HomePage_Banner
HomePage_Banner

ಕ್ಷೀರ ಕ್ರಾಂತಿಯ ಧಾರೆ ಎರೆದು ಮರೆಯಾದ ಮತ್ತೋರ್ವ ಹರಿಕಾರ

 

ಹೈನುಗಾರಿಕೆಯಲ್ಲಿ ಆಧುನೀಕರಣ, ಕೃಷಿಯಲ್ಲಿ ಸರಳೀಕರಣ ತಂದ ಸಾಧಕ

ಮಿಲ್ಕ್ ಮಾಸ್ಟರ್ ರಾಘವ ಗೌಡ ಪಲ್ಲತ್ತಡ್ಕ : ‘ಸುದ್ದಿ’ ಯ ನುಡಿನಮನ

✍  ದುರ್ಗಾಕುಮಾರ್ ನಾಯರ್‌ಕೆರೆ


ಭಾರತದ ಕ್ಷೀರ ಕ್ರಾಂತಿಯ ಹರಿಕಾರ ಎಂದರೆ ನಮಗೆ ಥಟ್ಟನೆ ನೆನಪಾಗುವುದು ವರ್ಗೀಸ್ ಕುರಿಯನ್ ಅವರನ್ನು. ಅಮೂಲ್ ಡೈರಿ ಸ್ಥಾಪನೆ ಮತ್ತು ಆಪರೇಷನ್ ಪ್ಲಡ್ ಹೆಸರಿನ ಕ್ಷೀರಕ್ರಾಂತಿಯ ಮೂಲಕ ಜಗದಗಲ ವ್ಯಾಪಿಸಿದ ಹೆಸರು ಅವರದು.

ಇಂಥದ್ದೇ ಮತ್ತೊಂದು ಮಗ್ಗುಲಿನ ಸಾಧನೆಯ ಮೂಲಕ ಹೈನುಗಾರಿಕೆಯನ್ನು ಇಂದಿಗೂ ಅನುಷ್ಠಾನ ಯೋಗ್ಯ ಕಸುಬಾಗಿ ಉಳಿಸಲು ಕಾರಣಕರ್ತರಾಗಿರುವವರು ಪಲ್ಲತ್ತಡ್ಕ ರಾಘವ ಗೌಡರು.

ಹಳ್ಳಿಯಲ್ಲಿದ್ದುಕೊಂಡೇ ತನ್ನ ಸಂಶೋಧನೆಯನ್ನು ವಿಶ್ವ ವ್ಯಾಪಿಯಾಗಿ ಹರಡಿದ, ಅದನ್ನು ಉದ್ಯಮವಾಗಿ ಬೆಳೆಸಿ ಹೈನುಗಾರಿಕೆಯಲ್ಲಿ ಆಧುನೀಕ ರಣಕ್ಕೂ, ಕೃಷಿಯಲ್ಲಿ ಸರಳೀಕರಣಕ್ಕೂ ಕಾರಣರಾದ ಇಂತಹ ಸಾಧಕ, ಮಿಲ್ಕ್ ಮಾಸ್ಟರ್ ಖ್ಯಾತಿಯ ರಾಘವ ಗೌಡರು ಅನಿರೀಕ್ಷಿತವಾಗಿ ನಮ್ಮನ್ನಗಲಿದ್ದಾರೆ.

ತನ್ನ ಸಂಶೋಧನೆಯ ಮೂಲಕ ಸುಳ್ಯಕ್ಕೆ ರಾಷ್ಟ್ರ ಹಾಗೂ ಅಂತರಾಷ್ಟ್ರಮಟ್ಟದಲ್ಲಿ ಹೆಸರು ಮತ್ತು ಹೆಮ್ಮೆ ತಂದುಕೊಟ್ಟ ಅಪರೂಪದ ಶೋಧಕ ಮತ್ತು ಸಾಧಕ ಎಲ್ಲ ಆವಿಷ್ಕಾರದ ಹಿರಿಮೆ ಗರಿಮೆಯನ್ನು ಪಕ್ಕಕ್ಕಿಟ್ಟು ಮತ್ತೆ ಬಾರದ ಕ್ಷೀರಸಾಗರದಾಚೆ ನಡೆದುಬಿಟ್ಟಿದ್ದಾರೆ.

