ಪತಿಯ ಮನೆಗೆ ಸೇರಿಸಬೇಕೆಂದು ಮಹಿಳೆಯ ಮೊರೆ, ಮನೆಯ ಜಗಲಿಯಲ್ಲೇ ಠಿಕಾಣಿ

Advt_Headding_Middle
Advt_Headding_Middle
Advt_Headding_Middle

ಮಹಿಳಾ ಆಯೋಗದ ಆದೇಶ – ಕಟ್ಟೆಕ್ಕಾರ್ ಮನೆಯವರ ನಿರಾಕರಣೆ

ಪತಿಯ ಮನೆಗೆ ಸೇರಿಸಬೇಕೆಂದು ಬೆಂಗಳೂರಿನ ಮಹಿಳೆಯೊಬ್ಬರು ಸುಳ್ಯಕ್ಕೆ ಬಂದು ಮನೆಯ ಜಗಲಿಯಲ್ಲಿ ಠಿಕಾಣಿ ಹೂಡಿರುವ ಘಟನೆ ವರದಿಯಾಗಿದೆ.


ಇಬ್ರಾಹಿಂ ಖಲೀಲ್‌ನಿಂದಾಗಿ ನಾನು ಇಸ್ಲಾಂಗೆ ಮತಾಂತರಗೊಂಡು ಅವನನ್ನು ಮದುವೆಯಾಗಿzನೆ. ಈಗ ಅವನು ನನ್ನ ಸಂಪರ್ಕದಿಂದ ದೂರವಾಗಿದ್ದಾನೆ. ಅವನೊಡನೆ ಇರಲು ನನಗೆ ಅವಕಾಶ ಕೊಡಿ ಎಂದು ಕೇಳಿ ಬೆಂಗಳೂರಿನಮಹಿಳೆಯೊಬ್ಬರು ರಾಜ್ಯ ಮಹಿಳಾ ಆಯೋಗದ ಆದೇಶದ ಜತೆಗೆ ಸುಳ್ಯಕ್ಕೆ ಬಂದು ಖಲೀಲ್‌ನ ತಂದೆಯ ಮನೆಯ ಜಗಲಿಯಲ್ಲಿ ಬಂದು ಕುಳಿತಿದ್ದಾರೆ. ಖಲೀಲ್‌ನ ಮನೆಯವರು ಇವರನ್ನು ಮನೆಗೆ ಸೇರಿಸಲು ನಿರಾಕರಿಸಿ ಮನೆಗೆ ಬೀಗ ಹಾಕಿ ಹೋಗಿರುವುದರಿಂದ ಮನೆಯ ಸಿಟ್‌ಔಟ್ ನಲ್ಲಿಯೇ ತಂಗಿದ್ದಾರೆ.


ಕಟ್ಟೆಕ್ಕಾರ್ ಅಬ್ದುಲ್ಲರ ಮಗ ಇಬ್ರಾಹಿಂ ಖಲೀಲ್ ತನ್ನನ್ನು ಮದುವೆಯಾಗಿದ್ದು ಅವನೊಂದಿಗೆ ಮತ್ತೆ ನನ್ನನ್ನು ಸೇರಿಸಬೇಕು ಎಂದು ಕೇಳಿಕೊಂಡು ಎರಡು ವಾರದ ಹಿಂದೆ ಬೆಂಗಳೂರಿನ ಆಸಿಯಾ ಎಂಬ ಮಹಿಳೆ ಸುಳ್ಯ ಪೊಲೀಸ್ ಠಾಣೆಗೆ ಬಂದಿದ್ದರು. ಮಂಗಳೂರಿಗೆ ಎಸ್ಪಿ ಕಚೇರಿಗೆ ಹೋಗಿ ಅಲ್ಲಿಂದ ಸುಳ್ಯ ಠಾಣೆಗೆ ಬಂದಿದ್ದ ಆಸಿಯಾರವರನ್ನು ಠಾಣೆಯಲ್ಲಿ ಕೂರಿಸಿದ ಪೋಲೀಸರು ಕಟ್ಟೆಕ್ಕಾರ್ ಇಬ್ರಾಹಿಂ ಖಲೀಲ್ ಮತ್ತು ಮನೆಯವರನ್ನು ಠಾಣೆಗೆ ಕರೆಸಿದ್ದರು. ಆ ಮಹಿಳೆಯೊಂದಿಗೆ ನನಗೆ ಯಾವುದೇ ಸಂಬಂಧ ಇಲ್ಲ ಎಂದು ಖಲೀಲ್ ಹೇಳಿಕೆ ನೀಡಿ ಆಕೆಯನ್ನು ಮನೆಗೆ ಕರೆದೊಯ್ಯಲು ನಿರಾಕರಿಸಿದ್ದರು. ಬಳಿಕ ಪೊಲೀಸರ ಸಲಹೆಯಂತೆ ಆಕೆ ಬೆಂಗಳೂರಿಗೆ ವಾಪಸಾಗಿದ್ದಳು.
