Breaking News

ನಮ್ಮ ಹಾಡಿನ ಲೋಕಕೆ, ಇದೆಂಥಾ ಕನಸಿನ ಸಂಭ್ರಮ!

Advt_Headding_Middle
Advt_Headding_Middle

 

ಭಾವದಲೆಗಳ ಮೀಟಿದ ಭಾವ ಜೀವಿಗೆ ಸಾರ್ಥಕ ಎಂಭತ್ತು

ಸುಮನಸಿನ ಕವಿ ಸುಬ್ರಾಯ ಚೊಕ್ಕಾಡಿಗೆ ಇಂದು ಜನ್ಮ ದಿನ

✍️ ದುರ್ಗಾಕುಮಾರ್ ನಾಯರ್ ಕೆರೆ

ಮೃದು ಮಧುರ ಮಾತಿನ ಭಾವ ಜೀವಿ, ಯುವ ಮನಸ್ಸುಗಳಲ್ಲಿ ಭಾವದಲೆಗಳ ಮೀಟಿದ ಸ್ನೇಹ ಜೀವಿ ಸುಬ್ರಾಯ ಚೊಕ್ಕಾಡಿಯವರು ಬದುಕಿನ ಎಂಭತ್ತು ವರ್ಷಗಳನ್ನು ಪೂರ್ಣಗೊಳಿಸಿ 81 ನೇ ವರ್ಷಕ್ಕೆ ಕಾಲಿಡುತ್ತಿದ್ದಾರೆ.

ಸಾರಸ್ವತ ಜಗತ್ತಿನಲ್ಲಿ ಚೊಕ್ಕಾಡಿ ಎಂಬ ಹೆಸರಿನ ಮೂಲಕ ಸುಳ್ಯದ ಹೆಸರು ಮತ್ತು ಅನನ್ಯತೆಯನ್ನು ಉತ್ತುಂಗ ಶಿಖರಕ್ಕೇರಿಸಿದ ಚೊಕ್ಕಾಡಿಯವರಿಗೆ ಚೊಕ್ಕಾಡಿಯೇ ಸಾಟಿ.

ಕನ್ನಡ ಸಾಹಿತ್ಯ ಲೋಕದಲ್ಲಿ ಚೊಕ್ಕಾಡಿ ಬಹುಶ್ರುತ ಸಾಧಕ. ಕವಿ, ವಿಮರ್ಶಕ, ನಾಟಕಕಾರರಾಗಿ ಬಹು ಮಾನ್ಯರು. ಈ ಹಿರಿಜೀವ ನಮ್ಮವರೆನ್ನುವುದು ನಮ್ಮ ಹೆಮ್ಮೆ.

1940 ರ ಜೂನ್ 29 ರಂದು ಚೊಕ್ಕಾಡಿಯಲ್ಲಿ ಸುಬ್ರಾಯ ಚೊಕ್ಕಾಡಿಯವರ ಜನನ. ತಂದೆ ಯಕ್ಷಗಾನದ ಖ್ಯಾತ ಭಾಗವತ ಅಜ್ಜನಗದ್ದೆ ಗಣಪಯ್ಯನವರು. ತಾಯಿ ಸುಬ್ಬಮ್ಮ.

ಪ್ರಾಥಮಿಕ ಶಿಕ್ಷಣವನ್ನು ಚೊಕ್ಕಾಡಿ ಶಾಲೆಯಲ್ಲಿಯೇ ಪಡೆದ ಅವರು ಹೈಸ್ಕೂಲು ಓದಿದ್ದು ಪಂಜದಲ್ಲಿ . ಮೈಸೂರು ವಿಶ್ವವಿದ್ಯಾನಿಲಯದ ಅಂಚೆ ಮತ್ತು ತೆರಪಿನ ಶಿಕ್ಷಣ ಸಂಸ್ಥೆಯಿಂದ ಕನ್ನಡದಲ್ಲಿ ಎಂ.ಎ.ಪದವಿ ಪಡೆದರು.

ನಂತರ ಉದ್ಯೋಗ ಪರ್ವ. ಆಯ್ದುಕೊಂಡದ್ದು ಶಿಕ್ಷಕ ವೃತ್ತಿ. ಪ್ರಾಥಮಿಕ ಶಾಲಾ ಶಿಕ್ಷಕನಾಗಿ ವೃತ್ತಿ ಆರಂಭ. ಸುಳ್ಯ, ಪೈಲಾರು, ಕುಕ್ಕುಜಡ್ಕ ಶಾಲೆಗಳಲ್ಲಿ 39 ವರ್ಷ ಕಾಲ ಸಹಾಯಕ ಶಿಕ್ಷಕರಾಗಿ, ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸಿ ನಿವೃತ್ತರಾದರು.

