಧ್ಯರಾತ್ರಿ ಹೊತ್ತು ಡೋಲು ಹಾಗೂ ಜಯಗಂಟೆ ತನ್ನಷ್ಟಕ್ಕೇ ಬಾರಿಸಿದ ವಿದ್ಯಮಾನವೊಂದು ಘಟಿಸಿದೆ ಎನ್ನಲಾಗುತ್ತಿದ್ದು, ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

 

ಶ್ರೀ ದೇವರ ಸನ್ನಿಧಾನದಲ್ಲಿ ನೆಲೆನಿಂತಿರುವ ಅಮ್ಮನವರ ಗುಡಿಯಲ್ಲಿ ಪ್ರತೀ ವರ್ಷವೂ ನವರಾತ್ರಿಯಲ್ಲಿ ಒಂಬತ್ತು ದಿನ ಪೂಜಾ ಕಾರ್ಯಗಳೂ ನಡೆಯುತ್ತಿದೆ. ಈ ವರ್ಷವೂ ಆಡಳಿತಾಧಿಕಾರಿ ಮತ್ತು ಸಿಬ್ಬಂದಿಗಳ ನೇತೃತ್ವದಲ್ಲಿ ದೇವಳದ ಅಮ್ಮನವರ ಗುಡಿಯಲ್ಲಿ ನವರಾತ್ರಿಯ ಹಬ್ಬವನ್ನು ಶ್ರೀ ದೇವರ ವಿಶೇಷ ಪೂಜೆ ಮುಖಾಂತರ ನಡೆಸಿಕೊಂಡು ಬರಲಾಗುತ್ತಿತ್ತು.

ಅ.7 ಸೋಮವಾರದಂದು ಒಂಬತ್ತನೇ ದಿನದ ಆಯುಧ ಪೂಜೆಯ ಪ್ರಯುಕ್ತ ಬೆಳಗಿನಿಂದಲೇ ದೇವಳದಲ್ಲಿ ಪ್ರಧಾನ ದೇವರಿಗೆ ಹಾಗೂ ಅಮ್ಮನವರಿಗೆ ವಿಶೇಷ ಪೂಜೆಗಳು ಮತ್ತು ವಾಹನ ಪೂಜೆಗಳು ರಾತ್ರಿಯವರೆಗೂ ನಡೆದಿತ್ತು. ನೂರಾರು ಭಕ್ತಾದಿಗಳು ಶ್ರೀದೇವರ ದರುಶನ ಪಡೆದು ಅನ್ನ ಪ್ರಸಾದ ಸ್ವೀಕರಿಸಿ ತೆರಳಿದ್ದರು. ಆಡಳಿತ ಅಧಿಕಾರಿ ಡಾ.ದೇವಿಪ್ರಸಾದ್ ಕಾನತ್ತೂರ್ ಹಾಗೂ ಸಿಬ್ಬಂದಿ ವರ್ಗದವರು ಕೂಡಾ ರಾತ್ರಿ 12 ಗಂಟೆಗೆ ಮನೆಗೆ ತೆರಳಿದ್ದರು.

ಇದ್ದಕ್ಕಿದ್ದಂತೆ ರಾತ್ರಿ 1.3೦ ಗಂಟೆಯ ಸುಮಾರಿಗೆ ದೇಗುಲದ ಒಳಗಡೆ ಡೋಲು ಹಾಗೂ ಜಯಗಂಟೆ ಬಾರಿಸುವ ಶಬ್ದ ಕೇಳಿ ಬಂದಿದೆ. ತಕ್ಷಣ ಭದ್ರತಾ ಸಿಬ್ಬಂದಿ ಈ ವಿಷಯವನ್ನು ಡಾ.ದೇವಿಪ್ರಸಾದ್ ಕಾನತ್ತೂರ್ ಹಾಗೂ ಅರ್ಚಕರಿಗೆ ತಿಳಿಸಿದಾಗ ಅವರು ತಕ್ಷಣ ಕ್ಷೇತ್ರಕ್ಕೆ ಆಗಮಿಸಿ ಪ್ರಧಾನ ಬಾಗಿಲು ತೆರೆದು ಒಳಗೆ ಬಂದು ನೋಡಿದಾಗ ಡೋಲು ಹಾಗೂ ಜಯಗಂಟೆ ಬಾರಿಸುತ್ತಿರುವುದು ಕಂಡು ಬಂದಿದ್ದು, ಇದಕ್ಕೆ ಸಂಬಂಧಿಸಿದ ಸ್ವಿಚ್ ಆನ್ ಆಗಿತ್ತು. ಹನ್ನೆರಡು ಸ್ವಿಚ್‌ಗಳು ಇರುವ ಇಲೆಕ್ಟ್ರಿಕ್ ಬೋರ್ಡ್‌ನಲ್ಲಿ, ಇನ್ಟ್ರುಮೆಂಟ್ ಇರುವ ಅದೇ ಸ್ವಿಚ್ ಮಾತ್ರ ಆನ್ ಆಗಿದ್ದು ಬೇರೆ ಯಾವುದೇ ಸ್ವಿಚ್ ಗಳು ಆನ್ ಆಗದೇ ಇರುವುದನ್ನು ಕಂಡಾಗ ಅಚ್ಚರಿ ಉಂಟಾಯಿತು.

