ಮಾ.7-8: ಮಂಗಳೂರಿನಲ್ಲಿ ಪತ್ರಕರ್ತರ ರಾಜ್ಯ ಸಮ್ಮೇಳನ – ಮುಖ್ಯಮಂತ್ರಿ ಬಿ.ಎಸ್.ವೈ ಸಹಿತ ಹಲವು ಗಣ್ಯರ ಆಗಮನ

Advt_Headding_Middle
Advt_Headding_Middle

ಪುತ್ತೂರು: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಬೆಂಗಳೂರು ವತಿಯಿಂದ ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸಹಯೋಗದಲ್ಲಿ ೩೫ನೇ ಪತ್ರಕರ್ತರ ರಾಜ್ಯ ಸಮ್ಮೇಳನ ಮಾ.೭ ಮತ್ತು ೮ರಂದು ಮಂಗಳೂರಿನ ಕುದ್ಮಲ್ ರಂಗರಾವ್ ಪುರಭವನದಲ್ಲಿ ನಡೆಯಲಿದೆ.

ಸಮ್ಮೇಳನವನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಉದ್ಘಾಟಿಸಲಿದ್ದಾರೆ. ಧರ್ಮಸ್ಥಳದ ಧರ್ಮಾಧಿಕಾರಿ ಡಾ| ವೀರೇಂದ್ರ ಹೆಗ್ಗಡೆಯವರ ಉಪಸ್ಥಿತಿಯಲ್ಲಿ ಕಾರ್ಯಕ್ರಮ ಉದ್ಘಾಟನೆಗೊಳ್ಳಲಿದೆ. ಸಮಾರಂಭದಲ್ಲಿ ಸ್ಮರಣ ಸಂಚಿಕೆ ಬಿಡುಗಡೆ, ವ್ಯಂಗ್ಯ ಚಿತ್ರ ಉದ್ಘಾಟನೆ, ಫೊಟೋ ಪ್ರದರ್ಶನ ಮತ್ತು ವಸ್ತು ಪ್ರದರ್ಶನ ಉದ್ಘಾಟನೆ ನಡೆಯಲಿದೆ. ಅಪರಾಹ್ನ ನಡೆಯಲಿರುವ ಗೋಷ್ಠಿಯಲ್ಲಿ ಪತ್ರಕರ್ತರ ಮಾನಸಿಕ ಒತ್ತಡ ಮತ್ತು ಆರೋಗ್ಯ ನಿರ್ವಹಣೆ, ಪತ್ರಕರ್ತರ ವೃತ್ತಿ ಸವಾಲು ಮತ್ತು ಸಾಮಾಜಿಕ ಹೊಣೆಗಾರಿಕೆ, ಸಾಂಸ್ಕೃತಿಕ ಮಾಧ್ಯಮ ಮುಂತಾದ ವಿಷಯದಲ್ಲಿ ಪ್ರಬಂಧ ಮಂಡನೆಯಾಗಲಿದೆ.

