ಡಾ.ಯು.ಪಿ ಶಿವಾನಂದರಿಗೆ ವಿಶೇಷ ಅಭಿನಂದನೆ

Advt_Headding_Middle
Advt_Headding_Middle

ಸುದ್ದಿ ಬಿಡುಗಡೆ ಪ್ರಧಾನ ಸಂಪಾದಕ ಡಾ.ಯು.ಪಿ.ಶಿವಾನಂದ ಅವರಿಗೆ ವಿಶೇಷ ಅಭಿನಂದನೆ ನಡೆಯಲಿದೆ.ಕರ್ನಾಟಕ ರಾಜ್ಯ ಸರಕಾರದ ವತಿಯಿಂದ ಕೊಡಲಾಗುವ ಪ್ರತಿಷ್ಠಿತ ಮೊಹರೆ ಹಣಮಂತರಾಯ ಪತ್ರಿಕೋದ್ಯಮ ಪ್ರಶಸ್ತಿಗೆ ಡಾ.ಯು.ಪಿ. ಶಿವಾನಂದರವರನ್ನು ಈಗಾಗಲೇ ಆಯ್ಕೆ ಮಾಡಲಾಗಿದೆ.

ನಾಡಿನ ಸಮಗ್ರ ಅಭಿವೃದ್ಧಿ ಮತ್ತು ಶೀಘ್ರವಾದ ಗುರಿ ತಲುಪುವಿಕೆಗೆ ಮಾಹಿತಿ ತಂತ್ರಜ್ಞಾನದ ಸಮರ್ಪಕ ಬಳಕೆ ಅತಿ ಮುಖ್ಯ ಎಂಬ ನೆಲೆಯಲ್ಲಿ ಕಾರ್ಯ ನಿರತರಾಗಿರುವ ಡಾ. ಯು.ಪಿ. ಶಿವಾನಂದರವರು ಮೂಲತಃ ವೈದ್ಯರಾಗಿದ್ದು ಕಳೆದ ೩೫ ವರ್ಷಗಳಿಂದ ಸುದ್ದಿ ಬಿಡುಗಡೆ ಪತ್ರಿಕೆಯ ಪ್ರಧಾನ ಸಂಪಾದಕರಾಗಿದ್ದಾರೆ. ಸುದ್ದಿ ಬಿಡುಗಡೆ ಪತ್ರಿಕೆಯು ಪುತ್ತೂರಿನಲ್ಲಿ ದಿನ ಪತ್ರಿಕೆಯಾಗಿ, ಸುಳ್ಯ ಮತ್ತು ಬೆಳ್ತಂಗಡಿಯಲ್ಲಿ ವಾರ ಪತ್ರಿಕೆಯಾಗಿ ಪ್ರಕಟಗೊಳ್ಳುತ್ತಿದ್ದು ಈ ಮೂರು ತಾಲೂಕುಗಳಲ್ಲಿ ಅತೀ ಹೆಚ್ಚು ಪ್ರಸಾರ ಇರುವ ಪತ್ರಿಕೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಅಲ್ಲದೆ, ಡಾ. ಶಿವಾನಂದರವರು ಕ್ಷಣ ಕ್ಷಣದ ವರದಿ, ಮಾಹಿತಿಗಳನ್ನು ಪ್ರಕಟಿಸುತ್ತಿರುವ `ಸುದ್ದಿ ಆನ್‌ಲೈನ್ ನ್ಯೂಸ್’ ಹಾಗೂ `ಸುದ್ದಿ ಯೂ ಟ್ಯೂಬ್ ಚಾನೆಲ್’ನ ಮುಖ್ಯಸ್ಥರೂ ಆಗಿದ್ದಾರೆ. ಸುದ್ದಿ ಶಿಕ್ಷಣ ತರಬೇತಿ ಕೇಂದ್ರದ ಮೂಲಕ ಸರಕಾರಿ ಮತ್ತು ಖಾಸಗಿ ಕ್ಷೇತ್ರಗಳ ಉದ್ಯೋಗ, ಸ್ಕಾಲರ್‌ಶಿಪ್, ತರಬೇತಿ, ಕೆರಿಯರ್ ಗೈಡೆನ್ಸ್ ಮುಂತಾದ ಅಗತ್ಯ ಮಾಹಿತಿಗಳನ್ನು ಒದಗಿಸುತ್ತಿರುವ ಶಿವಾನಂದರವರು ಸುದ್ದಿ ಸೌಹಾರ್ದ ಸಹಕಾರಿ ಸಂಘವನ್ನು ಸ್ಥಾಪಿಸುವ ಮೂಲಕ ಸಹಕಾರಿ ಕ್ಷೇತ್ರದಲ್ಲಿಯೂ ಸಕ್ರಿಯವಾಗಿದ್ದಾರೆ.

