Breaking News

ಉಬರಡ್ಕದಲ್ಲೊಂದು ಶಿವನ ದೇವಸ್ಥಾನವಿತ್ತೇ…?

Advt_Headding_Middle
Advt_Headding_Middle

ಶ್ರೀ ನರಸಿಂಹ ದೇವಸ್ಥಾನದ ಸಮೀಪವೇ ತೀರ್ಥಬಾವಿ ಮತ್ತಿತರ ಕುರುಹುಗಳಿವೆ
ಬಿಲ್ವಪತ್ರೆ ಮರಗಳ ಮಧ್ಯೆ ಎರಡು ಕಟ್ಟೆ ರಚಿಸಿ ಆರಾಧಿಸಲಾಗುತ್ತಿದೆ
ಉಬರಡ್ಕ ಗ್ರಾಮದ ಶ್ರೀ ನರಸಿಂಹ ಶಾಸ್ತಾವು ದೇವಸ್ಥಾನದ ಸಮೀಪ ಬೆಟ್ಟತೋಟ ಎಂಬಲ್ಲಿ ನೂರಾರು ವರ್ಷಗಳ ಹಿಂದೆ ಶಿವ ದೇವಸ್ಥಾನ ವಿತ್ತೆಂದು ಹಿಂದೆ ಅಷ್ಟಮಂಗಲ ಪ್ರಶ್ನೆಯಲ್ಲಿ ಮತ್ತು ಇತ್ತೀಚೆಗೆ ಕೆಲ ವರಿಗೆ ಜ್ಯೋತಿಷ್ಯ ನೋಡಲು ಹೋದಾಗ ಕಂಡುಬರುತ್ತಿದ್ದು, ಆ ದೇವಸ್ಥಾನ ಪುನರ್‌ನಿರ್ಮಿಸಬೇಕೆಂಬ ಅಭಿಲಾಷೆ ಊರವರಲ್ಲಿ ಜಾಗೃತ ಗೊಳ್ಳುತ್ತಿರುವುದರ ಲಕ್ಷಣ ಗೋಚರಿ ಸಲಾರಂಭಿಸಿದೆ.
ಉಬರಡ್ಕ ಮಿತ್ತೂರು ಗ್ರಾಮ ಮಿತ್ತೂರು ಉಳ್ಳಾಕುಲು ದೈವ ದಿಂದಾಗಿ ಬಹಳ ಪ್ರಸಿದ್ಧವಾಗಿದೆ. ಇಲ್ಲಿ ಏಕೈಕ ದೇವಸ್ಥಾನವಿದ್ದು ಶ್ರೀ ನರಸಿಂಹ ಶಾಸ್ತಾವು ದೇವರು ಗ್ರಾಮ ದೇವರಾಗಿ ಪೂಜೆ ಪಡೆಯುತ್ತಿದ್ದಾರೆ.
ಇದೀಗ ಒಂದು ಸುದ್ದಿ ಗ್ರಾಮ ತುಂಬಾ ಹರಡಿ ಹೊರಗ್ರಾಮಗಳಲ್ಲೂ ಪ್ರಚಾರವಾಗತೊಡಗಿದೆ. ಅದೇ ನೆಂದರೆ “ಉಬರಡ್ಕದಲ್ಲಿ ನೂರಾರು ವರ್ಷಗಳ ಹಿಂದೆ ಒಂದು ಶಿವನ ದೇವಸ್ಥಾನವಿತ್ತು. ಈಗ ಅದರ ಕೆಲವು ಕುರುಹುಗಳು ಇವೆ. ಶ್ರೀ ನರಸಿಂಹ ದೇವಸ್ಥಾನದ ಸಮೀಪದಲ್ಲೆ ಬೆಟ್ಟತೋಟ ಎಂಬ ಪ್ರದೇಶದಲ್ಲಿ ಸೀತಾರಾಮ ಭಟ್ಟರ ಜಾಗದ ಒಳಗಡೆ ಎರಡು ಕಟ್ಟೆಗಳಿದ್ದು, ಆ ಕಟ್ಟೆಗಳಿಗೆ ಶಿವರಾತ್ರಿ ದಿನ ಮತ್ತು ನರಸಿಂಹ ದೇವರ ಜಾತ್ರೆಯ ಸಂದರ್ಭದಲ್ಲಿ ದೇವಸ್ಥಾನದ ವತಿಯಿಂದ ಪೂಜೆ ನಡೆಯುತ್ತಿದೆ” ಎಂಬುದು.