ಈ ಹಳ್ಳಿ ಮೇಸ್ಟ್ರ ಬದುಕಿನ ಕಥೆಯೇ ರೋಚಕ. ಐವರ್ನಾಡಿನ ನಿವೃತ್ತ ಶಿಕ್ಷಕ ಪಲ್ಲತ್ತಡ್ಕ ದಿ. ಐತ್ತಪ್ಪ ಗೌಡ ಮತ್ತು ದಿ. ಶಿವಮ್ಮ ದಂಪತಿಯ ಐವರು ಪುತ್ರರಲ್ಲೊಬ್ಬರಾದ ರಾಘವ ಗೌಡರು ಕೂಡಾ ಶಿಕ್ಷಕರು. ವಿವಿಧ ಶಾಲೆಗಳಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿದರು. 18 ವರ್ಷ ಶಿಕ್ಷಕ ವೃತ್ತಿ ನಡೆಸಿದ ಇವರು ಸ್ವಯಂ ನಿವೃತ್ತಿ ಪಡೆದವರು. ಕಾರಣವೂ ಇದೆ.

ಶಿಕ್ಷಕರಾಗಿರುವಾಗಲೇ ಸಂಶೋ ಧನಾ ಮನಸ್ಸಿನ ವ್ಯಕ್ತಿತ್ವ ಅವರದು. ಪತಿ ಮತ್ತು ಪತ್ನಿ ಇಬ್ಬರೂ ಶಿಕ್ಷಕರಾಗಿರುವು ದರಿಂದ ಮನೆಯಲ್ಲಿ ಸಮಯದ ಹೊಂದಾಣಿಕೆ ಕಷ್ಟಸಾಧ್ಯವಾಗುತ್ತಿತ್ತು. ಕೃಷಿಯೂ ಹೈನುಗಾರಿಕೆಯೂ ಜೊತೆಗಿತ್ತು. ವೃತ್ತಿ ಒತ್ತಡದ ಮಧ್ಯೆ ಕೃಷಿ ಬದುಕು ಸವಾಲಿನ ಸಂಗತಿಯಾಗಿತ್ತು. ಹಾಲು ಕರೆದು ಶಾಲೆಗೆ ಹೋಗಬೇಕಾಗಿತ್ತು. ಹಾಲು ಕರೆಯುವ ಯಂತ್ರ ಖರೀದಿಸೋಣ ವೆಂದರೆ ಆಗಲೇ ಇದು ಲಕ್ಷ ರೂ. ಗಳ ಬಾಬತ್ತು.

“ಅವಶ್ಯಕತೆಯೇ ಅನ್ವೇಷಣೆಯ ತಾಯಿ” ಎಂಬಂತೆ ಆಗ ಅವರಿಗೆ ಹೊಳೆದದ್ದು ಕಡಿಮೆ ವೆಚ್ಚದಲ್ಲಿ ಹಾಲು ಕರೆಯುವ ಯಂತ್ರದ ಸಂಶೋಧನೆ. 2೦೦೦ ದಲ್ಲಿ ಆರಂಭಗೊಂಡ ಸಂಶೋಧನಾ ಕಾರ್ಯ ನಿರಂತರ 2 ವರ್ಷಗಳ ಕಾಲ ಮುಂದುವರಿಯಿತು. 2೦೦2 ಫೆ.2ರಂದು ಯಂತ್ರ ಮಾರುಕಟ್ಟೆಗೆ ಬಿಡುಗಡೆ ಗೊಂಡಿತು. ಗಟಾರ್ ಸ್ಟ್ರೇಯರ್ ಗಳ ಅಳವಡಿಕೆಯೊಂದಿಗೆ ಪ್ರಾರಂಭಿಸಿದ ಸಂಶೋಧನೆ 15 ಹಂತಗಳಲ್ಲಿ ಅಭಿವೃದ್ಧಿಗೊಂಡು ಮಿಲ್ಕ್ ಮಾಸ್ಟರ್ ಯಂತ್ರವೆಂದೇ ಪ್ರಸಿದ್ಧವಾಯಿತು. ಪೇಟೆಂಟ್‌ನ್ನೂ ಪಡೆಯಿತು.