ಜೂನ್ ೨೨ ರಂದು ಬೆಂಗಳೂರಿನಲ್ಲಿ ರಾಜ್ಯ ಮಹಿಳಾ ಆಯೋಗಕ್ಕೆ ದೂರು ನೀಡಿದ ಆಸಿಯಾ ತನ್ನ ಗಂಡನಾದ ಸುಳ್ಯದ ಕಟ್ಟೆಕಾರ್ ಇಬ್ರಾಹಿಂ ಖಲೀಲ್ ರವರ ಇಚ್ಛೆಯ ಮೇರೆಗೆ ವಿವಾಹಕ್ಕೂ ಮೊದಲು ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡು ೧೨.೭.೨೦೧೭ರಲ್ಲಿ ಇಬ್ರಾಹಿಂ ಖಲೀಲ್ ರವರನ್ನು ವಿವಾಹವಾಗಿರುತ್ತೇನೆ. 15.1.2020 ರವರೆಗೆ ನಮ್ಮ ಕೌಟುಂಬಿಕ ಜೀವನವು ಕೌಟುಂಬಿಕ ಜೀವನವು ಚೆನ್ನಾಗಿಯೇ ಇತ್ತು. ಸುಳ್ಯಕ್ಕೆ ಬಂದ ನಂತರ ಖಲೀಲ್ ರವರು ನನ್ನೊಂದಿಗೆ ಸಂಪೂರ್ಣವಾಗಿ ಸಂಬಂಧವನ್ನು ಬಿಟ್ಟಿರುತ್ತಾರೆ. ಪತಿಯ ಮನೆಯವರು ಕೂಡ ಅವರಿಗೆ ಸಹಕಾರ ನೀಡುತ್ತಿರುವುದರಿಂದ ನಾನು ಆರ್ಥಿಕ ಮತ್ತು ಕೌಟುಂಬಿಕ ಜೀವನವನ್ನು ಕಳೆದುಕೊಳ್ಳುವಂತಾಗಿದೆ. ಆದ್ದರಿಂದ ತನ್ನನ್ನು ಸುಳ್ಯದಲ್ಲಿರುವ ಪತಿಯ ಮನೆಗೆ ಸೇರಿಸಬೇಕು ಎಂದು ಮನವಿ ಮಾಡಿಕೊಂಡಿದ್ದರು.

ಮಹಿಳಾ ಆಯೋಗದ ಅಧ್ಯಕ್ಷರೊಡನೆ ಆಸಿಯಾರವರು ಸಮಾಲೋಚನೆ ನಡೆಸಿ ವಿನಂತಿ ಮಾಡಿಕೊಂಡ ಮೇರೆಗೆ *ಅರ್ಜಿದಾರರನ್ನು ಆಕೆಯ ಪತಿಯ ಮನೆಗೆ ಸೇರಿಸಿ ಕಾನೂನು ನೆರವು ಹಾಗೂ ಅಗತ್ಯ ಕ್ರಮ ಕೈಗೊಂಡು ಆ ಕ್ರಮದ ಬಗ್ಗೆ ವರದಿಯನ್ನು ೧೫ ದಿನಗಳೊಳಗೆ ಆಯೋಗಕ್ಕೆ ಕಳುಹಿಸಿಕೊಡುವಂತೆ* ಅಧ್ಯಕ್ಷರು ಜೂ. ೨೪ರಂದು ಆದೇಶ ನೀಡಿದರು.
