HomePage_Banner
HomePage_Banner
HomePage_Banner
HomePage_Banner

ಪೇಜಾವರರ ಕೆಲವು ನೆನಪುಗಳು…

ಡಾ.ಚಂದ್ರಶೇಖರ ದಾಮ್ಲೆ


ಕುರುಂಜಿ ವೆಂಕಟ್ರಮಣ ಗೌಡರ ಷಷ್ಟ್ಯಬ್ದ ಸಮಾರಂಭದಂದು ಅನೇಕ ಆಹ್ನಿಕ ಹಾಗೂ ಸಭಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ನಾವೆಲ್ಲರೂ ವಹಿಸಿಕೊಂಡ ಜವಾಬ್ದಾರಿಗಳ ನಿರ್ವಹಣೆಯಲ್ಲಿ ಮುಳುಗಿದ್ದೆವು. ಬೆಳಗ್ಗೆ ಸುಮಾರು ಎಂಟು ಗಂಟೆ ಹೊತ್ತಿಗೆ ಕುರುಂಜಿಯವರಿಗೆ ಅಚ್ಚರಿಗೊಳ್ಳುವಂತಹ ಫೋನ್ ಬಂತು.

“ನಾವು ಪುತ್ತೂರಿನಲ್ಲಿದ್ದೇವೆ. ನಿಮ್ಮ ಷಷ್ಟ್ಯಬ್ದದ ಆಚರಣೆಯ ಬಗ್ಗೆ ನೆನಪಾಯಿತು. ನಿಮನ್ನು ಹರಸಲು ಅಲ್ಲಿಗೆ ಬರುತ್ತೇವೆ”. ಹೀಗೆಂದು ದೂರವಾಣಿಯಲ್ಲಿ ಹೇಳಿದವರು ಅಂದಿನ ದಿನಗಳಲ್ಲೇ ಸಾಕಷ್ಟು ಪ್ರಸಿದ್ಧಿ ಪಡೆದಿದ್ದ ಪೇಜಾವರ ಶ್ರೀಗಳು. ವಾಸ್ತವದಲ್ಲಿ ಕುರುಂಜಿಯವರು ಆಮಂತ್ರಿಸಿದಾಗ ಅವರಿಗೆ ಏನೋ ಅನಾನುಕೂಲವಾಗಿತ್ತು. ಆದರೆ ಕಾರಣಾಂತರದಿಂದ ಆ ಕಾರ್ಯಕ್ರಮ ತಪ್ಪಿದಾಗ ಸ್ವಾಮೀಜಿಯವರು ಪ್ರತಿಷ್ಠೆ ಮಾಡದೆ ತಾವಾಗಿ ಬರುವುದಾಗಿ ತಿಳಿಸಿದ್ದರು. ಆದರೆ ಅವರನ್ನು ಸೂಕ್ತವಾಗಿ ಸ್ವಾಗತಿಸುವ ವ್ಯವಸ್ಥೆ ತಕ್ಷಣಕ್ಕೆ ಆಗಬೇಕಾಗಿತ್ತು. ಅದಕ್ಕಾಗಿ ಕುರುಂಜಿಯವರು ನನ್ನನ್ನು ಕರೆದು “ಸ್ವಾಮೀಜಿಯವರು ಸ್ವಲ್ಪವೇ ಹೊತ್ತಿನಲ್ಲಿ ಬರಲಿದ್ದಾರೆ. ಅವರ ಸ್ವಾಗತದ ವ್ಯವಸ್ಥೆಯಾಗಬೇಕು. ಏನೂ ಕೊರತೆಯಾಗದಂತೆ ಮಾಡಿ. ನಿಮ್ಮ ಜವಾಬ್ದಾರಿ” ಎಂದರು. ನಾನು ತಕ್ಷಣ ಕಾರ್ಯಪ್ರವೃತ್ತನಾಗಿ ವೇದಿಕೆಯಲ್ಲಿ ಸ್ವಾಮೀಜಿಯವರಿಗೆ ಸೂಕ್ತವಾದ ಆಸನವನ್ನು ಸಿದ್ಧಗೊಳಿಸಿ ಅವರು ಕಾರಿನಿಂದ ಇಳಿಯುವಲ್ಲಿಂದ ವೇದಿಕೆಯವರೆಗೆ ಕಾಲೇಜು ವಿದ್ಯಾರ್ಥಿಗಳನ್ನು ಸಾಲಾಗಿ ನಿಲ್ಲಿಸಿ ಸ್ವಾಗತಕ್ಕೆ ಬೇಕಾದ ಫಲಪುಷ್ಪಗಳನ್ನು ಅರ್ಧಗಂಟೆಯಲ್ಲಿ ಸಿದ್ಧಗೊಳಿಸಿದೆ. ಸ್ವಾಮೀಜಿ ತಿಳಿಸಿದ್ದ ಹೊತ್ತಿಗೆ ಬಂದರು.

