Breaking News

ಪಂಜದ ಪ್ರಶಾಂತ ಪರಿಸರದಲ್ಲಿ ತಲೆ ಎತ್ತಿ ನಿಂತಿದೆ ಅಪೂರ್ವ ದೈವ ಸಾನಿಧ್ಯ

Advt_Headding_Middle
Advt_Headding_Middle

ಗರಡಿ ಬೈಲು ಮೂಲ ಸ್ಥಾನದಲ್ಲಿ ನಿರ್ಮಾಣಗೊಂಡಿದೆ ಉಳ್ಳಾಕುಲು ಮತ್ತು ಕಾಜುಕುಜುಂಬ ದೈವಸ್ಥಾನ

ಜ. 26 ಮತ್ತು 27 ರಂದು ದೈವಗಳ ಪ್ರತಿಷ್ಠಾ ಬ್ರಹ್ಮಕಲಶೋತ್ಸವ

ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ದೇಗುಲಕ್ಕೆ ಸಂಬಂಧಪಟ್ಟ ಶ್ರೀ ಉಳ್ಳಾಕುಲು ಮತ್ತು ಶ್ರೀ ಕಾಜುಕುಂಬ ದೈವಗಳ ದೈವಸ್ಥಾನವು ಮೂಲಸ್ಥಾನವಾದ ಗರಡಿ ಬೈಲಿನಲ್ಲಿ ಜೀರ್ಣೋದ್ಧಾರಗೊಂಡು ನಿರ್ಮಾಣಗೊಂಡಿದ್ದು, ಬ್ರಹ್ಮಕಲಶೋತ್ಸವಕ್ಕೆ ಸಿದ್ಧಗೊಂಡಿದೆ.
ಪಂಜ ದೇವಳದಿಂದ ಸುಮಾರು 1 ಕಿ.ಮೀ.ದೂರದಲ್ಲಿ ಗರಡಿ ಬೈಲು ಎಂಬಲ್ಲಿ ಪ್ರಕೃತಿ ಸೌಂದರ್ಯತೆಯ ರಮಣೀಯ ಪರಿಸರದಲ್ಲಿ ಶ್ರೀ ಉಳ್ಳಾಕುಲು ಮತ್ತು ಶ್ರೀ ಕಾಜುಕುಜುಂಬ ದೈವದ ಮೂಲ ಸ್ಥಾನವಿದ್ದು, ಇಲ್ಲಿ ಈಗ ಈ ದೈವಸ್ಥಾನ ಅಪೂರ್ವ ಸಾನಿಧ್ಯದಿಂದ ಕಂಗೊಳಿಸುತ್ತಿದೆ. ಸುತ್ತಲೂ ಕೃಷಿ ತೋಟಗಳು, ಸುತ್ತ ಹರಿಯುವ ಹೊಳೆ, ತಂಪಾದ ಪರಿಸರ ಹೀಗೆ ಭಕ್ತಿಪ್ರದಾಯಕ ಕ್ಷಣಗಳನ್ನು ಸಾಕ್ಷೀಕರಿಸುತ್ತಿರುವ ಈ ದಿವ್ಯ ಸ್ಥಾನದಲ್ಲಿ ಬ್ರಹ್ಮಕಲಶೋತ್ಸವಕ್ಕೆ ಅಂತಿಮ ಸಿದ್ಧತೆಗಳು ನಡೆದಿದೆ.

ಬಹಳ ಪ್ರಾಚೀನ ಕಾಲದಿಂದಲೇ ಇಲ್ಲಿ ದೈವಗಳ ಆರಾಧನೆ ನಡೆಯುತ್ತಿದ್ದುದಕ್ಕೆ ಅನೇಕ ಸಾಕ್ಷಿ ಹಾಗೂ ಕುರುಹುಗಳಿತ್ತು. ಕೆಂಪು ಕಲ್ಲಿನಿಂದ ನಿರ್ಮಿಸಲಾದ ಶ್ರೀ ಉಳ್ಳಾಕುಲು ಮತ್ತು ಶ್ರೀ ಕಾಜುಕುಜುಂಬ ದೈವಸ್ಥಾನದ ಕುರುಹುಗಳು ಉಳಿದಿತ್ತು. ಶಿಲೆ ಕಲ್ಲಿನಿಂದ ಕೆತ್ತನೆ ಗೊಂಡಿರುವ ಧ್ವಜದ ಕಟ್ಟೆ, ಕಂಚಿ ಕಲ್ಲು, ಬಲಿ ಕಲ್ಲು ಇತ್ತು. ಆದರೆ ಇಲ್ಲಿನ ದೈವಸ್ಥಾನ, ನಾಗನ ಕಟ್ಟೆ ಸಂಪೂರ್ಣ ಶಿಥಿಲಗೊಂಡು ನೆಲಗಚ್ಚಿತ್ತು.


