Breaking News

ಕೊರೊನಾ ಲಾಕ್ ಡೌನ್ ಹಿನ್ನಲೆ: ನಗರದ ರಸ್ತೆ ಬಂದ್ : ಎ.ಸಿ. ಸಭೆಯಲ್ಲಿ ನ.ಪಂ.ಸದಸ್ಯರ ಅಸಮಾಧಾನ

Advt_Headding_Middle
Advt_Headding_Middle

 

ನಿಯಮ ಪಾಲನೆ ಮಾಡುತ್ತೇವೆ – ಯಾರಿಗೂ ತೊಂದರೆಯಾಗಿಲ್ಲ : ಎಸ್.ಐ. ಸಮರ್ಥನೆ


ಲಾಕ್ ಡೌನ್ ಹಿನ್ನಲೆಯಲ್ಲಿ ಸುಳ್ಯದ ನಗರ ಪಂಚಾಯತ್ ಎದುರಿನ ರಸ್ತೆ ಸೇರಿದಂತೆ ಗಲ್ಲಿ, ಗಲ್ಲಿಗಳನ್ನು ಬಂದ್ ಮಾಡಿರುವ ಪೋಲೀಸರ ಕ್ರಮದ ಕುರಿತು ಪುತ್ತೂರು ಸಹಾಯಕ ಕಮಿಷನರ್ ನೇತೃತ್ವದಲ್ಲಿ ಇಂದು ನ.ಪಂ. ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ನ.ಪಂ. ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದ ಹಾಗೂ ಸಭೆಗೆ ಬಂದ ಎಸ್.ಐ.ಯವರು ತಮ್ಮ ಕ್ರಮವನ್ನು ಸಮರ್ಥಿಸಿದರಲ್ಲದೆ, ಅದಕ್ಕೆ ವಿವರವನ್ನು ನೀಡಿದ ಪ್ರಸಂಗ ನಡೆಯಿತು.

ಸಂಜೆ 5.45 ಕ್ಕೆ ಎ.ಸಿ. ಡಾ.ಯತೀಶ್ ಉಳ್ಳಾಲ್ ರ ಅಧ್ಯಕ್ಷ ತೆಯಲ್ಲಿ‌ ಸಭೆ ಆರಂಭಗೊಂಡಿತು.
ಈ ವೇಳೆ ನ.ಪಂ. ಸದಸ್ಯ ಎಂ.ವೆಂಕಪ್ಪ ಗೌಡರು, “ಸುಳ್ಯ ಪೇಟೆ ಸಂಪರ್ಕಿಸುವ ಎಲ್ಲ ಮುಖ್ಯ ರಸ್ತೆಗಳನ್ನು ಬಂದ್ ಮಾಡಲಾಗಿದೆ. ಇದರಿಂದ ಒಂದಷ್ಟು ಜನರಿಗೆ ಸಮಸ್ಯೆ ಆಗಿದೆ. ಜನರು ನಮಗೆ ಕರೆ ಮಾಡಿ ಸಮಸ್ಯೆ ಹೇಳುತ್ತಿದ್ದಾರೆ. ಪೋಲೀಸರನ್ನು ಕೇಳಿದಾಗ ನಿಯಮ ಪಾಲನೆಯ ಮಾತನಾಡುತ್ತಾರೆ. ಅದನ್ನು ಪೋಲೀಸರು ಮಾಡಲಿ ಅದಕ್ಕೆ ಆಕ್ಷೇಪವಿಲ್ಲ. ಆದರೆ ಯಾರಿಗೂ ಸಮಸ್ಯೆ ಆಗಬಾರದು ಎಂದು ಹೇಳಿದರು. ಅವರ ಮಾತಿಗೆ ಪೂರಕವಾಗಿ ಮಾತನಾಡಿದ ವಿನಯ ಕುಮಾರ್ ಕಂದಡ್ಕ “ಪೋಲೀಸರು ತಡೆದಾಗ ಜನರು ನಮಗೆ ಹೇಳುತ್ತಾರೆ. ನಾವು ಕೇಳಿದಾಗ ನಿಮ್ಮ ಆಡಳಿತ ಡೈರೆಕ್ಷನ್ ನೀಡಲಿ ಅದೇ ರೀತಿ ಮಾಡುತ್ತೇವೆ ಎಂದು ಹೇಳುತ್ತಾರೆ. ಆದ್ದರಿಂದ ಆಡಳಿತದ ಕಡೆಯಿಂದ ಪೋಲೀಸರಿಗೆ ಡೈರೆಕ್ಷನ್ ಕೊಡಬೇಕಾಗಿದೆ ಎಂದು ಹೇಳಿದರು.

