ಅನಂತ ಸೋಜಿಗದ ನಲ್ಲೂರಾಯ!

Advt_Headding_Middle
Advt_Headding_Middle
Advt_Headding_Middle

ಅಗಲಿದ ನಲ್ಲೂರಾಯರ ಕುರಿತು ದಿ. ವಿಠಲ ರಾವ್ ಬರೆದಿದ್ದ ಬರಹ

*ಇತ್ತೀಚೆಗಷ್ಟೆ ಅಗಲಿದ ಸುಬ್ರಹ್ಮಣ್ಯ ಅನಂತ ನಲ್ಲೂರಾಯರ ಕುರಿತು ಕೆಲವು ವರ್ಷಗಳ ಹಿಂದೆ ದಿ. ವಿಠಲ ರಾವ್ ಬರೆದಿದ್ದ ಬರಹ ಇದು –

ಜ್ಞಾನಪೀಠ ಪ್ರಶಸ್ತಿ ಈವರೆಗೆ ಯಾರಿಗೆಲ್ಲ ಲಭಿಸಿದೆ? ಯಾವ ವರ್ಷ ಯಾವ ಭಾಷೆಯ ಸಾಹಿತ್ಯಕ್ಕೆ, ಯಾವ ಸಾಹಿತಿಗೆ ಲಭಿಸಿದೆ? ಲೇಖಕರ ಹೆಸರೇನು? ಈ ಪ್ರಶ್ನೆಗಳಿಗೆ ಅನಂತ ನಲ್ಲೂರಾಯರ ಪುಸ್ತಕ ಸಂಗ್ರಹದಲ್ಲಿ ಉತ್ತರವಿದೆ. ಕೈಬರಹದಲ್ಲಿರುವ ಋಗ್ವೇದದ ಅಪರೂಪದ ಓಲೆಗರಿಯೂ ಸೇರಿದಂತೆ ಲಕ್ಷಾಂತರ ರೂಪಾಯಿ ಮೌಲ್ಯದ ಪುಸ್ತಕಗಳು ಅವರ ಸಂಗ್ರಹದಲ್ಲಿವೆ.


ಸಾಹಿತ್ಯದ ಕೃತಿಗಳನ್ನು ಕೊಂಡು ಓದಬೇಕು. ಪ್ರತಿ ಮನೆಯಲ್ಲೂ ಪುಟ್ಟ ಗ್ರಂಥಾಲಯ ರಚನೆಯಾಗಬೇಕು. ಆಗ ಮಾತ್ರ ನಿಜವಾದ ಸಾಹಿತ್ಯದ ಉದ್ಧಾರ, ಅಭಿವೃದ್ಧಿ ಸಾಧ್ಯವೆಂದು ಸಾಹಿತ್ಯ ಸಮ್ಮೇಳನಗಳ ವೇದಿಕೆಗಳಲ್ಲಿ ಏರು ಧ್ವನಿಯಲ್ಲಿ ಹೊರಬೀಳುವ ಮಾತುಗಳು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಬಳಿಯ ಪುರೋಹಿತರ ಮನೆಯೊಂದರಲ್ಲಿ ಸಾಕಾರಗೊಂಡಿದೆ. ಸಾಹಿತ್ಯದ ಕುರಿತಾಗಿ ಸುಸಜ್ಜಿತ ಗ್ರಂಥಾಲಯವೊಂದು ಮಾಡುವ ಅಮೂಲ್ಯ ಹಾಗೂ ಅಪರೂಪದ ಪುಸ್ತಕ, ಗ್ರಂಥಗಳ ಭಂಡಾರವೇ ಇಲ್ಲಿದೆ.
ವೃತ್ತಿಯಲ್ಲಿ ಪುರೋಹಿತ, ಜ್ಯೋತಿಷಿ, ಆದರೆ ಉತ್ತಮ ಪುಸ್ತಕಗಳನ್ನು ಕೊಂಡು ಓದುವ ವಿಶೇಷ ಪ್ರವೃತ್ತಿ. ಭಾಷೆ ಯಾವುದಾದರೇನು? ಭಾರತೀಯ ಯಾವುದೇ ಭಾಷೆಯ ಉತ್ತಮ ಪುಸ್ತಕಗಳಿಗೆ ಜ್ಞಾನಪೀಠ ಪ್ರಶಸ್ತಿ ಬಂದಿದೆ ಎಂದಾದರೆ, ಪ್ರಶಸ್ತಿ ಪುರಸ್ಕೃತರ ಉತ್ತಮ ಪುಸ್ತಕವೊಂದು ನಲ್ಲೂರಾಯರ ಬಳಿ ಬಂದೇ ಬರುವುದು. ಆ ಪುಸ್ತಕಗಳನ್ನು ಆಯಾ ಭಾಷೆಯಲ್ಲೇ ಓದಿ, ಅರ್ಥೈಸಿಕೊಳ್ಳುವ ಅವರ ಭಾಷಾಪಾಂಡಿತ್ಯವೂ ಮೆಚ್ಚತಕ್ಕದ್ದೇ. ಈಗ ವಯಸ್ಸು ೭೮. ಆದರೆ ಇಳಿವಯಸ್ಸಿನಲ್ಲೂ ಸಾಹಿತ್ಯದ ಕುರಿತು ಮಾತನಾಡಲು ಕುಳಿತಾಗ ೨೦ರ ಯುವಕರಾಗುತ್ತಾರೆ ಅನಂತ ನಲ್ಲೂರಾಯರು.
ಸಾಹಿತ್ಯ, ಸಂಸ್ಕೃತಿ, ಕಲೆ, ಇತಿಹಾಸ, ಜ್ಯೋತಿಷ, ಧಾರ್ಮಿಕ, ಸಾಮಾಜಿಕ ಮೊದಲಾದ ಕ್ಷೇತ್ರಗಳಲ್ಲಿ ಅಧ್ಯಯನ ನಡೆಸಿ ಆ ಕುರಿತು ಮನಮುಟ್ಟುವಂತೆ ಮಾತನಾಡಬಲ್ಲ ಅನಂತ ಪ್ರತಿಭೆಯ ನಲ್ಲೂರಾಯರು ಪ್ರಚಾರ ಬಯಸದ ಪ್ರತಿಭಾವಂತ.