ಪ್ರತಿ ವರ್ಷ ಪರಿವಾರ ಪಂಚಲಿಂಗೇಶ್ವರ ದೇಗುಲದಲ್ಲಿ ಧ್ವಜ ಇಳಿದ ಬಳಿಕ ಗರಡಿ ಬೈಲಿನಲ್ಲಿ ಧ್ವಜಾರೋಹಣಗೊಂಡು ಉಳ್ಳಾಕುಲು ಮತ್ತು ಕಾಜುಕುಜುಂಬ ನೇಮೋತ್ಸವವು ನಡೆಯುತ್ತಿತ್ತು. ಈ ಸಾನಿಧ್ಯ ಜೀರ್ಣೋದ್ಧಾರಗೊಳಿಸಬೇಕೆಂಬ ಚಿಂತನೆ ಅನೇಕ ವರ್ಷಗಳಿಂದಲೂ ಇತ್ತು.

ಆದರೆ ಹಲವು ಕಾರಣಗಳಿಗಾಗಿ ಜೀರ್ಣೋದ್ಧಾರ ಸಾಧ್ಯವಾಗಿರಲಿಲ್ಲ. ಈ ಮಧ್ಯೆ ಕೆಲವು ವರ್ಷಗಳ ಹಿಂದೆ ದೇಗುಲದ ಎದುರು ಭಾಗದಲ್ಲಿ ಉಳ್ಳಾಕುಲು ಹಾಗೂ ಕಾಜುಕುಜುಂಬ ದೈವಗಳ ಚಾವಡಿ ನಿರ್ಮಾಗೊಂಡು ಬ್ರಹ್ಮಕಲಶೋತ್ಸವವು ನಡೆದಿತ್ತು.

ಆದರೆ ಮೂಲಸ್ಥಾನದಲ್ಲಿ ಜೀರ್ಣೋದ್ಧಾರ ಆಗದ ಹಿನ್ನಲೆಯಲ್ಲಿ ಪರಿಸರದಲ್ಲಿ ಕೆಲವು ದೋಷಗಳು ಕಂಡು ಬಂದಿತ್ತು. ನವರಾತ್ರಿ ಸಂದರ್ಭದಲ್ಲಿ ದೇಗುಲದಲ್ಲಿ ಘಟಿಸಿದ ವಿದ್ಯಮಾನದ ಹಿನ್ನಲೆಯಲ್ಲಿ ನಡೆದ ಪ್ರಶ್ನಾ ಚಿಂತನೆಯ ಸಂದರ್ಭದಲ್ಲೂ ಇದೇ ವಿಚಾರ ಪ್ರಸ್ತಾಪವಾಗಿತ್ತು.


ದೇವಸ್ಥಾನಕ್ಕೆ ಕೆಲವು ತಿಂಗಳ ಹಿಂದೆ ಆಡಳಿತಾಧಿಕಾರಿಯಾಗಿ ಬಂದ ಡಾ. ದೇವಿಪ್ರಸಾದ್ ಕಾನತ್ತೂರು ಅವರು ಭಕ್ತರ ಕೋರಿಕೆಯ ಮೇರೆಗೆ ಈ ಸಾನಿಧ್ಯದ ಜೀರ್ಣೋದ್ಧಾರಕ್ಕೆ ಆಸಕ್ತಿ ವಹಿಸಿ ಮುಂದಾದರು.


