Breaking News

ಬಾಳಿಲ ವಿದ್ಯಾಬೋಧಿನೀ ಪ್ರೌಢಶಾಲಾ ಮುಖ್ಯೋಪಾಧ್ಯಾಯ ಶಿವರಾಮ ಶಾಸ್ತ್ರಿ ನಿವೃತ್ತಿ, ಬೀಳ್ಕೊಡುಗೆ

Advt_Headding_Middle
Advt_Headding_Middle

ಮಾ. ೩೧ರಂದು ನಿವೃತ್ತರಾದ ಮುಖ್ಯೋಪಾಧ್ಯಾಯರಾದ ಶಿವರಾಮ ಶಾಸ್ತ್ರಿಯವರಿಗೆ ಬೀಳ್ಕೊಡುಗೆ ಕಾರ್ಯಕ್ರಮವು ಜು. ೩೧ರಂದು ವಿದ್ಯಾಬೋಧಿನೀ ಎಜ್ಯುಕೇಶನ್ ಸೊಸೈಟಿಯ ಸಂಚಾಲಕ ನೆಟ್ಟಾರು ವೆಂಕಟ್ರಮಣ ಭಟ್‌ರವರ ಅಧ್ಯಕ್ಷತೆಯಲ್ಲಿ ನಡೆಯಿತು. ವಿಧಾನ ಪರಿಷತ್ ಮಾಜಿ ಸದಸ್ಯ ಅಣ್ಣಾ ವಿನಯಚಂದ್ರ ನಿವೃತ್ತರನ್ನು ಸನ್ಮಾನಿಸಿ ಅಭಿನಂದನಾ ಮಾತುಗಳನ್ನಾಡಿದರು.

ಸುಳ್ಯ ಶಿಕ್ಷಣಾಧಿಕಾರಿ ಮಹಾದೇವ, ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಲಕ್ಷ್ಮೀಶ ರೈ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕರಾದ ಚಂದ್ರಶೇಖರ ಪೇರಾಲು, ತಾ.ಪಂ. ಸಾಮಾಜಿಕ ನ್ಯಾಯ ಮಂಡಳಿ ಅಧ್ಯಕ್ಷೆ ಶ್ರೀಮತಿ ಜಾಹ್ನವಿ ಕಾಂಚೋಡು, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಬಾಲಕೃಷ್ಣ ಪುತ್ಯ, ಶಿವರಾಮ ಶಾಸ್ತ್ರಿಯವರ ಧರ್ಮಪತ್ನಿ ಶ್ರೀಮತಿ ವಸಂತಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಹ ಶಿಕ್ಷಕ ಉದಯ ಕುಮಾರ್ ರೈ ಶಿಕ್ಷಕರ ಪರವಾಗಿ ಮತ್ತು ನಿವೃತ್ತ ಮುಖ್ಯೋಪಾಧ್ಯಾಯ ಜತ್ತಪ್ಪ ಗೌಡ ನಿವೃತ್ತ ಸಿಬ್ಬಂದಿಗಳ ಪರವಾಗಿ ಅಭಿನಂದನೆಗಳನ್ನು ಸಲ್ಲಿಸಿದರು. ಶಿಕ್ಷಕ ರಾಘವೇಂದ್ರ ಕೆ.  ಸನ್ಮಾನ ಪತ್ರ ವಾಚಿಸಿದರು. ಎಜ್ಯುಕೇಶನ್ ಸೊಸೈಟಿಯ ಕೋಶಾಧಿಕಾರಿ ಕಿರಣ್ ನೆಟ್ಟಾರು ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಸಹ ಶಿಕ್ಷಕ ವೆಂಕಟೇಶ್ ಕುಮಾರ್ ಪ್ರಾರ್ಥಿಸಿದರು. ಸಹ ಶಿಕ್ಷಕಿ ಶ್ರೀಮತಿ ಸಹನಾ ಬಿ.ಬಿ. ಕಾರ್ಯಕ್ರಮ ನಿರೂಪಿಸಿ, ಶಿಕ್ಷಕ ಲೋಕೇಶ್ ಬೆಳ್ಳಿಗೆ ವಂದಿಸಿದರು. ಮುಖ್ಯ ಶಿಕ್ಷಕ ಯಶೋಧರ ನಾರಾಲು ವೇದಿಕೆಯಲ್ಲಿ ಉಪಸ್ಥಿತರಿದ್ದು ನಿವೃತ್ತರಿಗೆ ಶುಭ ಹಾರೈಸಿದರು. ನಿವೃತ್ತ ಶಿಕ್ಷಕರಾದ ಶಿವರಾಮ ಶಾಸ್ತ್ರಿಯವರು ವೈಫೈ ಇರುವ ಕಲರ್ ಪ್ರಿಂಟರ್‌ನ್ನು ಶಾಲೆಗೆ ಕೊಡುಗೆಯಾಗಿ ನೀಡಿದರು.

