ಕೊರೋನವನ್ನು ದಮನಿಸುವ ಮಹಾಯಜ್ಞದಲ್ಲಿ ಸಕ್ರಿಯರಾಗಬೇಕಿದೆ: ಡಾ. ಸುನಯನ. ಕೆ.

Advt_Headding_Middle
Advt_Headding_Middle

ಪ್ರಸ್ತುತ ಭೂಮಂಡಲದ ಮೂಲೆ ಮೂಲೆಯನ್ನೂ ನಡುಗಿಸಿರುವ ಘೋರ ಭಯೋತ್ಪಾದಕ ಯಃಕಶ್ಚಿತ್ ಕಣ್ಣಿಗೆ ಕಾಣದ ಒಂದು ವಿಧದ ವೈರಾಣು. ಕಣ್ಣಿಗೆ ಕಾಣದಿದ್ದರೇನಂತೆ, ಅದು ಮಾಡಿದ, ಮಾಡುತ್ತಿರುವ ಅವಾಂತರ ಸಾಧಾರಣದ್ದೇನು? ವರ್ಷಗಳಿಂದ ಮಾನವ ಪ್ರಕೃತಿಯ ಮೇಲೆ ಎಸಗುತ್ತಿರುವ ಅತ್ಯಾಚಾರಕ್ಕೆ ಒಂದು ಅಲ್ಪವಿರಾಮ ಕೊಡಲು ಮಾನವನಿಂದಲೇ ಸೃಜಿಸಲ್ಪಟ್ಟ ವೈರಾಣುವಿನ ಮೂಲಕ ಪ್ರಕೃತಿ ಪಣತೊಟ್ಟು ನಿಂತಹಾಗಿದೆ, ಮಾಡಿದ್ದುಣ್ಣೋ ಮಹರಾಯ ಎಂಬಂತೆ!
ಓರ್ವ ಯೋಗ ಪ್ರಕೃತಿಚಿಕಿತ್ಸಾ ವೈದ್ಯಳಾಗಿ ನಾನು ಮುಕ್ತವಾಗಿ ಹೇಳಬಲ್ಲೆ, ಯಾವ ರೀತಿಯಾಗಿ ನಿಸರ್ಗ ಸಮತೋಲನ ಕಳಕೊಂಡಿದೆಯೋ ಅದಕ್ಕೆ ಪೂರಕವಾಗಿ ಪ್ರತಿ ಮನುಷ್ಯನ ದೇಹ ಸಮತೋಲನ ಕಳೆದುಕೊಳ್ಳುತ್ತಿದೆ, ಏಕೆಂದರೆ ಪ್ರಕೃತಿಯ ಸೂಕ್ಷ್ಮ ರೂಪವೇ ಈ ದೇಹ. ಪಂಚಭೂತಗಳಿಂದಲೇ ರಚಿಸಲ್ಪಟ್ಟಿದೆ. ಮಾನವ ದೇಹದಲ್ಲಿ ರೋಗನಿರೋಧಕ ಶಕ್ತಿ ಕುಗ್ಗುತ್ತಿದೆ. ರೋಗದ ಮೂಲವನ್ನು ಅರಿಯುವ ವ್ಯವಧಾನ ಮಾನವನಿಗೆಲ್ಲಿ? ಬದಲಾಗಿ ರೋಗದ ಸ್ವರೂಪವನ್ನು ಭಗ್ನಗೊಳಿಸಲು ನಾಲ್ಕು ರಾಸಾಯನಿಕ ಮಾತ್ರೆಗಳನ್ನು ನುಂಗಿದ, ಮುಗಿಯಿತು. ಆದರೆ ಒಂದಲ್ಲ ಒಂದು ದಿನ ಇನ್ನೂ ಘೋರ ರೂಪದಲ್ಲಿ ಅನಾರೋಗ್ಯ ಹೊರಬರುವುದು ಖಚಿತವೇ. ಕೊರೋನ ಸೋಂಕಿತರ ಸಂಖ್ಯೆ ಕ್ಷಣಕ್ಷಣಕ್ಕೂ ಏರುತ್ತಿದೆ, ವಿಶ್ವಕ್ಕೆ ವಿಶ್ವವೇ ಸ್ವಯಂದಿಗ್ಬಂಧನ ಮಾಡಿಕೊಳ್ಳುವ ಅನಿವಾರ್ಯ ಪರಿಸ್ಥಿತಿ ಬಂದೊದಗಿದೆ ಎಂದರೆ ಇದರ ಅರ್ಥವೇನು? ಯಾವುದೇ ರೋಗಾಣುವನ್ನು ಅತಿ ಸುಲಭವಾಗಿ ದೇಹದೊಳಕ್ಕೆ ಆಹ್ವಾನಿಸಿಕೊಳ್ಳುವಷ್ಟರ ಮಟ್ಟಿಗೆ ಮಾನವನ ನಿರೋಧಕ ಶಕ್ತಿ ಕುಗ್ಗಿದೆ ಎಂದಲ್ಲವೇ?
ವಿಧಿಯಿಲ್ಲ. ಪ್ರಕೃತಿಗೆ ಶರಣಾಗುವ ಕಾಲ ಇನ್ನು ದೂರವಿಲ್ಲ. ೨೧ ದಿನಗಳ ಈ ದಿಗ್ಬಂಧನವನ್ನು ಶಿಕ್ಷೆ ಎಂದೆನಿಸದೇ, ಸ್ವಯಂ ಅವಲೋಕನಕ್ಕೆ ದೊರಕಿದ ಅವಕಾಶವೆಂದು ಪರಿಗಣಿಸಿ ಕಾರ್ಯೋನ್ಮುಖರಾಗಬೇಕಿದೆ. ಮನೆಯ ಸದಸ್ಯರ ಜೊತೆಗಿದ್ದು ಆರೋಗ್ಯಕರ ಮನೆಯೂಟ ಸವಿದು, ಪರಸ್ಪರ ಪ್ರೀತಿಯನ್ನು ಹಂಚಿಕೊಂಡು ಆ ಮೂಲಕ ತನ್ನೊಳಗೆ ಧನಾತ್ಮಕತೆಯನ್ನು ಹೆಚ್ಚಿಸಿಕೊಳ್ಳಬೇಕಿದೆ. ನಿಯಮಿತವಾದ ಯೋಗಾಭ್ಯಾಸ, ಆರೋಗ್ಯಕರ ಚಿಂತನೆಗಳಿಂದ ದೇಹ, ಮನಸ್ಸು ಗಳನ್ನು ಸದೃಢಗೊಳಿಸಬೇಕಿದೆ. ಕೊರೋನ ಸೋಂಕಿಗೆ ಭಯಪಡದೆ, ಹಾಗೆಂದು ದಿವ್ಯ ನಿರ್ಲಕ್ಷ್ಯವನ್ನೂ ತಾಳದೆ ಸಾಧನೆ ಮಾಡಬೇಕಿದೆ. ಪೋಲಿಯೋ, ಸಿಡುಬುಗಳಂತಹ ಮಾರಕ ರೋಗಗಳನ್ನು ಯಶಸ್ವಿಯಾಗಿ ಒದ್ದೋಡಿಸಿರುವ ನಮ್ಮ ಭಾರತಕ್ಕೆ ಕೊರೋನವನ್ನು ತಡೆಯುವುದು ಅಸಾಧ್ಯವೇನಲ್ಲ. ಇದನ್ನು ಸವಾಲಾಗಿ ಪರಿಗಣಿಸಿ ಕೊರೋನವನ್ನು ದಮನಿಸುವ ಮಹಾಯಜ್ಞದಲ್ಲಿ ಸಕ್ರಿಯರಾಗಬೇಕಿದೆ.

ಡಾ. ಸುನಯನ. ಕೆ.
ಯೋಗ, ಪ್ರಕೃತಿ ಚಿಕಿತ್ಸಾ ತಜ್ಞೆ.
ಯೋಗ, ನೇಚರ್ ಕ್ಯೂರ್ ಕ್ಲಿನಿಕ್
ವೈಟ್ ಫೀಲ್ಡ್ ಬೆಂಗಳೂರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.