ಈ ಆದೇಶ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕರಿಗೆ ಜಾರಿಯಾಗಿ ಅವರ ಸೂಚನೆಯಂತೆ ಸುಳ್ಯದ ಸಿಡಿಪಿಒ ಮತ್ತು ಸುಳ್ಯದ ಎಸ್ .ಐ.ಯವರು ಜೂ. ೨೫ರಂದು ಸಂಜೆ ಆಸಿಯಾರನ್ನು ಕರೆದುಕೊಂಡು ಸುಳ್ಯದ ನಾವೂರು ರಸ್ತೆಯಲ್ಲಿರುವ ಕಟ್ಟೆ ಅಬ್ದುಲ್ಲರ ಮನೆಗೆ ಬಂದರು.
ಆ ವೇಳೆಗೆ ಮನೆಯವರು ಬಾಗಿಲಿಗೆ ಬೀಗ ಹಾಕಿ ಹೋಗಿದ್ದರು . ಬಳಿಕ ಖಲೀಲ್ ಮತ್ತು ಮನೆಯವರನ್ನು ಪೋಲೀಸರು ಕರೆಸಿ ಹೇಳಿಕೆ ಪಡೆಯಲಾಯಿತು.

ನಾನು ಆಕೆಯನ್ನು ಮದುವೆಯಾಗಿದ್ದೂ ಇಲ್ಲ . ಸಂಬಂಧ ಇಟ್ಟುಕೊಂಡಿದ್ದೂ ಇಲ್ಲ. ಈಕೆಯನ್ನು ನಾವು ಮನೆಯೊಳಗೆ ಸೇರಿಸಿಕೊಳ್ಳುವುದೂ ಇಲ್ಲ ಎಂದು ಖಲೀಲ್ ಮತ್ತು ಅವರ ಮನೆಯವರು ಹೇಳಿದರೆ, ಇದು ನನ್ನ ಗಂಡನ ಮನೆ . ಅವರು ಮನೆಗೆ ಸೇರಿಸುವ ವರೆಗೆ ನಾನು ಇಲ್ಲೇ ಇರುತ್ತೇನೆ ಎಂದು ಆಸಿಯಾ ಹೇಳಿಕೆ ನೀಡಿದರು.
ಎಸ್‌ಐ ಹರೀಶ್ ಮತ್ತು ಸಿಡಿಪಿಒ ಶ್ರೀಮತಿ ರಶ್ಮಿ ಅಶೋಕ್ ರವರು ಅವರಿಬ್ಬರ ಹೇಳಿಕೆಗಳನ್ನು ಪಡೆದು ಆಸಿಯಾರವರು ಮನೆಯ ಜಗುಲಿಯಲ್ಲಿ ಕುಳಿತಿರುವ ಫೋಟೊ ತೆಗೆದು , ಪೊಲೀಸ್ ವಾಹನ ಹಾಗೂ ಎ.ಎಸ್.ಐ. ,ಮಹಿಳಾ ಪೋಲೀಸ್ ಸಹಿತ ಮೂವರು ಪೊಲೀಸರನ್ನು ಅಲ್ಲಿ ಕಾವಲು ನಿಲ್ಲಿಸಿ ಹೋದರು.
ಎರಡು ದಿನ ಈ ರೀತಿ ಪೋಲೀಸ್ ಕಾವಲು ನಿಲ್ಲಿಸಲಾಗಿತ್ತು. ವಿವಾದ ಇತ್ಯರ್ಥದ ಲಕ್ಷಣ ಕಾಣದಿದ್ದುದರಿಂದ ಪೋಲೀಸರು ದಿನವಿಡೀ ಕಾವಲು ನಿಲ್ಲದೆ ಆಗಾಗ ಬಂದು ಹೋಗುವ ಕ್ರಮ ಅನುಸರಿಸ ತೊಡಗಿದರು.