ಆದರೆ ಚೊಕ್ಕಾಡಿಯವರಿಗೆ ದೊಡ್ಡ ಮಟ್ಟದಲ್ಲಿ ಹೆಸರು ತಂದುಕೊಟ್ಟದ್ದು ಸಾಹಿತ್ಯ ಕ್ಷೇತ್ರ. ಹೇಳಿ ಕೇಳಿ ತಂದೆ ಭಾಗವತರು. ಕಿವಿಗೆ ಬೀಳುತ್ತಿದ್ದ ಲಯಬದ್ಧ ಹಾಡುಗಳು, ಹೈಸ್ಕೂಲಿಗೆ ನಡೆದು ಹೋಗುವಾಗ ಕಾಡಿನ ಮಧ್ಯೆ ಕೇಳುತ್ತಿದ್ದ ನೀರಿನ ಝುಳು ಝುಳು ನಾದ, ಹಕ್ಕಿಗಳ ಕೂಗು, ಮರಗಳ ಮರ್ಮರತೆಯಿಂದ ಪ್ರಭಾವಿತರಾಗಿ ಹೈಸ್ಕೂಲು ವಿದ್ಯಾರ್ಥಿಯಾಗಿದ್ದಾಗಲೇ ಚೊಕ್ಕಾಡಿಯವರಿಗೆ ಕವನ ಕಟ್ಟುವ ಕಾಯಕ ಪ್ರಾರಂಭವಾಗಿತ್ತು.

ಇದರೊಂದಿಗೆ ತಾವು ಎಳವೆಯಿಂದಲೇ ಅನುಭವಿಸಿದ ಕಷ್ಟ ಕಾರ್ಪಣ್ಯದ ದಿನಗಳು, ನೋವಿನ, ಅವಮಾನದ, ಅಸಹಾಯಕತೆಯ ಘಟನೆಗಳಿಗೆ ಅವರು ಪ್ರತಿಭಟನೆಯ ರೂಪ ನೀಡಿದ್ದು ಮೂರ್ತ ಕಾವ್ಯರೂಪದಲ್ಲಿ. ಹೀಗೆ ತಮ್ಮ ಅಂತರಂಗವನ್ನು ಸಂಕೇತ, ಪ್ರತಿಮೆ, ರೂಪಕಗಳ ಮೂಲಕ ಹೊರಹಾಕಿದಾಗ ಕವಿಯೊಬ್ಬನ ಆವಿರ್ಭಾವವಾಯಿತು. ಹೀಗೆ ಮೂಡಿಬಂದ ಕವನಗಳು ನಾಡಿನ ಪ್ರಮುಖ ಪತ್ರಿಕೆಗಳೆಲ್ಲದರಲ್ಲೂ ಪ್ರಕಟಗೊಂಡವು. ಜನಮನಗಳಲ್ಲೂ ನಲಿದವು.

ಚೊಕ್ಕಾಡಿಯವರ ಕವನ ಸಂಕಲನಗಳೆಲ್ಲವೂ ಸಕತ್ ಫೇಮಸ್. ತೆರೆ, ಬೆಟ್ಟವೇರಿದ ಮೇಲೆ, ನಿಮ್ಮವೂ ಇರಬಹುದು, ಮೊನ್ನೆ ಸಿಕ್ಕವರು, ಇದರಲ್ಲಿ ಅದು, ಇನ್ನೊಂದು ಬೆಳಗು, ಮಾಗಿಯ ಕೋಗಿಲೆ, ಹಾಡಿನ ಲೋಕ, ಬಂಗಾರದ ಹಕ್ಕಿ ಮೊದಲಾದ ಕವನ ಸಂಕಲನಗಳ ಮೂಲಕ ಕಾವ್ಯ ರಸಿಕರ ಮನಸ್ಸಿಗೆ ಲಗ್ಗೆ ಇಟ್ಟರು.

ಕಾವ್ಯ ಸಮೀಕ್ಷೆ, ಕೃತಿಶೋಧ, ಒಳಹೊರಗು ಮೊದಲಾದ ವಿಮರ್ಶಾ ಕೃತಿಗಳ ಮೂಲಕ ತನ್ನೊಳಗಿನ ಗಟ್ಟಿ ಸಾಹಿತ್ಯವನ್ನು ತೆರೆದಿಟ್ಟರು. ಕಾದಂಬರಿಯಾಗಿ ಸಂತೆಮನೆ ಪ್ರಸಿದ್ಧವಾಯಿತು. ಬೇರು ಕಥಾ ಸಂಕಲನ ಪ್ರಕಟವಾಯಿತು.

ಸುಬ್ರಾಯ ಚೊಕ್ಕಾಡಿಯವರಿಗೆ ಯುವ ಮನಸ್ಸುಗಳಲ್ಲಿ ಅಪಾರ ಜನಪ್ರಿಯತೆ ತಂದು ಕೊಟ್ಟದ್ದು, ಅವರ ಕವನಗಳು ಧ್ವನಿ ಸುರುಳಿಗಳಾಗಿ ಹೊರಬಂದಾಗ. ಬರಹಗಳ ಆಧಾರಿತ ಕ್ಯಾಸೆಟ್ ಹಾಗೂ ಸಿಡಿಗಳಲ್ಲಿ ಮಿಲನ, ಮಾನಸ, ಬೆಣ್ಣೆ ಕದ್ದ ನಮ್ಮ ಕೃಷ್ಣ, ವನಸಿರಿ, ಅನುರಾಗ, ಸಲ್ಲಾಪ, ಹುಣ್ಣಿಮೆ, ನೂಪುರ, ಸಿರಿಗನ್ನಡ, ದೀಪ, ಭಾವ ಚಿತ್ತಾರ, ನಿನ್ನ ಬಾಂದಳದಂತೆ ಖ್ಯಾತಿ ಪಡೆಯಿತು.