ರಾಘವ ಗೌಡರು ಈ ಸಂಶೋಧನೆಯನ್ನು ಆರಂಭಿಸುವ ವೇಳೆ ಇಡೀ ಜಗತ್ತಿನಲ್ಲಿ ಬೆರಳೆಣಿಕೆಯ ಇಂತಹ ಯಂತ್ರಗಳಷ್ಟೇ ಸಂಶೋಧಿಸಲ್ಪಟ್ಟಿತ್ತು. ಆದರೆ ಈ ಭಾಗದಲ್ಲಿ ಇಂತಹ ಯಾವುದೇ ಯಂತ್ರಗಳಿರಲಿಲ್ಲ. ಹೀಗಾಗಿ ಈ ಸಂಗತಿ ನಾಗರಿಕ ಜಗತ್ತಿಗೆ ಬಹಿರಂಗವಾಗುತ್ತಿದ್ದಂತೆ, ಆಸಕ್ತ ಕೃಷಿಕರು ಮನೆಗೆ ಬಂದು ಸಾಲುಗಟ್ಟಿ ನಿಲ್ಲತೊಡಗಿದರು.

ಹಾಗೆ ಸಂಶೋಧಿಸಲ್ಪಟ್ಟ ಯಂತ್ರ ಹೈನುಗಾರರ ಬೇಡಿಕೆಗಳಿಗೆ ಅನುಗುಣವಾಗಿ ಮತ್ತೂ ಪರಿಷ್ಕರಣೆಗೊಂಡಿತು. ಈಗಲೂ ಇದಕ್ಕೆ ಮಾರುಕಟ್ಟೆಯಲ್ಲಿ ಸಾಕಷ್ಟು ಬೇಡಿಕೆ ಇದೆ. ಟ್ರಾಲಿ ಸಿಸ್ಟಂ, ಆಧುನಿಕ ಕೊಟ್ಟಿಗೆಗೆ ಬೇಕಾದ ಹಾಗೆ ಕೊಂಡೊಯ್ಯುವ ಯಂತ್ರ, ನೇತಾಡಿಸುವ ಯಂತ್ರ, ಏಕಕಾಲದಲ್ಲಿ ಎರಡು ಕಡೆ ಇಡುವ ಯಂತ್ರ, ಚಾನೆಲ್‌ಗಳಲ್ಲಿ ದೂಡಿ ಕೊಂಡೊಯ್ಯುವ ಯಂತ್ರವನ್ನೂ ಗೌಡರು ಆವಿಷ್ಕರಿಸಿದ್ದಾರೆ.