“ರಥಬೀದಿಯಲ್ಲಿ ವಾಹನ ತಡೆಯುತ್ತಾರೆ. ಒಬ್ಬ ವ್ಯಕ್ತಿ ಗಾಂಧಿನಗರದಿಂದ ಅಕ್ಕಿ ಹೊತ್ತು ತರಲು ಕಷ್ಟವಾಗುತ್ತದೆ. ಈ ರೀತಿ ಹಲವರಿಗೆ ಸಮಸ್ಯೆ ಆಗಿದೆ ಎಂದು ಸದಸ್ಯ ಡೇವಿಡ್ ಧೀರ ಕ್ರಾಸ್ತ ದೂರಿಕೊಂಡರು. ಹೀಗೆ ಸದಸ್ಯರು ಅಸಮಾಧಾನ ವ್ಯಕ್ತ ಪಡಿಸುತ್ತಿದ್ದಂತೆ “ಪರ್ಯಾಯ ರಸ್ತೆ ಇಲ್ಲವೇ” ಎಂದು ಎ.ಸಿ.ಯವರು ಕೇಳಿದಾಗ, ‘ಇದೆ ಸುತ್ತು ಬಳಸಿ ಹೋಗಬೇಕು” ಎಂದು ಸದಸ್ಯರು ಹೇಳಿದರು. “ಎಸ್. ಐ. ಹರೀಶ್ ರ ಬಗ್ಗೆ ನನಗೆ ಗೊತ್ತಿದೆ. ಅವರು ಉತ್ತಮ ಕೆಲಸಗಾರ ಅವರನ್ನೆ ಸಭೆಗೆ ಬರ ಹೇಳೊಣ” ಎಂದು ಎ.ಸಿ.ಯವರು ಹೇಳಿದರು.

ಕೆಲ ಸಮಯದಲ್ಲಿ ಎಸ್.ಐ.ಹರೀಶ್ ಸಭೆಗೆ ಬಂದರು. ಆಗ ಎ.ಸಿ.ಯವರು ರಸ್ತೆ ತಡೆದ ವಿಚಾರ ಕೇಳಿದಾಗ “ನಮಗೆ ಇರುವ ಆದೇಶದಂತೆ ಕೆಲಸ ಮಾಡುತ್ತಿದ್ದೇವೆ. ಅಡಿಕೆ, ಕೊಕ್ಕೊ ತರುವ ಕೃಷಿಕರಿಗೆ, ಡಯಾಲಿಸಿಸ್ ಮಾಡಿಸಲು, ಇನ್ನಿತರ ವಿಚಾರಕ್ಕೆ ಆಸ್ಪತ್ರೆಗೆ ಬರುವವರಿಗೆ ಯಾವುದೇ ಸಮಸ್ಯೆ ಆಗಿಲ್ಲ. ಆದರೆ ಗ್ರಾಮಾಂತರ ಪ್ರದೇಶಗಳಿಂದ ಬರುವವರು ಪೇಟೆಯ ಒಳಗೆ ನಡೆದೇ ಬರಬೇಕು. ಅಗತ್ಯ ವಸ್ತು ಖರೀದಿ ಗೆ ಬರುವವರಿಗೆ ವಿನಾಯ್ತಿ ನೀಡಿದ್ದೇವೆ. ಹೆಚ್ಚು ವಾಹನ ಓಡಾಡುವ ಪಂಚಾಯತ್ ಎದುರಿನ ರಸ್ತೆ ಬಂದ್ ಮಾಡಿ, ಪರ್ಯಾಯ ರಸ್ತೆ ತೋರಿಸಲಾಗುತ್ತಿದೆ. ಈಗಾಗಲೇ ಈ ನಿಯಮಕ್ಕೆ ಜನರು ಅಡ್ಜೆಸ್ಟ್ ಆಗಿದ್ದು ಒಂದೆರಡು ದಿನದಲ್ಲಿ ಸರಿಯಾಗುತ್ತದೆ ಎಂದು ಎಸ್.ಐ. ಹೇಳಿದರು.

