Breaking News

ಮಾ.15 ರಿಂದ ಅಜ್ಜಾವರ ಶ್ರೀ ಮಹಿಷಾಮರ್ದಿನೀ ದೇವಸ್ಥಾನದಲ್ಲಿ ಬ್ರಹ್ಮಕುಂಭಾಭಿಷೇಕ ಮಹೋತ್ಸವ

Advt_Headding_Middle
Advt_Headding_Middle

 

ಮಾ.18ರಂದು ಶೃಂಗೇರಿ ಕಿರಿಯ ಸ್ವಾಮೀಜಿಗಳ ಆಗಮನ

ಮಾ.19ರಂದು ಬ್ರಹ್ಮಕುಂಭಾಭಿಷೇಕ

ಅದ್ದೂರಿ ಸಿದ್ಧತೆ : ದೇವಸ್ಥಾನದಲ್ಲಿ ನಿರಂತರ ಶ್ರಮದಾನ


ಅಜ್ಜಾವರ ಶ್ರೀ ಮಹಿಷಾಮರ್ದಿನಿ ದೇವಸ್ಥಾನದ ಬ್ರಹ್ಮಕುಂಭಾಭಿಷೇಕ ಮಹೋತ್ಸವವು ಮಾ.೧೫ರಿಂದ ಆರಂಭಗೊಂಡು, ಮಾ.೧೯ರಂದು ಬ್ರಹ್ಮಕುಂಭಾಭಿಷೇಕ ನಡೆಯಲಿದೆ. ಮಾ.೧೮ರಂದು ಶೃಂಗೇರಿ ಕಿರಿಯ ಸ್ವಾಮೀಜಿಗಳು ಕ್ಷೇತ್ರಕ್ಕೆ ಆಗಮಿಸಲಿದ್ದಾರೆ ಎಂದು ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಎ.ಭಾಸ್ಕರ ರಾವ್ ಬಯಂಬು ಹಾಗೂ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ನವೀನ್ ರೈ ಮೇನಾಲ ಹೇಳಿದರು.


ಮಾ.೬ರಂದು ಸುಳ್ಯ ಪ್ರೆಸ್ ಕ್ಲಬ್‌ನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಎ.ಭಾಸ್ಕರ ರಾವ್ ಬಯಂಬುರವರು “ಹಲವು ವರ್ಷಗಳಿಂದ ಜೀರ್ಣಾವಸ್ಥೆಯಲ್ಲಿದ್ದ ದೇವಸ್ಥಾನವನ್ನು ೧೯೮೭ರಲ್ಲಿ ಜೀರ್ಣೋದ್ಧಾರ ನಡೆಸಲು ಚಿಂತಿಸಿ ಕಾರ್ಯ ಆರಂಭಿಸಲಾಯಿತು. ೧೯೯೫ರಲ್ಲಿ ದೇವರ ಪ್ರತಿಷ್ಠೆ ನಡೆಯಿತು. ಬಳಿಕ ೨೦೦೪ ರಲ್ಲಿ ಮತ್ತೆ ಬ್ರಹ್ಮಕಲಶೋತ್ಸವ ನಡೆದು ಇದೀಗ ೧೬ ವರ್ಷಗಳ ಬಳಿಕ ಬ್ರಹ್ಮಕುಂಭಾಭಿಷೇಕ ಮಹೋತ್ಸವ ನಡೆಯಲಿದೆ ಎಂದು ಅವರು ವಿವರ ನೀಡಿದರು.

ಮಾ.೧೫ರಂದು ಗುರುಪ್ರಾರ್ಥನೆಯ ಬಳಿಕ ವಿವಿಧ ವೈಧಿಕ ಕಾರ್ಯಕ್ರಮ ನಡೆಯುವುದು. ಅಂದು ಹೊರೆ ಕಾಣಿಕೆ ನಡೆದು ಬಳಿಕ ಉಗ್ರಾಣ ತುಂಬಿಸುವ ಕಾರ್ಯಕ್ರಮ ನಡೆಯಲಿದೆ.

ಸಂಜೆ ಸಭಾ ಕಾರ್ಯಕ್ರಮ ನಡೆಯಲಿದ್ದು ಶಾಸಕ ಎಸ್.ಅಂಗಾರ, ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಸಂಸದ ನಳಿನ್ ಕುಮಾರ್ ಕಟೀಲ್ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ. ಮಾ.೧೬ರಂದು ವೈದಿಕ ಕಾರ್ಯಕ್ರಮ ನಡೆಯುವುದು.
ಮಾ.೧೭ರಂದು ಬೆಳಗ್ಗಿನಿಂದ ವೈದಿಕ ಕಾರ್ಯಕ್ರಮಗಳು ನಡೆದು ಸಂಜೆ ಸಭೆ ನಡೆಯುವುದು. ಡಾ| ಹರಪ್ರಸಾದ್ ತುದಿಯಡ್ಕರ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಚಿಂತಕ ಆದರ್ಶ ಗೋಖಲೆ ಧಾರ್ಮಿಕ ಉಪನ್ಯಾಸ ನೀಡುವರು. ಎ.ಒ.ಎಲ್.ಇ. ಪ್ರಧಾನ ಕಾರ್ಯದರ್ಶಿ ಡಾ| ರೇಣುಕಾಪ್ರಸಾದ್ ಸೇರಿದಂತೆ ಹಲವು ಮಂದಿ ಗಣ್ಯರು ಭಾಗವಹಿಸಲಿದ್ದಾರೆ.

