ಕೋವಿಡ್ -೧೯ ಪರಿಣಾಮ ಸಾಮಾಜಿಕ ಜಗತ್ತಿನ ಅಂತರಂಗದ ಕದ ತಟ್ಟಿದೆ. ಈ ಬಿಕ್ಕಟ್ಟು ಜಾಗತಿಕ ಆರ್ಥಿಕತೆಯನ್ನು ನಾಶಪಡಿಸಿದೆ ಅದರ ಜೊತೆಗೆ ಮನುಷ್ಯನ ಮಾನವೀಯತೆಯ ಮೇಲೆ ಸವಾಲಾಗಿ ಪರಿಣಮಿಸುತ್ತಿದೆ.
ಸಾಮಾಜಿಕವಾಗಿ ಮನುಷ್ಯನನ್ನು ಪರಸ್ಪರ ಹತ್ತಿರಕ್ಕೆ ತರುತ್ತಿದ್ದ ಸಾಮಾಜಿಕ ಚಟುವಟಿಕೆಗಳು ಇಂದು ಸಾಮಾಜಿಕ ಅಂತರದಿಂದಾಗಿ ಮನುಷ್ಯನನ್ನು ಪರಸ್ಪರ ದೂರಗೊಳಿಸಿದೆ.
ಭಾರತೀಯ ಸಂಪ್ರದಾಯದ ಪುನರಾರಂಭವು ಎಂಬಂತೆ ಪರಸ್ಪರ ಕೈಕುಲುಕುವಿ ಕೆಯಿಂದ ಕೈ ಜೋಡಿಸಿ ನಮಸ್ಕರಿಸುವ ಪದ್ಧತಿ ಮನುಷ್ಯನಲ್ಲಿ ತಮಗರಿವಿಲ್ಲದೆ ಹೆಚ್ಚಾಗಿರುವ ದುರಹಂಕಾರವನ್ನು ಕಡಿಮೆಗೊಳಿಸಿ ನಮ್ಮ ಸಂಸ್ಕೃತಿಯ ಎದುರು ತಲೆಬಾಗುವಂತೆ ಮಾಡಿದೆ.
ಲೈಂಗಿಕ ಅಭ್ಯಾಸದಲ್ಲಿ ಬದಲಾವಣೆ ಅಚ್ಚರಿ ಮೂಡಿಸುವಂತಿದೆ. ಸ್ವೇಚ್ಛಾಚಾರದ ಲೈಂಗಿಕತೆಗೆ ಬದಲಾಗಿ ಆಚಾರದ ಲೈಂಗಿಕತೆ ಅಭ್ಯಾಸವಾದಂತಿದೆ. ಅದೆಷ್ಟೋ ವೇಶ್ಯಾಗೃಹಗಳು ಮುಚ್ಚಲ್ಪಡುತ್ತಿವೆ.
ಕೆಲಸದ ಸಂಸ್ಕೃತಿ ಹಾಗೂ ವ್ಯವಸ್ಥೆಗಳಲ್ಲಿ ಬದಲಾವಣೆ ಕಂಡುಬರುತ್ತಿದೆ. ಮನೆಯಿಂದ ಕೆಲಸ ಮಾಡುವ ಪದ್ಧತಿ ಲಿಂಗ ಸಮಾನತೆಯನ್ನು ಉತ್ತೇಜಿಸುವಂತಿದೆ.
ಜನರ ಸಾಮಾಜಿಕ ಚಲನೆಯಲ್ಲಿ ಬದಲಾವಣೆ ಕಂಡು ಬರುತ್ತಿದೆ. ಅನಗತ್ಯ ಚಲನೆ, ಜನಜಂಗುಳಿ ಗಳು ಕಡಿಮೆಯಾದಂತೆ ಭಾಸವಾಗುತ್ತದೆ.
ಜನರ ಕೊಳ್ಳುಬಾಕತನದ ಸಂಸ್ಕೃತಿ ಗಣನೀಯವಾಗಿ ಕಡಿಮೆಯಾಗಿದೆ. ನೈರ್ಮಲೀಕರಣ ಕ್ಕೆ ಜನ ಬಹಳಷ್ಟು ಮಹತ್ವ ನೀಡುತ್ತಿದ್ದಾರೆ. ಹೋಟೆಲ್ ಉದ್ಯಮಿಗಳ ಪ್ರಕಾರ ಗ್ರಾಹಕರು ಶುಚಿತ್ವದ ಆಹಾರಕ್ಕೆ ಹೆಚ್ಚು ಮಹತ್ವವನ್ನು ನೀಡುತ್ತಿದ್ದಾರೆ ಎಂಬ ಅಂಶ ತಿಳಿದುಬಂದಿದೆ.