ಈ ಮಧ್ಯೆ ಆಸಿಯಾರವರು ಆ ಮನೆಯ ಸಿಟೌಟ್ ನಲ್ಲಿರುವ ಸೋಫಾದಲ್ಲಿ ಕುಳಿತು ಮತ್ತು ಮಲಗಿ ರಾತ್ರಿ ಕಳೆಯುವುದನ್ನು ತಪ್ಪಿಸಲಿಕ್ಕಾಗಿ ಎರಡನೇ ದಿನ ಸಿ.ಡಿ.ಪಿ.ಒ. ರಶ್ಮಿಯವರು ಸುಳ್ಯದ ಮಹಿಳಾ ಸಾಂತ್ವನ ಕೇಂದ್ರಕ್ಕೆ ಪತ್ರ ಬರೆದು ಱಆಸಿಯಾರಿಗೆ ಆಶ್ರಯ ನೀಡುವಂತೆಱ ವಿನಂತಿಸಿಕೊಂಡರು. ಅದರಂತೆ ಸಾಂತ್ವನ ಕೇಂದ್ರದ ಕಾರ್ಯಕರ್ತೆಯರು ಆಸಿಯಾರಲ್ಲಿಗೆ ಹೋಗಿ, ಸಾಂತ್ವನ ಕೇಂದ್ರಕ್ಕೆ ಬರುವಂತೆ ಕೇಳಿದಾಗ ಅವರು ನಿರಾಕರಿಸಿದರು. ಮಹಿಳಾ ಆಯೋಗದ ಆದೇಶದ ಮೇರೆಗೆ ನಾನು ಇಲ್ಲಿಗೆ ಬಂದಿರುವುದರಿಂದ ಅವರ ಆದೇಶ ಇಲ್ಲದೆ ನಾನು
ಬರುವುದಿಲ್ಲ ಎಂದು ಆಸಿಯಾ ಹೇಳಿದರೆನ್ನಲಾಗಿದೆ.
ಆಸಿಯಾರವರು ತಾನು ಇಲ್ಲಿಗೆ ಬಂದಿರುವ ಬಗ್ಗೆ ಹಾಗೂ ನಂತರದ ಬೆಳವಣಿಗೆಯನ್ನು ಆಗಾಗ ಮೊಬೈಲ್ ಟಿಕ್‌ಟಾಕ್‌ನಲ್ಲಿ ಹೇಳಿ ಸಾಮಾಜಿಕ ಜಾಲತಾಣಕ್ಕೆ ಹಾಕುತ್ತಿದ್ದು, ಜ.27 ರಿಂದ ಉಪವಾಸ ಸತ್ಯಾಗ್ರಹ ಮಾಡುವುದಾಗಿ ಟಿಕ್‌ಟಾಕ್‌ನಲ್ಲಿ ಹೇಳಿದ್ದರು. ಆದರೆ ಅವರ ಹಿತೈಷಿಗಳ ಸಲಹೆಯಂತೆ, ಉಪವಾಸ ಮಾಡದಿರಲು ನಿರ್ಧರಿಸಿದರೆಂದು ತಿಳಿದು ಬಂದಿದೆ.

ಮಂಗಳೂರಿನಲ್ಲಿ ಮಾತುಕತೆ:
ಮಂಗಳೂರಿನಲ್ಲಿರುವ ಮಹಿಳಾ ಹೋರಾಟಗಾರ್ತಿ ವಿದ್ಯಾ ದಿನಕರ್‌ರವರ ಕರೆಯ ಮೇರೆಗೆ ಜೂ.೨೮ರಂದು ಆದಿತ್ಯವಾರ ಅಪರಾಹ್ನ ಆಸಿಯಾರವರು ಮತ್ತು ಇಬ್ರಾಹಿಂ ಖಲೀಲ್, ಅವರ ತಂದೆ ಕಟ್ಟೆ ಅಬ್ದುಲ್ಲರವರು ಮತ್ತು ತಾಯಿ ಮಂಗಳೂರಿಗೆ ಹೋಗಿದ್ದಾರೆ. ಅಲ್ಲಿಯ ಮಾತುಕತೆಯ ಫಲಿತಾಂಶ ಗೊತ್ತಾಗಿಲ್ಲ.