ದೈವಜ್ಞ ಸತ್ಯನಾರಾಯಣ ಭಟ್ ಅವರಿಂದ ಪ್ರಶ್ನಾ ಚಿಂತನೆಗಳು ನಡೆಯಿತು. ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ವಿವಿಧ ವೈದಿಕ ಕಾರ್ಯಕ್ರಮಗಳು ಜರುಗಿತು. ವಾಸ್ತು ಶಿಲ್ಪಿ ಕೃಷ್ಣಪ್ರಸಾದ ಮುನಿಯಂಗಳ ರವರು ನಿರ್ಮಾಣದ ರೂಪುರೇಷೆಗಳನ್ನು ರಚಿಸಿದರು. ಡಾ.ದೇವಿಪ್ರಸಾದ್ ಕಾನತ್ತೂರ್ ರವರ ನೇತೃತ್ವದಲ್ಲಿ ಪುನ:ನಿರ್ಮಾಣ ಸಮಿತಿ ರಚನೆಗೊಂಡಿತು. ಗೌರವಾಧ್ಯಕ್ಷರಾಗಿ ಆನಂದ ಗೌಡ ಕಂಬಳ, ಅಧ್ಯಕ್ಷರಾಗಿ ಮಹೇಶ್ ಕುಮಾರ್ ಕರಿಕ್ಕಳ, ಕಾರ್‍ಯದರ್ಶಿಯಾಗಿ ಪವಿತ್ರ ರಾಜೇಶ್ ಕುದ್ವ ಮಲ್ಲೆಟ್ಟಿ, ಖಜಾಂಜಿಯಾಗಿ ನಿವೃತ್ತ ಶಿಕ್ಷಕಿ ಪದ್ಮಾವತಿ ಹಾಗೂ ಪದಾಧಿಕಾರಿಗಳು ಆಯ್ಕೆಗೊಂಡರು.ಭಕ್ತರ ತನು, ಮನ,ಧನದ ಸಹಕಾರದೊಂದಿಗೆ ಜೀರ್ಣೋದ್ಧಾರ ಕಾರ್ಯ ಆರಂಭಗೊಂಡು ಈಗ ಪೂರ್ಣಗೊಂಡಿದೆ.

 

ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಜ.26 ರಿಂದ ಜ. 27 ತನಕ ಪ್ರತಿಷ್ಠಾ ಬ್ರಹ್ಮಕಲಶೋತ್ಸವವು ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ಜರುಗಲಿದೆ. ಜ.26 ರಂದು ರಾತ್ರಿ ದೇವತಾ ಪ್ರಾರ್ಥನೆ, ಪ್ರಾಸಾದ ಪರಿಗ್ರಹ, ಆಚಾರ್ಯವರಣೆ, ಸ್ವಸ್ತೀ ಪುಣ್ಯಾಹ ವಾಚನ, ಸ್ಥಳ ಶುದ್ಧಿ, ಪ್ರಸಾದ ಶುದ್ಧಿ, ರಕ್ಷೆಘ್ನ ಹೋಮ, ವಾಸ್ತು ಹೋಮ, ವಾಸ್ತು ಪೂಜಾ ಬಲಿ, ನೂತನ ಬಿಂಬಜಲಾಧಿವಾಸ, ಪ್ರಾಕಾರ ಬಲಿ, ಪ್ರಸಾದ ವಿತರಣೆ ಜರುಗಲಿದೆ. ಜ.27ರಂದು ಮುಂಜಾನೆ ಮಹಾಗಣಪತಿ ಹೋಮ, ಪ್ರತಿಷ್ಠಾ ಹೋಮ, ಬ್ರಹ್ಮಕಲಶ ಪೂಜೆ, ಆಶ್ಲೇಷಾ ಬಲಿ, ಅಷ್ಟಪಟು ಆರಾಧನೆ. ಪೂ.9.5೦ ರ ಮೀನ ಲಗ್ನ ಶುಭ ಮುಹೂರ್ತದಲ್ಲಿ ನಾಗಶಿಲಾ ಪ್ರತಿಷ್ಠೆ, ಶ್ರೀ ಕಾಜುಕುಜುಂಬ ಮತ್ತು ಉಳ್ಳಾಕುಲು ದೈವಗಳ ಪ್ರತಿಷ್ಠೆ, ಬ್ರಹ್ಮಕಲಶಾಭಿಷೇಕ, ತಂಬಿಲ ಸೇವೆ, ಮಂಗಳಾರತಿ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ಜರುಗಲಿದೆ.

ಫೆ.7ರಂದು ಸಂಜೆ ದೈವದ ಮೂಲ ಸ್ಥಾನದಲ್ಲಿ ಧ್ವಜಾರೋಹಣ ಗೊಂಡು ಶ್ರೀ ಕಾಜುಕುಜುಂಬ ದೈವದ ನೇಮ ಜರುಗಲಿದೆ. ಫೆ.8ರಂದು ಮುಂಜಾನೆ ಮೂಲ ನಾಗನ ಕಟ್ಟೆಯಲ್ಲಿ ತಂಬಿಲ ಸೇವೆ. ಶ್ರೀ ಉಳ್ಳಾಕುಲು ದೈವದ ಸಿರಿಮುಡಿ ನೇಮೋತ್ಸವ ನಡೆದು, ಧ್ವಜಾವ ರೋಹಣ, ಅನ್ನಸಂತರ್ಪಣೆ ಜರುಗಲಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.