ಅನುತ್ತೀರ್ಣ ಪದ್ಧತಿ ಇದ್ದಾಗ ಕಲಿಕೆಯ ಗುಣಮಟ್ಟ ಉತ್ತಮ ಎನ್ನುವುದು ಭ್ರಮೆ

Advt_Headding_Middle
Advt_Headding_Middle

ಅನುತ್ತೀರ್ಣ ಪದ್ಧತಿ ಇದ್ದಾಗ ಕಲಿಕೆಯ ಗುಣಮಟ್ಟ ಉತ್ತಮ ಎನ್ನುವುದು ಭ್ರಮೆ

ಶಾಲೆಗಳ ಶನಿವಾರದ ರಜೆಯಲ್ಲಿ ಪರಿಷ್ಕರಣೆ ಜಾರಿಯಾಗಲಿ

ಭಾಷಾಪಾಠದ ಪರೀಕ್ಷೆಯಲ್ಲಿ ನೂರಕ್ಕೆ ನೂರು ಅಂಕ ನೀಡುವುದು ಆ ಭಾಷೆಗೇ ಮಾಡುವ ಅವಮಾನ

ರಿಯಾಲಿಟಿ ಶೋಗಳಿಂದ ಮಕ್ಕಳ ಮನಸ್ಸಿನ ಮೇಲೆ ಅಡ್ಡ ಪರಿಣಾಮ

ಇಂಗ್ಲಿಷ್ ಭಾಷಾ ವ್ಯಾಮೋಹ ಕನ್ನಡವನ್ನು ನುಂಗಿ ಹಾಕುತ್ತಿದೆ. ಇಂಗ್ಲೀಷ್ ಒಂದು ಭಾಷೆಯಷ್ಟೇ ಹೊರತು ಜ್ಞಾನವಲ್ಲ

ಅರೆಭಾಷೆ ಅಳವಿನಂಚಿಗೆ ಸಾಗುವ ಆತಂಕವಿದೆ; ಎಚ್ಚರ ಬೇಕು

ಸಾಹಿತ್ಯ ಸಮ್ಮೇಳನಾಧ್ಯಕ್ಷ ಕೃ.ಶಾ.ಮರ್ಕಂಜ ಅಭಿಮತ

ಎಲಿಮಲೆಯಲ್ಲಿ ನಡೆಯುತ್ತಿರುವ 24 ನೇ ಸಾಹಿತ್ಯ ಸಮ್ಮೇಳನ

ಏಳನೆಯ ತರಗತಿಗೆ ಪಬ್ಲಿಕ್ ಪರೀಕ್ಷೆ ಬೇಕೇ ಬೇಡವೇ ಎಂಬ ಚರ್ಚೆ ಈಗ ಮುನ್ನೆಲೆಗೆ ಬಂದಿದೆ. ತಜ್ಞರ ಅಭಿಮತದಂತೆಯೇ ಚಾಲ್ತಿಯಲ್ಲಿರುವ ಈಗಿನ ಪದ್ಧತಿಯನ್ನು ಬದಲಿಸಬೇಕಾಗಿಲ್ಲ. ಅನುತ್ತೀರ್ಣತೆಯ ಪದ್ಧತಿ ಇದ್ದಾಗ ಕಲಿಕೆಯ ಮಟ್ಟ ಉತ್ತಮವಾಗಿದ್ದಿತೆನ್ನುವುದು ಒಂದು ಭ್ರಮೆ ; ಹೊಸ ತಲೆಮಾರಿನ ಮಕ್ಕಳ ಗ್ರಹಣಶಕ್ತಿ ಹಿಂದಿನವರಿಗಿಂತ ದುಪ್ಪಟ್ಟು ವೇಗವಾಗಿದೆ. ಮನೋವೈಜ್ಞಾನಿಕ ಅಧ್ಯಯನದಿಂದ ವರದಿ ಸಿದ್ಧಗೊಳಿಸಿರುವ ಶಿಕ್ಷಣತಜ್ಞರ ಸಲಹೆಯನ್ನು ಅವಗಣಿಸುವುದು ಮಕ್ಕಳ ಶೈಕ್ಷಣಿಕ ಆರೋಗ್ಯದ ದೃಷ್ಟಿಯಿಂದ ಒಳ್ಳೆಯ ಉಪಕ್ರಮವಲ್ಲ ಎಂದು‌ ಸುಳ್ಯ ತಾಲೂಕು 24 ನೇ ಕನ್ನಡ ಸಮ್ಮೇಳನಾಧ್ಯಕ್ಷ ಕೃ‌.ಶಾ.ಮರ್ಕಂಜ ಹೇಳಿದ್ದಾರೆ.