ಫೇಸ್‌ಬುಕ್ ಮೂಲಕ ಖಲೀಲ್ ಪರಿಚಯ
ಹಿಂದೂ ಧರ್ಮದಿಂದ ಇಸ್ಲಾಂಗೆ ಮತಾಂತರ
ಆಸಿಯಾರವರ ಕುಟುಂಬ ಮೂಲತಃ ಕೇರಳದ ಕಣ್ಣೂರಿನವರು. ಸಾಕಷ್ಟು ಸ್ಥಿತಿವಂತರಾಗಿದ್ದ ಆಸಿಯಾರವರ ತಂದೆ ಗಂಗಾಧರ್ ತಾಯಿ ಹೇಮಲತಾ ಬೆಂಗಳೂರಿನಲ್ಲಿ ನೆಲೆಸಿದ್ದರೆಂದು ಹೇಳಲಾಗುತ್ತಿದೆ. ಹಿಂದೂ ಧರ್ಮದ ಇವರು ಮಗಳು ಜುಬಿ ಶಾಂತಿಯವರನ್ನು ಬೆಂಗಳೂರಿನಲ್ಲಿ ಉದ್ಯಮಿಯಾಗಿದ್ದ ವೇಣು ಎಂಬವರಿಗೆ 2014ರಲ್ಲಿ ಮದುವೆ ಮಾಡಿ ಕೊಟ್ಟಿದ್ದರು.
ಆಸಿಯಾರವರು ಹೇಳುವ ಪ್ರಕಾರ “2014  ಮಾರ್ಚಲ್ಲಿ ನನಗೆ ಮದುವೆಯಾಗಿತ್ತು. ಗಂಡ ಬಿಸಿನೆಸ್ ಮ್ಯಾನ್. ನನ್ನೊಡನೆ ಕಳೆಯಲು ಅವರಿಗೆ ಸಮಯವಿರುತ್ತಿರಲಿಲ್ಲ.ಆ ಸಂದರ್ಭದಲ್ಲಿ ೨೦೧೪ ನವೆಂಬರ್‌ನಲ್ಲಿ ಇಬ್ರಾಹಿಂ ಖಲೀಲ್ ಕಟ್ಟೆಕ್ಕಾರ್ ಫೇಸ್‌ಬುಕ್‌ನಲ್ಲಿ ಪರಿಚಯವಾದ. ಆತನೊಂದಿಗೆ ಆತ್ಮೀಯತೆ ಬೆಳೆಯಿತು. ಆತ ಬೆಂಗಳೂರಿಗೆ ಬಂದು ನನ್ನನ್ನು ಭೇಟಿಯಾದ. ಹೀಗೆ ನಮ್ಮ ಸಂಬಂಧ ಬೆಳೆಯಿತು. 2015 ರಲ್ಲಿ ನಾನು ಗಂಡನಿಂದ ವಿಚ್ಛೇದನ ಪಡೆದೆ. ಬಳಿಕ ೨೦೧೬ರಲ್ಲಿ ನನ್ನ ತಂದೆ ನಿಧನರಾದರು. ಬಳಿಕ ನಾನು ಇಬ್ರಾಹಿಂ ಖಲೀಲ್‌ನ ಸಲಹೆಯ ಮೇರೆಗೆ ಇಸ್ಲಾಂ ಧರ್ಮಕ್ಕೆ ಬೆಂಗಳೂರಿನಲ್ಲಿ ಮತಾಂತರಗೊಂಡು ಆಸಿಯಾ ಎಂದು ಹೆಸರು ಬದಲಿಸಿದೆ. ಆ ಬಳಿಕ  2017 ರಲ್ಲಿ ಮದುವೆಯಾದೆವು. ಎಲ್ಲ ದಾಖಲೆಗಳನ್ನು ನಾನು ಡಿವೈಎಸ್‌ಪಿ ಯವರಲ್ಲಿ ಮತ್ತು ಎಸ್.