ಮಾ.೮ರಂದು ಬೆಳಿಗ್ಗೆ ಕರಾವಳಿ ಅಭಿವೃದ್ಧಿ ಮತ್ತು ಪ್ರವಾಸೋದ್ಯಮ, ಭಾರತೀಯ ಪತ್ರಿಕೋದ್ಯಮ, ಮಾಧ್ಯಮ ಮತ್ತು ಮಹಿಳೆ, ಗ್ರಾಮೀಣ ಪತ್ರಿಕೋದ್ಯಮ ಸವಾಲು ಎಂಬ ವಿಚಾರದಲ್ಲಿ ಗೋಷ್ಠಿಗಳು ನಡೆಯಲಿದೆ. ಬಳಿಕ ಪ್ರತಿನಿಧಿಗಳ ಸಮಾವೇಶ, ಸನ್ಮಾನ ಸಮಾರಂಭ ಜರಗಲಿದೆ. ಸನ್ಮಾನ ಸಮಾರಂಭವನ್ನು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಉದ್ಘಾಟಿಸಲಿದ್ದಾರೆ. ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ ಅಧ್ಯಕ್ಷತೆ ವಹಿಸಲಿದ್ದಾರೆ. ಮಾಜಿ ಮುಖ್ಯಮಂತ್ರಿ ಎಂ. ವೀರಪ್ಪ ಮೊಯ್ಲಿ, ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶರಪ್ಪ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಸಾಧಕರ ಪರಿಚಯ
ಅಕ್ಷರ ಸಂತ ಹರೇಕಳ ಹಾಜಬ್ಬ: ಅಕ್ಷರ ಸಂತ, ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜರಬ್ಬರಿಗೆ ಪತ್ರಕರ್ತರ ರಾಜ್ಯ ಸಮ್ಮೇಳನದಲ್ಲಿ ಗೌರವಾರ್ಪಣೆ ನಡೆಯಲಿದೆ.ಮಂಗಳೂರು ತಾಲೂಕಿನ ಕೊಣಾಜೆ ಸಮೀಪದ ಹರೇಕಳ ನ್ಯೂಪಡ್ಪುವಿನಲ್ಲಿ ಜನಿಸಿರುವ ಹಾಜಬ್ಬರವರು ರಸ್ತೆಬದಿಯಲ್ಲಿ ಕಿತ್ತಳೆ ಹಣ್ಣು ಮಾರಿಕೊಂಡು ಜೀವನ ಸಾಗಿಸುತ್ತಿದ್ದು ತಮ್ಮ ಜೀವನದ ಸುಖಕ್ಕಿಂತಲೂ ಬೇರೆಯವರ ನೋವಿಗೆ ಸ್ಪಂದಿಸುವ ಗುಣವುಳ್ಳವರು.ಕಿತ್ತಳೆ ವ್ಯಾಪಾರದಿಂದ ಬಂದ ಹಣವನ್ನು ತನ್ನೂರ ಶಾಲೆ ನಿರ್ಮಾಣಕ್ಕೆ ದೇಣಿಗೆಯಾಗಿ ನೀಡಿ ಅದರಲ್ಲಿ ಯಶಸ್ವಿಯಾಗಿ ಅಕ್ಷರ ಸಂತ ಎಂದೇ ಬಿರುದಾಂಕಿತರಾಗಿರುವ ಹಾಜಬ್ಬರ ಯಶೋಗಾಥೆ ಮಂಗಳೂರು ವಿ.ವಿ., ಶಿವಮೊಗ್ಗದ ಕುವೆಂಪು ವಿವಿ., ಮತ್ತು ಧಾರವಾಡ ಕರ್ನಾಟಕ ವಿವಿಯ ಪಠ್ಯ ಪುಸ್ತಕದಲ್ಲಿ ಸೇರ್ಪಡೆಗೊಂಡಿದೆ.ಕೇರಳ ಸರಕಾರದ ಎಂಟನೇ ತರಗತಿಯ ಕನ್ನಡ ಪಠ್ಯ ಪುಸ್ತಕದಲ್ಲಿಯೂ ಹಾಜಬ್ಬರ ಕುರಿತ ಲೇಖನ ಪಠ್ಯವಾಗಿದ್ದು ಸಾವಿರಾರು ವಿದ್ಯಾರ್ಥಿಗಳಿಗೆ ಅವರು ಸ್ಪೂರ್ತಿಯ ಚಿಲುಮೆಯಾಗಿದ್ದಾರೆ.

೧೯೯೯ರಲ್ಲಿ ನ್ಯೂಪಡ್ಪುವಿನ ಮದ್ರಸವೊಂದರಲ್ಲಿ ಶಾಲೆಯೊಂದನ್ನು ತೆರೆದಾಗ ಸ್ಥಳೀಯರ್‍ಯಾರೂ ಅದನ್ನು ಗಂಭೀರವಾಗಿ ಪರಿಗಣಿಸಲಿಲ್ಲ.ಆದರೆ ಹಾಜಬ್ಬರು ಹಿಂತಿರುಗಿ ನೋಡಲೇ ಇಲ್ಲ.ತಾನು ಅನಕ್ಷರಸ್ಥನಾದರೂ ತನ್ನ ಮಕ್ಕಳು ಮಾತ್ರವಲ್ಲ ಊರಿನ ಮಕ್ಕಳು ಅಕ್ಷರ ವಂಚಿತರಾಗಬಾರದು ಎಂಬ ಉದ್ದೇಶದಿಂದ ಮುಂದಡಿಯಿಟ್ಟವರು ಯಶಸ್ವಿಯಾದರು.

ಸಂದ ಪ್ರಶಸ್ತಿಗಳು: ಈಗಾಗಲೇ, ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ‘ಕನ್ನಡ ಪ್ರಭ ವರ್ಷದ ವ್ಯಕ್ತಿ’ ಪ್ರಶಸ್ತಿ, ಬ್ಯಾರೀಸ್ ವೆಲ್ಫೇರ್ ಅಸೋಸಿಯೇಶನ್‌ನ ‘ವರ್ಷದ ಬ್ಯಾರಿ ಪ್ರಶಸ್ತಿ’, ಸಂದೇಶ ಪ್ರಶಸ್ತಿ, ರಿಲಯನ್ಸ್ ರಿಯಲ್ ಹೀರೋ ಪ್ರಶಸ್ತಿ, ಯೆನೆಪೋಯ ಎಕ್ಸಲೆನ್ಸಿ ಅವಾರ್ಡ್ ಸೇರಿದಂತೆ ಹತ್ತಾರು ಪ್ರಶಸ್ತಿಗಳು ಹರೇಕಳ ಹಾಜಬ್ಬರಿಗೆ ಸಂದಿದ್ದು ಕೇಂದ್ರ ಸರಕಾರ ಈ ಬಾರಿ ದೇಶದ ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿ ಗೌರವ ನೀಡಿದೆ.

