Breaking News

ಗಗನಮುಖಿ ಟವರ್‌ನಲ್ಲಿ ಗಗನ ಕುಸುಮವಾದ ನೆಟ್‌ವರ್ಕ್ ರೆಂಜಾಳದಲ್ಲಿ ನಿರ್ಮಾಣವಾದ ಟವರ್ ಕಾರ್ಯಾಚರಿಸುತ್ತಿಲ್ಲ

Advt_Headding_Middle
Advt_Headding_Middle

 

– ದಯಾನಂದ ಕೊರತ್ತೋಡಿ
ಹಲವು ವರ್ಷಗಳ ಬೇಡಿಕೆಯಾಗಿದ್ದ ರೆಂಜಾಳ ಭಾಗದಲ್ಲೊಂದು ಟವರ್ ನಿರ್ಮಾಣವಾಗ ಬೇಕೆಂಬುದು ಕೊನೆಗೂ ಈಡೇರಿದೆ. ಆದರೆ ಟವರ್ ನಿರ್ಮಾಣಗೊಂಡು ತಿಂಗಳುಗಳೇ ಕಳೆದರೂ ಕಾರ್ಯಾರಂಭಿಸಲು ಮುಹೂರ್ತವೇ ಸಿಕ್ಕಿಲ್ಲ. ನಿರ್ಮಾಣ ವಾಗಿಯೂ ಕಾರ್ಯಾ ರಂಭಿಸದ ಟವರ್‌ಗೆ ಮಳೆಗಾಲದಲ್ಲಿ ತರಕಾರಿ ಬಳ್ಳಿ ಬಿಡಲು ಯೋಗ್ಯ ಎಂದು ಸ್ಥಳೀಯರು ಮಾತಾಡಿಕೊಳ್ಳುವಂತಾಗಿದೆ.