ಪಿ.ಯವರಲ್ಲಿ ನೀಡಿzನೆ. 2020  ಜನವರಿ ವರೆಗೂ ನಮ್ಮ ಸಂಬಂಧ ಚೆನ್ನಾಗಿಯೇ ಇತ್ತು. ನಂತರ ಆತ ನನ್ನ ಸಂಪರ್ಕ ಬಿಟ್ಟು ಬಿಟ್ಟ. ನಾನು ಫೆಬ್ರವರಿಯಲ್ಲಿ ಇಲ್ಲಿಗೆ ಇದೇ ಮನೆಗೆ ಬಂದಿದ್ದೆ. ಆಗ ಮನೆಯವರೆಲ್ಲರೂ ಚೆನ್ನಾಗಿ ಮಾತಾಡಿ ಕಳಿಸಿದರು. ಆದರೆ ಖಲೀಲ್ ಬರಲಿಲ್ಲ. ಅದಕ್ಕಾಗಿ ನಾನು ಬೆಂಗಳೂರಲಿಲ್ಲಿ ಎಸ್.ಡಿ.ಪಿ.ಐ. ಸಂಘಟನೆಯವರಿಗೆ ಮತ್ತು ಹಲವು ಧರ್ಮ ಗುರುಗಳಿಗೆ ದೂರು ನೀಡಿದೆ. ಸಂಘಟನೆಯವರು ಖಲೀಲ್ ಮತ್ತು ಅವರ ಅಣ್ಣ ಶಿಹಾಬ್‌ರನ್ನು ಬೆಂಗಳೂರಿಗೆ ಕರೆಸಿ ಮಾತುಕತೆ ನಡೆಸಿದರು. ಅಲ್ಲಿಂದ ಖಲೀಲ್‌ನನ್ನು ನನ್ನ ಜತೆ ಕಳುಹಿಸಿ ಕೊಟ್ಟಿದ್ದರು. ಖಲೀಲ್ ಮತ್ತು ನನಗೆ ಮದುವೆಯಾಗಿರುವುದು ಖಚಿತಗೊಂಡ ಬಳಿಕವೇ ಅವನನ್ನು ಕಳಿಸಿದ್ದರು. ಈಗ ಮದುವೆಯಾಗಿಲ್ಲ ಎನ್ನುತ್ತಿದ್ದಾರೆ“ ಎಂದು ಆಸಿಯಾ ಹೇಳುತ್ತಾರೆ. “ನನ್ನ ಹೆಸರಲ್ಲಿ ಬೆಂಗಳೂರಿನ ನಾಗರಬಾವಿಯಲ್ಲಿ ಮೂರುವರೆ ಕೋಟಿ ರೂ.ಗಳ ಮನೆ ಇತ್ತು. ನಾನು ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡಿದ್ದರಿಂದ ಮನೆಯವರು ನನ್ನ ಹೆಸರಿನಿಂದ ಆ ಮನೆಯನ್ನು ತಾಯಿ ಹೆಸರಿಗೆ ಬರೆಸಿಕೊಂಡರು. ಆ ನಂತರ ಇವರು ನನ್ನನ್ನು ಉಪೇಕ್ಷಿಸ ತೊಡಗಿದ್ದಾರೆ“ ಎಂದು ಅವರು ಹೇಳುತ್ತಾರೆ.