ಶ್ರೀ ನರಸಿಂಹ ದೇವಸ್ಥಾನದ ಜೀರ್ಣೋದ್ಧಾರದ ಮೊದಲು ನಡೆದ ಪ್ರಶ್ನಾ ಚಿಂತನೆಯಲ್ಲಿ ಬೆಟ್ಟತೋಟ ಎಂಬಲ್ಲಿ ಪುರಾತನ ಕಾಲದ ಶಿವನ ಸಾನಿಧ್ಯವಿರುವ ಬಗ್ಗೆ ಕಂಡು ಬಂದಿತ್ತು. ಆದರೆ ಆ ಜಾಗದಲ್ಲಿ ಬಿಲ್ವ ಪತ್ರೆ ಮರಗಳು ಮತ್ತು ಕೆರೆ ಮಾತ್ರ ಇದ್ದು ಯಾವುದೇ ಪೂಜೆ ಪುನಸ್ಕಾರಗಳು ನಡೆಯುತ್ತಿರಲಿಲ್ಲ.
ದೇವಸ್ಥಾನದ ಜೀರ್ಣೋ ದ್ಧಾರಕ್ಕೂ ಮೊದಲು ಬೆಟ್ಟತೋಟದಲ್ಲಿ ಕಟ್ಟೆಗಳನ್ನು ನಿರ್ಮಿಸಲಾಯಿತೆಂದೂ, ವರ್ಷಾವಧಿ ಜಾತ್ರೆಯ ಸಂದರ್ಭ ಮೊದಲು ಇಲ್ಲಿ ಮಂಡಲ ಬರೆದು ಪೂಜೆ ಮಾಡುವ ಕಾರ್ಯ ನಡೆದು ಬರಲಾರಂಭಿಸಿತೆಂದೂ ತಿಳಿದು ಬಂದಿದೆ.
ಈ ಸಾನಿಧ್ಯದ ಬಗ್ಗೆ ಗ್ರಾಮ ಸ್ಥರು ಸಮಿತಿಯೊಂದನ್ನು ರಚಿಸುವ ಹಂತಕ್ಕೆ ಬಂದರೂ ಅದು ಯಾವುದೇ ಪ್ರಗತಿ ಕಾಣದೇ ತಟಸ್ಥವಾಯಿತು ಎಂದು ಹೇಳಲಾಗುತ್ತಿದೆ.
ಇತ್ತೀಚೆಗೆ ದೊಡ್ಡತೋಟ ಬಳಿಯ ಗುರುಪ್ರಸಾದ್ ಎಂಬವರು ವ್ಯವಹಾರದ ವಿಷಯದಲ್ಲಿ ಜ್ಯೋತಿಷ್ಯರ ಬಳಿ ತೆರಳಿದ ಸಂದರ್ಭವೂ ಇದೇ ವಿಚಾರ ಕಂಡು ಬಂತೆನ್ನಲಾಗಿದೆ.
ಗುರುಪ್ರಸಾದ್‌ರವರು ಈ ಬಗ್ಗೆ ವಿಚಾರಿಸಿ ಸಾನಿಧ್ಯದ ಬಗ್ಗೆ ಮಾಹಿತಿ ಪಡೆದು ಸಾಮಾಜಿಕ ಜಾಲತಾಣದ ಮೂಲಕ ಹರಿಯಬಿಟ್ಟ ಕಾರಣ ಕೆಲವರಲ್ಲಿ ಇನ್ನಷ್ಟು ಕುತೂಹಲ ಮೂಡಿದೆ.