ಬೇಡಿಕೆ ಬರುತ್ತಿದ್ದಂತೆ ಇದನ್ನು ಉದ್ಯಮವಾಗಿ ಬೆಳೆಸುವ ಹಂಬಲ ದಿಂದ ಮನೆ ಪಕ್ಕದಲ್ಲಿಯೇ ಈ ಯಂತ್ರಗಳನ್ನು ತಯಾರಿಸುವ ಇಂಡಸ್ಟ್ರಿಯನ್ನು ಸ್ಥಾಪಿಸಿದರು. ಅದಿಂದು ಬೃಹದಾಕಾರವಾಗಿ ಬೆಳೆದಿದ್ದು ತನ್ನ ಸಂಶೋಧನಾ ಸೃಷ್ಠಿಗಳನ್ನಷ್ಟೇ ಅಲ್ಲದೆ ನೂರಾರು ಮಂದಿಗೆ ಅನ್ನ ನೀಡುವ ಸಂಸ್ಥೆಗಳಾಗಿದೆ. ಮುಂಬೈ, ದೆಹಲಿ, ತಮಿಳು ನಾಡು, ಗುಜರಾತ್ ಮೊದಲಾದ ಕಡೆಗಳಿಂದ ಕಚ್ಚಾವಸ್ತುಗಳನ್ನು ತರಿಸಿ ಯಂತ್ರಗಳ ತಯಾರಿಕೆ, ಫ್ಯಾಬ್ರಿಕೇಷನ್ ಕೆಲಸ ಗಳು ಇಲ್ಲಿಯೇ ನಡೆಯುತ್ತಿದೆ. ಇದಕ್ಕೆ ಬೇಕಾದ ಎಲ್ಲಾ ವ್ಯವಸ್ಥೆಗಳನ್ನೂ ಗೌಡರು ತರಿಸಿಕೊಂಡಿದ್ದಾರೆ. ಆಧುನಿಕವಾದ ಯಂತ್ರಗಳಿವೆ. ವೆಲ್ಡಿಂಗ್ , ಬೆಂಡಿಂಗ್, ಗ್ರೈಂಡಿಂಗ್ , ವಾಷಿಂಗ್ , ಸ್ಟೋರಿಂಗ್ ವಿಭಾಗ ಗಳೂ ಇಲ್ಲಿವೆ.

ಮಿಲ್ಕ್ ಮಾಸ್ಟರ್ ಆವಿಷ್ಕರಿಸಿದ ಸರಿ ಸುಮಾರು 12,೦೦೦ದಷ್ಟು ಯಂತ್ರಗಳು ಮಾರಾಟವಾಗಿದೆ. ದೇಶದೆಲ್ಲೆಡೆ ಹಾಗೂ ಅಂತರ್ ರಾಷ್ಟ್ರ ಮಟ್ಟದಲ್ಲೂ ಇದಕ್ಕೆ ಬೇಡಿಕೆ ಇದೆ. ಡೀಲರ್‌ಷಿಪ್ ಮೂಲಕ, ನೇರ ರೈತರ ಖರೀದಿ ಮೂಲಕ ಮಾರಾಟವಾಗುತ್ತಿದೆ. ಸೆಲ್ಕೋ ಸಂಸ್ಥೆಯೊಂದಿಗೆ ಒಪ್ಪಂದ ವೂ ನಡೆದಿದೆ. ಮೊದಲು ಶ್ರೀಲಂಕಾ, ನೇಪಾಳ, ಕೀನ್ಯಾ, ಭೂತಾನ್ ಮೊದಲಾದ ರಾಷ್ಟ್ರಗಳಿಗೂ, ರಫ್ತಾಗುತ್ತಿತ್ತು. ಆದರೆ ಸರ್ವಿಸ್ ಕಾರಣದಿಂದ ಈಗ ಇದು ನಡೆಯುತ್ತಿಲ್ಲ. ರಾಘವ ಗೌಡರು ಯಂತ್ರದ ಮಾರಾಟದ ಗುರಿಯ ನ್ನಷ್ಟೇ ಇಟ್ಟುಕೊಳ್ಳದೆ ಪೂರ್ಣ ಜವಾಬ್ದಾರಿಯನ್ನೂ ಹೊರುತ್ತಿದ್ದರು. ಸರ್ವಿಸಿಂಗ್ ತಂತ್ರಜ್ಞರನ್ನು ಕಳುಹಿಸಿ ಡೆಮೋ ನೀಡುವ ವ್ಯವಸ್ಥೆಯನ್ನೂ ಮಾಡಿಕೊಂಡಿದ್ದರು.

