ಬೆಳ್ಳಾರೆ ಪೊಲೀಸರ ಮೇಲೆ ಸಾವಿರ ರೂ. ಮತ್ತು ಊರ ಕೋಳಿ ಕೇಳಿದ ಆರೋಪ

Advt_Headding_Middle
Advt_Headding_Middle

 

ಪೊಲೀಸರಿಂದ ನಿರಾಕರಣೆ – ಎಸ್.ಪಿ. ತನಿಖೆ : ಕ್ಲೀನ್‌ಚಿಟ್

ಲಾಕ್ ಡೌನ್ ಸಮಯದಲ್ಲಿ ಮದ್ದಿಗೆ ಬಂದ ವ್ಯಕ್ತಿಯ ವಾಹನಕ್ಕೆ ಬೆಳ್ಳಾರೆ ಪೊಲೀಸರು ದಂಡ ಹಾಕಿದ್ದಲ್ಲದೆ ಊರ ಕೋಳಿ ಕೇಳಿದ್ದಾರೆ ಖಾಸಗಿ ವೆಬ್‌ಸೈಟ್ ವಾಹಿನಿಯಲ್ಲಿ ವರದಿ ಪ್ರಸಾರವಾದ ಹಾಗೂ ಈ ವರದಿಯನ್ನು ಗಮನಿಸಿದ ಎಸ್.ಪಿ.ಯವರು ಸುಳ್ಯ ಸರ್ಕಲ್ ಇನ್ಸ್ ಪೆಕ್ಟರ್ ಮೂಲಕ ತನಿಖೆ ನಡೆಸಿ ಪೋಲೀಸರಿಗೆ ಕ್ಲೀನ್‌ಚಿಟ್ ನೀಡಿದ ಘಟನೆ ವರದಿಯಾಗಿದೆ.

ಘಟನೆ ವಿವರ : ಮುರುಳ್ಯ ಗ್ರಾಮದ ಕಾಪುತ್ತಡ್ಕದ ಸುಂದರ ಮತ್ತು ಅವರ ಅಳಿಯ ಪ್ರದೀಪ್ ಎಂಬವರು ತಮ್ಮ ಓಮ್ನಿಯಲ್ಲಿ ಎ.೧೭ ರಂದು ಬೆಳ್ಳಾರೆಗೆ ಬಂದಿದ್ದರು.

ಅವರು ಹಿಂತಿರುಗುವಾಗ ಬೆಳ್ಳಾರೆ ಎಸ್.ಐ. ಆಂಜನೇಯ ರೆಡ್ಡಿ ಮತ್ತು ಅಂದು ಚಾಲಕರಾಗಿದ್ದ ಹೆಡ್‌ಕಾನ್‌ಸ್ಟೇಬಲ್ ಬಾಲಕೃಷ್ಣರು ಅವರನ್ನು ನಿಲ್ಲಿಸಿ ಲಾಕ್ ಡೌನ್ ಇರುವಾಗ ರಸ್ತೆಗೆ ಬಂದುದೇಕೆಂದು ಪ್ರಶ್ನಿಸಿ, ಅವರ ಡ್ರೈವಿಂಗ್ ಲೈಸೆನ್ಸ್ ತೆಗೆದುಕೊಂಡು, ನಾಳೆ ಠಾಣೆಗೆ ಬಂದು ೧೦೦೦ ರೂ. ದಂಡ ಕಟ್ಟುವಂತೆ ಹೇಳಿದರೆನ್ನಲಾಗಿದೆ.