ದೇವಾಲಯದ ಕುರುಹುಗಳು


ಶಿವನ ಸಾನಿಧ್ಯವಿದೆ ಎಂದು ಹೇಳಲಾಗುತ್ತಿರುವ ಜಾಗದಲ್ಲೇ ಹಳೆಯ ಸಣ್ಣ ಬಾವಿಯೊಂದು ಇದೆ. ಅದಕ್ಕೆ ಆ ಜಾಗದ ಮ್ಹಾಲಕ ಸೀತಾರಾಮ ಭಟ್‌ರವರು ಕಗ್ಗಲ್ಲು ಕಟ್ಟಿದ್ದಾರೆ. ಮಳೆಗಾಲದಲ್ಲಿ ಇಲ್ಲಿ ನೀರು ತುಂಬಿ ಹರಿದು ಹೋಗುತ್ತದೆ. ಕೆಲ ವರ್ಷಗಳ ಹಿಂದೆ ಬೇಸಿಗೆ ಕಾಲದಲ್ಲಿಯೂ ಹರಿದು ಹೋಗುತ್ತಿದ್ದ ನೀರನ್ನು ತೋಟದ ಕೃಷಿಗೂ ಹಾಯಿಸುತ್ತಿದ್ದರು. ಪೂಜೆಯ ಸಂದರ್ಭ ಅರ್ಚಕರು ಇದೇ ಕರೆಯಿಂದ ನೀರು ಉಪಯೋಗಿಸುತ್ತಾರೆ.
ಪಾಳು ಬಿದ್ದ ಮನೆ
ಶಿವ ಸಾನಿಧ್ಯದ ಸಮೀಪದಲ್ಲೇ ಪಾಳು ಬಿದ್ದ ಮನೆಯೊಂದಿದ್ದು, ಇದನ್ನು ಸೀತಾರಾಮ ಭಟ್ ರವರೇ ನಿರ್ಮಿಸಿ ದ್ದರಂತೆ. ಆದರೆ ಅದರಲ್ಲಿ ಯಾರೂ ವಾಸ್ತವ್ಯವಿಲ್ಲದ ಕಾರಣ ಪಾಳು ಬಿದ್ದಿದೆ.
ಗ್ರಾಮಸ್ಥರಿಂದಲೇ ಸ್ವಚ್ಚತೆ


ಶಿವ ಸಾನಿಧ್ಯವು ಖಾಸಗಿ ಸ್ಥಳದಲ್ಲಿರುವುದರಿಂದ ವರುಷದ ಇತರ ದಿನಗಳಲ್ಲಿ ಅಲ್ಲಿಗೆ ಸಾರ್ವಜನಿ ಕರು ತೆರಳದಂತೆ ಸಾನಿಧ್ಯಕ್ಕೆ ತೆರ ಳುವ ದಾರಿಯ ಗೇಟಿಗೆ ಬೀಗ ಹಾಕಲಾಗು ತ್ತದೆ. ಕಟ್ಟೆ ಮತ್ತು ಕಟ್ಟೆಯ ಸುತ್ತ ಮುತ್ತ ಸ್ವಚ್ಚ ಮಾಡುವ ದಿನ ಮತ್ತು ಪೂಜಾ ದಿನ ಗಳಲ್ಲಿ ಗೇಟು ತೆರೆಯಲಾಗುತ್ತದೆ ಮತ್ತು ಸ್ವಚ್ಚತೆಯನ್ನು ನರಸಿಂಹ ದೇವಸ್ಥಾನಕ್ಕೆ ಸಂಬಂಧಪಟ್ಟು ಗ್ರಾಮಸ್ಥರೇ ಸೇರಿ ಮಾಡುತ್ತಾರೆ.
ದೇವಾಲಯ ನಿರ್ಮಾಣವಾಗುವುದೇ?