ಬಹುತೇಕ ಸಂದರ್ಭಗಳಲ್ಲಿ ಈ ಸ್ವಿಚ್ ಆನ್ ಮಾಡಿಯೇ ಡೋಲು ಮತ್ತು ಜಯಗಂಟೆಗಳನ್ನು ಮೊಳಗಿಸಲಾಗುತ್ತಿತ್ತು. ವಿಶೇಷವೆಂದರೆ ಅಂದು ಮಧ್ಯಾಹ್ನ ಹಾಗೂ ರಾತ್ರಿ ಈ ಸ್ವಿಚ್ ಆನ್ ಮಾಡಿರಲಿಲ್ಲ. ಈ ಸೋಜಿಗವನ್ನು ಕಂಡ ಆಡಳಿತ ಅಧಿಕಾರಿ ಹಾಗೂ ಸಿಬ್ಬಂದಿ ವರ್ಗದವರು ಶ್ರೀ ದೇವರ ಸನ್ನಿಧಾನದಲ್ಲಿ ಮತ್ತು ಅಮ್ಮನವರ ಗುಡಿಯಲ್ಲಿ ಕೂಡ ಪ್ರಾರ್ಥನೆಯನ್ನು ಸಲ್ಲಿಸಿದ ನಂತರ ಡೋಲು ಹಾಗೂ ಜಯಗಂಟೆಯ ಸ್ವಿಚ್ ಆಫ್ ಮಾಡಿ ತೆರಳಿದರು.

ಈ ವಿಸ್ಮಯದ ಘಟನೆಯ ಹಿನ್ನಲೆಯಲ್ಲಿ ತಂತ್ರಿಯವರ ಸಲಹೆ ಪಡೆದು ಗರಡಿ ಬೈಲಿನಲ್ಲಿ ತಾಂಬೂಲ ಪ್ರಶ್ನೆ ಇರಿಸಲು ನಿರ್ಧರಿಸಲಾಗಿದ್ದು, ಅ. 13 ರಂದು ತಾಂಬೂಲ ಪ್ರಶ್ನೆ ನಡೆಯಲಿದೆ.
ಶ್ರೀ ದೇಗುಲದ ಉಳ್ಳಾಕುಲು ಮತ್ತು ಕಾಜುಕುಂಜುಂಬ ದೈವದ ಮೂಲಸ್ಥಾನ ಗರಡಿಬೈಲಿನ ಜೀರ್ಣೋದ್ಧಾರ ಸಂಕಲ್ಪದ ಹಿನ್ನಲೆಯಲ್ಲಿ ಈ ಘಟನೆ ನಡೆದಿದೆ ಎಂದು ಭಕ್ತರು ಆಡಿಕೊಳ್ಳುತ್ತಿದ್ದಾರೆ. ಜೀರ್ಣೋದ್ಧಾರದ ಪ್ರಯುಕ್ತ ಅ. 11ರಂದು ಗಣಹೋಮ ಹಾಗೂ ಅನುಜ್ಞಾ ಕಲಶಗಳು ನಡೆಯಲಿವೆ.

ಶ್ರೀಕ್ಷೇತ್ರದ ಸಿಸಿ ಕ್ಯಾಮೆರಾವನ್ನು ಪರೀಕ್ಷಿಸಿದಾಗ ದೇವಳದ ಅಂಗಣದ ಒಳಗೆ ವಿಶೇಷ ಕಿರಣವೊಂದು ಹಾದು ಹೋಗುತ್ತಿರುವುದು ಮತ್ತು ಬಿಳಿ ಬಣ್ಣದ ಹಕ್ಕಿ ಹಾರಿದಂತೆ ಸ್ಪಷ್ಟವಾಗಿ ಕಾಣುತ್ತಿದ್ದು, ಭಕ್ತರಲ್ಲಿ ಭಾರೀ ಕುತೂಹಲ ಮೂಡಿಸುವಂತೆ ಮಾಡಿದೆ.

ವಿಶೇಷ ಘಟನೆಯೊಂದು ನಡೆದಿರುವುದು ಸತ್ಯ. ಈ ಕುರಿತು ಜ್ಯೋತಿಷ್ಯರಲ್ಲಿ ಚಿಂತನೆ ನಡೆಯಲಿದೆ ಎಂದು ಆಡಳಿತಾಧಿಕಾರಿ ಡಾ. ದೇವಿಪ್ರಸಾದ್ ಕಾನತ್ತೂರು ತಿಳಿಸಿದ್ದಾರೆ.

Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.