ಆಲೆಟ್ಟಿ ರಸ್ತೆ ಕಾಂಕ್ರೀಟೀಕರಣ – ಸಂಚಾರಕ್ಕೆ ತೆರವುಗೊಳ್ಳುವ ಮುನ್ನವೇ ಬಿರುಕು ನ.ಪಂ. ಸಭೆಯಲ್ಲಿ ಚರ್ಚೆ

Advt_Headding_Middle
Advt_Headding_Middle

ಕಲ್ಲುಮುಟ್ಲು ತಿರುವಿನಿಂದ ಆಲೆಟ್ಟಿ ಸೇತುವೆವರೆಗಿನ ರಸ್ತೆ ಕಾಂಕ್ರೀಟೀಕರಣ ಪೂರ್ಣಗೊಂಡಿದ್ದು, ವಾಹನ ಸಂಚಾರಕ್ಕೆ ತೆರವುಗೊಳ್ಳುವ ಮುನ್ನವೇ ಬಿರುಕು ಬಿಟ್ಟಿರುವುದನ್ನು ಸುಳ್ಯ ನ.ಪಂ.ನಲ್ಲಿ ಇಂದು ತಹಶೀಲ್ದಾರ್ ಕರೆದ ಸಭೆಯಲ್ಲಿ ನ.ಪಂ. ಸದಸ್ಯರು ಚರ್ಚೆ ನಡೆಸಿದರು.

“ಕಾಮಗಾರಿಯ ಕುರಿತು ಗೊಂದಲವಿದೆ. ಅದನ್ನು ಮಾಡುವವರಾರೆಂಬ ಖಚಿತ ಮಾಹಿತಿ ಇಲ್ಲ. ಕಾಮಗಾರಿ ಕಳಪೆಯಾದರೆ ನ.ಪಂ.ಗೆ ಕೆಟ್ಟ ಹೆಸರು ಬರುತ್ತದೆ. ಇವತ್ತು ಹೋಗಿ ನಾನು ನೋಡಿ ಬಂದೆ, ೨ ಕಡೆ ಬಿರುಕು ಬಿಟ್ಟಿದೆ. ನ.ಪಂ. ಇಂಜಿನಿಯರ್ ಮತ್ತು ವಿನಯ್ ಕಂದಡ್ಕರವರು ಇದಕ್ಕೆ ಸ್ಪಷ್ಠೀಕರಣ ಕೊಡಬೇಕು”ಎಂದು ವೆಂಕಪ್ಪ ಗೌಡರು ಹೇಳಿದರು. ಅದಕ್ಕುತ್ತರಿಸಿದ ಇಂಜಿನಿಯರ್ ಅದು ಮಳೆ ಹಾನಿ ಅನುದಾನದಲ್ಲಿ ಆಗುತ್ತಿರುವ ಕೆಲಸ. ಕೆಆರ್‌ಡಿಎಲ್‌ನವರು ಮಾಡುತ್ತಿದ್ದಾರೆ. ಅದು ನ.ಪಂ. ವ್ಯಾಪ್ತಿಯಲ್ಲಿದ್ದರೂ, ಜಿ.ಪಂ.ರಸ್ತೆ ಎಂದು ಇಂಜಿನಿಯರ್ ಹೇಳಿದರು.


ನ.ಪಂ.ಸದಸ್ಯ ವಿನಯ್ ಕಂದಡ್ಕ ಮಾತನಾಡಿ, ಕಾಮಗಾರಿ ಮಾಡಿದ ಕೂಡಲೇ ಪ್ಲಾಸ್ಟಿಕ್ ಮುಚ್ಚಿದ್ದರಿಂದ ಡ್ರೌಟ್ ಸ್ಪ್ರೆಡ್ ಆಗಿಲ್ಲ. ಆ ಕಾಮಗಾರಿ ಕಳಪೆಯಾಗಿದೆಯಾದರೆ, ಇಲಾಖೆಗೆ ದೂರು ನೀಡಿ ಸರಿಪಡಿಸೋಣ ಎಂದರು.

ರಸ್ತೆ ಬಿರುಕು ಬಿಟ್ಟದ್ದರ ಫೊಟೋವನ್ನು ನ.ಪಂ. ಸದಸ್ಯ ಶರೀಫ್ ಕಂಠಿಯವರು ಮೊಬೈಲ್‌ನಲ್ಲಿ ಸಭೆಗೆ ತೋರಿಸಿದರು.
ಆ ಕಾಮಗಾರಿ ಮಾಡುವಾಗ ಕೆಆರ್‌ಡಿಎಲ್ ಮತ್ತು ನ.ಪಂ.ಇಂಜಿನಿಯರ್ ಸಮಾಲೋಚಿಸದೇ, ಇರುವುದರಿಂದ ಕಲ್ಲುಮುಟ್ಲುಗೆ ತಿರುಗುವಲ್ಲಿ ದಿಣ್ಣೆ ನಿರ್ಮಾಣವಾಗಿದೆ. ವಾಹನಗಳನ್ನು ತಿರುಗಿಸಲು ಸಾಧ್ಯವಿಲ್ಲದಾಗಿದೆ ಎಂದು ವೆಂಕಪ್ಪ ಗೌಡರು ಹೇಳಿದರು. ಅದನ್ನು ನಮ್ಮ ಅನುದಾನದಲ್ಲಿಯೇ ಸರಿಪಡಿಸಬೇಕಷ್ಟೆ ಎಂದು ಇಂಜಿನಿಯರ್ ಹೇಳಿದರು.