`ತನಗೆ ಉರಿಮೂತ್ರದ ಸಮಸ್ಯೆ ಇದ್ದುದರಿಂದ ಬೆಳ್ಳಾರೆಗೆ ಬಂದು ಧನ್ವಂತರಿ ಮೆಡಿಕಲ್ ನಲ್ಲಿ ಔಷಧಿ ಖರೀದಿಸಿ ಹಿಂತಿರುಗುತ್ತಿರುವುದಾಗಿ ಹೇಳಿದರೂ ಕೇಳದೆ ಪೋಲೀಸರು ದಾಖಲೆ ವಶಪಡಿಸಿಕೊಂಡರು’ ಎಂದು ಸುಂದರರು ಹೇಳುತ್ತಾರೆ.
`ತಾವು ಪೆಟ್ರೋಲ್ ಹಾಕುವುದಕ್ಕಾಗಿ ಬಂಕ್‌ಗೆ ಹೋಗುವುದಾಗಿ ಸುಂದರ ಹೇಳಿದರು. ಅಸೌಖ್ಯ ಮತ್ತು ಮದ್ದಿನ ವಿಚಾರ ಹೇಳಿಯೇ ಇಲ್ಲ” ಎಂದು ಎಸ್.ಐ. ರೆಡ್ಡಿಯವರು ಹೇಳುತ್ತಾರೆ.
ಸುಂದರರು ಮರುದಿನ ಬೆಳ್ಳಾರೆ ಪೋಲೀಸ್ ಠಾಣೆಗೆ ಬಂದು ೧೦೦೦ ರೂ ದಂಡ ಪಾವತಿಸಿ ರಶೀದಿ ಪಡೆದು ಹೋಗುತ್ತಾರೆ. ಬಳಿಕ ಖಾಸಗಿ ಯೂಟ್ಯೂಬ್ ಚಾನೆಲ್ ನಲ್ಲಿ `ಬಡವರನ್ನು ಬೆಳ್ಳಾರೆ ಪೋಲೀಸರು ದೋಚುತ್ತಿರುವುದಾಗಿಯೂ, ಈ ಪೋಲೀಸಪ್ಪನಿಗೆ ೧೦೦೦ ಕೊಟ್ಟು ಊರ ಕೋಳಿ ಕೊಡಬೇಕಂತೆ’ ಎಂದು ಮುಂತಾಗಿ ಎಚ್.ಸಿ. ಬಾಲಕೃಷ್ಣರ ಹೆಸರು ಉಲ್ಲೇಖಿಸಿ ವರದಿ ಪ್ರಸಾರವಾಗುತ್ತದೆ.

ಇದನ್ನು ಕಂಡ ಎಸ್.ಪಿ.ಯವರು ಸರ್ಕಲ್ ಇನ್‌ಸ್ಪೆಕ್ಟರ್ ಮೂಲಕ ಪ್ರಕರಣದ ವರದಿ ತರಿಸಿಕೊಳ್ಳುತ್ತಾರೆ. ಬೆಳ್ಳಾರೆ ಪೋಲೀಸ್ ಠಾಣೆಯ ಸಿ.ಸಿ. ಕ್ಯಾಮರಾದ ದೃಶ್ಯಾವಳಿ ಸಮೇತ ಸರ್ಕಲ್‌ರವರು ವರದಿ ಕಳುಹಿಸಿದರು. `ಸುಂದರರವರು ಠಾಣೆಗೆ ಬಂದು ೧೦೦೦ ರೂ ಕಟ್ಟಿ ರಶೀದಿ ಪಡೆದು ಹೋಗುವ ದೃಶ್ಯ ಅದರಲ್ಲಿದೆ. ಅವರ ನಡುವೆ ಯಾವುದೇ ಸಂಭಾಷಣೆ ನಡೆಯುವುದು ಅದರಲ್ಲಿ ಕಾಣುವುದಿಲ್ಲ’ ಎಂದು ವರದಿಯಲ್ಲಿ ಉಲ್ಲೇಖಿಸಿದ್ದರು.
ಈ ಹಿನ್ನೆಲೆಯಲ್ಲಿ ಎಸ್.ಪಿ.ಯವರು ಎ.೧೮ರಂದು ಸ್ಪಷ್ಟನೆ ನೀಡಿ “ಈ ವರದಿಯ ಬಗ್ಗೆ ವಿಚಾರಣೆ ನಡೆಸಿದಾಗ ಸದ್ರಿ ವರದಿಯಲ್ಲಿ ಯಾವುದೇ ಸತ್ಯಾಂಶ ಕಂಡು ಬರುವುದಿಲ್ಲ. ಕೋವಿಡ್ ೧೯ ಸೋಂಕು ಹರಡುವುದನ್ನು ತಡೆಯಲು ಸರಕಾರದ ಆದೇಶದಂತೆ ಪಿ.ಎಸ್.ಐ.ಬೆಳ್ಳಾರೆ ಹಾಗೂ ಸಿಬ್ಬಂದಿಯವರು ಕಟ್ಟುನಿಟ್ಟಿನ ಕರ್ತವ್ಯ ನಡೆಸುತ್ತಿದ್ದಾಗ ಎ.೧೭ ರಂದು ನಿಂತಿಕಲ್ಲಿನಲ್ಲಿ ಕರ್ತವ್ಯದಲ್ಲಿದ್ದಾಗ ಮಾರುತಿ ಓಮ್ನಿ ಕೆ.ಎ- ೨೧ಎನ್- ೨೫೫೩ ಬಂದಿದ್ದು ಖಾಸಗಿ ವಾಹನ ಸಂಚಾರಕ್ಕೆ ನಿಷೇಧ ಇದ್ದುದರಿಂದ ವಾಹನದ ಮಾಲಕನಿಗೆ ದಂಡ ವಿಧಿಸಿ ಕಳುಹಿಸಲಾಗಿದೆ. ಈ ಸಂದರ್ಭ ಹೆಚ್.ಸಿ.ಬಾಲಕೃಷ್ಣರು ಪಿ.ಎಸ್.ಐಯವರಿಗೆ ಸಹಕರಿಸಿರುತ್ತಾರೆ.