ಶಿಹಾಬ್ ಕಟ್ಟೆಕ್ಕಾರ್ ಹೇಳಿಕೆ
ಪ್ರಕರಣದ ಬಗ್ಗೆ ಇಬ್ರಾಹಿಂ ಖಲೀಲ್ ಪೋಲೀಸರ ಸಮ್ಮುಖ ನಿರಾಕರಣೆಯ ಹೇಳಿಕೆ ನೀಡಿದ್ದು ಪತ್ರಿಕೆಗೆ ಸಂಪರ್ಕಕ್ಕೆ ಲಭ್ಯರಾಗಿಲ್ಲ. ಅವರ ಅಣ್ಣ ಶಿಹಾಬ್ ಕಟ್ಟೆಕ್ಕಾರ್‌ರವರನ್ನು ಸಂಪರ್ಕಿಸಿ ವಿಚಾರಿಸಿದಾಗ “ಅವಳು ಸುಳ್ಳು ಸುಳ್ಳೇ ಹೇಳುತ್ತಿದ್ದಾಳೆ. ಮತಾಂತರಗೊಂಡದ್ದಕ್ಕೆ ದಾಖಲೆ ಇಲ್ಲ. ಮದುವೆ ಯಾದುದಕ್ಕೆ ದಾಖಲೆ ಇಲ್ಲ. ಅವಳ ಆಧಾರ್ ಕಾರ್ಡ್ ಕೂಡಾ ಅವಳಲ್ಲಿಲ್ಲ. ಬೆಂಗಳೂರಿಗೆ ಪಂಚಾತಿಕೆಗೆ ನಾವು ಹೋದುದು ಹೌದು. ಫೆಬ್ರವರಿಯಲ್ಲಿ ಅವಳು ಸುಳ್ಯದ ನಮ್ಮ ಮನೆಗೆ ಬಂದುದೂ ಹೌದು. ಬೆಂಗಳೂರಿನಲ್ಲಿ ಪಂಚಾತಿಕೆದಾರರ ಒತ್ತಾಯದ ಮೇರೆಗೆ ನಾನು ತಮ್ಮನನ್ನು ಅವಳ ಜತೆ ಒಂದು ವಾರದ ಮಟ್ಟಿಗೆ ಎಂದು ಕಳಿಸಿದ್ದೆ. ಎರಡೇ ದಿನದಲ್ಲಿ ಆಕೆಯೇ ಹೊರಟು ಹೋಗಿದ್ದಾಳೆ. ಅವಳಲ್ಲಿ ದಾಖಲೆಗಳಿದ್ದರೆ ಕೇಸು ಮಾಡಲಿ. ನ್ಯಾಯಾಲಯದಲ್ಲಿ ಸತ್ಯ ಹೊರಗೆ ಬರಲಿ`’ ಎಂದು ಹೇಳಿದರು.

ಕ್ವಾಲಿಸ್‌ನಲ್ಲಿ ಬಂದು ಪವರ್ ಬ್ಯಾಂಕ್ ಒದಗಣೆ
ಜೂ.೨೫ರಂದು ರಾತ್ರಿ ೧೨ ಗಂಟೆ ಸುಮಾರಿಗೆ ಮಂಗಳೂರಿನಿಂದ ಕ್ವಾಲಿಸ್ ವಾಹನದಲ್ಲಿ ಬಂದ ಕೆಲ ಯುವಕರು ಮನೆಯ ಜಗಲಿಯಲ್ಲಿ ಕುಳಿತಿದ್ದ ಆಕೆಯ ಬಳಿಗೆ ಹೋಗಿ ಮಾತನಾಡುತ್ತಿದ್ದರು. ಶಿಹಾಬ್ ಕಟ್ಟೆಕ್ಕಾರ್ ಮತ್ತಿತರರಿಗೆ ಈ ವಿಷಯ ತಿಳಿದು ಅವರು ಬಂದು ಯುವಕರನ್ನು ಆಕ್ಷೇಪಿಸಿದರು. ಅಲ್ಲಿದ್ದ ಪೋಲೀಸರು ಯುವಕರನ್ನು ವಿಚಾರಿಸಿದಾಗ `ಪವರ್ ಬ್ಯಾಂಕ್ ಕೊಡಲು ನಾವು ಬಂದದ್ದು` ಎಂದು ಹೇಳಿದರೆಂದು ತಿಳಿದು ಬಂದಿದೆ. ಬಳಿಕ ಪೋಲೀಸರು ಅವರನ್ನು ಕಳುಹಿಸಿದರು.

ಲಾಡ್ಜ್‌ನಲ್ಲಿ ತಂಗಿದ್ದರು
ಎರಡು ವಾರದ ಹಿಂದೆ ಪೋಲೀಸ್ ಠಾಣೆಗೆ ಬಂದಿದ್ದ ಆಸಿಯಾರವರು ಬೆಂಗಳೂರಿಗೆ ಹಿಂತಿರುಗಿರಲಿಲ್ಲವೆಂದೂ, ಪೋಲೀಸ್ ಠಾಣೆಯ ಎದುರಿನ ಗೋಲ್ಡನ್ ಟವರ್‌ನಲ್ಲಿ ವಾಸ್ತವ್ಯ ಹೂಡಿದ್ದರೆಂದೂ ತಿಳಿದು ಬಂದಿದೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.