ಮುಕ್ಕೂರು : ರಾಷ್ಟ್ರಪ್ರಶಸ್ತಿ ವಿಜೇತ ಚಲನಚಿತ್ರೋತ್ಸವ

Advt_Headding_Middle
Advt_Headding_Middle

ಪ್ರತಿಭೆಯನ್ನು ಹೊರ ಸೂಸುವ ನಿಟ್ಟಿನಲ್ಲಿ ಆಯಾ ಊರಿನಲ್ಲಿ ವಿಭಿನ್ನ ಕಾರ್ಯಕ್ರಮ ಅನುಷ್ಠಾನಿಸಿದಾಗ ಇದರಿಂದ ಭವಿಷ್ಯದಲ್ಲಿ ಸಕಾರಾತ್ಮಕ ಫಲಿತಾಂಶ ನಿರೀಕ್ಷಿಸಲು ಸಾಧ್ಯವಿದೆ ಎಂದು ರಾಜ್ಯ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಲಕ್ಷ್ಮೀನಾರಾಯಣ ಕಜೆಗದ್ದೆ ಹೇಳಿದರು.


ಮುಕ್ಕೂರು-ಕುಂಡಡ್ಕ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಹಾಗೂ ನೇಸರ ಯುವಕ ಮಂಡಲ ಇದರ ಆಶ್ರಯದಲ್ಲಿ ಮುಕ್ಕೂರು ಹಿ.ಪ್ರಾ.ಶಾಲಾ ವಠಾರದಲ್ಲಿ ರಾಷ್ಟ್ರೀಯ ಪ್ರಶಸ್ತಿ ವಿಜೇತ ಚಲನ ಚಿತ್ರಗಳ ಪ್ರದರ್ಶನ ಚಲನಚಿತ್ರೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಹೆಚ್ಚು ಜನರು ಭಾಗವಹಿಸಿದ ಕಾರ್ಯಕ್ರಮವಾದಲ್ಲಿ ಅದು ಯಶಸ್ಸು ಎಂಬ ಭಾವನೆ ಹಲವರಲ್ಲಿದೆ. ಆದರೆ ಕಡಿಮೆ ಜನ ಸಂಖ್ಯೆ ಸೇರಿದ ಕಾರ್ಯಕ್ರಮವು ದೊಡ್ಡ ಪರಿಣಾಮ ಬೀರಿದ ಉದಾಹರಣೆಗಳು ಇವೆ. ಹಾಗಾಗಿ ಸಂಖ್ಯೆ ಆಧಾರದಲ್ಲಿ ವಿಮರ್ಶಿಸುವ ಬದಲು ಆಯೋಜಿತ ಕಾರ್ಯಕ್ರಮ ಯಾವುದು ಎನ್ನುವುದು ನಮಗೆ ಮುಖ್ಯ. ಒಂದು ಕಾರ್ಯಕ್ರಮ ಆದ ಬಳಿಕ ಉಂಟು ಮಾಡುವ ಪರಿಣಾಮವೇ ನಮಗೆ ಮುಖ್ಯವಾಗಬೇಕು ಎಂದು ವಿಶ್ಲೇಷಿಸಿದರು.
ಪ್ರಸ್ತುತ ದೃಶ್ಯ ಮಾಧ್ಯಮ, ಸಾಮಾಜಿಕ ಜಾಲ ತಾಣಗಳ ಪ್ರಭಾವ ಸಾಕಷ್ಟು ವಿಸ್ತರಿಸಿದೆ. ಬೆಟ್ಟದ ಜೀವ ಕಾದಂಬರಿಯನ್ನು ಓದದೆ ಇರುವವರು ಅದನ್ನು ಚಲನಚಿತ್ರದ ಮೂಲಕ ತಿಳಿಯುವ ಅವಕಾಶ ಇಂದಿದೆ. ಸರಕಾರಿ ಶಾಲೆಯ ವಾಸ್ತವ ಸ್ಥಿತಿಯನ್ನು ಸರಕಾರಿ ಹಿ.ಪ್ರಾ.ಶಾಲೆ ಕಾಸರಗೋಡು ಮೂಲಕ ಅರಿತುಕೊಳ್ಳಲು ಸಾಧ್ಯ. ಇದನ್ನು ಗ್ರಾಮಮಟ್ಟದಲ್ಲಿ ತೆರೆದಿಟ್ಟು ವಿದ್ಯಾರ್ಥಿಗಳು ಮುಂದೆ ಪ್ರದರ್ಶಿಸುವ ಪ್ರಯತ್ನ ಕೂಡ ಉತ್ತಮವಾದದು ಎಂದು ಅವರು ಹೇಳಿದರು.