ಇದೇ ರೀತಿ ಕಾಯಿದೆ ಉಲ್ಲಂಸಿದ ಇತರ ವಾಹನಗಳಿಗೂ ದಂಡ ವಿಧಿಸಿ ಕಳುಹಿಸಲಾಗಿರುತ್ತದೆ.ಈ ವಿಚಾರಗಳು ಠಾಣಾ ಸಿ.ಸಿ.ಟಿವಿಯಲ್ಲಿ ದಾಖಲಾಗಿರುತ್ತದೆ. ನಂತರ ಈ ವಿಚಾರವನ್ನು ತಿಳಿದ ಯಾರೋ ಕಿಡಿಗೇಡಿಗಳು ಸದ್ರಿ ವಾಹನದ ಚಾಲಕ ಪ್ರದೀಪ ಹಾಗೂ ಸುಂದರರನ್ನು ಬಳಸಿಕೊಂಡು ಪೊಲೀಸರ ಮೇಲೆ ಸುಳ್ಳು ಆಪಾದನೆ ಮಾಡುವ ಮೂಲಕ ಸಾರ್ವಜನಿಕವಾಗಿ ನಿಷ್ಟೆಯಿಂದ ಕಾರ್ಯನಿರ್ವಹಿಸುವ ಪೊಲೀಸರಿಗೆ ಕಳಂಕ ತರುವ ಪ್ರಯತ್ನ ಮಾಡಿರುವುದು ಕಂಡುಬಂದಿದ್ದು ದೃಶ್ಯ ಮಾಧ್ಯಮ ಮತ್ತು ಸಾಮಾಜಿಕ ಜಾಲತಾಣದಲ್ಲಿ ಬಂದ ವರದಿ ಸಂಪೂರ್ಣ ಸುಳ್ಳಾಗಿರುತ್ತದೆ.ಈ ಬಗ್ಗೆ ತನಿಖೆ ಮುಂದುವರಿದಿದ್ದು ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ಹಣ ಮತ್ತು ಊರ ಕೋಳಿ ಕೇಳಿದ್ದಾರೆ : ಸುಂದರ
ನಾನು ಮತ್ತು ನನ್ನ ಅಳಿಯ ಪ್ರದೀಪ್ ನನಗೆ ಔಷಧಿಗಾಗಿ ಬೆಳ್ಳಾರೆ ಧನ್ವಂತರಿ ಕ್ಲಿನಿಕ್ ಗೆ ಹೋಗಿದ್ದೆವು. ನನಗೆ ಉರಿಮೂತ್ರದ ತೊಂದರೆ ಇತ್ತು ಅದಕ್ಕಾಗಿ ನನ್ನನ್ನು ಓಮ್ನಿಯಲ್ಲಿ ಅಳಿಯ ಕ್ಲಿನಿಕ್ ಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿ ಮೆಡಿಕಲ್ ನಲ್ಲಿ ಔಷಧಿ ತೆಗೆದುಕೊಂಡು ಗಾಡಿಗೆ ಪೆಟ್ರೋಲ್ ಹಾಕಲು ಬೆಳ್ಳಾರೆ ಪೆಟ್ರೋಲ್ ಪಂಪಿಗೆ ಹೋಗಿದ್ದೆವು. ಅಲ್ಲಿ ಪೆಟ್ರೋಲ್ ಹಾಕಿ ಬರುವಾಗ ಬೆಳ್ಳಾರೆ ಪೇಟೆಯಲ್ಲಿ ಪೊಲೀಸರು ತಡೆದರು. ನಾನು ಮದ್ದಿಗಾಗಿ ಬಂದದ್ದು ಎಂದು ಹೇಳಿ ಮದ್ದಿನ ಚೀಟಿ ತೋರಿಸಿದರೂ ಬಿಡಲಿಲ್ಲ.ಗಾಡಿಯನ್ನು ಸೈಡ್ ಹಾಕಿ ಎಂದು ಹೇಳಿ ಡ್ರೈವಿಂಗ್ ಲೈಸನ್ಸ್ ಕೇಳಿದರು .ಡ್ರೈವಿಂಗ್ ತೋರಿಸಿದರೂ ಬಿಡದೆ ನಮ್ಮನ್ನು ಸ್ಟೇಷನಿಗೆ ಬರಲು ಹೇಳಿದರು . ಅಲ್ಲಿ ಕೆಲಹೊತ್ತು ನಮ್ಮನ್ನು ಕುಳ್ಳಿರಿಸಿದರು.ಎಸ್.ಐ ಯವರು ಇಲ್ಲ ಎಂದು ಹೇಳಿದರು.
ಕೆಲಹೊತ್ತು ಕಳೆದ ಬಳಿಕ ಎಸ್.ಐ.ಬಂದರು ಆಗ ಬಾಲಕೃಷ್ಣ ಪೊಲೀಸ್ ಕೂಡ ಬಂದರು ಎಂತ ವಿಷಯ ನಿಮ್ಮದು ಎಂದು ಕೇಳಿದರು.ಆಗ ನಾನು ವಿಷಯ ಹೇಳಿದೆ ಆಸ್ಪತ್ರೆಗೆ ಮದ್ದಿಗಾಗಿ ಬಂದದ್ದು ಎಂದು.ಅದಕ್ಕೆ ಬಾಲಕೃಷ್ಣರು ಅದೆಲ್ಲ ಗೊತ್ತುಂಟು ನನಗೆ ನೀವು ಕುಳಿತುಕೊಳ್ಳಿ ಎಂದು ಹೇಳಿದರು. ನಾವು ಎಸ್.ಐ.ಯವರೊಡನೆ ಮಾತಾಡುತ್ತೇವೆ ಎಂದು ಹೇಳಿದಾಗ ಅವರು ನಿನ್ನೆಯ ಕೇಸುಗಳನ್ನು ನೋಡುತ್ತಾ ಇದ್ದಾರೆ.ಇವತ್ತಿದ್ದು ಇಲ್ಲಿಯೆ ಎಂದು ಹೇಳಿ ಬಳಿಕ ರಶೀದಿ ಪುಸ್ತಕ ತೆಗೆದು ರೂ.೧೦೦೦ ದಂಡ ಹಾಕಿದರು. ನಂತರ ನೀವು ಇನ್ನೊಂದು ಸಾವಿರ ನನಗೆ ಕೊಡಬೇಕು ಮತ್ತು ಒಂದು ಊರಕೋಳಿ ಕೊಡಬೇಕು ಎಂದು ಹೇಳಿದರು. -ಸುಂದರ ಕಾಪುತ್ತಡ್ಕ