ಈಗಿರುವ ಶಿವ ಸಾನಿಧ್ಯದ ಕಟ್ಟೆಯನ್ನು ಸೀತಾರಾಮ ಭಟ್‌ರವರೇ ಬ್ರಹ್ಮಕಲಶೋತ್ಸವದ ಸಂದರ್ಭದಲ್ಲಿ ನಿರ್ಮಿಸಿದ್ದರು. ಪೂಜಾದಿ ಕಾರ್ಯಗಳನ್ನು ನರಸಿಂಹ ದೇವಸ್ಥಾನದ ವತಿಯಿಂದಲೇ ಮಾಡಲಾಗುತ್ತಿದೆ. ಆದರೆ ಇಲ್ಲಿ ದೇವಸ್ಥಾನ ನಿರ್ಮಾಣವಾಗುವುದರ ಬಗ್ಗೆ ನರಸಿಂಹ ದೇವಸ್ಥಾನದ ಜೀರ್ಣೋದ್ಧಾರದ ಸಂದರ್ಭದಲ್ಲೇ ಚಿಂತನೆ ನಡೆಸಲಾಗಿತ್ತಂತೆ. ಆದರೆ ಇಲ್ಲಿ ದೇವಸ್ಥಾನದ ನಿರ್ಮಾಣವಾದರೆ ದೈನಂದಿನ ಪೂಜೆಯೊಂದಿಗೆ ದೇವಸ್ಥಾನ ಮುನ್ನಡೆಸುವುದು ಕಷ್ಟವಾಗಬಹುದೆಂದು ಕಟ್ಟೆ ನಿರ್ಮಿಸಿ ತಂತ್ರಗಳ ಮೂಲಕ ಚರ್ಚಿಸಿ ಮಂಡಲ ಹಾಕಿ ಪೂಜೆ ನಡೆಸಿಕೊಂಡು ಬರುವಂತೆ ತೀರ್ಮಾನಕ್ಕೆ ಬರಲಾಯಿತೆಂದು ತಿಳಿದು ಬಂದಿದೆ. ಅದರಂತೆ ಶಿವರಾತ್ರಿಯಂದು ಅರ್ಚಕರು ಮತ್ತು ಜಾತ್ರೋತ್ಸವದ ಮೊದಲು ತಂತ್ರಿಗಳು ಬಂದು ಪೂಜೆ ಸಲ್ಲಿಸುತ್ತಾರೆ.
ಒಟ್ಟಾಗಿ ಜ್ಯೋತಿಷ್ಯರ ಮಾತು ಮತ್ತು ಸಾನಿಧ್ಯದ ಕುರುಹುಗಳು, ಆಚರಣೆಗಳು ಒಂದಕ್ಕೊಂದು ಹೋಲಿಕೆಯಾಗುವಂತಿದ್ದು, ಊರವರು ಸೇರಿ ಶಿವ ದೇವಳದ ನಿರ್ಮಾಣಕ್ಕೆ ಮುಂದಾಗುವರೇ ಕಾದು ನೋಡಬೇಕು.
ನರಸಿಂಹ ಅರ್ಚಕರ ಮನೆ ದೇವರೇ?
ಈಗ ಗ್ರಾಮದೇವರಾಗಿ ಆರಾಧಿಸಲ್ಪಡುವ ಶ್ರೀ ನರಸಿಂಹ ದೇವರು ಅರ್ಚಕರಾಗಿ ಉಬರಡ್ಕಕ್ಕೆ ಬಂದವರ ಮನೆದೇವರೆಂದೂ ಹಿಂದೆ ಗ್ರಾಮ ದೇವರಾಗಿ ಈಶ್ವರ ದೇವರು ಆರಾಧಿಸಲ್ಲುಡುತ್ತಿದ್ದರೆಂದೂ ಹೇಳಲಾಗುತ್ತಿದೆ. ಉಬರಡ್ಕದಲ್ಲಿ ಇದ್ದ ಈಶ್ವರ ದೇವಸ್ಥಾನಕ್ಕೆ ನೂರಾರು ವರ್ಷಗಳ ಹಿಂದೆ ರಾಜರುಗಳ ಕಾಲದಲ್ಲಿ ಅರ್ಚಕರಾಗಿ ಬ್ರಾಹ್ಮಣ ಕುಟುಂಬವನ್ನು ಕರೆಸಿ ನೆಲೆನೀಡಲಾಯಿತೆಂದೂ, ಈ ಅರ್ಚಕರಿಗೆ ಹತ್ತಾರು ಎಕರೆ ಭೂಮಿಯನ್ನು ರಾಜರು ಉಂಬಳಿ ನೀಡಿದ್ದರೆಂದೂ, ಬಳಿಕ ಅರ್ಚಕರ ಸಂತತಿ ಬೆಳೆದು ಹಲವು ಬ್ರಾಹ್ಮಣರ ಮನೆಗಳು ಉಬರಡ್ಕದಲ್ಲಿ ನಿರ್ಮಾಣಗೊಂಡವೆಂದೂ ಹೇಳಲಾಗುತ್ತಿದೆ.