ಮುಖ್ಯ ಅತಿಥಿ ಕ್ಷೇತ್ರ ಶಿಕ್ಷಣಕಾರಿ ಎಸ್.ಪಿ.ಮಹಾದೇವ ಮಾತನಾಡಿ, ಮಕ್ಕಳಲ್ಲಿ ಎಳೆವೆಯಿಂದಲೇ ಸೃಜನಶೀಲತೆ ಉದ್ದಿಪಿಸುವ ನಿಟ್ಟಿನಲ್ಲಿ ನಾನಾ ಚಟುವಟಿಕೆಗಳಿಗೆ ಒಡ್ಡುವ ಪ್ರಯತ್ನ ಆಗಬೇಕು. ರಾಷ್ಟ್ರ ಪ್ರಶಸ್ತಿ ವಿಜೇತ ಚಲನಚಿತ್ರಗಳನ್ನು ಮಕ್ಕಳಿಗೆ ತೋರಿಸಿ ಅವರಲ್ಲಿ ಆಸಕ್ತಿ, ಕುತೂಹಲ ಮೂಡಿಸುವ ವಿಶೇಷ ಪ್ರಯತ್ನ ಯುವಕ ಮಂಡಲ ಮೂಲಕ ನಡೆದಿರುವುದು ಶ್ಲಾಘನೀಯ ಎಂದರು.
ಗಣೇಶೋತ್ಸವ ಸಮಿತಿ ಅಧ್ಯಕ್ಷ ಪೂವಪ್ಪ ನಾಯ್ಕ ಕೊಂಡೆಪ್ಪಾಡಿ ಅಧ್ಯಕ್ಷತೆ ವಹಿಸಿದ್ದರು. ಪೆರುವಾಜೆ ಗ್ರಾ.ಪಂ.ಅಧ್ಯಕ್ಷೆ ಅನುಸೂಯ, ಉಪಾಧ್ಯಕ್ಷ ಸುನಿಲ್ ರೈ ಪೆರುವಾಜೆ, ಅತಿಥಿಗಳಾಗಿ ಗ್ರಾ.ಪಂ.ಸದಸ್ಯ ಉಮೇಶ್ ಕೆಎಂಬಿ, ಮುಕ್ಕೂರು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಕುಂಬ್ರ ದಯಾಕರ ಆಳ್ವ, ಪ್ರಗತಿಪರ ಕೃಷಿಕ ಸುಬ್ರಾಯ ಭಟ್ ನೀರ್ಕಜೆ, ಶಿಕ್ಷಣ ಇಲಾಖೆಯ ಸಂಧ್ಯಾ, ಮುಕ್ಕೂರು ಶಾಲಾ ಎಸ್‌ಡಿಎಂಸಿ ಉಪಾಧ್ಯಕ್ಷೆ ಪದ್ಮಾವತಿ ದೇವಿಮೂಲೆ, ಪ್ರಭಾರ ಮುಖ್ಯಗುರು ವಸಂತಿ ಉಪಸ್ಥಿತರಿರದ್ದರು. ಕಾರ್ಯದರ್ಶಿ ರಕ್ಷಿತ್ ಗೌಡ ಕಾನಾವು ಸ್ವಾಗತಿಸಿ, ನೇಸರ ಯುವಕ ಮಂಡಲ ಗೌರವ ಅಧ್ಯಕ್ಷ ಜಗನ್ನಾಥ ಪೂಜಾರಿ ಮುಕ್ಕೂರು ವಂದಿಸಿದರು. ಶಿಕ್ಷಕ ಶಶಿಕುಮಾರ್ ಬಿ.ಎನ್. ನಿರೂಪಿಸಿದರು.
ಚಲನಚಿತ್ರೋತ್ಸವದಲ್ಲಿ ಪಿ.ಶೇಷಾದ್ರಿ ನಿರ್ದೇಶನದ ಬೆಟ್ಟದ ಜೀವ ಹಾಗೂ ರಿಷಬ್ ಶೆಟ್ಟಿ ನಿರ್ದೇಶನದ ಸರಕಾರಿ ಹಿ.ಪ್ರಾ.ಶಾಲೆ ಕಾಸರಗೋಡು ಚಿತ್ರ ಪ್ರದರ್ಶನಗೊಂಡಿತ್ತು. ಮುಕ್ಕೂರು ಸರಕಾರಿ ಹಿ.ಪ್ರಾ.ಶಾಲೆ ಮತ್ತು ಚೆನ್ನಾವರ ಕಿ.ಪ್ರಾ.ಶಾಲೆಯ ವಿದ್ಯಾರ್ಥಿಗಳು ಹಾಗೂ ಊರವರು ಪಾಲ್ಗೊಂಡರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.