 

ಕೋಳಿಯಾಗಲಿ, ಹಣವಾಗಲಿ ಕೇಳಿಲ್ಲ : ಬಾಲಕೃಷ್ಣ
ನಾವು ನಿಂತಿಕಲ್‌ನಲ್ಲಿ ವಾಹನ ತಪಾಸಣೆ ಮಾಡುತ್ತಿರುವಾಗ ಪ್ರದೀಪ್ ಎಂಬವರು ಓಮ್ನಿಯಲ್ಲಿ ಬಂದರು ಅವರನ್ನು ನಿಲ್ಲಿಸಿ ವಿಚಾರಿಸಿದಾಗ ಅವರಲ್ಲಿ ವಾಹನದ ದಾಖಲೆಗಳು ಇರಲಿಲ್ಲ.ಡ್ರೈವಿಂಗ್ ಲೈಸನ್ಸ್ ಮಾತ್ರ ಇತ್ತು ದೂರ ಹೋದದ್ದು ಎಂದು ಕೇಳಿದಾಗ ಪೆಟ್ರೋಲ್ ಪಂಪಿಗೆ ಹೋದದ್ದು ಎಂದು ಹೇಳಿದರು.
ಲಾಕ್ ಡೌನ್ ಇರುವಾಗ ಯಾವುದೇ ಖಾಸಗಿ ವಾಹನಗಳು ಓಡಾಡುವಂತಿಲ್ಲ ಆದರಿಂದ ಅವರನ್ನು ಠಾಣೆಗೆ ಕರೆಸಿ ದಂಡ ಕಟ್ಟಲು ಹೇಳಿವೆ.ಅದರಂತೆ ಅವರು ಠಾಣೆಗೆ ಬಂದು ರೂ.೧೦೦೦ ದಂಡ ಕಟ್ಟಿ ಹೋಗಿದ್ದಾರೆ. ನಾನು ಅವರಲ್ಲಿ ಕೋಳಿಯಾಗಲಿ, ಹಣವಾಗಲಿ ಕೇಳಲಿಲ್ಲ.
– ಬಾಲಕೃಷ್ಣ ಹೆಡ್ ಕಾನ್ಸ್ ಟೇಬಲ್ ಬೆಳ್ಳಾರೆ ಪೊಲೀಸ್ ಠಾಣೆ

ಕೇಸು ಮಾಡಿದವನು ನಾನೇ. ಬಾಲಕೃಷ್ಣ ಅಲ್ಲ : ಎಸ್.ಐ.
ನಾವು ಕೊರೊನಾ ಲಾಕ್‌ಡೌನ್‌ನ ಬಂದೋಬಸ್ತ್‌ನಲ್ಲಿರುವಾಗ ನಿಂತಿಕಲ್‌ನಲ್ಲಿ ಸುಂದರರವರು ಪ್ರಯಾಣಿಸುತ್ತಿದ್ದ ಓಮ್ನಿ ಬಂತು. ತಡೆದು ವಿಚಾರಿಸಿದಾಗ ಪೆಟ್ರೋಲ್ ಹಾಕಲು ಬಂದದ್ದು ಎಂದು ಹೇಳಿದ್ದರಿಂದ ದಂಡ ಕಟ್ಟುವಂತೆ ಹೇಳಿzವೆ. ಅವರು ಠಾಣೆಗೆ ಬಂದು ದಂಡ ಕಟ್ಟಿ ಹೋಗಿದ್ದಾರೆ. ಅವರ ಮೇಲೆ ಕೇಸು ಮಾಡಿದವನೂ ನಾನೇ. ಬಾಲಕೃಷ್ಣ ಅಲ್ಲ. ಬೇರೆಯವರ ಚಿತಾವಣೆಯಿಂದ ಸುಳ್ಳು ಹೇಳಿಕೆ ಕೊಟ್ಟಿದ್ದಾರೆ. ಈಗ ನಾವು ತನಿಖೆಗೆ ಕರೆಯುವಾಗ ಬರುತ್ತಿಲ್ಲ. ಅವರ ಮನೆಗೆ ಹೋದಾಗಲೂ ಸಿಗುತ್ತಿಲ್ಲ. ನಮ್ಮ ಠಾಣೆಯಲ್ಲಿರುವ ಸಿ.ಸಿ. ಕ್ಯಾಮರಾದ ದೃಶ್ಯ ನೋಡುವಾಗ ಬಾಲಕೃಷ್ಣರು ಅವರೊಡನೆ ಕೋಳಿ ಕೇಳಿಲ್ಲವೆಂದು ಗೊತ್ತಾಗುತ್ತದೆ.
-ಆಂಜನೇಯ ರೆಡ್ಡಿ ಎಸ್.ಐ. ಬೆಳ್ಳಾರೆ

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.