ಕಾಲಾನುಕ್ರಮದಲ್ಲಿ ದೇವಸ್ಥಾನದ ಕಡೆಗೆ ಜನರ ಗಮನ ಕಡಿಮೆಯಾಗಿ ಅದು ಪಾಳು ಬಿದ್ದು ಜೀರ್ಣಗೊಂಡಿತೆಂದೂ, ಪೂಜೆ ಪುನಸ್ಕಾರಗಳೂ ಸಂಪೂರ್ಣ ನಿಂತು ಹೋದವೆಂದೂ, ಅರ್ಚಕರ ಮನೆದೇವರಾದ ನರಸಿಂಹ ದೇವರಿಗೆ ಮಾತ್ರ ಪೂಜೆ ನಡೆಯಿತ್ತೆಂದೂ, ನಂತರ ಅದೂ ನಿಂತು ಹೋಗಿತ್ತೆಂದೂ ಹೇಳಲಾಗುತ್ತಿದೆ. ಸುಮಾರು 40 ರಿಂದ 50 ವರ್ಷಗಳ ಹಿಂದೆ ಬಿದಿರು ಮೆಳೆಯ ನಡುವೆ ಇದ್ದ ಶ್ರೀ ನರಸಿಂಹ ದೇವರ ವಿಗ್ರಹಕ್ಕೆ ದೇವಸ್ಥಾನ ನಿರ್ಮಾಣವಾಗಿ ನಿತ್ಯ ಪೂಜೆ ಮತ್ತು ಉತ್ಸವ ಆರಂಭವಾಯಿತು. 8ವರ್ಷಗಳ ಹಿಂದೆ ದೇವಳದ ಜೀರ್ಣೋದ್ಧಾರ ಬ್ರಹ್ಮಕಲಶ ನೇರವೇರಿತು.
ಈಗ ಶಿವ ದೇವಸ್ಥಾನ ಪುನರ್ ನಿರ್ಮಾಣವಾಗುವುದಿದ್ದರೆ ಹಿಂದೆ ದೇವಸ್ಥಾನ ಇದ್ದ ಬೆಟ್ಟತೋಟದಲ್ಲಿಯೇ ನಿರ್ಮಾಣವಾಗಬೇಕೆಂದು ಕಂಡು ಬಂದಿರುವುದಾಗಿಯೂ ಹೇಳಲಾಗುತ್ತಿದೆ.