ಮಾ.೧೮ರಂದು ಬೆಳಗ್ಗಿನಿಂದ ವೈದಿಕ ಕಾರ್ಯಕ್ರಮ. ಸಾಯಂಕಾಲ ಬ್ರಹ್ಮಕುಂಭ ಪ್ರತಿಷ್ಠೆ ನಡೆಯುವುದು. ಸಂಜೆ ಶೃಂಗೇರಿ ಮಠದ ಕಿರಿಯ ಸ್ವಾಮೀಜಿಗಳಾದ ವಿಧುಶೇಖರ ಭಾರತೀ ಸನ್ನಿಧಾನಂಗಳವರ ಪುರಪ್ರವೇಶ ನಡೆಯುವುದು. ಕ್ಷೇತ್ರಕ್ಕೆ ಬರುವ ಸ್ವಾಮೀಜಿಯವರನ್ನು ಅಜ್ಜಾವರ ಗ್ರಾ.ಪಂ. ಕಚೇರಿ ಬಳಿಯಿಂದ ಮೆರವಣಿಗೆಯಲ್ಲಿ ಕರೆದುಕೊಂಡು ಬರಲಾಗುವುದು ಎಂದು ಅವರು ವಿವರ ನೀಡಿದರು.
ಬಳಿಕ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಸ್ವಾಮೀಜಿಯವರು ಆಶೀರ್ವಚನ ನೀಡಲಿದ್ದಾರೆ. ಶೃಂಗೇರಿ ಮಠದ ಆಡಳಿತಾಧಿಕಾರಿ ಡಾ| ವಿ.ಆರ್. ಗೌರೀಶಂಕರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಗುರುಗಳ ಅನುಷ್ಠಾನದ ನಂತರ ಗುರುಗಳಿಂದ ಚಂದ್ರಮೌಳೀಶ್ವರ ದೇವರ ಪೂಜೆ ನಡೆಯುವುದು.
ಮಾ.೧೯ರಂದು ಬೆಳಗ್ಗೆ ವೃಷಭ ಲಗ್ನದಲ್ಲಿ ಶೃಂಗೇರಿ ಸ್ವಾಮೀಜಿಗಳಿಂದ ಶ್ರೀ ಮಹಾಗಣಪತಿ, ಆಂಜನೇಯ ಮತ್ತು ಮಹಿಷಾಮರ್ದಿನಿ ದೇವರಿಗೆ ಬ್ರಹ್ಮಕುಂಭಾಭಿಷೇಕ ನಡೆಯುವುದು. ಬಳಿಕ ಗುರುಗಳಿಂದ ಆಶೀರ್ವಚನ ನಡೆಯುವುದು. ಸಂಜೆ ಸಮಾರೋಪ ಸಮಾರಂಭದಲ್ಲಿ ತಾ.ಪಂ. ಅಧ್ಯಕ್ಷ ಚನಿಯ ಕಲ್ತಡ್ಕ ಅಧ್ಯಕ್ಷತೆ ವಹಿಸಲಿದ್ದಾರೆ. ಕುಂಟಾರು ರವೀಶ ತಂತ್ರಿಯವರು ಧಾರ್ಮಿಕ ಉಪನ್ಯಾಸ ನೀಡುವರು. ಹಲವು ಮಂದಿ ಗಣ್ಯರು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.
ಬ್ರಹ್ಮಕಲಶೋತ್ಸವದಲ್ಲಿ ಸಾಂಸ್ಕೃತಿಕ ವೈವಿಧ್ಯ
ಬ್ರಹ್ಮಕಲಶೋತ್ಸವದಲ್ಲಿ ಸಾಂಸ್ಕ್ರತಿಕ ವೈವಿಧ್ಯಗಳು ನಡೆಯಲಿದ್ದು ಮಾ.೧೫ರಂದು ಸಭಾ ಕಾರ್ಯಕ್ರಮದ ಬಳಿಕ ಸ್ಥಳೀಯರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯುವುದು. ಮಾ.೧೬ರಂದು ಸಂಜೆ ಕಲಾಸಿಂಚನ ಪೈಲಾರು ಇವರಿಂದ ಸಾಂಸ್ಕೃತಿಕ ವೈವಿಧ್ಯ. ಮಾ.೧೭ರಂದು ಕಲ್ಲಡ್ಕ ವಿಠಲ ನಾಯಕ್ ಮತ್ತು ಬಳಗದವರಿಂದ ವಿನೂತನ ಶೈಲಿಯ ಗೀತಾ ಸಾಹಿತ್ಯ ಸಂಭ್ರಮ. ಮಾ.೧೯ರಂದು ರಾತ್ರಿ ಸಾಂಸ್ಕೃತಿಕ ವೈಭವ- ಭಕ್ತಿಗೀತೆ, ಜಾನಪದ, ಭಾವಗೀತೆ ಜಗದೀಶ್ ಆಚಾರ್ಯ ಬಳಗ ಪುತ್ತೂರು ಇವರಿಂದ