ಸಂದ ಪ್ರಮುಖ ಸನ್ಮಾನ, ಪ್ರಶಸ್ತಿಗಳು: ೧೯೯೪ರಲ್ಲಿ ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪುರಸ್ಕಾರ, ೨೦೦೩ರಲ್ಲಿ ಸುಳ್ಯ ತಾಲೂಕು ಗೌಡ ಸಮ್ಮೇಳನದಲ್ಲಿ ಸನ್ಮಾನ, ೨೩-೭-೨೦೦೫ರಂದು ಸುಳ್ಯ ತಾಲೂಕು ಪತ್ರಕರ್ತರ ಸಂಘದ ವತಿಯಿಂದ ಸನ್ಮಾನ. ಧ.ಮ.ಕಾಲೇಜು ಉಜಿರೆ-ಪತ್ರಿಕೋದ್ಯಮ ವಿಭಾಗದ ವತಿಯಿಂದ, ‘ಅತಿ ಹೆಚ್ಚು ಪ್ರಸಾರ ಮತ್ತು ಗುಣಮಟ್ಟದ ಪತ್ರಿಕೆ’ ಎಂಬ ನೆಲೆಯಲ್ಲಿ ಬೆಳ್ತಂಗಡಿಯ ಬೆಳಾಲಿನಲ್ಲಿ ಸನ್ಮಾನ, ೨೦೦೫ ಸೆಪ್ಟಂಬರ್‌ನಲ್ಲಿ ಪುತ್ತೂರು ಜೇಸೀಸ್ ಮತ್ತು ಮಡಂತ್ಯಾರು ಜೇಸೀಸ್ ವತಿಯಿಂದ ಸಾಧನಶ್ರೀ ಪುರಸ್ಕಾರ, ಸನ್ಮಾನ, ೨೦೦೬ರಲ್ಲಿ ದ.ಕ. ಜಿಲ್ಲಾ ಆಡಳಿತದಿಂದ ಪತ್ರಿಕೋದ್ಯಮದ ಸಾಧನೆಗಾಗಿ `ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ’, ೨೦೧೧ರಲ್ಲಿ ಕರ್ನಾಟಕ ಮಾಧ್ಯಮ ಅಕಾಡೆಮಿಯಿಂದ ಅತ್ಯುತ್ತಮ ಗ್ರಾಮೀಣ ಪತ್ರಿಕೆ ಎಂಬ ನೆಲೆಯಲ್ಲಿ `ಆಂದೋಲನ ಪ್ರಶಸ್ತಿ’, ೨೦೧೭-೧೮ನೇ ಸಾಲಿನ ಕರ್ನಾಟಕ ರಾಜ್ಯ ಮಾಧ್ಯಮ ಅಕಾಡೆಮಿ ಪ್ರಶಸ್ತಿ, ಪುತ್ತೂರು ತಾಲೂಕು ಪತ್ರಕರ್ತರ ಸಂಘದ ವತಿಯಿಂದ ಸನ್ಮಾನ, ಪುತ್ತೂರು, ಸುಳ್ಯ, ಬೆಳ್ತಂಗಡಿ ತುಳು ಸಾಹಿತ್ಯ ಸಮ್ಮೇಳನಗಳಲ್ಲಿ ಅರೆಭಾಷೆ ಅಕಾಡಮಿಯಲ್ಲಿ ಸಾಧನೆಗೆ ಪ್ರಶಸ್ತಿ ಪುರಸ್ಕೃತರಾಗಿರುವ ಡಾ.ಯು.ಪಿ. ಶಿವಾನಂದರವರಿಗೆ ಇದೀಗ ಪತ್ರಕರ್ತರ ೩೫ನೇ ರಾಜ್ಯ ಸಮ್ಮೇಳನದಲ್ಲಿ ವಿಶೇಷ ಅಭಿನಂದನೆ ನಡೆಯಲಿದೆ.

ಯು.ಕೆ. ಪುಟ್ಟಪ್ಪ ಮತ್ತು ಪದ್ಮಾವತಿ ಯು.ಪಿ.ಯವರ ಪುತ್ರರಾಗಿ ೧೮-೨-೧೯೫೧ರಂದು ಜನಿಸಿದ ಶಿವಾನಂದರು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಪುತ್ತೂರಿನ ಸಂತ ಫಿಲೋಮಿನಾ ವಿದ್ಯಾ ಸಂಸ್ಥೆಯಲ್ಲಿ ಪೂರೈಸಿದರು. ಪದವಿ ಪೂರ್ವ ಶಿಕ್ಷಣವನ್ನು ಮಂಗಳೂರು ಅಲೋಶಿಯಸ್ ಕಾಲೇಜ್‌ನಲ್ಲಿ ಪಡೆದರು. ಬಳಿಕ ದಾವಣಗೆರೆಯ ಬಾಪೂಜಿ ಮೆಡಿಕಲ್ ಕಾಲೇಜಿನಲ್ಲಿ ವೈದ್ಯಕೀಯ ವಿದ್ಯಾಭ್ಯಾಸ ಪಡೆದರು.