ದ.ಕ.ಕನ್ನಡ ಸಾಹಿತ್ಯ ಪರಿಷತ್, ಸುಳ್ಯ ತಾಲೂಕು ಕನ್ನಡ ಪರಿಷತ್, ಸಮ್ಮೇಳನ ಸ್ವಾಗತ ಸಮಿತಿ , ಎಲಿಮಲೆ ಸರಕಾರಿ ಪ್ರೌಢಶಾಲಾ ಹಿರಿಯ ವಿದ್ಯಾರ್ಥಿ ಸಂಘ ಇವುಗಳ ನೇತೃತ್ವದಲ್ಲಿ ಎಲಿಮಲೆ ಸರಕಾರಿ ಪ್ರೌಢ ಶಾಲೆಯಲ್ಲಿ ನಡೆದ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಶಾಲಾ ಶನಿವಾರದ ಅಪರಾಹ್ನದ ರಜೆಯನ್ನು ಪರಿಷ್ಕರಿಸಿ ತಿಂಗಳ ಒಂದನೇ ಮತ್ತು ಮೂರನೇ ಶನಿವಾರ ಇಡೀ ರಜೆ, ಉಳಿದ ಶನಿವಾರ ಇಡೀ ಶಾಲೆ ಇರುವಂತೆ ಮಾಡಬೇಕೆಂದೂ ಸರಕಾರಕ್ಕೆ ನಾನು ಸಲಹೆ ನೀಡುತ್ತೇನೆ. ಇದರಿಂದ ಶಾಲಾ ದಿನಗಳಿಗೆ ಯಾವ ನಷ್ಟವೂ ಬರಲಾರದು. ಆದರೆ ಮಕ್ಕಳಿಗೂ ಅಧ್ಯಾಪಕರಿಗೂ ಆಗುವ ಅನುಕೂಲ ಅಧಿಕ. ವೈದ್ಯಕೀಯ ತಪಾಸಣೆ, ಬ್ಯಾಂಕುಗಳ ಕೆಲಸ ಅಥವಾ ಇತರ ಯಾವುದೇ ಕೆಲಸಗಳಿಗೆ ರಜೆ ಮಾಡಿಯೇ ಹೋಗಬೇಕಾದ ಅನಿವಾರ್ಯತೆ ತಪ್ಪುತ್ತದೆ. ಎರಡು ದಿನಗಳ ಅಕ್ಷರ ದಾಸೋಹದ ಖರ್ಚಿನ ಉಳಿಕೆಯನ್ನು ದಾಸೋಹ ಸಿಬ್ಬಂದಿಗಳ ವೇತನ ಹೆಚ್ಚಳಕ್ಕೂ ಸರಕಾರ ಬಳಸಿಕೊಳ್ಳಬಹುದಾಗಿದೆ ಎಂದವರು ಹೇಳಿದರು.