ನಿರಂತರ ಶ್ರಮದಾನ
ಬ್ರಹ್ಮಕಲಶೋತ್ಸವಕ್ಕೆ ಈಗಾಗಲೇ ವಿವಿಧ ಸಮಿತಿಗಳನ್ನು ರಚಿಸಲಾಗಿದೆ. ದೇವಸ್ಥಾನದಲ್ಲಿ ಪ್ರತೀ ದಿನ ಊರಿನ ವಿವಿಧ ಸಂಘ ಸಂಸ್ಥೆಯವರು ತಂಡ ತಂಡವಾಗಿ ಬಂದು ಸಿದ್ಧತಾ ಕಾರ್ಯಕ್ರಮದಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ ಎಂದು ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ನವೀನ್ ರೈ ಮೇನಾಲ ಹೇಳಿದರು.

ದೇವಳದ ಅಭಿವೃದ್ಧಿ ಕಾರ್ಯಕ್ಕಾಗಿ ರೂ.೫೦ ಲಕ್ಷ ಮಂಜೂರು
ದೇವಸ್ಥಾನದಲ್ಲಿ ಅಭಿವೃದ್ಧಿ ಕಾರ್ಯಕ್ಕಾಗಿ ಯಡಿಯೂರಪ್ಪರವರ ಸರಕಾರ ರೂ.೫೦ ಲಕ್ಷ ಅನುದಾನವನ್ನು ಮಂಜೂರು ಮಾಡಿದ್ದಾರೆ. ಇದರಲ್ಲಿ ದೇವಸ್ಥಾನದಲ್ಲಿ ಸುಸಜ್ಜಿತ ಸಭಾಭವನ, ದೇವಸ್ಥಾನದ ಎದುರು ಶಾಶ್ವತ ಚಪ್ಪರ, ದೇವಸ್ಥಾನದ ಹಿಂಬದಿ ಚಪ್ಪರದ ವ್ಯವಸ್ಥೆ, ಭೋಜನೆ ಶಾಲೆ ಹೀಗೆ ವಿವಿಧ ಕಾಮಗಾರಿ ಕೈಗೆತ್ತಿಕೊಳ್ಳಲು ನಿರ್ಧರಿಸಲಾಗಿದೆ ಎಂದು ಭಾಸ್ಕರ ರಾವ್ ಬಯಂಬು ಅವರು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ದೇವಸ್ಥಾನದ ಆಡಳಿತ ಸಮಿತಿಯ ಪದಾಧಿಕಾರಿಗಳಾದ ಶ್ರೀಮತಿ ಸವೇರಾ ರೈ, ಎ.ಎ.ಸ್.ಮನ್ಮಥ ಅಡ್ಪಂಗಾಯ, ವೆಂಕಟ್ರಮಣ ಅತ್ಯಾಡಿ, ಕಿಟ್ಟಣ್ಣ ರೈ ಇರಂತಮಜಲು, ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಹೇಮಂತ್ ಕುಮಾರ್ ಗೌಡರ ಮನೆ ಪೇರಾಲು ಜೀರ್ಣೋದ್ಧಾರ ಸಮಿತಿ ಕಾರ್ಯದರ್ಶಿ ಮೋನಪ್ಪ ಗೌಡ ನಾರಾಲು, ಆರ್ಥಿಕ ಸಮಿತಿ ಸಂಚಾಲಕ ಲೋಕಯ್ಯ ಮಾಸ್ತರ್ ಅತ್ಯಾಡಿ, ಪ್ರಚಾರ ಸಮಿತಿ ಸಂಚಾಲಕ ಪ್ರಭೋದ್ ಶೆಟ್ಟಿ ಮೇನಾಲ, ಬ್ರಹ್ಮಕಲಶೋತ್ಸವ ಸಮಿತಿ ಉಪಾಧ್ಯಕ್ಷರುಗಳಾದ ಕಮಲಾಕ್ಷ ರೈ ಮೇನಾಲ, ಚಂದ್ರಶೇಖರ ಅತ್ಯಾಡಿ, ಜೀರ್ಣೋದ್ಧಾರ ಸಮಿತಿ ಕಾರ್ಯದರ್ಶಿ ಬೆಳ್ಯಪ್ಪ ಮುಡೂರು ಇದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.