ಆರೋಗ್ಯ ಸೇವೆ: ೧೯೭೮ರಿಂದ ೧೯೮೦ರವರೆಗೆ ಪುತ್ತೂರಿನ ಫಾ. ಪತ್ರಾವೋ ಆಸ್ಪತ್ರೆಯಲ್ಲಿ ವೈದ್ಯರಾಗಿ ಸೇರಿ ಸೇವೆ ಆರಂಭಿಸಿದರು. ೧೯೮೦ರಲ್ಲಿ ಸುಳ್ಯದಲ್ಲಿ ಗಾಯತ್ರಿ ನರ್ಸಿಂಗ್ ಹೋಂ ಸ್ಥಾಪಿಸಿದರು. ೧೯೮೦ರಿಂದ ೧೯೮೫ರವರೆಗೆ ಸುಳ್ಯದ ಮಂಡೆಕೋಲು, ಮರ್ಕಂಜ, ಮಡಪ್ಪಾಡಿ, ಅಜ್ಜಾವರ, ದೇವಚಳ್ಳ (ಕಂದ್ರಪ್ಪಾಡಿ) ಗ್ರಾಮಗಳಲ್ಲಿ ಆರೋಗ್ಯ ಶಿಬಿರಗಳನ್ನು ನಡೆಸಿ ಪ್ರತೀ ವಾರ ಒಂದೊಂದು ಗ್ರಾಮದಲ್ಲಿ ಅಲ್ಲಿನ ಜನತೆಗೆ ಆರೋಗ್ಯದ ಬಗ್ಗೆ ಮಾಹಿತಿ, ಉಚಿತ ಚಿಕಿತ್ಸೆ, ಮಕ್ಕಳಿಗೆ ಸಾಮೂಹಿಕ ಚುಚ್ಚು ಮದ್ದು ಕಾರ್ಯಕ್ರಮ ಮತ್ತು ಮುಂಜಾಗ್ರತಾ ಔಷಧಿಗಳ ವಿತರಣೆ, ಆರೋಗ್ಯ ಸೇವಾ ಕಾರ್ಯಕ್ರಮಗಳನ್ನು ಏರ್ಪಡಿಸುವ ಮೂಲಕ ಹಳ್ಳಿ ಹಳ್ಳಿಗಳಲ್ಲಿ ಆರೋಗ್ಯ ಜಾಗೃತಿಗೆ ಕಾರಣರಾದರು. ತಜ್ಞರನ್ನು ಕರೆಸಿ ಆರೋಗ್ಯ ತಪಾಸಣಾ ಶಿಬಿರವನ್ನೂ ಸಂಘಟಿಸಿದರು.

ಜನಜಾಗೃತಿ: ೧೯೮೨ರಲ್ಲಿ ಸುಳ್ಯ ನಗರದಲ್ಲಿ ಕಲುಷಿತವಾದ ಕುಡಿಯುವ ನೀರಿನ ಬಗ್ಗೆ ಜನಜಾಗೃತಿಯ ಘಂಟೆ ಮೊಳಗಿಸಿದರು. ಈ ಬಗ್ಗೆ ಪುರಸಭೆಯ ವಿರುದ್ಧ ನ್ಯಾಯಾಲಯದಲ್ಲಿ ದಾವೆ ಹೂಡಿ ನಗರಕ್ಕೆ ಶುದ್ಧ ನೀರು ಪೂರೈಸುವಂತೆ ನ್ಯಾಯಾಲಯದಿಂದ ಆದೇಶ ಕೊಡಿಸಲು ಯಶಸ್ವಿಯಾದರು. ೧೯೮೨-೮೩ರಲ್ಲಿ ಸುಳ್ಯ ತಾಲೂಕು ಬಳಕೆದಾರರ ವೇದಿಕೆ ಸ್ಥಾಪಿಸಿ ಅದರ ಸಂಚಾಲಕರಾಗಿ ಜನಜಾಗೃತಿ ಕಾರ್ಯ ಆರಂಭಿಸಿದರು. ಬಳಕೆದಾರರ ವೇದಿಕೆ ಎಂಬ ಪತ್ರಿಕೆ ಹೊರಡಿಸಿ ಉಚಿತವಾಗಿ ಹಂಚಿದರು. ವಿದ್ಯುತ್ ಕಡಿತದ ವಿರುದ್ಧ ಹೋರಾಟ ಸಂಘಟಿಸಿದರು. ಪಂಪ್‌ಸೆಟ್‌ಗಳಿಗೆ ಸಬ್ಸಿಡಿ ದರದಲ್ಲಿ ವಿದ್ಯುತ್ ನೀಡಲು ಒತ್ತಾಯಿಸಿ ಹೋರಾಟ ಆರಂಭಿಸಿದರು. ಸರಕಾರಿ ಕಚೇರಿಗಳ ಭ್ರಷ್ಟಾಚಾರ ನಿರ್ಮೂಲನೆಗಾಗಿ ಸರಕಾರಿ ಕಚೇರಿಗಳಲ್ಲಿ ಅರ್ಜಿಗಳಿಗೆ ರಶೀದಿ ಕೊಡುವಂತೆ ಒತ್ತಾಯಿಸಿ ಹೋರಾಟ ನಡೆಸಿ ಅದರಲ್ಲಿ ಯಶಸ್ವಿಯಾದರು.