ಮರ್ಕಂಜ ಹಾಗೂ ನೆಲ್ಲೂರು ಕೆಮ್ರಾಜೆ ಗ್ರಾಮಗಳ ರೆಂಜಾಳ, ಹೈದಂಗೂರು, ದಾಸರಬೈಲು, ಕುದ್ಕುಳಿ, ಬೊಮ್ಮಾರು, ಕಟ್ಟಕೋಡಿ, ಬೊಳ್ಳಾಜೆ ಮತ್ತಿತರ ಊರಿನ ಜನರು ಮೊಬೈಲ್ ನೆಟ್ ವರ್ಕ್ ವ್ಯವಸ್ಥೆಯಿಂದ ವಂಚಿತರಾಗಿದ್ದರು. ಮರ್ಕಂಜ ಮತ್ತು ದೊಡ್ಡತೋಟ ಹಾಗೂ ಅರಂತೋಡಿನಲ್ಲಿರುವ ಟವರ್‌ಗಳಿಂದ ಅಲ್ಪಸ್ವಲ್ಪ ರೇಂಜ್‌ಗಳು ಮಾತ್ರ ಆಗೊಮ್ಮೆ ಈಗೊಮ್ಮೆ ಕೆಲವು ಕಡೆಗಳಲ್ಲಿ ಸಿಗುತ್ತಿದ್ದರೂ ಅದರಿಂದ ಮಾತನಾಡಲು ಇಂಟರ್‌ನೆಟ್ ಉಪಯೋಗಿಸಲು ಸಾಧ್ಯವಾಗುತ್ತಿರಲಿಲ್ಲ. ಹೀಗಾಗಿ ಇದೇ ಊರಿನ ಶಂಕರನಾರಾಯಣ ಉಪಾಧ್ಯಾಯ, ಮಹಾಬಲ ಕಟ್ಟಕ್ಕೋಡಿ ಮತ್ತಿತರರ ಮಂದಾಳತ್ವದಲ್ಲಿ ಹರೀಶ್ ಕಂಜಿಪಿಲಿ, ಮೋನಪ್ಪ ಪೂಜಾರಿ ಹೈದಂಗೂರು ಮತ್ತಿತರರ ನೇತೃತ್ವದಲ್ಲಿ ರೆಂಜಾಳ ಶ್ರೀ ಶಾಸ್ತಾವು ಸದಾಶಿವ ಮಹಾಗಣಪತಿ ದೇವಸ್ಥಾನದ ಬ್ರಹ್ಮಕಲಶೋತ್ಸವ ಸಂದರ್ಭದಲ್ಲಿ ಬಂದಿದ್ದ ಸಂಸದ ನಳಿನ್ ಕುಮಾರ್ ಕಟೀಲ್‌ರವರಿಗೆ ರೆಂಜಾಳದಲ್ಲೊಂದು ಟವರ್ ನಿರ್ಮಾಣವಾಗಬೇಕೆಂದು ಮನವಿ ಮಾಡಿದ್ದರು. ಇದಕ್ಕೆ ಸ್ಪಂದಿಸಿದ ಸಂಸದರು ರೆಂಜಾಳ ಭಾಗದಲ್ಲಿ ಟವರ್ ನಿರ್ಮಿಸುವ ಭರವಸೆ ನೀಡಿದ್ದರು. ಆದರೆ ಅದು ಭರವಸೆಯಾಗಿಯೇ ಉಳಿದಿತ್ತು. ರೆಂಜಾಳದಲ್ಲಿ ಟವರ್ ನಿರ್ಮಾಣವಾಗದ ಬಗ್ಗೆ ಮರ್ಕಂಜ ಗ್ರಾಮಸಭೆಯಲ್ಲಿ ಗ್ರಾಮಸ್ಥರು ಪ್ರಶ್ನಿಸಿದ್ದರು. ಅಲ್ಲದೇ ಊರಿನ ಪ್ರಮುಖರು ಜನಪ್ರತಿನಿಧಿಗಳ ಗಮನಕ್ಕೂ ತಂದಿದ್ದರು. ಈ ಎಲ್ಲಾ ಪ್ರಯತ್ನದಿಂದಾಗಿ ಸರಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್ ಟವರ್ ರೆಂಜಾಳ ಶಾಂತಪ್ಪ ಗೌಡ ಎಂಬವರ ಮನೆಯ ಬಳಿ ನಿರ್ಮಾಣವಾಗಿದೆ. ಟವರ್ ನಿರ್ಮಾಣವಾಗಿ ಹಲವು ತಿಂಗಳು ಕಳೆದರೂ ಕಾರ್ಯಾರಂಭ ಮಾತ್ರ ಆಗಲೇ ಇಲ್ಲ. ಮೊಬೈಲ್ ನೆಟ್‌ವರ್ಕ್ ಸಿಗ್ನಲ್ ಎದುರು ನೋಡುತ್ತಿರುವ ಗ್ರಾಹಕರಿಗೆ ಇದರಿಂದ ನಿರಾಸೆಯಾಗಿರುವುದಂತೂ ಸತ್ಯ. ಟವರ್‌ಗೆ ಬಿಎಸ್‌ಎನ್‌ಎಲ್ ಬೋರ್ಡ್ ಅಳವಡಿಸಿದ್ದಾರೆ. ಜನರೇಟರ್, ವಿದ್ಯುತ್ ಸಂಪರ್ಕ ಯಾವುದೂ ಆಗಿಲ್ಲ. ನೆಟ್ ವರ್ಕ್ ಸಮಸ್ಯೆಯಿಂದ ಬಳಲುತ್ತಿರುವ ಈ ಭಾಗದ ಜನರು ತಮ್ಮ ಮೊಬೈಲ್‌ಗೆ ಸಿಗ್ನಲ್ ಯಾವಾಗ ದೊರೆಯುತ್ತದೆಂದು ಜಾತಕ ಪಕ್ಷಿಯಂತೆ ಕಾಯುವಂತಾಗಿದೆ.
ಡಿಜಿಟಲ್ ಇಂಡಿಯಾ ಯುಗದಲ್ಲಿ ಆನ್‌ಲೈನ್ ತರಗತಿಗಳು, ವರ್ಕ್ ಫ್ರಮ್ ಹೋಂ ಮಾಡುತ್ತಿರುವ ಉದ್ಯೋಗಸ್ಥರನ್ನು ನೆಟ್ ವರ್ಕ್ ಸಮಸ್ಯೆ ನಿರಂತರವಾಗಿ ಕಾಡುತ್ತಿದೆ. ನೆಟ್ ವರ್ಕ್ ಇಲ್ಲದ ಕಾರಣದಿಂದ ಸಾಕಷ್ಟು ವಿದ್ಯಾರ್ಥಿಗಳು ತಮ್ಮ ಆನ್‌ಲೈನ್ ತರಗತಿಗಳನ್ನು ಕಳೆದುಕೊಂಡಿದ್ದಾರೆ. ಸಾವು ನೋವುಗಳು ಸಂಭವಿಸಿದಾಗಲೂ ನೆಟ್‌ವರ್ಕ್ ಇಲ್ಲದೇ ಸುದ್ದಿ ಮುಟ್ಟಿಸಲು ಪರದಾಡುವಂತಾಗಿದೆ. ರೆಂಜಾಳದಲ್ಲಿ ನಿರ್ಮಾಣವಾದ ಟವರ್ ನ ಎಲ್ಲಾ ಕೆಲಸ ಮುಗಿಸಿ ಶೀಘ್ರದಲ್ಲಿ ಉದ್ಘಾಟಿಸಬೇಕೆಂಬುದು ಊರಿನವರ ಒತ್ತಾಯವಾಗಿದೆ. ಒಟ್ಟಾಗಿ ಗ್ರಾಮೀಣ ಪ್ರದೇಶಗಳನ್ನು ನಿರ್ಲಕ್ಷ್ಯ ಮಾಡದೇ ಅಗತ್ಯ ಸೌಕರ್ಯಗಳಲ್ಲಿ ಒಂದಾದ ಮೊಬೈಲ್ ನೆಟ್‌ವರ್ಕ್‌ನ್ನು ನೀಡುವುದು ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ಕರ್ತವ್ಯವಾಗಿದೆ.