ಮುನಿಸು ತರವೇ ಎಂಬ ಹಾಡಂತೂ ಎಲ್ಲರೂ ಗುಣುಗುಣಿಸುವಂತಾಯಿತು. ಹಾಡು ಹುಟ್ಟಿ ಮೂರು ದಶಕವಾದರೂ ಜನಮಾನಸದಲ್ಲಿ ಮಿಳಿತಗೊಂಡ ಬಗೆ ಅತ್ಯದ್ಭುತ.

ಅರ್ಹವಾಗಿಯೇ ಸುಬ್ರಾಯ ಚೊಕ್ಕಾಡಿಯವರಿಗೆ ಗೌರವಗಳು, ಸನ್ಮಾನಗಳು, ಪ್ರಶಸ್ತಿಗಳು ಪ್ರಾಪ್ತವಾಗಿವೆ.
ಅಖಿಲ ಭಾರತ 65ನೇ ಕನ್ನಡ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಯ ಅಧ್ಯಕ್ಷತೆ, ಸುಳ್ಯ ತಾಲ್ಲೂಕು ಐದನೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ, ದಕ್ಷಿಣ ಕನ್ನಡ ಜಿಲ್ಲಾ 15ನೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ಒಲಿಯಿತು.

ವರ್ಧಮಾನ ಪ್ರಶಸ್ತಿ, ಮುದ್ದಣ ಪ್ರಶಸ್ತಿ, ಮೃತ್ಯುಂಜಯ ಸಾರಂಗ ಮಠ ಪ್ರಶಸ್ತಿ, ಸಾಹಿತ್ಯ ಕಲಾನಿಧಿ ಪ್ರಶಸ್ತಿ, ಕರ್ನಾಟಕ ಶ್ರೀ ಪ್ರಶಸ್ತಿಗಳಿಗೆ ಚೊಕ್ಕಾಡಿಯವರು ಭಾಜನರಾಗಿದ್ದಾರೆ. ಚೊಕ್ಕಾಡಿಯವರ ವ್ಯಕ್ತಿತ್ವದ ಹಿರಿಮೆಗೆ ಗೌರವ ಗ್ರಂಥ ‘ಮುಕ್ತ ಹಂಸ’ದ ಸಮರ್ಪಣೆಯಾಗಿದೆ.

ಕಾಲ ಯಾನದ ಹೆಜ್ಜೆ ಹಾಕಿದವರು ಚೊಕ್ಕಾಡಿ. ಇಳಿ ವಯಸ್ಸಿನಲ್ಲೂ ಡಿಜಿಟಲ್ ಕ್ರಾಂತಿಯನ್ನು ಎದೆಯೊಳಗಿಳಿಸಿದ್ದಾರೆ. ಫೇಸ್ ಬುಕ್, ವಾಟ್ಸಾಪ್ ಗಳಲ್ಲಿ ಕ್ರಿಯಾಶೀಲರಾಗಿದ್ದಾರೆ. ಅದನ್ನು ಸಾಹಿತ್ಯ ಪ್ರಸರಣದ ಭೂಮಿಕೆಯನ್ನಾಗಿಸಿದ್ದಾರೆ.

ಚೊಕ್ಕಾಡಿಯವರ ಸಂಪರ್ಕ ಶಕ್ತಿ ಬಹಳವಾದದ್ದು. ದೇಶದ ಖ್ಯಾತನಾಮರ ಒಡನಾಟ ಇರುವ ಮೇರು ಸಾಹಿತಿ ಅವರು. ಅಡಿಗರಿಂದ ಮೊದಲ್ಗೊಂಡು ವೆಂಕಟೇಶ ಮೂರ್ತಿಯವರೆಗೆ ನೂರಾರು ಸಾಧಕರು ಚೊಕ್ಕಾಡಿ ಮನೆಯ ಆತಿಥ್ಯದ ಸವಿ ಉಂಡವರೇ.

ಸುಳ್ಯ ಸುದ್ದಿ ಬಿಡುಗಡೆಯ ಪ್ರಥಮ ಪ್ರತಿಯನ್ನು ಲೋಕಾರ್ಪಣೆಗೊಳಿಸಿದವರು ಸುಬ್ರಾಯ ಚೊಕ್ಕಾಡಿಯವರು. ನಮ್ಮೊಲುಮೆಯ ಕವಿಗಿಂದು ನಲುಮೆಯ ಹುಟ್ಟು ಹಬ್ಬ‌. ಶುಭಾಶಯ ಕೋರೋಣ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.