ಜ್ಞಾನಪೀಠ ಪ್ರಶಸ್ತಿ ಪಡೆದ ಮಲಯಾಳಂ ಸಾಹಿತಿ ಜಿ. ಶಂಕರ್ ಕುರುಪ್ ಅವರಿಂದಾರಂಭಿಸಿ ೧೯೯೫ರಲ್ಲಿ ಪ್ರಶಸ್ತಿ ಪಡೆದ ಪನ್ನಾಲಾಲ್ ಪಟೇಲರ ಕೃತಿಗಳು ಇವರ ಸಂಗ್ರಹದಲ್ಲಿವೆ. ಆನಂತರ ಸಮಗ್ರ ಸಾಹಿತ್ಯ ಕೃತಿಗಾಗಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಲೇಖಕರ ಅತ್ಯುತ್ತಮವಾದ ಕನಿಷ್ಠ ಮೂರು ಪುಸ್ತಕಗಳು ಇವರಲ್ಲಿವೆ. ಎಲ್ಲ ಪುಸ್ತಕಗಳ ಕಿವಿ ಮಡಚದೆ, ಗೆದ್ದಲು ಹಿಡಿಸದೆ ನೂತನ ಪುಸ್ತಕದಂತೆ ಜೋಡಿಸಿರುವ ಇವರ ಪುಸ್ತಕ ಸಂಗ್ರಹದ ಆಸಕ್ತಿ, ಹವ್ಯಾಸ ಇಲ್ಲಿಗೇ ನಿಂತಿಲ್ಲ. ಪ್ರಶಸ್ತಿ ವಿಜೇತರ ಪುಸ್ತಕಗಳನ್ನು ಆಯಾ ಭಾಷೆಯಲ್ಲೇ ಓದಿ, ಮನನ ಮಾಡಿ ಆಸಕ್ತರಿಗೆ ಅದರ ಎಲ್ಲ ತಿರುಳನ್ನು ನವಿರಾಗಿ ವಿವರಿಸಬಲ್ಲ ಬಹುಭಾಷಾ ಪಂಡಿತರಾದ ಇವರೊಬ್ಬ ಅಪ್ಪಟ ಸಾಹಿತ್ಯ ಪ್ರೇಮಿ, ಬಹುಭಾಷಾ ಪಂಡಿತ. ಭಾರತದ ೧೫ಕ್ಕೂ ಅಧಿಕ ಭಾಷೆಗಳನ್ನು ಕಲಿತು, ನಿರಾಳವಾಗಿ ಓದಬಲ್ಲ ವಿದ್ವಾಂಸ. ದೇಶದ ವಿವಿಧ ಭಾಷೆಗಳ ಪ್ರಾಥಮಿಕ ಹಾಗೂ ಶಾಲಾ ಪಠ್ಯಪುಸ್ತಕಗಳ ಸಂಗ್ರಹಮಾಡಿ, ಭಾಷಾಧ್ಯಯನಗೈದು ಕಲಿಯುವ ಇವರ ಆಸಕ್ತಿ ಕುತೂಹಲ ಕೆರಳಿಸುತ್ತದೆ. ೨೦೧೩ರವರೆಗಿನ ಜ್ಞಾನಪೀಠ ಪ್ರಶಸ್ತಿ ಪಡೆದ ಸಾಹಿತಿಗಳ ಕೃತಿಗಳು ಇವರ ಸಂಗ್ರಹದಲ್ಲಿವೆ.
ನಿರಂತರ ಜೀವನೋತ್ಸಾಹಕ್ಕೆ ಹವ್ಯಾಸ ಅಗತ್ಯ ಎನ್ನುವ ನಲ್ಲೂರಾಯರ ಆಸಕ್ತಿ, ಹವ್ಯಾಸಗಳು ಸಾಹಿತ್ಯ ಮಾತ್ರವಲ್ಲದೆ ಇನ್ನೂ ಹಲವು ಕ್ಷೇತ್ರಗಳಲ್ಲಿ ವಿಸ್ತೃತಗೊಂಡಿವೆ. ಕೃಷಿ, ಹೈನುಗಾರಿಕೆ, ಜೇನುಸಾಕಣೆ, ಚಾರಣ, ನಾಟಕ, ವಿಗ್ರಹರಚನೆ, ಸಾಮಾನ್ಯ ಜ್ಞಾನ ಹೀಗೆ ಜ್ಞಾನದಾಹಿಗಳಾದ ನಲ್ಲೂರಾಯರ ಹವ್ಯಾಸ ವಿಸ್ತರಿಸಿ ಅಚ್ಚರಿ ಮೂಡಿಸುವ ವಿಶೇಷ ಸಾಧನೆ ಮಾಡಿದ್ದಾರೆ.
ಪುಸ್ತಕ ಸಂಗ್ರಹಣೆಯ ಕಾಶಿ
ವೇದ, ಪುರಾಣ, ವಿಶ್ವಕೋಶ, ಚಿತ್ರಕಲೆ, ಜೇನುಕೃಷಿ, ತೋಟಗಾರಿಕೆ, ಖಗೋಳ, ಪಂಚಾಂಗ ಮೊದಲಾದ ವಿವಿಧ ಕ್ಷೇತ್ರಗಳ ಪುಸ್ತಕಗಳ ಸಂಗ್ರಹಣೆಯ ಮೇಧಾವಿ ಅನಂತ ನಲ್ಲೂರಾಯರು. ವಾಲ್ಮೀಕಿ ರಾಮಾಯಣ, ಮಲಯಾಳಂನ ಕಂಬ ರಾಮಾಯಣ, ಹಿಂದಿಯ ತುಳಸಿ ರಾಮಾಯಣ, ತಮಿಳು ಧರ್ಮಗ್ರಂಥ ತಿರುಕ್ಕುರಲ್, ಐದು ಭಾಷೆಗಳ ಮಹಾಭಾರತ, ಕನ್ನಡ ವಿಶ್ವಕೋಶ (೧೩ ಸಂಪುಟ) ಕಿರಿಯರ ವಿಶ್ವಕೊಶ (ಏಳು ಸಂಪುಟ) ಗ್ರೇಟ್ ವರ್ಲ್ಡ್ ಅಟ್ಲಾಸ್, ಹೋವರ್‌ನ ಈಲಿಯೆಟ್, ಗ್ರೀಕ್ ಭಾಷೆಯಲ್ಲಿ ಬರೆದಿರವ ಜಾಗತಿಕ ಇತಿಹಾಸದ ಇಂಗ್ಲಿಷ್ ಭಾಷಾಂತರ ಕೃತಿ, ಮಲಯಾಳಂನ ಅತಿ ಪುರಾತನ ಕಾದಂಬರಿ ಇಂದುಮತಿ, ತಗಳಿಯವರ ಚೆಮ್ಮೀನ್, ಗುರೂಜಿ ಗೋಳ್ವಕರ್ ಅವರ ಬಂಚ್ ಆಫ್ ಥಾಟ್ಸ್‌ನ ಕನ್ನಡ, ಮಲಯಾಳಂ, ತೆಲುಗು ಆವೃತ್ತಿಗಳು, ಕನ್ನಡ ಭಾಷೆಯ ಕಾವ್ಯ, ಸಾಹಿತ್ಯ, ಕಾದಂಬರಿ, ನಾಟಕ, ವೈಜ್ಞಾನಿಕ ಕೃತಿಳು.. ಹೀಗೆ ಕುವೆಂಪು ಆದಿಯಾಗಿ ಡಾ.ಯು.ಆರ್. ಅನಂತಮೂರ್ತಿ ಅವರ ಕೃತಿಗಳ ಭಂಡಾರವೇ ಇಲ್ಲಿದೆ. ಮಕ್ಕಳ ಸಾಹಿತ್ಯದ ಕುರಿತಾದ ಭಾರತ-ಭಾರತಿ ಪುಸ್ತಕ ಸಂಪದ (೫೧೦ ಪುಸ್ತಕ), ಹಿಂದಿ ಭಾಷಾ ತ್ರಿಪದಿ -ಹೈಕುಗಳು (ಜಗತ್ತಿನ ೨೫ ಭಾಷೆಗಳಲ್ಲಿ ಅನುವಾದಗೊಂಡಿರುವ ಅಪೂರ್ವ ಹಾಗೂ ಅಮೂಲ್ಯ ಕೃತಿ), ೧೯೫೨ರಲ್ಲಿ ಹೊರಬಂದ ಪಂಚಾಂಗ ತಯಾರಿ ಗ್ರಂಥ, ಜಾಗತಿಕ ಯುದ್ಧದ ವಿವರಣೆ, ವೇದ, ಉಪನಿಷತ್, ಕುರಾನ್, ಬೈಬಲ್, ದಯಾನಂದ ಸರಸ್ವತಿ ಅವರ ಅಲ್ಲೋಪನಿಷತ್ ಹೀಗೆ ನಲ್ಲೂರಾಯರ ಸಂಗ್ರಹದಲ್ಲಿ ಅಪರೂಪ ಹಾಗೂ ಅಪೂರ್ವವಾದ ಪುಸ್ತಕಗಳಿವೆ.
ಉತ್ತರ ಭಾರತದ ಹಿಂದಿ, ಕಾಶ್ಮೀರಿ, ಉರ್ದು ಭಾಷೆಗಳಲ್ಲಿ ಸಾಹಿತ್ಯ ಕೃಷಿ ಮಾಡಿದ ಮಹಿಳಾ ಸಾಹಿತಿಗಳಿಗೆ ಜ್ಞಾನಪೀಠ ಪ್ರಶಸ್ತಿ ಲಭಿಸಿದೆ. ಆದರೆ ತೆಲುಗು, ಮರಾಠಿ, ತಮಿಳು, ಮಲಯಾಳ, ಕನ್ನಡ ಸೇರಿದಂತೆ ದಕ್ಷಿಣ ಭಾರತದ ಮಹಿಳಾ ಸಾಹಿತಿಗಳಿಗೆ ಜ್ಞಾನಪೀಠ ಪ್ರಶಸ್ತಿ ಇನ್ನೂ ಲಭಿಸಿಲ್ಲ ಎನ್ನುವ ಅನಂತ ಹವ್ಯಾಸದ ಅನಂತ ನಲ್ಲೂರಾಯರ ಜೀವನೋತ್ಸಾಹವೇ ಸೋಜಿಗ.

-ಬಿ.ವಿಠಲ ರಾವ್, ಮಲ್ಲಿಗೆಮಜಲು

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.