“ಡಿಜಿಟಲ್ ಇಂಡಿಯಾ ಆಗಬೇಕಾದರೆ ಗ್ರಾಮೀಣ ಪ್ರದೇಶಗಳು ನೆಟ್‌ವರ್ಕ್ ಗಳಿಂದ ವಂಚಿತವಾಗಬಾರದು. ವಿದ್ಯಾರ್ಥಿಗಳಿಗೆ ಆನ್‌ಲೈನ್ ಕ್ಲಾಸ್, ವರ್ಕ್ ಫ್ರಮ್ ಹೋಮ್ ಮಾಡಲು ನೆಟ್ ಬೇಕೇ ಬೇಕು. ಗ್ರಾಮದಲ್ಲಿ ನೆಟ್‌ವರ್ಕ್ ವಿಚಾರ ದಲ್ಲಿ ನಿರ್ಲಕ್ಷ್ಯ ಸಲ್ಲದು. ರೆಂಜಾಳ ಟವರ್ ನಿರ್ಮಾಣವಾಗಿ ಕಾರ್ಯರಂಭವಾಗದಿರುವ ಬಗ್ಗೆ ಈಗಾಗಲೇ ಸಂಸದರು, ಶಾಸಕರು, ಜಿ.ಪಂ.ಸದಸ್ಯರ ಗಮನಕ್ಕೆ ತರಲಾಗಿದೆ. ನೆಟ್‌ವರ್ಕ್‌ಗಾಗಿ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ರೆಂಜಾಳ ಟವರ್ ಆದಷ್ಟು ಬೇಗ ಕಾರ್ಯಾಚರಿಸುವಂತಾಗಬೇಕು”
-ಶಂಕರ ನಾರಾಯಣ ಭಟ್ ಉಪಾಧ್ಯಾಯ ದಾಸರಬೈಲು

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.