ಸಾಮಾಜಿಕ ಅಂತರ ಅಂಗಡಿಗಳ ಎದುರು ಕಾಣುತ್ತಿಲ್ಲ ಎಂದು ವೆಂಕಪ್ಪ ಗೌಡ, ವಿನಯ್ ಕಂದಡ್ಕ ಹೇಳಿದಾಗ, ” ನಾವು ಹೇಳುತ್ತಿದ್ದೇವೆ. ಆದರೂ ಕೆಲವೊಮ್ಮೆ ಗುಂಪು ಸೇರುತ್ತಾರೆ. ಈಗ ಬ್ಯಾಂಕ್ ಗಳಿಂದ ಹಣ ತೆಗೆಯಲೆಂದೇ ಕ್ಯೂ ಇರುತ್ತದೆ. ನಮ್ಮಲ್ಲಿ ಇರುವ ಸೀಮಿತ ಸಿಬ್ಬಂದಿಗಳ ಜತೆ ಕೆಲಸ ನಿರ್ವಹಿಸುತ್ತಿದ್ದೇವೆ” ಎಂದು ಎಸ್.ಐ. ಹೇಳಿದರು.

ಈ ಸಂದರ್ಭದಲ್ಲಿ ದಲ್ಲಿ ನಾವೆಲ್ಲರೂ ಸ್ವಲ್ಪ ಸಹಕಾರ ನೀಡೋಣ. ಆದರೆ ಅಗತ್ಯ ಕ್ಕೆ ಸಮಸ್ಯೆ ಯಾಗದಂತೆ ಎಲ್ಲರೂ ನೋಡಿಕೊಳ್ಳೊಣ ಎಂದು ಎ.ಸಿ.ಯವರು ಸಭೆಯಲ್ಲಿ ಹೇಳಿದರು
ತಹಶೀಲ್ದಾರ್ ಅನಂತಶಂಕರ್, ಮುಖ್ಯಾಧಿಕಾರಿ ಮತ್ತಡಿ ಇದ್ದರು.

ನ.ಪಂ.ಸದಸ್ಯರುಗಳಾದ ಬಾಲಕೃಷ್ಣ ಭಟ್, ಸುಧಾಕರ ಕೆ, ಬಾಲಕೃಷ್ಣ ರೈ, ರಿಯಾಜ್ ಕಟ್ಟೆಕಾರ್, ಉಮ್ಮರ್ ಕೆ.ಎಸ್, ಬುದ್ದ ನಾಯ್ಕ, ಶರೀಫ್ ಕಂಠಿ, ಪ್ರವೀತ ಪ್ರಶಾಂತ್, ವಾಣಿ ಜಟ್ಟಿಪಳ್ಳ, ಶಶಿಕಲ ನೀರಬಿದಿರೆ, ಶೀಲಾ ಕುರುಂಜಿ, ಕಿಶೋರಿ ಶೇಟ್, ಸರೋಜಿನಿ ಪೆಲತಡ್ಕ, ಶಿಲ್ಪ ಸುದೇವ್, ಸುಶೀಲ ಕಲ್ಲುಮುಟ್ಲು ಇದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.