ವಾಟ್ಸಾಪ್‌ನಲ್ಲಿ ಹರಿದಾಡುತ್ತಿರುವ ವದಂತಿಗಳು
ಉಬರಡ್ಕ ಮಿತ್ತೂರು ಗ್ರಾಮದಲ್ಲಿ ಜೈನ ಮುನಿಗಳು ಪೂಜಿಸಿಕೊಂಡು ಬರುತ್ತಿದ್ದ ಒಂದು ಶಿವನ ಸಾನಿಧ್ಯ ಇತ್ತು ಎಂಬ ಕುರುಹು ಪತ್ತೆಯಾಗಿದೆ. ಇದು ಜೈನರ ಕಾಲದಲ್ಲಿ ಇತಿಹಾಸ ಪ್ರಸಿದ್ಧ ದೇವಸ್ಥಾನ ಆಗಿತ್ತು. ಹಿಂದಿನ ಕಾಲದಲ್ಲಿ ಇಲ್ಲಿ ಪಿಂಡ ಪ್ರದಾನ ಮಾಡಿಕೊಂಡು ಬರುತ್ತಿದ್ದರು. ಇದರ ಪಕ್ಕದಲ್ಲಿ ಎರಡು ನದಿಗಳು ಸಂಗಮಗೊಳ್ಳುತ್ತಿದೆ. ಇಂದು ಸಣ್ಣ ಬಾವಿ ಮತ್ತು ಇದರ ಹತ್ತಿರ ಪೊದೆಗಳು ತುಂಬಿದ ಪಾಳು ಬಿದ್ದ ಮನೆ ಇದೆ. ಇಲ್ಲಿ ವರುಷಕ್ಕೊಮ್ಮೆ ಮಾತ್ರ ಪೂಜೆ ನಡೆಯುತ್ತದೆ. ಈ ದೇವಸ್ಥಾನದ ವ್ಯಾಪ್ತಿ ಉಬರಡ್ಕ ಅಲ್ಲದೇ ಇತರ ಗ್ರಾಮಗಳನ್ನು ಆವರಿಸಿಕೊಂಡಿದೆ. ಇದು ಪೂರ್ವದಲ್ಲಿ ಜೈನರ ಕ್ಷೇತ್ರವಾಗಿರಬಹುದೇ?, ಜೈನ ಬಿಂಬಗಳು ನಾಶವಾಗಿರಬಹುದೇ? ಈ ಬಗ್ಗೆ ಸಂಶೋಧನೆ ನಡೆಯಬೇಕಾಗಿದೆ. ಗಟ್ಟಿಯಾಗಿ ಆಧಾರ ದೊರೆಯುವ ತನಕ ಬರೀ ಉಹಾಪೋಹಗಳನ್ನು ಅವಲಂಬಿಸಬೇಕಾಗಿದೆ. ಇಲ್ಲಿನ ಗುಡಿಗಳು ಏನಾದವು? ಸಣ್ಣ ಬಾವಿಯ ಹಿನ್ನಲೆ ಏನು, ಎದುರು ಬದುರಾಗಿ ಇರುವ ಶ್ರೀ ನರಸಿಂಹ ದೇವರು ಹಾಗೂ ಶಿವ ದೇವರ ಕಟ್ಟೆ ಏಕಿವೆ? ಕಳೆದ ಕೆಲವು ವರ್ಷಗಳಿಂದ ಬರುವ ಕಾಡಾನೆಯೊಂದು ಇದೇ ದಾರಿಯಲ್ಲಿ ಸಾಗುತ್ತಿದೆ. ಎಂಬಿತ್ಯಾದಿ ಪ್ರಶ್ನೆಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.
ಫೆ.21ರಂದು ನಡೆದ ಶಿವರಾತ್ರೆಯ ದಿನ ಶ್ರೀ ನರಸಿಂಹ ದೇವಸ್ಥಾನದ ವತಿಯಿಂದ ದೇವಸ್ಥಾನದ ಬಳಿಯ ಬೆಟ್ಟತೋಟ ಎಂಬಲ್ಲಿ ಶಿವ ಸಾನಿಧ್ಯದ ಕಟ್ಟೆಗೆ ಮತ್ತು ಶ್ರೀ ನರಸಿಂಹ ದೇವರ ಕಟ್ಟೆಗೆ ಮಂಡಲ ಬರೆದು ಪೂಜೆ ನಡೆಯಿತು.