ಹತ್ತನೇ ತರಗತಿಯ ಪಬ್ಲಿಕ್ ಪರೀಕ್ಷೆಯಲ್ಲಿ ಕನ್ನಡದಲ್ಲಿ ನೂರಿಪ್ಪತೈದಕ್ಕೆ ನೂರಿಪ್ಪತ್ತೈದು ಅಂಕಗಳಿಸಿದವರನ್ನು ವಿಶೇಷವಾಗಿ ಪುರಸ್ಕರಿಸಲಾಗುತ್ತದೆ. ಒಂದು ಭಾಷಾಪಾಠದ ಪರೀಕ್ಷೆಯಲ್ಲಿ ನೂರಕ್ಕೆ ನೂರು ಅಂಕ ನೀಡುವುದೆಂದರೆ ಅದು ಆ ಭಾಷೆಗೇ ಮಾಡುವ ಅವಮಾನ! ಹಲವು ವರ್ಷಗಳ ಹಿಂದೆ ಈ ಪದ್ಧತಿ ಇರಲಿಲ್ಲ ; ಇರಲೂ ಬಾರದು. ಏಕೆಂದರೆ ಕನ್ನಡ ಪರೀಕ್ಷೆಯ ಪ್ರಶ್ನೆ ಪತ್ರಿಕೆಯಲ್ಲಿ ಪ್ರಬಂಧ ರಚನೆ ಎಂಬ ಪ್ರಶ್ನೆಯೊಂದು ಇದ್ದೇ ಇರುತ್ತದೆ. ಇಲ್ಲಿ ವಿಷಯ ಮಂಡನೆಯಷ್ಟೇ ಗದ್ಯಶೈಲಿಯೂ ಮುಖ್ಯವಾಗುತ್ತದೆ. ಇದು ಸಾಹಿತ್ಯಾಂಶ ಪ್ರಧಾನವಾದ್ದರಿಂದ ಯಾರೊಬ್ಬನಿಂದಲೂ ಇದರಲ್ಲಿ ಪರಿಪೂರ್ಣತೆಯನ್ನು ಹೊಂದಲು ಸಾಧ್ಯವಿಲ್ಲ. ಒಂದು ನಾಣ್ಣುಡಿ, ಒಂದು ಆಕರ್ಷಕ ವಾಕ್ಯಶೈಲಿ ಸೇರಿಕೊಂಡರೂ ‘ಪರಿಪೂರ್ಣ’ ವೆನಿಸಿದ ಪ್ರಬಂಧಕ್ಕಿಂತ ಉತ್ಕೃಷ್ಟವಾಗುವ ಸಾಧ್ಯತೆ ಇದ್ದೇ ಇರುತ್ತದೆ. ಸ್ವತಃ ಕುವೆಂಪುರವರೇ ಬರೆದಿದ್ದರೂ ಆ ಪ್ರಬಂಧ ಕಿಂಚಿದೂನವೆಂದೇ ಪರಿಭಾವಿಸಬೇಕು! ಹಾಗಾಗಿ ಭಾಷಾ ಪರೀಕ್ಷೆಯ ಅಂಕಗಳು ನೂರಕ್ಕೆ ತೊಂಬತ್ತೆಂಟಕ್ಕಿಂತ ಹೆಚ್ಚು ಹೋಗುವುದು ಅವೈಜ್ಞಾನಿಕವೇ ಸರಿ ಎಂದು ಕೃ.ಶಾ.ಮರ್ಕಂಜ ಹೇಳಿದರು.

ಟಿ.ವಿ. ವಾಹಿನಿಗಳು ಅಥವಾ ಮತ್ತಿತರ ಸಂಸ್ಥೆಗಳು ನಡೆಸುವ ಮಕ್ಕಳ ರಿಯಾಲಿಟಿ ಶೋಗಳು ಕೂಡ ಮಕ್ಕಳ ಮುಗ್ಧ ಮನಸ್ಸಿನ ಮೇಲೆ ಅಡ್ಡ ಪರಿಣಾಮ ಬೀರುವ ಸಾಧ್ಯತೆಗಳಿವೆ. ಮುಗ್ಧ ಮಕ್ಕಳನ್ನು ನಾನಾ ರೀತಿಯಲ್ಲಿ ಹಾಡಿಸಿ, ಕುಣಿಸಿ ಕೇವಲ ಅರ್ಧ, ಒಂದು ಅಂಕಗಳಿಂದ ಸ್ಪರ್ಧೆಯಿಂದ ಹೊರಹಾಕಿದಾಗ ಅಳುಮೋರೆಯೊಂದಿಗೆ ಹೊರಬರುವ ಅವರು ಮಾನಸಿಕವಾಗಿ ಆಘಾತಗೊಳ್ಳುವ ಸಾಧ್ಯತೆಗಳಿದ್ದು ಇದು ಮಕ್ಕಳ ಶಿಕ್ಷಣ ಮತ್ತು ಮನೋವಿಕಾಸದ ಕುರಿತ ತಜ್ಞರ ವ್ಯಾಖ್ಯೆಗೆ ಘಾಸಿಯುಂಟುಮಾಡುವಂಥದ್ದಾಗಿದೆ. ಅಲ್ಲದೆ ರಜಾದಿನಗಳಲ್ಲಿ ನಡೆಯುವ ಬೇಸಗೆ ಶಿಬಿರಗಳ ಬಗೆಗೂ ನನ್ನ ಸಾತ್ವಿಕ ಆಕ್ಷೇಪವಿದೆ. ಇವು ಮಕ್ಕಳ ಹಕ್ಕುಗಳನ್ನು ಅವರಿಗರಿವಿಲ್ಲದೆಯೇ ಕಸಿದುಕೊಳ್ಳುತ್ತದೆ ಎಂದು ಸಮ್ಮೇಳನಾಧ್ಯಕ್ಷರು ಹೇಳಿದರು.