ಮಕ್ಕಳ ಮೆರವಣಿಗೆಯಲ್ಲಿ ವೇದಿಕೆಗೆ ಬಂದರು. ತಮ್ಮ ಅದ್ಭುತ ವಾಗ್ಝರಿಯಿಂದ ಕುರುಂಜಿಯವರನ್ನು ಹರಸಿದರು. ಮತ್ತೆ ಮುಂದಿನ ಕಾರ್ಯಕ್ರಮಕ್ಕೆ ತೆರಳಿದರು. ಕುರುಂಜಿಯವರಿಗೆ ತೃಪ್ತಿಯಾದ್ದರಿಂದ ನಾನು ಒಂದು ಸಾರ್ಥಕ ಕೆಲಸ ಮಾಡಿದ ಧನ್ಯತೆಯನ್ನು ಪಡೆದೆ.

ಇನ್ನೊಂದು ಸಂದರ್ಭ ಸಂಪಾಜೆ ಯಕ್ಷೋತ್ಸವದಲ್ಲಿ ದೊರಕಿತು. ಅವರು ಸಭಾ ಕಾರ್ಯಕ್ರಮ ಮುಗಿಸಿ ಪ್ರದರ್ಶನ ನೋಡಲು ಸಭಿಕರಮಧ್ಯೆ ಬಂದು ಕುಳಿತದ್ದು ನನ್ನ ಹತ್ತಿರವೇ ಆಗಿತ್ತು. ಕೆಲವೇ ದಿನ ಹಿಂದೆ ನಾನು ಸಂಪಾದಕನಾಗಿ ಬಿಡುಗಡೆ ಮಾಡಿದ್ದ “ಮಹಾಭಾರತದ ಮಹಾಪಾತ್ರಗಳು” ಎಂಬ ಕೃತಿಯನ್ನು ಅಲ್ಲಿಯೇ ಸಮರ್ಪಿಸಿದೆ. ರಂಗಸ್ಥಳದಲ್ಲಿ ಪೂರ್ವರಂಗದ ವೇಷಗಳು ಕುಣಿಯುತ್ತಿದ್ದುದರಿಂದ ಅವರು ನಾನು ಕೊಟ್ಟ ಪುಸ್ತಕವನ್ನೋದ ತೊಡಗಿದರು. ಮೊದಲ ಅಧ್ಯಾಯವನ್ನು ಬಹಳ ವೇಗವಾಗಿ ಓದಿದ ಅವರು ನನ್ನಡೆಗೆ ಒಂದು ನಗೆ ಬೀರಿ “ಕೃಷ್ಣನ ಬಗ್ಗೆ ಬಹಳ ಚೆನ್ನಾಗಿ ವಿಮರ್ಶಾತ್ಮಕವಾಗಿ ಬರೆದಿದ್ದೀರಿ. ಸಂತೋಷವಾಯಿತು” ಎಂದದ್ದು ನನಗೆ ದೊಡ್ಡ ಆಶೀರ್ವಾದ ಸಿಕ್ಕಿದಂತಾಗಿತ್ತು.

ಮತ್ತೊಂದು ಸಂಭಮದ ನೆನಪು. ಹಿಂದಿನ ಪರ್ಯಾಯದ ಸಂದರ್ಭದಲ್ಲಿ ನಮ್ಮ ಮಕ್ಕಳ ಮೇಳಕ್ಕೆ ರಾಜಾಂಗಣದಲ್ಲಿ ಪ್ರದರ್ಶನದ ಅವಕಾಶ ನೀಡಿದ್ದರು. ರಾತ್ರೆ ಪೂಜೆ ಮುಗಿಸಿ ಸ್ವತಃ ಆಟ ನೋಡಲು ಬಂದು ಕುಳಿತರು. ಹಿರಣ್ಯಾಕ್ಷ ವಧೆಯ ಭಾಗ ಸ್ವಲ್ಪ ದೀರ್ಘವಾದಾಗ ನನ್ನನ್ನು ಕರೆದು “ಎಲ್ಲಿ, ಪ್ರಹ್ಲಾದ ಬೇಗ ಬರಲಿ” ಎಂದರು. ನಾನು ಬಾಲ ಕಲಾವಿದರಿಗೆ ಸೂಚನೆ ನೀಡಿ ಪ್ರಹ್ಲಾದ ಚರಿತ್ರೆಯನ್ನು ಬೇಗನೆ ಆರಂಭಿಸಿದೆ. ಸ್ವಾಮೀಜಿಯವರಿಗೆ ಖುಷಿಯಾಗಿ ಚೌಕಿಗೆ ಬಂದು ಮಕ್ಕಳನ್ನು ಆಶೀರ್ವದಿಸಿದರು.

ಚಂದ್ರಶೇಖರ ದಾಮ್ಲೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.