ವಿಚಾರ ಮಂಡನೆ: ಆಗ್ಮೆದಾರರ ಸಮಾವೇಶ ನಡೆಸಿ ಆಗಿನ ಶಾಸಕ ಬಾಕಿಲ ಹುಕ್ರಪ್ಪರ ಮುಖಾಮುಖಿ ಕಾರ್ಯ ನಡೆಸಿದರು. ೧೯೮೫ ಜನವರಿ ೧೦ರಂದು ಸಾರ್ವಜನಿಕರ ಸಹಕಾರದೊಂದಿಗೆ ಸುಳ್ಯದ ಅತಿದೊಡ್ಡ ಭ್ರಷ್ಟಾಚಾರಿಯನ್ನು ಗುರುತಿಸಿ ಸಾರ್ವಜನಿಕವಾಗಿ ಪ್ರತಿಕೃತಿ ದಹನ ಕಾರ್ಯಕ್ರಮ ನಡೆಸಿದರು. ಬಲಾತ್ಕಾರವಾಗಿ ಬಂದ್‌ಗಳನ್ನು ನಡೆಸುವುದರ ವಿರುದ್ಧ ಜನಜಾಗೃತಿ ಕಾರ್ಯಕ್ರಮ ಆರಂಭಿಸಿದರು. ಅಹಮದಾಬಾದಿನಲ್ಲಿ Indian Institute of Management Ahmadabad ಆಶ್ರಯದಲ್ಲಿ ನಡೆದ ಬಳಕೆದಾರ ಸಂಘಗಳ ೧ ತಿಂಗಳ ಕಾರ್ಯಾಗಾರದಲ್ಲಿ ಭಾಗವಹಿಸಿ ಪ್ರಬಂಧ ಮಂಡಿಸಿದರು. CREC (Consumer Research Centre Ahmadabad) ಇದರ ಸದಸ್ಯರಾಗಿ ಆಯ್ಕೆಯಾದರು. ಬೆಂಗಳೂರಿನಲ್ಲೂ ಬಳಕೆದಾರರ ಸಮಾವೇಶದಲ್ಲಿ ಪ್ರಬಂಧ ಮಂಡಿಸಿದರು. ೧೯೮೨ರಲ್ಲಿ ದೆಹಲಿ ವಿಜ್ಞಾನ ಭವನದಲ್ಲಿ ನಡೆದ ಸಮಾವೇಶದಲ್ಲಿ ಬಳಕೆದಾರರ ಚಳುವಳಿಯ ಬಗ್ಗೆ ಪ್ರಬಂಧ ಮಂಡಿಸಿದರು.

ಡಾ| ಶಿವರಾಮ ಕಾರಂತರಿಂದ ಜನಜಾಗೃತಿ ಟ್ರಸ್ಟ್ ಉದ್ಘಾಟನೆ: ೧೯೮೪ರಲ್ಲಿ ಡಾ| ಶಿವರಾಮ ಕಾರಂತರನ್ನು ಕರೆಸಿ ಜನಜಾಗೃತಿ ಟ್ರಸ್ಟ್‌ನ ಉದ್ಘಾಟನೆ ನೆರವೇರಿಸಿದರು. ಟ್ರಸ್ಟ್‌ನ ನೇತೃತ್ವ ವಹಿಸಿ ಬಳಕೆದಾರರ ಚಳುವಳಿ ಸಂಘಟಿಸಿದರು. ೧೯೮೫ರಲ್ಲಿ ಪುತ್ತೂರಿನಲ್ಲಿ ಸಿ.ಕೆ ಪದ್ಮಯ್ಯ ಗೌಡ ಆಸ್ಪತ್ರೆ ಸ್ಥಾಪನೆ ಮಾಡಿದರು.

ಪತ್ರಿಕೋದ್ಯಮ ಶಕೆ: ನಂತರ ತೆರೆದುಕೊಂಡದ್ದು ಪತ್ರಿಕೋದ್ಯಮದ ಇತಿಹಾಸ. ೧೯೮೫ರಲ್ಲಿ ಸುಳ್ಯ-ಪುತ್ತೂರು `ಸುದ್ದಿ ಬಿಡುಗಡೆ’ ಪತ್ರಿಕೆ ಆರಂಭಿಸಿದರು. ೧೯೮೬ರಲ್ಲಿ ಬೆಳ್ತಂಗಡಿಯಲ್ಲಿ `ಸುದ್ದಿ ಬಿಡುಗಡೆ’ ವಾರಪತ್ರಿಕೆ ಆರಂಭ.೧೯೮೭ರಲ್ಲಿ ಪುತ್ತೂರಿನಲ್ಲಿ ಪ್ರತ್ಯೇಕ `ಸುದ್ದಿ ಬಿಡುಗಡೆ’ ದಿನಪತ್ರಿಕೆ ಆರಂಭವಾಯಿತು. ೨೦೦೬ರಲ್ಲಿ ಸುದ್ದಿ ಶಿಕ್ಷಣ ಉದ್ಯೋಗ ಮಾಹಿತಿ ಎಂಬ ಪಾಕ್ಷಿಕ ಪತ್ರಿಕೆ ಬೆಂಗಳೂರಿನಲ್ಲಿ ಬಿಡುಗಡೆಯಾಯಿತು.