ಸಾಹಿತ್ಯ ಹಾಗೂ ಮಾಧ್ಯಮ ಕ್ಷೇತ್ರಗಳಂತೆ ಕನ್ನಡ ಬದುಕನ್ನು ಕಟ್ಟುವ ಕಾಯಕದಲ್ಲಿ ಶಿಕ್ಷಣಕ್ಷೇತ್ರದ್ದೂ ಮಹತ್ವದ ಪಾತ್ರವಿದೆ. ನಾಡಿನ ಹಿರಿಯ ಸಾಹಿತಿಗಳು, ಅನ್ಯಕ್ಷೇತ್ರಗಳ ಸಾಧಕರು ಎಳವೆಯಿಂದಲೇ ಕನ್ನಡತಾಯಿಯ ಕೈತುತ್ತಿನಿಂದಲೇ ಬೆಳೆದವರು, ಇಂಗ್ಲಿಷನ್ನು ಅನಂತರ ಬರಮಾಡಿಕೊಂಡವರು. ಆದರೆ ಈಗ ಚಿತ್ರಣ ಬದಲಾಗಿದೆ. ಶಿಕ್ಷಣವೆಂದರೆ ಹೊಟ್ಟೆಪಾಡಿಗಾಗಿ ಕಲಿತುಕೊಳ್ಳಬೇಕಾದ ವಿದ್ಯೆ ಎಂಬ ಭಾವನೆ ಮೂಡುತ್ತಿದೆ. ಇಂಗ್ಲಿಷ್ ಕಲಿಯದಿದ್ದರೆ ಔದ್ಯೋಗಿಕ ಭವಿಷ್ಯವಿಲ್ಲವೆಂಬ ಭಯ ಆವರಿಸಿದೆ. ಜಾಗತಿಕ ಸಂವಹನಕ್ಕಾಗಿ ಇಂಗ್ಲಿಷ್ ಅನಿವಾರ್ಯವೆಂಬ ಮನೋಭಾವ ಆಳವಾಗಿ ಬೇರೂರಿದೆ. ಇದರ ಪರಿಣಾಮವಾಗಿ ಇಂದು ಇಂಗ್ಲಿಷ್ ಮಾಧ್ಯಮದ ಖಾಸಗಿ ಶಾಲೆಗಳು ಅಣಬೆಗಳಂತೆ ಹುಟ್ಟಿಕೊಳ್ಳುತ್ತಿವೆ. ಸ್ಕೂಲ್ ಬಸ್ಸಿನಿಂದಿಳಿದು ಸುಸಜ್ಜಿತವಾದ ಬಹುಮಹಡಿಯ ಕಾಂಕ್ರೀಟು ಕಟ್ಟಡದ ಬಣ್ಣಬಳಿದ ಗೋಡೆಗಳ ಠಾಕುಠೀಕಾದ ಕೋಣೆಗಳಲ್ಲಿ ಶೂ, ಟೈ ಹಾಕಿಕೊಂಡು ಟಸ್‌ಪುಸ್ ಇಂಗ್ಲಿಷ್ ಮಾತಾಡುವ ಪುಟಾಣಿಗಳನ್ನು ಕಂಡು ಕನ್ನಡ ಮಕ್ಕಳ ಪೋಷಕರು ಕೀಳರಿಮೆಗೊಳಗಾಗುತ್ತಿದ್ದಾರೆ. ಇಂಗ್ಲಿಷ್ ಒಂದು ಭಾಷೆಯಷ್ಟೇ ಹೊರತು ಜ್ಞಾನವಲ್ಲವೆಂಬ ಅರಿವು ನಮ್ಮಲ್ಲಿ ಜಾಗೃತವಾಗಬೇಕಾಗಿದೆ ಎಂದು ಅವರು ಹೇಳಿದರು.