ಡಿಜಿಟಲ್ ಜಗತ್ತು ಇಂದು ಸರ್ವವ್ಯಾಪಿಯಾಗಿದೆ ಪ್ರತಿಯೊಬ್ಬರಿಗೂ ಡಿಜಿಟಲ್ ಸಂಸ್ಕೃತಿಯ ಅರಿವಾಗುತ್ತಿದೆ.
ಶಿಕ್ಷಣ ಸಂಸ್ಥೆಗಳ ಮಹತ್ವದ ಅರಿವು ಸಮಾಜಕ್ಕೆ ಮೂಡಿದೆ.ಮಕ್ಕಳು ಶಿಕ್ಷಣ ವ್ಯವಸ್ಥೆಯಿಂದ ದೂರವಾಗಿರುವುದು ದಿನೇದಿನೇ ಪಾಲಕರಲ್ಲಿ ಆತಂಕ ಹೆಚ್ಚಾಗುವಂತೆ ಮಾಡಿದೆ. ಶಿಕ್ಷಕರ ಹಾಗೂ ಶಿಕ್ಷಣ ವ್ಯವಸ್ಥೆಯ ಮಹತ್ವ ಅಂದರೆ ಔಪಚಾರಿಕ ಶಿಕ್ಷಣದ ಮಹತ್ವದ ಹೆಚ್ಚಾಗುತ್ತಿದೆ.
ಅಮೆರಿಕದಂತಹ ರಾಷ್ಟ್ರಗಳ ವಿಭಕ್ತ ಕುಟುಂಬ ವ್ಯವಸ್ಥೆಗೆ ಮಾರುಹೋಗಿದ್ದ ಭಾರತೀಯರು, ಭಾರತೀಯ ಸಾಮಾಜಿಕ ವ್ಯವಸ್ಥೆಯ ಆಧಾರ ಸ್ತಂಭಗಳಲ್ಲಿ ಒಂದಾದ ಅವಿಭಕ್ತ ಕುಟುಂಬ ವ್ಯವಸ್ಥೆಯ ಪದ್ಧತಿ ಯನ್ನು ತಮಗರಿವಿಲ್ಲದೆ ಒಪ್ಪಿಕೊಂಡಂತಿದೆ.
ಕುಸಿದು ಹೋಗಿದ್ದ ಸಾವಯವ ಕೃಷಿ ಪದ್ಧತಿಗೆ ಮತ್ತೆ ಜೀವ ಬಂದಂತಿದೆ.
ಫ್ರಾನ್ಸಿನ ಸಮಾಜಶಾಸ್ತ್ರ ಜ್ಞಾನದ ಡೇವಿಡ್ ಎ ಮಿಲ್ ಡರ್ಕಿಮ್ ಅವರ ಆತ್ಮಹತ್ಯೆ ಸಿದ್ಧಾಂತದಲ್ಲಿ ಉಲ್ಲೇಖಿಸಿದ ಸಾಮಾಜಿಕ ವ್ಯವಸ್ಥೆಯಲ್ಲಿನ ಬದಲಾವಣೆ, ನಿರಾಶಾವಾದ, ಖಿನ್ನತೆ ಆತ್ಮಹತ್ಯೆಗೆ ಕಾರಣವಾಗುತ್ತದೆ ಎಂಬುದರ ಪ್ರಾಯೋಗಿಕ ಅರಿವು ಮೂಡುತ್ತಿದೆ.
ಈ ರೀತಿಯಾಗಿ ಕೋವಿಡ್- ೧೯ಒಟ್ಟಾರೆಯಾಗಿ ಸಾಮಾಜಿಕ ವ್ಯವಸ್ಥೆಯಲ್ಲಿ ಮಹತ್ತರವಾದ ಬದಲಾವಣೆಗೆ ಕಾರಣವಾಗಿದೆ. ಈ ವಿಕೋಪದ ಬಗ್ಗೆ ಪ್ರಾಮಾಣಿಕ ಕಾಳಜಿ, ಅಧ್ಯಯನ ಹಾಗೂ ನಿರ್ವಹಣೆಯ ಅಗತ್ಯವಿದೆ. ಆರೋಗ್ಯಕರ ಸಾಮಾಜಿಕ ವ್ಯವಸ್ಥೆಯ ಪುನರ್ ನಿರ್ಮಾಣದ ಕಾರ್ಯ ಆಗಬೇಕಿದೆ.
– ಆರತಿ ಕೆ.
ಸಮಾಜ ಶಾಸ್ತ್ರ ಉಪನ್ಯಾಸಕಿ
ಕೆ.ಎಸ್.ಎಸ್. ಕಾಲೇಜು ಸುಬ್ರಹ್ಮಣ್ಯ