ಆಚಳ್ಳಿ ಸುಬ್ರಾಯ ಶಾಸ್ತ್ರಿ ಮತ್ತು ಸೌಭದ್ರೆ ದಂಪತಿಗಳ ಏಕೈಕ ಪುತ್ರನಾಗಿ ೧೩ ಜುಲೈ ೧೯೬೦ ರಂದು ಜನಿಸಿದ ಶಿವರಾಮ ಶಾಸ್ತ್ರಿಯವರು ತಮ್ಮ ಪ್ರಾಥಮಿಕ ವಿದ್ಯಾಭ್ಯಾಸವನ್ನು ಗುತ್ತಿಗಾರು ಸ.ಹಿ.ಪ್ರಾ.ಶಾಲೆ ಹಾಗೂ ಪ್ರೌಢಶಿಕ್ಷಣವನ್ನು ಗುತ್ತಿಗಾರು ಸರಕಾರಿ ಪ್ರೌಢಶಾಲೆಯಲ್ಲಿ ಎರಡನೇ ತಂಡದೊಂದಿಗೆ ಅತ್ಯುತ್ತಮ ಶ್ರೇಣಿಯಲ್ಲಿ ಉತ್ತೀರ್ಣರಾಗಿ, ಮುಂದೆ ಉಡುಪಿ ಎಸ್.ಎಂ.ಎಸ್.ಪಿ. ಸಂಸ್ಕೃತ ಮಹಾಪಾಠಶಾಲೆಯಲ್ಲಿ ಪದವಿ ಪೂರೈಸಿ, ಸಂಸ್ಕೃತ ವಿದ್ವಾನ್ (ಎಂ.ಎ. ತತ್ಸಮಾನ) ಜೋತಿಷ್ಯ ಐಚ್ಛಿಕ ವಿಷಯದಲ್ಲಿ ಸ್ನಾತಕೋತ್ತರಪದವಿಯನ್ನು ಮೊದಲ ರ್‍ಯಾಂಕ್‌ನೊಂದಿಗೆ ಪಡೆದುಕೊಂಡರು. ಶಿಕ್ಷಕ ಪ್ರಶಿಕ್ಷಣ (ಬಿಎಡ್ ತತ್ಸಮಾನ) ಪದವಿಯಾದ ಸಂಸ್ಕೃತ ಶಿಕ್ಷಾಶಾಸ್ತ್ರಿಯನ್ನು ತಿರುಪತಿಯ ಕೇಂದ್ರೀಯ ವಿದ್ಯಾಪೀಠದಲ್ಲಿ ಪಡೆದಿದು. ಇದರ ನಡುವೆ ಖಾಸಗಿಯಾಗಿ ಮದ್ರಾಸಿನ ದಕ್ಷಿಣಭಾರತ ಹಿಂದಿ ಪ್ರಚಾರ ಸಭಾದ ಮೂಲಕ ರಾಷ್ಟ್ರ ಭಾಷಾ ಪ್ರವೀಣ ಪದವಿಯನ್ನು ಪ್ರಥಮ ದರ್ಜೆಯಲ್ಲಿಯೂ, ತಿರುಮಲ ತಿರುಪತಿ ದೇವಸ್ಥಾನಂ ವತಿಯಿಂದ ನಡೆಸಲ್ಪಡುವ ಶಾಸ್ತ್ರ ಪರೀಕ್ಷೆಯಾದ ಜೋತಿಷ್ಯದಲ್ಲಿ ವಿದ್ವಾನ್ ಪದವಿಯನ್ನು ಪಡೆದರು.
ಮುಂದೆ ೦೧.೧೧.೧೯೮೪ ರಿಂದ ೩೧.೩.೧೯೮೫ರವರೆಗೆ ಬಾಳಿಲ ವಿದ್ಯಾಬೋಧಿನೀ ಪ್ರೌಢಶಾಲೆಯ ಖಾಯಂ ಸಂಸ್ಕೃತ ಶಿಕ್ಷಕರಾದ ಕೆ.ಎಂ. ಶಂಕರನಾರಾಯಣ ಭಟ್ಟರ ರಜಾ ಅವಧಿಯಲ್ಲಿ ಹಂಗಾಮಿ ಶಿಕ್ಷಕರಾಗಿ ವೃತ್ತಿ ಜೀವನ ಆರಂಭಿಸಿ, ಬಳಿಕ ಆಡಳಿತ ಮಂಡಳಿ ನಿರ್ಣಯದಂತೆ ೧ ಜೂನ್ ೧೯೮೫ ರಿಂದ ಸಂಸ್ಕೃತ ವಿಷಯ ಬೋಧಕರಾಗಿ ಖಾಯಂಗೊಂಡರು. ಸೆ. ೯ ೧೯೮೫ರಂದು ಇಲಾಖಾ ಅನುಮೋದನೆ ದೊರೆತು ೨೨ ವರ್ಷಗಳ ಕಾಲ ಸಹಶಿಕ್ಷಕರಾಗಿ ಸೇವೆ ಸಲ್ಲಿಸಿ, ೨೦೦೭ರ ಜೂ. ೧ರಂದು ಭಡ್ತಿ ಹೊಂದಿ ಜು. ೩೧ರ ವರೆಗೆ ೧೩ ವರ್ಷಗಳ ಕಾಲ ಮುಖ್ಯ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತರಾದರು.