ಕಸದ ಚರ್ಚೆ :
ಮಳೆ ಹಾನಿಗೆ ಸಂಬಂಧಿಸಿದಂತೆ ಚುನಾಯಿತ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡುವಂತೆ ಜಿಲ್ಲಾಧಿಕಾರಿಗಳು ಸೂಚಿಸಿದ ಮೇರೆಗೆ ನ.ಪಂ. ಸದಸ್ಯರ ಈ ಸಭೆಯನ್ನು ಆಡಳಿತಾಧಿಕಾರಿ ಮತ್ತು ಮುಖ್ಯಾಧಿಕಾರಿಗಳು ಕರೆದಿದ್ದರು. ಆದರೆ ಅಲ್ಲಿ ಪ್ರಕೃತಿ ವಿಕೋಪದ ವಿಚಾರಕ್ಕಿಂತ ಹೆಚ್ಚು ಕಸ ಮತ್ತು ರಸ್ತೆ ವಿಚಾರಗಳೇ ಹೆಚ್ಚು ಪ್ರಸ್ತಾಪವಾದವು. ನ.ಪಂ.ಕಛೇರಿಯ ಸುತ್ತ ಕಸ ಹಾಕಿರುವ ವಿಚಾರ ಮತ್ತು ಕಛೇರಿಯ ಸಿಬ್ಬಂದಿ ಪಕ್ಕದ ಸಭಾಂಗಣಕ್ಕೆ ಶಿಫ್ಟ್ ಆಗಿರುವ ವಿಚಾರ ಚರ್ಚೆಗೆ ಬಂತು. ಶರೀಫ್ ಕಂಠಿ, ಬಾಲಕೃಷ್ಣ ರೈ, ರಿಯಾಝ್ ಕಟ್ಟೆಕ್ಕಾರ್, ಎಂ.ವೆಂಕಪ್ಪ ಗೌಡ, ವಿನಯ್ ಕುಮಾರ್ ಕಂದಡ್ಕ, ಉಮ್ಮರ್ ಕೆ.ಎಸ್. ಮೊದಲಾದವರು ಈ ಚರ್ಚೆಯಲ್ಲಿ ಭಾಗವಹಿಸಿದ್ದರು. ನ.ಪಂ.ಆವರಣದಲ್ಲಿರುವ ಕಸವನ್ನು ಅಲ್ಲಿಂದ ತೆರವುಗೊಳಿಸಲೇಬೇಕೆಂದು ಎಲ್ಲರ ಅಭಿಪ್ರಾಯವಾಗಿತ್ತು. ಆದರೆ, ತೆರವುಗೊಳಿಸಿ, ಎಲ್ಲಿಗೆ ತೊಗೊಂಡು ಹೋಗಿ ಹಾಕುವುದು ಎಂಬ ಪ್ರಶ್ನೆಗೆ ಉತ್ತರ ಯಾರಲ್ಲೂ ಇರಲಿಲ್ಲ. ಕಲ್ಲುಮುಟ್ಲು ಕಸ ವಿಲೇವಾರಿಯ ಜಾಗಕ್ಕೆ ಹಾಕುವುದಾಗಿ ಆಡಳಿತಾಧಿಕಾರಿಯಾಗಿರುವ ತಹಶೀಲ್ದಾರ್ ಅನಂತಶಂಕರ ಹೇಳಿದರು. ಮೂರು ತಿಂಗಳೊಳಗೆ ಕಸದ ಸಮಸ್ಯೆ ಪರಿಹರಿಸುವುದಾಗಿ ಮುಖ್ಯಾಧಿಕಾರಿ ಮತ್ತಡಿಯವರು ಭರವಸೆ ನೀಡಿದರು. ಚರಂಡಿ ಸರಿಪಡಿಸುವ ವಿಚಾರ, ಮಳೆ ಹಾನಿಯಿಂದ ತೊಂದರೆಗೊಳಗಾದವರಲ್ಲಿ ಇನ್ನೂ ಕೆಲವರಿಗೆ ಪರಿಹಾರ ಸಿಗದಿರುವ ಬಗ್ಗೆ ಉಮ್ಮರ್ ಮತ್ತಿತರ ಸದಸ್ಯರು ಪ್ರಶ್ನಿಸಿದಾಗ, ಹಾನಿಯಾದ ಮನೆಯವರನ್ನು ತಾಲೂಕು ಕಛೇರಿಗೆ ಕಳುಹಿಸುವಂತೆ ತಹಶೀಲ್ದಾರರು ಸೂಚಿಸಿದರು. ಡೇವಿಡ್ ಧೀರಾ ಕ್ರಾಸ್ತಾ, ಬುದ್ದ ನಾಯ್ಕ್, ಸರೋಜಿನಿ ಪೆಲತ್ತಡ್ಕ, ಪೂಜಿತಾ ಕೆ.ಯು., ಕಿಶೋರಿ ಶೇಟ್, ಶೀಲಾ ಕುರುಂಜಿ, ಶಶಿಕಲಾ ನೀರಬಿದಿರೆ, ಪ್ರವಿತಾ ಆಚಾರ್ಯ, ವಾಣಿಶ್ರೀ ಜಟ್ಟಿಪ್ಪಳ್ಳ, ಸುಶೀಲಾ ಜಿನ್ನಪ್ಪ ಸಭೆಯಲ್ಲಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.