ಸುಳ್ಯದ ಹೆಮ್ಮೆಯ ಅರೆಭಾಷೆಯನ್ನು ಉಳಿಸಿಕೊಳ್ಳಬೇಕೆಂದು ಸಾಕಷ್ಟು ಪ್ರಯತ್ನಗಳು ನಡೆಯುತ್ತಿದ್ದರೂ, ಅದಕ್ಕಾಗಿ ಅಕಾಡೆಮಿಯೇ ಸ್ಥಾಪಿತವಾಗಿದ್ದರೂ ಈ ಭಾಷೆಯೂ ನಿಧಾನವಾಗಿ ಅಳಿವಿನಂಚಿನತ್ತ ಸಾಗುತ್ತಿದೆಯೇ ಎಂಬ ಆತಂಕದ ಮುನ್ಸೂಚನೆಯು ನನ್ನೂರಿನ ಪರಿಸರದಲ್ಲೇ ನನಗೆ ಗೋಚರಿಸುತ್ತಿದೆ. ನನ್ನ ಆಸುಪಾಸಿನ ಮನೆಗಳಲ್ಲಿಯೇ ಯುವಗೃಹಸ್ಥರು ಭಾಷಾಕೀಳರಿಮೆಗೆ ಒಳಗಾಗಿ ತಮ್ಮ ಎಳೆಯ ಮಕ್ಕಳೊಂದಿಗೆ ಕನ್ನಡದಲ್ಲಿಯೇ ಮಾತಾಡುವುದನ್ನು ನಾನು ಕಾಣುತ್ತಿದ್ದೇನೆ. ಸಮುದಾಯದ ಮುಖಂಡರುಗಳ ಮನೆಯೂ ಇದಕ್ಕೆ ಹೊರತಾಗಿಲ್ಲ. ಹವ್ಯಕ ಕನ್ನಡವೂ ಇಂಥದೇ ಆತಂಕಕ್ಕೆ ಹಿಂದೊಮ್ಮೆ ಒಳಗಾಗಿದ್ದರೂ ದಶಕಗಳ ಹಿಂದೆ ಇದ್ದ ಸ್ಥಿತಿ ಅಲ್ಲಿಗೇ ಸ್ಥಗಿತಗೊಂಡಂತಿದೆ. ಕನ್ನಡ ಸಮ್ಮೇಳನದಲ್ಲಿ ನಾನೇಕೆ ಕನ್ನಡ ಉಪಭಾಷೆಗಳ ಮಾತೆತ್ತುತ್ತಿದ್ದೇನೆಂದರೆ ಅಲ್ಲಿ ಕನ್ನಡತನ ಇನ್ನೂ ಉಳಿದಿರುವುದರಿಂದ! ಇದು ಕೇವಲ ಸುಳ್ಯಕ್ಕೆ ಮಾತ್ರ ಸಂಬಂಧಿಸಿದ್ದಲ್ಲ. ಇಡಿಯ ಕರ್ನಾಟಕದಲ್ಲೇ ಸ್ಥಳೀಯ ಉಪಭಾಷೆಗಳು ದೇಸೀಯ ಸೊಗಡನ್ನು ಸ್ವಲ್ಪಮಟ್ಟಿಗಾದರೂ ಉಳಿಸಿಕೊಂಡಿವೆ.ಕನ್ನಡದ ಉಪಭಾಷೆಗಳು ಭಾಷಾಕೀಳರಿಮೆಗೆ ಒಳಗಾಗಿ ಶಿಷ್ಟ ಕನ್ನಡದತ್ತ ಮುಖಮಾಡಿದ್ದರೆ ಸ್ವಯಂ ಕನ್ನಡದ ಸ್ಥಿತಿಯೂ ಇತ್ತೀಚೆಗೆ ತೀರಾ ಕಳವಳಕಾರಿಯಾಗಿದೆ. ಇಂಗ್ಲಿಷ್ ಭಾಷಾ ವ್ಯಾಮೋಹವು ಕನ್ನಡವನ್ನು ಇಡಿಯಾಗಿ ನುಂಗಿ ಹಾಕುತ್ತಿದೆ. ಇಂಗ್ಲಿಷರು ಬರುವಾಗ ಕೇವಲ ಕನ್ನಡ ಪ್ರದೇಶಕ್ಕೆ ಮಾತ್ರ ಬಂದದ್ದಲ್ಲ; ಆದರೂ ಕನ್ನಡಕ್ಕೊದಗಿದಷ್ಟು ಆತಂಕ ನೆರೆಯ ತಮಿಳು, ತೆಲುಗು, ಮಲಯಾಳ ಭಾಷೆಗಳಿಗೆ ಉಂಟಾಗದಿರುವುದು ಆಶ್ಚರ್ಯಕರ ಮತ್ತು ಅಧ್ಯಯನಕ್ಕೊಳಗಾಗಬೇಕಾದ ವಿಚಾರವಾಗಿದೆ! ಆಯಾಯ ಪ್ರದೇಶಗಳಿಗೆ ಅಲ್ಲಲ್ಲಿಯದೇ ಆದ ಸಾಮೂಹಿಕ ಮನಸ್ಥಿತಿಯೊಂದರ ಇರುವಿಕೆಯನ್ನು ಇದು ಪುಷ್ಟೀಕರಿಸುತ್ತದೆ ಎಂದು‌ ಕೃ.ಶಾ.ಮರ್ಕಂಜ ಹೇಳಿದರು.