ರಾಘವ ಗೌಡರ ಆಸಕ್ತಿ ಹಾಲು ಕರೆಯುವ ಯಂತ್ರಗಳಿಗಷ್ಟೇ ಸೀಮಿತವಾಗಿರದೆ ಇತರ ಅನೇಕ ಸಂಶೋಧನೆಗಳನ್ನೂ ನಡೆಸಿದ್ದರಲ್ಲದೆ ಇತರರು ತಯಾರಿಸಿದ ಯಂತ್ರಗಳನ್ನು ಡೀಲರ್‌ಷಿಪ್ ಆಧಾರದಲ್ಲಿ ಇಲ್ಲಿ ಮಾರಾಟವನ್ನೂ ಮಾಡುತ್ತಿದ್ದರು. ಹಟ್ಟಿಗೆ ಬೇಕಾದ ಮ್ಯಾಟ್, ಮೇವು ಕತ್ತರಿಸುವ ಯಂತ್ರ, ಅಡಿಕೆ ಬೇರ್ಪಡಿಸುವ ಸಾಧನ, ಹಟ್ಟಿ ತೊಳೆಯುವ ಯಂತ್ರ ಸಂಶೋಧಿಸಿದ್ದಾರೆ. ಸ್ಟೀಲ್ ಫ್ಯಾಬ್ರಿಕೇಶನ್ , ಕೈಗಾಡಿಗಳು , ಸ್ಟೀಲ್ ರೀಲಿಂಗ್ಸ್ , ಕಿಟಕಿಬಾಗಿಲುಗಳು, ಗೇಟ್‌ಗಳು, ವಾಹನಗಳಿಗೆ ಸ್ಟೀಲ್ ಫ್ಯಾಬ್ರಿಕೇಶನ್ ಹಸುಗಳಿಗೆ ರಬ್ಬರ್ ನೆಲಹಾಸು ಇತ್ಯಾದಿಗಳ ಉತ್ಪಾದನೆ ಹಾಗೂ ಮಾರಾಟ ನಡೆಸುತ್ತಿದ್ದು, ಇದಕ್ಕಾಗಿಯೇ ಇತ್ತೀಚೆಗಷ್ಟೆ ಸುಸಜ್ಜಿತ ಮಳಿಗೆಯನ್ನೂ ತೆರೆದಿದ್ದರು.

ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದ ರಾಘವ ಗೌಡರು ಅತ್ಯುತ್ತಮ ಕೃಷಿಕರು ಕೂಡಾ. ಅಡಿಕೆ ತೋಟ, ತೆಂಗಿನ ತೋಟ ಅಲ್ಲದೆ ಹೈನುಗಾರಿಕೆಯನ್ನೂ ಕೂಡಾ ನಡೆಸುತ್ತಿದ್ದರು. ಇವರ ಆಧುನಿಕ ಹಟ್ಟಿಯಲ್ಲಿ ಹತ್ತಾರು ದನಗಳಿವೆ. ಎರೆಗೊಬ್ಬರ, ಅಜೋಲಾ ಬಳಸುತ್ತಿದ್ದರು. ಸ್ವತಃ ರಾಘವ ಗೌಡರೇ ದಿನಂಪ್ರತಿ ಹೈನುಗಾರಿಕೆಯಲ್ಲಿ ಹಾಗೂ ತೋಟದ ಕೆಲಸದಲ್ಲಿ ಚಟುವಟಿಕೆಯಿಂದಿರುತ್ತಿದ್ದರು. ಅವರು ನಿಧನರಾಗುವ ಕೆಲವೇ ಗಂಟೆಗಳ ಹಿಂದಿನವರೆಗೂ ಈ ಮಟ್ಟಿಗಿನ ಕ್ರಿಯಾಶೀಲತೆ, ಜೀವನೋತ್ಸಾಹ ಅವರಲ್ಲಿತ್ತು.