ದೂರಗಾಮಿ ಯೋಚನೆಯ ಡಾ. ಶಿವಾನಂದರು ಮುಂದೆ ತೆರೆದುಕೊಂಡದ್ದು ಅಂತರ್ಜಾಲ ಪತ್ರಿಕೋದ್ಯಮದತ್ತ.www.suddinews.com/puttur,www.suddinews.com/belthangady,www.suddinews.com/sullia ಪುತ್ತೂರು ಸುಳ್ಯ, ಬೆಳ್ತಂಗಡಿಯಲ್ಲಿ ಸುದ್ದಿ ಆನ್‌ಲೈನ್ ಪತ್ರಿಕೆ ಪ್ರಾರಂಭವಾಯಿತು. ಮಾಧ್ಯಮ ಗ್ರಾಮ, ಮಾಧ್ಯಮ ನಗರ ಆಂದೋಲನ ಮೊದಲಾದ ವಿಶಿಷ್ಟ ಚಿಂತನೆಗಳನ್ನು ಕಾರ್ಯರೂಪಕ್ಕೆ ತಂದರು. ೨೦೧೮ರಲ್ಲಿ ಪುತ್ತೂರು, ಸುಳ್ಯ, ಬೆಳ್ತಂಗಡಿ ತಾಲೂಕುಗಳಲ್ಲಿ ಆನ್‌ಲೈನ್ ನ್ಯೂಸ್, ಇ-ಪೇಪರ್ ಮತ್ತು ತಾಲೂಕಿನ ಸಮಗ್ರ ಮಾಹಿತಿಗಳನ್ನೊಳಗೊಂಡ `ಸುದ್ದಿ’ ಆಂಡ್ರೈಡ್ ಮೊಬೈಲ್ ಆಪ್ ಪ್ರಾರಂಭಿಸಿದರು.

ಜನಾಂದೋಲನ ಪರ್ವ: ೨೦೧೫ರಿಂದ ನಿರಂತರವಾಗಿ ಬಲಾತ್ಕಾರದ ಬಂದ್ ವಿರುದ್ಧ ಚಳುವಳಿ, ಫೇಸ್‌ಬುಕ್, ವಾಟ್ಸಪ್ ಮುಂತಾದ ಸಾಮಾಜಿಕ ಜಾಲತಾಣಗಳ ದುರುಪಯೋಗದ ವಿರುದ್ಧ ಹೋರಾಟ ಇತ್ಯಾದಿ ಸಮಾಜಮುಖಿ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡಿರುವ ಡಾ.ಯು.ಪಿ. ಶಿವಾನಂದರು, ಅನಧಿಕೃತ ಶರಾಬು ಅಂಗಡಿಗಳ ವಿರುದ್ಧ ಆಂದೋಲನ, ಕಳಪೆ ಮತ್ತು ಸ್ಥಗಿತಗೊಂಡ ಕಾಮಗಾರಿಗಳ ಬಗ್ಗೆ ಮಾಹಿತಿ, ಸರಕಾರಿ ಕಛೇರಿಗಳಲ್ಲಿ, ಇತರ ಸೇವಾ ಸಂಘಗಳಲ್ಲಿ ಸಿಗುವ ಸೌಲಭ್ಯಗಳ ಬಗ್ಗೆ ಮಾಹಿತಿ ಪ್ರಕಟಣೆ, ಶಿಕ್ಷಣ/ಉದ್ಯೋಗ ಅವಕಾಶಗಳ ಮಾಹಿತಿ ಪ್ರಕಟಣೆ, ಕೋಮು ಗಲಭೆಗಳ ವಿರುದ್ಧ ಜನಜಾಗೃತಿ, ಸಾಮರಸ್ಯಕ್ಕಾಗಿ ಪ್ರಯತ್ನ ಮೊದಲಾದ ಜನಮುಖಿ ಕಾರ್ಯಗಳನ್ನು ಕೈಗೊಂಡರು.