ಕೆ. ಆನಂದ ಶೆಟ್ಟಿ: ಆನಂದ ಶೆಟ್ಟಿಯವರಿಗೆ ಪತ್ರಿಕಾ ಕ್ಷೇತ್ರದ ಸಾಧನೆಗಾಗಿ ಈಗಾಗಲೇ ದ.ಕ.ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ರೋಟರಿ ವಂದನಾ ಪ್ರಶಸ್ತಿ ಮತ್ತು ಆರ್ಯಭಟ ಪ್ರಶಸ್ತಿ ಸಂದಿದೆ. ಇವರು ಭಾರತೀಯ ಕಾರ್ಯನಿರತ ಪತ್ರಕರ್ತರ ಒಕ್ಕೂಟದ ರಾಷ್ಟ್ರೀಯ ಮಂಡಳಿ ಸದಸ್ಯರಾಗಿ, ಕರ್ನಾಟಕ ಪತ್ರಿಕಾ ಮಾನ್ಯತಾ ಸಮಿತಿಯ ಸದಸ್ಯರಾಗಿ, ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯಕಾರಿ ಸಮಿತಿ ಸದಸ್ಯರಾಗಿ, ಮೂಡಬಿದಿರೆಯಲ್ಲಿ ಜರಗಿದ ಕನ್ನಡ ಸಾಹಿತ್ಯ ಸಮ್ಮೇಳನ ಹಾಗೂ ಉಜಿರೆಯಲ್ಲಿ ಜರಗಿದ ವಿಶ್ವ ತುಳು ಸಮ್ಮೇಳನದ ಪ್ರಚಾರ ಸಮಿತಿಯ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ.

ಪತ್ರಿಕಾ ರಂಗದಲ್ಲಿ ೩೬ ವರ್ಷಗಳ ಅನುಭವ ಹೊಂದಿರುವ ಇವರು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪತ್ರಕರ್ತರ ಸಂಘ, ಮಂಗಳೂರು ಪ್ರೆಸ್ ಕ್ಲಬ್ ಪತ್ರಿಕಾ ಭವನ ಟ್ರಸ್ಟ್‌ನ್ನು ಕಟ್ಟಿ ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಜಿಲ್ಲೆಯಲ್ಲಿ ಪತ್ರಕರ್ತರ ಸಂಘಟನೆಗೆ ಶಕ್ತಿಮೀರಿ ದುಡಿದ `ಏಕೈಕ ಪತ್ರಕರ್ತ’ ಇವರು ಎಂಬುದು ಹೆಗ್ಗಳಿಕೆಯ ವಿಷಯವಾಗಿದೆ.

ಕೆ.ಆನಂದ ಶೆಟ್ಟಿಯವರು ಬಂಟ್ವಾಳ ತಾಲೂಕಿನ ಚೆನ್ನೈತೋಡಿ ಗ್ರಾಮದವರಾಗಿದ್ದು, ಪ್ರಸ್ತುತ ಮಂಗಳೂರು ನಿವಾಸಿಯಾಗಿದ್ದಾರೆ. ಆಕಾಶವಾಣಿ ದ.ಕ.ಜಿಲ್ಲಾ ವರದಿಗಾರರಾಗಿಯೂ ಶೆಟ್ಟಿಯವರು ಸೇವೆ ಸಲ್ಲಿಸುತ್ತಿದ್ದಾರೆ.