ರಾಘವ ಗೌಡರ ಯಶಸ್ಸಿನ ಹಿಂದೆ ಇವರ ಕುಟುಂಬದ ಪಾತ್ರ ದೊಡ್ಡದು. ಪತ್ನಿ, ಪುತ್ರಿಯರು, ಅಳಿಯಂದಿರೆಲ್ಲಾ ಪೂರ್ಣ ಈ ಉದ್ಯಮದಲ್ಲಿ ತೊಡಗಿಸಿಕೊಳ್ಳುತ್ತಿದ್ದ ಕಾರಣ ದೊಡ್ಡ ಪ್ರಮಾಣದ ಯಶಸ್ಸು ಲಭಿಸಿತ್ತು. ಹಾಗಾಗಿಯೇ ಅವರ ಸಿದ್ಧಿಯೂ, ಪ್ರಸಿದ್ಧಿಯೂ ದೊಡ್ಡದಾಗಿತ್ತು.

ಗೌಡರ ಸಂಶೋಧನಾ ಸಾಧನೆಗಾಗಿ 2 ರಾಷ್ಟ್ರ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿಗಳನ್ನು ಪಡೆದಿದ್ದಾರೆ. 2005ರಲ್ಲಿ ರಾಷ್ಟ್ರಪತಿ ಅಬ್ದುಲ್ ಕಲಾಂರವರಿಂದ ರಾಷ್ಟ್ರಪ್ರಶಸ್ತಿ ಪಡೆದಿದ್ದರು. 2೦11 ರಲ್ಲಿ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರಿಂದ ಪ್ರಶಸ್ತಿ ಸ್ವೀಕರಿಸಿದ್ದಾರೆ. ಜಿಲ್ಲಾಮಟ್ಟದಲ್ಲೂ ಹಲವು ಪ್ರಶಸ್ತಿ ಪುರಸ್ಕಾರಗಲೂ ಸಂದಿವೆ. ಇತ್ತೀಚೆಗಷ್ಟೇ ಕೆ.ವಿ.ಜಿ.ಹಬ್ಬದಲ್ಲೂ ಪುರಸ್ಕೃತಗೊಂಡಿದ್ದರು.

ರಾಘವ ಗೌಡರ ಪತ್ನಿ ಶ್ರೀಮತಿ ಲೀಲಾವತಿಯವರು ಕೂಡಾ ಶಿಕ್ಷಕರಾಗಿದ್ದು, ೪ ವರ್ಷದ ಹಿಂದಷ್ಟೇ ಸ್ವಯಂ ನಿವೃತ್ತಿ ಪಡೆದಿದ್ದಾರೆ. ಹಿರಿಯ ಪುತ್ರಿ ಶ್ರೀಮತಿ ಮೈನಾ, ಅಳಿಯ ಕುಸುಮಾಧರ ಕೇಪಳಕಜೆ ಪ್ರಸ್ತುತ ಕರಿಕ್ಕಳ ಬಳಿ ವಾಸ್ತವ್ಯ ನಡೆಸುತ್ತಿದ್ದಾರೆ. ಕಿರಿಯ ಪುತ್ರಿ ಶ್ರೀಮತಿ ಮಧು, ಅಳಿಯ ಯತೀಶ್ ಪಾಲೋಳಿ ತಂದೆ – ತಾಯಿಯ ಜತೆಗೇ ಇರುವವರು.