ಒಂದು ಸೃಜನಶೀಲ ಸಾಹಿತ್ಯಕೃತಿಯ ಖ್ಯಾತಿ ಅಥವಾ ಸಾರ್ಥಕತೆಗೆ ಮಾನದಂಡಗಳೇನು ಎನ್ನುವ ಪ್ರಶ್ನೆಗೆ ಅದು ಜನಮಾನಸದಲ್ಲಿ ಯಾವುದೋ ರೂಪದಲ್ಲಿ ಸ್ಥಾಯಿಯಾಗಿ ಮತ್ತೆ ಮತ್ತೆ ಅನುರಣನಗೊಳ್ಳುತ್ತ ಮಾತಿನ ಭಾಗವೇ ಆಗಿ ಹೋಗುವುದು ಎಂದುತ್ತರಿಸಬಹುದು. ಅದೇನೂ ಅಂತಹ ಮಹತ್ಕೃತಿಯಾಗಬೇಕೆಂದಿಲ್ಲ; ಒಂದು ಸರ್ವಸಾಮಾನ್ಯ ಕೃತಿಯು ತನ್ನ ಸ್ವಯಂಭೂತ್ವದಿಂದಲೇ ಈ ಮಟ್ಟಿನ ಅರ್ಹತೆಯನ್ನು ಪಡೆದುಕೊಳ್ಳಬಹುದು ಎಂದು ಹೇಳಿದರು.

ಕನ್ನಡದ ಕಂಪಿನ ಸೊಂಪನ್ನು ಕವಿರಾಜ ಮಾರ್ಗಕಾರನಿಂದ ತೊಡಗಿ ಬಣ್ಣಿಸದ ಕವಿಗಳಿಲ್ಲ ; ಚಿಕ್ಕಂದಿನಲ್ಲಿ ಈ ಕವಿಗಳ ಕನ್ನಡನಾಡಿನ ವರ್ಣನೆಗಳನ್ನು ಕಂಡು ಯಾಕಪ್ಪಾ ಪೈಪೋಟಿಗೆ ಇಳಿದವರಂತೆ ಈ ಪರಿ ಬಣ್ಣನೆ ಮಾಡುತ್ತಾರೋ ಎಂದುಕೊಳ್ಳುತ್ತಿದ್ದೆ. ಆದರೆ ಈಗೀಗ ಭಾರತೀಯ ಮನಸ್ಸು, ಕನ್ನಡ ಮನಸ್ಸು, ಸುಳ್ಯದ ಮನಸ್ಸು ಎಂಬ ಭಾವನಾತ್ಮಕ ಅಂಶವೊಂದು ಅಂತರಂಗದಲ್ಲಿ ಇರುವುದು ನಿಜ ಎಂಬುದು ನನ್ನ ಅನುಭವಕ್ಕೆ ಬರುತ್ತಿದೆ. ಸ್ಥಳೀಯವಾಗಿ ಇದನ್ನು ಸುಳ್ಯ ಸಂಸ್ಕೃತಿ ಅಥವಾ ಮನೋಧರ್ಮ ಎನ್ನಬಹುದು. ಈ ಮನೋಧರ್ಮವೇ ‘ಕಲ್ಯಾಣಪ್ಪನ ಕಾಟಕಾಯಿ’ ಅಥವಾ ‘ಅಮರ ಸುಳ್ಯದ ಸ್ವಾತಂತ್ರ್ಯ ಸಂಗ್ರಾಮ’ ಎಂದೇ ಬಿಂಬಿತವಾಗಿರುವ ಚಾರಿತ್ರಿಕ ಹೋರಾಟವೊಂದರ ರೂಪದಲ್ಲಿ ವ್ಯಕ್ತವಾಗಿರುವುದನ್ನು ನಾವು ಕಾಣುತ್ತೇವೆ ಎಂದು ಅವರು ನೆನಪಿಸಿದರು

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.