ಮನೋಹರ ಪ್ರಸಾದ್: ಉದಯವಾಣಿ ಕನ್ನಡ ದಿನ ಪತ್ರಿಕೆಯಲ್ಲಿ ಸಹಾಯಕ ಸಂಪಾದಕರಾಗಿರುವ ಮನೋಹರ ಪ್ರಸಾದ್‌ರವರ ಸೇವೆಯ ೩೧ ವರ್ಷಗಳಲ್ಲಿ ೩ ಸಾವಿರಕ್ಕೂ ಹೆಚ್ಚು ವಿಶೇಷ ವರದಿ, ಸಂದರ್ಶನ, ತನಿಖಾ ವರದಿ, ನುಡಿಚಿತ್ರಗಳು ಪ್ರಕಟಗೊಂಡಿವೆ. ಉದಯವಾಣಿ ಬಳಗದ ತರಂಗ, ರೂಪತಾರಾ, ತುಷಾರ ಪತ್ರಿಕೆಗಳಲ್ಲಿ ನಿರಂತರ ಲೇಖನಗಳು ಪ್ರಕಟಗೊಳ್ಳುತ್ತಿದೆ. ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸುವ ವರದಿಗಾರಿಕೆಯಿಂದ ಅಪಾರ ಜನಪ್ರಿಯತೆ ಪಡೆದುಕೊಂಡಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಸ್ವಾತಂತ್ರ್ಯ ಹೋರಾಟದ ಬಗ್ಗೆ ಇವರ ಸತತ ೨೫ ಸಂಶೋಧನಾ ಲೇಖನಗಳು ಪ್ರಕಟಗೊಂಡಿವೆ. ಜನಪ್ರಿಯ ನಿರೂಪಕರಾಗಿರುವ ಇವರು ಮಂಗಳೂರಿನ ಕೇಬಲ್ ಟಿವಿ ವಾಹಿನಿಗಳಲ್ಲಿ ಪ್ರಥಮ ಸುದ್ದಿ ವಾಚಕರಾಗಿದ್ದಾರೆ. ಸಿಸಿ ಇಂಡಿಯಾ ಚಾನೆಲ್‌ನಲ್ಲಿ `ಜನಮನ’ ಎಂಬ ಪ್ರತಿ ಭಾನುವಾರದ ನೇರಪ್ರಸಾರ ಕಾರ್ಯಕ್ರಮ ಅಪಾರ ಜನಪ್ರಿಯತೆ ಕಂಡಿದೆ.

ಪ್ರಶಸ್ತಿಗಳು: ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಮಾಧ್ಯಮ ಅಕಾಡೆಮಿ ಗೌರವ ಪ್ರಶಸ್ತಿ, ೧೦೦ಕ್ಕೂ ಹೆಚ್ಚು ರಾಷ್ಟ್ರ ಮಟ್ಟದ ಪ್ರಶಸ್ತಿಗಳು, ಸುಮಾರು ಸಾವಿರದಷ್ಟು ರಾಜ್ಯ, ಜಿಲ್ಲಾ ಮಟ್ಟದ ಪ್ರಶಸ್ತಿ, ಪುರಸ್ಕಾರ, ಸಮ್ಮಾನ, ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಸಮ್ಮೇಳನಗಳಲ್ಲಿ ಪುರಸ್ಕಾರ ಸೇರಿದಂತೆ ಹತ್ತು ಹಲವು ಪ್ರಶಸ್ತಿ, ಸನ್ಮಾನ ಮನೋಹರ ಪ್ರಸಾದ್‌ರವರ ಮುಡಿಗೇರಿಸಲ್ಪಟ್ಟಿದೆ.

ಹರೇಕಳ ಹಾಜಬ್ಬರಿಗೆ ಗೌರವಾರ್ಪಣೆ; ಡಾ. ಯು.ಪಿ.ಶಿವಾನಂದ, ಆನಂದ ಶೆಟ್ಟಿ , ಮನೋಹರ ಪ್ರಸಾದ್‌ರವರಿಗೆ ವಿಶೇಷ ಅಭಿನಂದನೆ


ಶಿಕ್ಷಣ ಕ್ಷೇತ್ರಕ್ಕೆ ತನ್ನದೇ ಆದ ಕೊಡುಗೆ ನೀಡಿದ ಅಕ್ಷರಸಂತ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಹರೇಕಳ ಹಾಜಬ್ಬ ಅವರಿಗೆ ಗೌರವಾರ್ಪಣೆ ನಡೆಯಲಿದೆ. ಅಲ್ಲದೆ ಸುದ್ದಿ ಬಿಡುಗಡೆ ಪ್ರಧಾನ ಸಂಪಾದಕ ಡಾ. ಯು.ಪಿ.ಶಿವಾನಂದ, ಪತ್ರಿಕಾ ಭವನ ಟ್ರಸ್ಟ್ ಅಧ್ಯಕ್ಷ ಕೆ. ಆನಂದ ಶೆಟ್ಟಿ, ಉದಯವಾಣಿ ಸಹಾಯಕ ಸಂಪಾದಕ ಮನೋಹರ ಪ್ರಸಾದ್ ಹಾಗೂ ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಸಿ.ಕೆ.ಮಹೇಂದ್ರ ಅವರಿಗೆ ವಿಶೇಷ ಅಭಿನಂದನೆ ನಡೆಯಲಿದೆ. ಮಾ.೮ರಂದು ಈ ಕಾರ್‍ಯಕ್ರಮ ನಡೆಯಲಿದೆ. 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.