ಸದ್ಯ ರಾಘವ ಗೌಡರ ಉದ್ಯಮಕ್ಕಾಗಿ ೨ ಸಂಸ್ಥೆಗಳಿತ್ತು. ಕ್ಷೀರಾ ಎಂಟರ್‌ಪ್ರೈಸಸ್ ಮೂಲಕ ಹಾಲು ಕರೆ ಯುವ ಯಂತ್ರಗಳನ್ನು ಮಾರಾಟ ಮಾಡಲಾಗುತ್ತಿತ್ತು. ಕ್ಷೀರಾ ಇಂಜಿನಿಯರಿಂಗ್ ವರ್ಕ್ಸ್ ಮೂಲಕ ಇನ್ನಿತರ ಯಂತ್ರಗಳನ್ನು ಮಾರಾ ಟ ಮಾಡಲಾಗುತ್ತದೆ. ಸಂಸ್ಥೆಗೆ ಬೆಂಗಳೂರಿನ ಅತ್ತಿಬೆಲೆ, ಮೈಸೂರಿನ ವಿಜಯನಗರ, ಹಾಸನದ ಜಯನಗರಗಳಲ್ಲಿ ಶಾಖೆಗಳಿತ್ತು. ಈ ಉದ್ಯಮಗಳಿಗೆಲ್ಲ ಅವರೊಂದಿಗೆ ಪುತ್ರಿಯರು ಮತ್ತು ಅಳಿಯಂದಿರು ಸಾಥ್ ನೀಡುತ್ತಿದ್ದರು.

ತನ್ನೂರಿನ ಪರಿಸರದಲ್ಲಿ ಕೊಡುಗೈದಾನಿಯಾಗಿಯೂ, ಸಾಮಾಜಿಕ ಧುರೀಣರಾಗಿಯೂ ರಾಘವ ಗೌಡರು ಹೆಸರು ಗಳಿಸಿದ್ದರು. ಪರಿಸರದ ಶಾಲೆಗಳ ಅಭಿವೃದ್ಧಿಗೂ ಕಾರಣಕರ್ತರಾಗಿದ್ದರು. ರಾಘವ ಗೌಡರು ಶಿಕ್ಷಕ ವೃತ್ತಿಗೆ ವಿದಾಯ ಹೇಳಿ ಶಾಲಾ ಚಟುವಟಿಕೆಗಳಿಂದ ದೂರ ಉಳಿಯಬೇಕಾಗಿ ಬಂದರೂ ಈಗ ಅವರ ಪುತ್ರಿ ಶ್ರೀಮತಿ ಮಧು ಯತೀಶ್ ಅಲೆಕ್ಕಾಡಿ ಶಾಲಾ ಎಸ್‌ಡಿಎಂಸಿ ಅಧ್ಯಕ್ಷೆಯಾಗಿ ಎಲ್ಲರ ನೆರವಿನೊಂದಿಗೆ ಶಾಲೆಯನ್ನು ಮಾದರಿಯಾಗಿ ಬೆಳೆಸುವ ಕಾರ್ಯವನ್ನೂ ಇಲ್ಲಿ ಉಲ್ಲೇಖಿಸಬೇಕು.

ಆಧುನಿಕ ಕಾಲದಲ್ಲಿ ಕೃಷಿ ಬದುಕು ಕೂಡಾ ಆಧುನಿಕರಣಗೊಳ್ಳುತ್ತಿದೆ. ಇದರ ಯಶಸ್ವಿ ಅನುಷ್ಠಾನಕ್ಕೆ ಸಂಶೋಧನಾ ಸಾಧ್ಯತೆಗಳು ಅನಿವಾರ್ಯವಾಗಿತ್ತು. ಇದನ್ನು ಮಾಡಬೇಕಿದ್ದರೆ ಕ್ರಿಯಾಶಕ್ತಿ ಮತ್ತು ದೂರದೃಷ್ಟಿ ಬೇಕಿತ್ತು. ಇವೆರಡೂ ಸಂಕಲ್ಪ ಶಕ್ತಿಯ ಮೂಲಕ ಸಂಶೋಧನೆ ಸಾಕಾರಗೊಳಿಸಿದ ರಾಘವ ಗೌಡರು ನಮ್ಮನ್ನಗಲಿದ್ದಾರೆ. ತನ್ನ ಸಂಶೋಧನಾ ಸೃಷ್ಟಿಗಳ ಮೂಲಕ ಸಮಾಜದಲ್ಲಿ ಸದಾ ನೆನಪಿನಲ್ಲುಳಿಯುತ್ತಾರೆ.

Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.