ಸಾಕ್ಷರತಾ ಜಾಗೃತಿ: ೧೯೯೦ರಲ್ಲಿ ಜಿಲ್ಲಾ ಸಾಕ್ಷರತಾ ಸಮಿತಿಯ ಸದಸ್ಯರಾಗಿ ಸೇವೆ ಸಲ್ಲಿಸಿದರು. ಪತ್ರಿಕೆಗಳಲ್ಲಿ ೩ ತಾಲೂಕುಗಳಲ್ಲಿ ಸಾಕ್ಷರತಾ ಜಾಗೃತಿಗೆ ಬೆಂಬಲ ನೀಡಿದರು. ೨೦೦೨ರಲ್ಲಿ ಸುಳ್ಯ, ಬೆಳ್ತಂಗಡಿ, ಪುತ್ತೂರು ತಾಲೂಕುಗಳಲ್ಲಿ ಸಮಗ್ರ ಮಾಹಿತಿ ಪುಸ್ತಕಗಳ ಬಿಡುಗಡೆ, ಗ್ರಾಮೀಣ ಮಾಹಿತಿ ತಂತ್ರಜ್ಞಾನದ ಬಗ್ಗೆ ಬೆಂಗಳೂರಿನ (Indian Institute of Science)ಲ್ಲಿ ನಡೆದ ರಾಷ್ಟ್ರೀಯ ಕಾರ್ಯಾಗಾರದಲ್ಲಿ ಪ್ರಬಂಧ ಮಂಡನೆ, ವೀಡಿಯೋ ಪ್ರದರ್ಶನ, ೨೦೦೪ರಲ್ಲಿ ಜಾರ್ಖಂಡ್ ಮತ್ತು ಒರಿಸ್ಸಾ ರಾಜ್ಯಗಳಲ್ಲಿ ಮಾಹಿತಿ ತಂತ್ರಜ್ಞಾನ ಇಲಾಖೆಗಳ ಆಹ್ವಾನದ ಮೇರೆಗೆ ಗ್ರಾಮೀಣ ಮಾಹಿತಿ ತಂತ್ರಜ್ಞಾನದ ಕುರಿತು ರಾಂಚಿ ಮತ್ತು ಭುವನೇಶ್ವರಗಳಲ್ಲಿ ಉಪನ್ಯಾಸ ಪ್ರಾತ್ಯಕ್ಷಿಕೆ, ೨೦೦೪ರಲ್ಲಿ ರಾಜ್ಯ ಪ್ರವಾಸ-ಶೈಕ್ಷಣಿಕ ಮಾಹಿತಿ ಸಂಗ್ರಹ. ರಾಜ್ಯದ ಸಮಗ್ರ ಶೈಕ್ಷಣಿಕ ಮತ್ತು ಶಿಕ್ಷಣ ಸಂಸ್ಥೆಗಳ ಮಾಹಿತಿಯ ಸಂಗ್ರಹ. ಶಿಕ್ಷಣ ಕ್ಷೇತ್ರ ವಿವಿಧ ಸಾಧ್ಯತೆಗಳು, ಅವಕಾಶಗಳ ಮಾಹಿತಿ ಸಂಗ್ರಹ, ೨೬-೬-೨೦೦೪ ಸುಳ್ಯದಲ್ಲಿ ರಾಜ್ಯಮಟ್ಟದ ಶೈಕ್ಷಣಿಕ ಮಾಹಿತಿಯ ಪ್ರದರ್ಶನ ಮತ್ತು ಶಿಕ್ಷಣ ತಜ್ಞರಿಂದ ಶೈಕ್ಷಣಿಕ ಉಪನ್ಯಾಸ ಕಾರ್ಯಕ್ರಮ, ೧೦-೯-೨೦೦೪ರಂದು ಮಡಿಕೇರಿಯಲ್ಲಿ ರಾಜ್ಯಮಟ್ಟದ ಶೈಕ್ಷಣಿಕ ಮಾಹಿತಿ ಪ್ರದರ್ಶನ ಮತ್ತು ಶೈಕ್ಷಣಿಕ ಉಪನ್ಯಾಸ ಕಾರ್ಯಕ್ರಮ ಇವರ ಚಿಂತನೆಯಲ್ಲಿ ಮೂಡಿ ಬಂತು.

ಉಚಿತ ಮಾಹಿತಿ: ೨೦೦೪-೦೫ರಲ್ಲಿ ಸುಳ್ಯ, ಬೆಳ್ತಂಗಡಿ, ಪುತ್ತೂರು ತಾಲೂಕುಗಳ ಬಹುತೇಕ ಶಿಕ್ಷಣ ಸಂಸ್ಥೆಗಳಲ್ಲಿ ಶೈಕ್ಷಣಿಕ ಮಾಹಿತಿಗಳ ಪ್ರದರ್ಶನ, ಉಪನ್ಯಾಸ, ಸುದ್ದಿ ಮಾಹಿತಿ ಕೇಂದ್ರಗಳಲ್ಲಿ ಉಚಿತ ಮಾಹಿತಿ ನೀಡುವಿಕೆ ನಡೆಯಿತು. ಸುಳ್ಯ, ಬೆಳ್ತಂಗಡಿ, ಪುತ್ತೂರಿನ ಹಳ್ಳಿಹಳ್ಳಿಗಳಲ್ಲಿ ಸುದ್ದಿ ಮಾಹಿತಿ ಕೇಂದ್ರಗಳ ಸ್ಥಾಪನೆ, ಉಚಿತ ಮಾಹಿತಿ ನೀಡುವಿಕೆ ಮತ್ತು ಸೇವಾ ಕೇಂದ್ರಗಳ ಸ್ಥಾಪನೆಯಾಯಿತು. ಕರ್ನಾಟಕ AIDS awarness programme ಬಗ್ಗೆ ಮಂಗಳೂರಿನಲ್ಲಿ ನಡೆದ ಕಾರ್ಯಾಗಾರದಲ್ಲಿ `ಮಾಧ್ಯಮಗಳಲ್ಲಿ ಜನ ಜಾಗೃತಿ’ ಎಂಬ ವಿಷಯದ ಬಗ್ಗೆ ಪ್ರಬಂಧ ಮಂಡಿಸಿದರು.

ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆ: ಆಡಳಿತ ವ್ಯವಸ್ಥೆಯು ದೆಹಲಿಯಿಂದ ಹಳ್ಳಿಗೆ ಅಲ್ಲ, ಹಳ್ಳಿಯಿಂದ ದೆಹಲಿಗೆ ಆಡಳಿತ ಎಂಬಂತಾಗಬೇಕು ಎಂದು ಹೇಳಿದ್ದ ಮಹಾತ್ಮಗಾಂಧೀಯವರ ಆಶಯದ ಗ್ರಾಮಸ್ವರಾಜ್ಯದ ಆಡಳಿತವನ್ನು ಪ್ರತಿಪಾದಿಸುವುದಕ್ಕಾಗಿ ೨೦೧೯ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಸ್ಪರ್ಧಿಸಿದ್ದ ಅಮೇಥಿ ಕ್ಷೇತ್ರದಲ್ಲಿ ಚುನಾವಣೆಗೆ ಸ್ಪರ್ಧಿಸಿದ್ದರು. ಅಲ್ಲದೆ, ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಸ್ಪರ್ಧಿಸಿದ್ದ ವಾರಣಾಸಿ ಕ್ಷೇತ್ರದಲ್ಲಿ ನಾಮಪತ್ರ ತಿರಸ್ಕೃತಗೊಂಡರೂ ತಮ್ಮ ವಿಚಾರಧಾರೆಗಳ ಕುರಿತು ಪ್ರಚಾರ ಮಾಡಿದ್ದರು.

ಕಳೆದ ೨೦ ವರ್ಷಗಳಿಂದ ಮಾಹಿತಿಗಳ ಸಂಗ್ರಹ ಮತ್ತು ಉಚಿತ ಕೊಡುಗೆಗಳ ಯೋಜನೆಯನ್ನು ಹಮ್ಮಿಕೊಂಡಿದ್ದು, ನಿರಂತರವಾಗಿ ಈ ಯೋಜನೆಗೆ ಲಕ್ಷಗಟ್ಟಲೆ ಹಣ ವ್ಯಯಿಸಿ ಅದನ್ನು ಸಮಗ್ರಗೊಳಿಸಲು ಶ್ರಮಿಸುತ್ತಿದ್ದಾರೆ. ಎಲ್ಲಾ ಸುದ್ದಿ ಸೆಂಟರ್‌ಗಳು ತಾಲೂಕಿನ ಸಮಗ್ರ ಮಾಹಿತಿ ಮತ್ತು ಕಾರ್ಯಕ್ರಮಗಳ ನೀಡುವ ಉಚಿತ ಮಾಹಿತಿ ಕೇಂದ್ರಗಳಾಗಿ ಕೆಲಸ ಮಾಡುತ್ತಿವೆ. ಈಗಾಗಲೇ ಮಹತ್ವಾಕಾಂಕ್ಷಿ ಯೋಜನೆಯಾದ `ಡಿಜಿಟಲ್ ಸಾಕ್ಷರತಾ ಅಭಿಯಾನ’ಕ್ಕೂ ಮುನ್ನುಡಿ ಬರೆದಿದ್ದು, ಪಂಚಾಯತ್ ಮಟ್ಟದಲ್ಲಿ ಯೋಜನೆಯನ್ನು ಅನುಷ್ಠಾನಗೊಳಿಸಲು ಕಾರ್ಯತತ್ಪರವಾಗಿದೆ. ಕಳೆದ ಹಲವಾರು ವರ್ಷಗಳಿಂದ `ಸುದ್ದಿ ಆನ್‌ಲೈನ್ ನ್ಯೂಸ್’ ಜಾಲ ತಾಣವನ್ನು ಆರಂಭಿಸಿ, ಸುಳ್ಯ, ಪುತ್ತೂರು, ಬೆಳ್ತಂಗಡಿಯ ಕ್ಷಣಕ್ಷಣದ ಸುದ್ದಿಗಳು ವೀಕ್ಷಕರಿಗೆ ದೊರಕುವಂತೆ ಮಾಡುತ್ತಿದ್ದಾರೆ.ಸುದ್ದಿ ಶಿಕ್ಷಣ ಉದ್ಯೋಗ ತರಬೇತಿ ಕೇಂದ್ರವನ್ನು ಪ್ರಾರಂಭಿಸಿ ಅದರಲ್ಲಿ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿಗಳು, ಸ್ಕಾಲರ್‌ಶಿಪ್ ಮಾಹಿತಿ ಮತ್ತು ಉದ್ಯೋಗಗಳ ಅವಕಾಶಗಳ ಬಗ್ಗೆ ಮಾಹಿತಿಯನ್ನು ನೀಡುತ್ತಿದೆ. ಮಂಗಳೂರು, ಬೆಂಗಳೂರುಗಳಲ್ಲಿ ಸುದ್ದಿ ಸೆಂಟರ್‌ಗಳನ್ನು ಹೊಂದಿ ತಾಲೂಕಿಗೆ ಅಗತ್ಯವಿರುದ ಎಲ್ಲಾ ಸೇವೆಗಳನ್ನು ನೀಡಲಾಗುತ್ತಿದೆ.