ಯಕ್ಷಗಾನ ಕಲಾವಿದರಾದ ಇವರು ಧರ್ಮಸ್ಥಳ ಮೇಳದ ಕಲಾವಿದರಾದ ಮುಂಡಾಜೆ ಸದಾಶಿವ ಶೆಟ್ಟಿಯವರಿಂದ ಮತ್ತು ಸ್ವಪ್ರಯತ್ನದಿಂದ ಯಕ್ಷಗಾನ ಕಲಿತು, ಹವ್ಯಾಸಿ ಕಲಾವಿದರಾಗಿ ತಾಳಮದ್ದಳೆ, ಯಕ್ಷಗಾನ ಬಯಲಾಟದಲ್ಲಿ ಭಾಗವಹಿಸುವಿಕೆಯಲ್ಲದೇ, ನಿರಂತರವಾಗಿ ಪ್ರತೀವರ್ಷವೂ ಶಾಲಾ ವಾರ್ಷಿಕೋತ್ಸವದ ಸಂದರ್ಭದಲ್ಲಿ ಮಕ್ಕಳ ಯಕ್ಷಗಾನ ತಂಡವನ್ನು ರಚಿಸಿ, ಆ ತಂಡ ವಿವಿಧೆಡೆ ಪ್ರದರ್ಶನ ನೀಡುವಂತೆ ಮಾಡಿರುತ್ತಾರೆ. ಸಾಕ್ಷರತಾ ಆಂದೋಲನದಲ್ಲಿ ಸ್ವತಃ ಪ್ರಸಂಗದ ಕಥಾ ಹಂದರವನ್ನು ಹೆಣೆದು ಪ್ರದರ್ಶನವನ್ನು ಏರ್ಪಡಿಸಿದ್ದರಲ್ಲದೆ ಕಟೀಲಿನಲ್ಲಿ ಜರಗಿದ ಯಕ್ಷಗಾನ ಸಪ್ತಾಹದಲ್ಲಿ ಸಂಸ್ಕೃತ ಯಕ್ಷಗಾನ ಪ್ರದರ್ಶನಗೊಳ್ಳುವಂತೆ ಮಾಡಿರುತ್ತಾರೆ. ಜಲಶೋಧನೆ, ವಾಸ್ತುಶಾಸ್ತ್ರ, ಜ್ಯೋತಿಷ್ಯದಲ್ಲಿ ಪರಿಣತಿಯನ್ನು ಹೊಂದಿರುವ ಇವರು ಉಡುಪಿಯಲ್ಲಿ ವಿದ್ಯಾಭ್ಯಾಸ ಸಮಯದಲ್ಲಿ ಸುರಸರಸ್ವತಿ ಸಂಸ್ಕೃತ ಸಭಾ (ರಿ) ಶೃಂಗೇರಿ ಇವರ ಸಂಸ್ಕೃತ ಪ್ರಚಾರ ಸಂಗತಿಗಳನ್ನು ೪ ಕಿಮೀ ದೂರ ಕಾಲ್ನಡಿಗೆಯಿಂದ ಉಡುಪಿ ಕ್ರಿಶ್ಚಿಯನ್ ಶಾಲೆಗೆ ಹೋಗಿ ಅಲ್ಲಿನ ವಿದ್ಯಾರ್ಥಿಗಳಿಗೆ, ಲಕ್ಷ್ಮಿವೆಂಕಟೇಶ್ವರ ದೇವಾಲಯದಲ್ಲಿ ಹಿರಿಯ ನಾಗರಿಕಗೂ ಉಚಿತವಾಗಿ ಬೋಧಿಸಿರುತ್ತಾರೆ. ಸಂಸ್ಕೃತ ವಿಷಯದಲ್ಲಿ ರಾಜ್ಯಮಟ್ಟದಲ್ಲಿ ಸಂಪನ್ಮೂಲವ್ಯಕ್ತಿಯಾಗಿ ಭಾಗವಹಿಸಿರುವುದಲ್ಲದೆ, ೩ ಬಾರಿ ಎಸ್.ಎಸ್.ಎಲ್.