ಶ್ರೀ ನರಸಿಂಹ ದೇವಸ್ಥಾನದ ಅರ್ಚಕರಾದ ಮಹಾಬಲೇಶ್ವರ ಆಡಿಗ ಮತ್ತು ವೆಂಕಟ್ರಮಣ ಭಟ್‌ರವರು ಪೂಜೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಶ್ರೀ ನರಸಿಂಹ ದೇವಸ್ಥಾನದ ಆಡಳಿತ ಮೊಕ್ತೇಸರ ಜತ್ತಪ್ಪ ಗೌಡ, ಮಾಜಿ ಸದಸ್ಯರಾದ ಗಂಗಾಧರ ನಾಯರ್, ದಾಮೋದರ ಮದುವೆಗದ್ದೆ, ಉಬರಡ್ಕ ಮಿತ್ತೂರು ಗ್ರಾ.ಪಂ. ಅಧ್ಯಕ್ಷ ಹರಿಪ್ರಸಾದ್ ಪಾನತ್ತಿಲ, ಜಾತ್ರೋತ್ಸವ ಸಮಿತಿಯ ಜಗನ್ನಾಥ ರೈ, ಶಶಿ ನಾಯರ್ ಹಾಗೂ ಊರಿನ ಪ್ರಮುಖರಾದ ಪಿ.ಎಸ್.ಗಂಗಾಧರ, ಸುರೇಶ ಎಂ.ಹೆಚ್., ಗೋಪಾಲ ಭಟ್, ರಾಂ ಮೋಹನ್ ರಾವ್ ಮತ್ತಿತರರು ಉಪಸ್ಥಿತರಿದ್ದರು. ಹಾಗೂ ದೊಡ್ಡತೋಟ ಕಡೆಯ ಗುರುಪ್ರಸಾದ್ ಮೇರ್ಕಜೆ, ಮಾಧವ ನಂದಗೋಕುಲ, ಹರೀಶ್ ಕೊಡಪಾಲ ಮಣೀಂದ್ರ ಮೇರ್ಕಜೆ, ರಾಮಕೃಷ್ಣ ಮೈರಾಳ, ಪುನೀತ್ ಮರ್ಗಿಲಡ್ಕ, ಸುರೇಶ್ ಮುಂಡಕಜೆ, ದೇವಿಪ್ರಸಾದ್ ಕುದ್ಪಾಜೆ ಮತ್ತಿತರ ಸುಮಾರು ೫೦ ಮಂದಿ ಸಾನಿಧ್ಯ ನೋಡಲು ಬಂದು ಪೂಜೆಯಲ್ಲಿ ಪಾಲ್ಗೊಂಡರು.
”ಹಿಂದೆ ಉಬರಡ್ಕ ಗ್ರಾಮ ದೇವಸ್ಥಾನವಾಗಿ ಶಿವ ದೇವಸ್ಥಾನ ಇತ್ತಂತೆ. ಆ ಜಾಗ ಈಗ ಖಾಸಗಿಯವರಲ್ಲಿದೆ. ಊರಿನ ಎಲ್ಲಾ ಹಿಂದೂ ಬಾಂಧವರು ಒಟ್ಟಾದರೆ ಈ ಶಿವ ಕ್ಷೇತ್ರ ಪುನರ್ ನಿರ್ಮಾಣವಾಗಬಹುದು.
– ಹರಿಪ್ರಸಾದ್ ಪಾನತ್ತಿಲ ಅಧ್ಯಕ್ಷರು, ಗ್ರಾ.ಪಂ. ಉಬರಡ್ಕ ಮಿತ್ತೂರು
”ಹಿಂದೆ ಉಬರಡ್ಕ ಗ್ರಾಮ ದೇವಸ್ಥಾನವಾಗಿ ಶಿವ ದೇವಸ್ಥಾನ ಇತ್ತಂತೆ. ಈಗ ಇರುವ ಕಟ್ಟೆಗೆ ದೇವಸ್ಥಾನದ ವತಿಯಿಂದ ಪೂಜೆ ನಡೆಸಲಾಗುತ್ತದೆ. ದೇವಸ್ಥಾನ ನಿರ್ಮಾಣ ಮಾಡಿದ ಮೇಲೆ ಮುಂದುವರಿಸುವವರು ಬೇಕು.
– ಜತ್ತಪ್ಪ ಗೌಡ, ಅಧ್ಯಕ್ಷರು
ವ್ಯವಸ್ಥಾಪನಾ ಸಮಿತಿ, ಶ್ರೀ ನರಸಿಂಹ ದೇವಸ್ಥಾನ ಉಬರಡ್ಕ ಮಿತ್ತೂರು

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.