ಡಾ. ಯು.ಪಿ.ಶಿವಾನಂದರು MBBS ವಿದ್ಯಾಭ್ಯಾಸ ಮಾಡಿ ವೈದ್ಯ ವೃತ್ತಿ ಆರಂಭಿಸಿದರೂ ಸಾಮಾಜಿಕ ಆರೋಗ್ಯದ ಕಡೆ ತನ್ನ ಚಿಕಿತ್ಸಕ ದೃಷ್ಠಿ ಬೀರಿದವರು. ಸಾಮಾಜಿಕ ಕುಂದು ಕೊರತೆಗಳ ನಿವಾರಣೆಗಾಗಿ ಅಪಾರ ಹಣ ಗಳಿಸಬಹುದಾಗಿದ್ದ ವೈದ್ಯ ವೃತ್ತಿಯನ್ನು ತೊರೆದು ಸಾಮಾಜಿಕ ಹೋರಾಟ ಸಂಘಟಿಸಿದವರು. ಪತ್ರಿಕೋದ್ಯಮದ ಸವಾಲುಗಳನ್ನು ಎದುರಿಸಿ ಗ್ರಾಮೀಣ ಪ್ರದೇಶದಲ್ಲಿ ಯಶಸ್ವಿ ಪತ್ರಿಕೆಯನ್ನು ನಡೆಸುತ್ತಿರುವವರು. ಪತ್ರಿಕೆಯಲ್ಲಿ ನೈತಿಕತೆಯನ್ನು ಉಳಿಸಿಕೊಂಡು ನಿರಂತರ ಸಾಮಾಜಿಕ ಕಳಕಳಿಯನ್ನು ಬಿಂಬಿಸಿದರು. ಗ್ರಾಮೀಣ ಮಾಹಿತಿ ತಂತ್ರಜ್ಞಾನ ಮತ್ತು ಮಾಹಿತಿ ಜಾಲವನ್ನು ನಿರ್ಮಿಸಿ ಗ್ರಾಮೀಣ ಜನತೆಗೆ ಹೊಸ ಸಾಧ್ಯತೆಗಳ ಬಾಗಿಲು ತೆರೆದವರು.ಇವರ ಸಾಮಾಜಿಕ ಹಾಗೂ ಜನಸಾಮಾನ್ಯ ಹಿತದೃಷ್ಠಿಯ ಚಿಂತನೆಯ ಫಲವಾಗಿ ಬಲಾತ್ಕಾರದ ಬಂದ್ ಮೂಲಕ ಆಗುತ್ತಿರುವ ಸಾಮಾಜಿಕ ಅಶಾಂತಿಯನ್ನು ತಪ್ಪಿಸುವ ನಿಟ್ಟಿನಲ್ಲಿ ಆಂದೋಲನ-ಜನಜಾಗೃತಿ ಕೈಗೊಂಡು ಯಶಸ್ವಿಯಾಗಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ ಮೂಲಕ ಸಮಾಜದ ಶಾಂತಿ ಕದಡುವ ಅವಹೇಳನಕಾರಿ, ನಿಂದನಾತ್ಮಕ ಮೆಸೇಜ್ ಹಾಗೂ ಬ್ಲ್ಯಾಕ್‌ಮೇಲ್ ಮಾಡುವವರ ವಿರುದ್ದವೂ ಆಂದೋಲನ ಕೈಗೊಂಡು ಜನಜಾಗೃತಿ ಮೂಡಿಸಿರುವುದು ಗಮನಾರ್ಹವಾಗಿದೆ.

“ಸುದ್ದಿ ನಡೆ ಕೃಷಿಕರ ಕಡೆಗೆ”: ಪ್ರಸ್ತುತ ‘ಸುದ್ದಿ ನಡೆ ಕೃಷಿಕರ ಕಡೆಗೆ’ ಎಂಬ ಕೃಷಿಕರ ಪರವಾದ, ಅವರ ಉತ್ಪನ್ನಗಳಿಗೆ ಬೆಲೆ ದೊರಕುವಂತೆ ಮಾಡುವ ಹಾಗೂ ಸಾವಯವ ಕೃಷಿಗೆ ಪೂರಕವಾದ ಆಂದೋಲನವನ್ನು ಕೈಗೆತ್ತಿಕೊಳ್ಳಲಾಗಿದೆ. ಹೀಗೆ ಪತ್ರಿಕೋದ್ಯಮದ ಪಡಸಾಲೆಯನ್ನು ವಿಸ್ತರಿಸುತ್ತಾ ಸಮಾಜದ ಅಗತ್ಯ ಘಟಕಗಳನ್ನು ಅದರೊಂದಿಗೆ ಸೇರಿಸಿಕೊಳ್ಳುತ್ತಾ ಸ್ವಾಸ್ಥ್ಯ ಮಯ ಸಮಾಜದ ಚಿಕಿತ್ಸಕನಾಗಿರುವ ಡಾ.ಯು.ಪಿ.ಶಿವಾನಂದರಿಗೆ ವಿಶೇಷ ಅಭಿನಂದನೆ ನಡೆಯಲಿದೆ. 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.