ಸಿ. ಪ್ರಶ್ನೆಪತ್ರಿಕೆ ತಯಾರಿಯಲ್ಲಿ ಭಾಗವಹಿಸಿದ್ದರು. ಪ್ರತಿಭಾ ಕಾರಂಜಿ ಸ್ಪರ್ಧೆಗಳಲ್ಲಿ ತಾಲೂಕು, ಜಿಲ್ಲಾ ಮಟ್ಟದ ಖಾಯಂ ತೀರ್ಪುಗಾರರಾಗಿ ಭಾಗವಹಿಸಿರುವ ಶಿವರಾಮ ಶಾಸ್ತ್ರೀಯವರು ಸುಳ್ಯ ತಾಲೂಕು ಪ್ರೌಢಶಾಲಾ ಹಾಗೂ ಪದವಿಪೂರ್ವ ಕಾಲೇಜುಗಳ ಮುಖ್ಯಸ್ಥರ ಸಂಘದ ಕಾರ್ಯದರ್ಶಿಯಾಗಿ, ಜಿಲ್ಲಾ ಸಂಘದ ತಾಲೂಕು ಪ್ರತಿನಿಧಿಯಾಗಿ ಕಾರ್ಯನಿರ್ವಹಿಸಿರುತ್ತಾರೆ. ಸಂಸ್ಕೃತ, ಕನ್ನಡ ತುಳು, ಹಿಂದಿ ಹೀಗೆ ಹಲವು ಭಾಷೆಗಳ ಪಾಂಡಿತ್ಯವನ್ನು ಹೊಂದಿರುವುದು ಶಿವರಾಮ ಇವರು ವ್ಯಾಕರಣ, ರಾಮಾಯಣ, ಮಹಾಭಾರತ ಮಹಾಕಾವ್ಯಗಳ ಬಗ್ಗೆ ಅಪಾರ ಜ್ಞಾನವನ್ನೂ ಹೊಂದಿದವರು. ೧೯೮೫ ರಿಂದ ಈ ತನಕ ಎಸ್.ಎಸ್.ಎಲ್.ಸಿ.ಯಲ್ಲಿ ಸಂಸ್ಕೃತ ವಿಷಯದಲ್ಲಿ ಶೇ.೧೦೦ಫಲಿತಾಂಶ ಹಾಗೂ ಶಾಲೆಯ ಉತ್ತಮ ಫಲಿತಾಂಶಗಳಿಕೆಗೆ ಕಾರಣಕರ್ತರಾಗಿದ್ದಾರೆ. ಶಾಲಾ ಸುವರ್ಣ ಮಹೋತ್ಸವದ ಕಾರ್ಯಕ್ರಮ, ಸುವರ್ಣ ಸಂಕಲ್ಪ ಕಟ್ಟಡ ನಿರ್ಮಾಣ, ಎಂಆರ್‌ಪಿ ಎಲ್‌ನ ೧೦ಲಕ್ಷ ರೂ. ಅನುದಾನದಿಂದ ಬಾಲಕಿಯರ ಶೌಚಾಲಯ ನಿರ್ಮಾಣ, ಲೋಕಸಭಾ ಸದಸ್ಯರ ಅನುದಾನದಿಂದ ಮುಖ್ಯ ದ್ವಾರದಿಂದ ಕ್ರೀಡಾಂಗಣಕ್ಕೆ ೧೦೦ಮೀ ಡಾಮರೀಕರಣ, ವಿಧಾನ ಪರಿಷತ್ ಸದಸ್ಯರ ಅನುದಾನದಿಂದ ಬಾಲಕರ ಶೌಚಾಲಯ, ತಾಲೂಕು ಮಟ್ಟದ ಕ್ರೀಡಾಕೂಟ, ಪ್ರತಿಭಾಕಾರಂಜಿ, ಸ್ಕೌಟ್-ಗೈಡ್ ಮೇಳ, ಇವುಗಳ ಸಂಘಟನೆ ಸೇರಿದಂತೆ ಇವರ ಮುಂದಾಳತ್ವದಲ್ಲಿ ಹಲವು ಅಭಿವೃದ್ಧಿ ಕಾರ್ಯಗಳು ನಿರಂತರವಾಗಿ ನಡೆದಿರುತ್ತದೆ. ಇವರ ಪತ್ನಿ ಶ್ರೀಮತಿ ವಸಂತಿ ಕೆ. ಗೃಹಿಣಿಯಾಗಿಯೂ ಪುತ್ರಿ ಸೂಕ್ತಿ ಎಸ್, ಮಗ ಸುಹಾಸ್ ಎಸ್ ಉದ್ಯೋಗಿಗಳಾಗಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.